ಕೇಂದ್ರದಲ್ಲಿ ಕೈ ಸರ್ಕಾರ ರಚನೆ
Team Udayavani, Apr 4, 2019, 3:00 AM IST
ದೇವನಹಳ್ಳಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಈ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ರಚನೆ ಮಾಡಲಿದೆ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿ ಎಂ.ವೀರಪ್ಪ ಮೊಯ್ಲಿ ಭವಿಷ್ಯ ನುಡಿದರು.
ನಗರದ ಜಾಮೀಯಾ ಮಸೀದಿ ಆವರಣದಲ್ಲಿ ಅಲ್ಪಸಂಖ್ಯಾತ ಕಾಂಗ್ರೆಸ್ ಸಮಿತಿ ಹಮ್ಮಿಕೊಂಡಿದ್ದ ಅಲ್ಪಸಂಖ್ಯಾತ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಜನರ ವಿಶ್ವಾಸ, ನಂಬಿಕೆ ಉಳಿಸಿಕೊಳ್ಳುವಲ್ಲಿ ಬಿಜೆಪಿ ವಿಫಲವಾಗಿದೆ ಎಂದು ಹೇಳಿದರು.
ಎಲ್ಲಾ ಧರ್ಮಗಳನ್ನು ಸಮಾನವಾಗಿ ಕಾಣುವ ನನ್ನನ್ನು ಈ ಬಾರಿಯೂ ಬೆಂಬಲಿಸಬೇಕು. ಯಾವುದೇ ಕಪ್ಪು ಚುಕ್ಕೆ ಇಲ್ಲದಂತೆ ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವುದೇ ನನ್ನ ಗುರಿಯಾಗಿದೆ. ಈ ಭಾಗದಲ್ಲಿ ಕುಡಿಯುವ ನೀರಿಗೆ ಯಾರೂ ಪರದಾಡದಂತೆ ಶಾಶ್ವತ ನೀರಾವರಿ ಯೋಜನೆಯ ಕಾಮಗಾರಿ ಪೂರ್ಣಗೊಳ್ಳುತ್ತಿದ್ದು, ಒಂದೂವರೆ ವರ್ಷದಲ್ಲಿ ಈ ಭಾಗದ ಕೆರೆಗಳಿಗೆ ನೀರು ಹರಿಸಲಾಗುತ್ತದೆ.
ಜೊತೆಗೆ ಕೈಗಾರಿಕೆಗಳನ್ನು ಉನ್ನತೀಕರಿಸಲು ಯೋಜನೆ ರೂಪಿಸಿ ಈ ಭಾಗದ ಜನತೆಗೆ ಹೆಚ್ಚು ಅನುಕೂಲ ಮಾಡಿಕೊಡಲಾಗುವುದು. ಇಂದು ನನ್ನ ಬಹುದೊಡ್ಡ ಆಶಾವಾದದ ಪ್ರಯತ್ನವಾಗಿದೆ. ಈ ನನ್ನ ಕನಸು ನನಸಾಗಿಸಲು ನಾನು ಮೂರನೇ ಬಾರಿ ನಿಮ್ಮ ಬಳಿಗೆ ಬಂದಿದ್ದೇನೆ ಎಂದರು.
ಸುಳ್ಳು ಭರವಸೆಗಳ ಸರ್ಕಾರ: ದೇಶದ ಸೈನಿಕರು ಮಾಡಿದ ಸಾಧನೆಯನ್ನು ಬಿಜೆಪಿ ರಾಜಕಾರಣಕ್ಕೆ ಬಳಸಿಕೊಳ್ಳುವುದರ ಮೂಲಕ ಕೆಟ್ಟ ರಾಜಕಾರಣ ಮಾಡುತ್ತಿದೆ. ಮೋದಿಯವರದ್ದು ಬರೀ ಸುಳ್ಳು ಭರವಸೆಗಳ ಸರ್ಕಾರವಾಗಿದೆ. ಈ ಹಿಂದೆ ಯುಪಿಎ ಸರ್ಕಾರದಲ್ಲಿ ರೈತರ 72ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿದ್ದೆವು. ಆದರೆ ಬಿಜೆಪಿ ಸರ್ಕಾರ ರೈತರಿಗೆ ಯಾವ ಕೊಡುಗೆಯನ್ನೂ ಕೊಟ್ಟಿಲ್ಲ ಎಂದು ಕಿಡಿಕಾರಿದರು.
ರಾಹುಲ್ ಗಾಂಧಿ ಪ್ರಧಾನಿ ಮಾಡಿ: ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಜನರು ಕಾರಣಭೂತರಾಗುತ್ತಾರೆ. ಯಾವುದೇ ಗೊಂದಲವಿಲ್ಲದಂತೆ ಕಾಂಗ್ರೆಸ್‌ಗೆ ತಮ್ಮ ಮತ ನೀಡುವುದರ ಮೂಲಕ ರಾಹುಲ್ ಗಾಂಧಿ ಅವರನ್ನು ದೇಶದ ಪ್ರಧಾನಿಯನ್ನಾಗಿಸಬೇಕು. ಕಾಂಗ್ರೆಸ್ ಪ್ರಾರಂಭದಿಂದ ಮಾತುಕೊಟ್ಟಂತೆ ನಡೆದ ಸರ್ಕಾರವಾಗಿದೆ.
ಬಿಜೆಪಿ ಪಕ್ಷ ಬಂದಾಗಿನಿಂದಲೂ ರಾಷ್ಟ್ರದಲ್ಲಿ ಯಾವ ಒಂದು ಕ್ಷೇತ್ರದಲ್ಲೂ ಅಭಿವೃದ್ಧಿ ಹೊಂದಿಲ್ಲ. ವಿದೇಶ ಪ್ರಯಾಣ ಮಾಡುತ್ತಾ ಕಾಲಹರಣ ಮಾಡಿದ ಪ್ರಧಾನಿ ನಮಗೆ ಬೇಕೇ ಎಂದು ಪ್ರಶ್ನಿಸಿದ ಅವರು, ಮತ್ತೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತಾಬೇಕೆಂದು ಹೇಳಿದರು.
ಜಾಮೀಯಾ ಮಸೀದಿ ಅಧ್ಯಕ್ಷ ಅಬ್ದುಲ್ ಖುದ್ದೂಸ್ ಮಾತನಾಡಿ, ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಇರುವುದರಿಂದ ಸರ್ವ ಧರ್ಮಗಳನ್ನೂ ಸಮಾನವಾಗಿ ನೋಡುತ್ತಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಐದು ವರ್ಷ ಸುಭದ್ರ ಆಡಳಿತ ನೀಡಲಿದ್ದಾರೆ. ಕೇಂದ್ರದಲ್ಲಿ ರಾಹುಲ್ ಗಾಂಧಿ ಅವರನ್ನು ಶತಾಯಗತಾಯ ಪ್ರಧಾನಿಯನ್ನಾಗಿಸುವುದೇ ಕಾಂಗ್ರೆಸ್ ಗುರಿಯಾಗಿದೆ ಎಂದರು.
ಇಷ್ಟು ವರ್ಷಗಳಲ್ಲಿ ಬಿಜೆಪಿ ಮಾಡಿರುವ ಸಾಧನೆ ಶೂನ್ಯವಾಗಿದೆ. ಯಾವುದೇ ವ್ಯಕ್ತಿ ಶಾಂತಿ, ನೆಮ್ಮದಿಯಿಂದ ಇರಬೇಕಾದರೆ ಅದು ಕಾಂಗ್ರೆಸ್ ಸರ್ಕಾರದಿಂದ ಮಾತ್ರ ಸಾಧ್ಯವಾಗಿದೆ. ಹಲವಾರು ವರ್ಷಗಳ ಹಿಂದಿನ ಇತಿಹಾಸವನ್ನು ಅರಿತರೆ ಕಾಂಗ್ರೆಸ್ ಪಕ್ಷದ ಸಾಧನೆಗಳು ತಿಳಿಯುತ್ತದೆ. ವಿದ್ಯಾವಂತ ಯುವಕರಿಗೆ ನೌಕರಿ ಕೊಡಿಸುವುದಾಗಿ ಹೇಳಿದ ಬಿಜೆಪಿ ಸರಕಾರ ಕೊನೆಗೆ ಪಕೋಡ ಮಾರಿ ಎಂದು ಹೇಳಿ ಅವಮಾನ ಮಾಡಿದೆ.
ತಾಲೂಕಿನಲ್ಲಿ ಹಿಂದು-ಮುಸ್ಲಿಂ-ಕ್ರೈಸ್ತರೆಲ್ಲರೂ ಸ್ನೇಹ ಸಂಬಂಧದಿಂದ ಇದ್ದಾರೆ. ಅವರನ್ನು ಒಡೆಯುವ ಕುತಂತ್ರವನ್ನು ಬಿಜೆಪಿ ಸರಕಾರ ಮಾಡುತ್ತಿದೆ. ಆದ್ದರಿಂದ ನಮ್ಮ ಅಲ್ಪಸಂಖ್ಯಾತರೆಲ್ಲರೂ ಒಗ್ಗಟ್ಟಾಗಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸುತ್ತೇವೆ ಎಂದು ಹೇಳಿದರು. ಕಾಂಗ್ರೆಸ್ ಮುಖಂಡ ಎ.ಎಸ್.ಇಬ್ರಾಹಿಂ ಮಾತನಾಡಿ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸಂವಿಧಾನದಲ್ಲಿ ತಿಳಿಸಿರುವ ಹಾಗೆ ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಶಾಸಕ ಡಾ.ಸುಧಾಕರ್, ಮಾಜಿ ಶಾಸಕ ಕೆ.ವೆಂಕಟಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನಕುಮಾರ್, ರಾಜ್ಯ ಹಿಂದುಳಿದ ವರ್ಗದ ಉಪಾಧ್ಯಕ್ಷ ಸಿ.ಜಗನ್ನಾಥ್, ಪ್ರಧಾನ ಕಾರ್ಯದರ್ಶಿ ಎಸ್.ಆರ್.ರವಿಕುಮಾರ್,
ಜಿಪಂ ಸದಸ್ಯ ಕೆ.ಸಿ.ಮಂಜುನಾಥ್, ಪುರಸಭಾ ಮಾಜಿ ಅಧ್ಯಕ್ಷ ಮೂರ್ತಿ, ಕೆಪಿಸಿಸಿ ಸದಸ್ಯ ಚಿನ್ನಪ್ಪ, ಪಟಾಲಪ್ಪ, ಚೇತನ್‌ಗೌಡ, ಜಿಲ್ಲಾ ಕಾಂಗ್ರೆಸ್ ಎಸ್‌ಸಿ ವಿಭಾಗದ ಅಧ್ಯಕ್ಷ ಲೋಕೇಶ್, ಎಪಿಎಂಸಿ ಉಪಾಧ್ಯಕ್ಷ ಸುಧಾಕರ್, ಪುರಸಭಾ ಮಾಜಿ ಸದಸ್ಯರಾದ ರಘು, ವೇಣುಗೋಪಾಲ್,
ನಾರಾಯಣಸ್ವಾಮಿ, ರಾಜ್ಯ ಅಲ್ಪಸಂಖ್ಯಾತರ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಜ್ಜದ್, ಮುಖಂಡರಾದ ಜಾವಿದ್ ಪಾಷಾ, ಹೈದರ್‌ಸಾಬ್, ನವೀದ್, ಆರೀಫ್ ಹಾಗೂ ಕಾಂಗ್ರೆಸ್-ಜೆಡಿಎಸ್ ಪಕ್ಷದ ಹಿರಿಯ, ಕಿರಿಯ ಮುಖಂಡರು ಹಾಗೂ ಎಲ್ಲಾ ಘಟಕಗಳ ಪದಾಧಿಕಾರಿಗಳು ಮತ್ತಿತರರು ಭಾಗವಹಿಸಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.