Gandhi Jayanti: ದೊಡ್ಡಬಳ್ಳಾಪುರದಲ್ಲಿ ಗಾಂಧೀಜಿ ಭೇಟಿಯ ನೆನಪು
Team Udayavani, Oct 2, 2023, 10:35 AM IST
ಗಾಂಧೀಜಿ ದೇಶದ ಯಾವ ಮೂಲೆಯಲ್ಲಿದ್ದರೂ ಅವರ ಹೆಸರು ಎಷ್ಟೋ ಸಾತಂತ್ರ್ಯ ಹೋರಾಟಗಾರರಿಗೆ ಪ್ರೇರಕ ಶಕ್ತಿಯಾಗಿರುತ್ತಿತ್ತು. ಅಂತಹ ಮ ಹಾತ್ಮ ಗಾಂಧೀ ಜಿ ಅವರು ಅಂದು ದೊಡ್ಡಬಳ್ಳಾಪುರದಂತಹ ಪುಟ್ಟ ಪಟ್ಟಣಕ್ಕೆ ಭೇಟಿ ನೀಡಿದ್ದರೆಂದರೆ ಇಲ್ಲಿನ ಜನರಲ್ಲಿ ಮಿಂಚಿನ ಸಂಚಾರವಾದ ಅನುಭವ. ಗಾಂಧಿ ಜಯಂತಿ ಈ ಸಂದರ್ಭದಲ್ಲಿ ಗಾಂಧೀಜಿ ದೊಡ್ಡಬಳ್ಳಾಪುರಕ್ಕೆ ಹಾಗೂ ತಾಲೂಕಿಗೆ ಸಮೀಪದ ನಂದಿ ಬೆಟ್ಟಕ್ಕೆ ಭೇಟಿ ನೀಡಿದ್ದ ಸಂದರ್ಭಗಳ ಕು ರಿತು ಒಂದು ಮೆಲುಕು.
ದೊಡ್ಡಬಳ್ಳಾಪುರ: ಗಾಂಧೀಜಿಯನ್ನು ಹೊರತಾಗಿಟ್ಟು ಸ್ವಾತಂತ್ರ್ಯ ಹೋರಾಟದ ಮೆಲುಕುಗಳನ್ನು ಹಾಕಿದರೆ ಪರಿಪೂರ್ಣವಾಗುವುದಿಲ್ಲ ಎನ್ನುವುದು ಸರ್ವವಿಧಿತ. ದೊಡ್ಡಬಳ್ಳಾಪುರಕ್ಕೆ 1934ರ ಜ. 4ರಂದು ಗಾಂಧೀಜಿ ಭೇಟಿ ನೀಡಿದ್ದರು. ನಮ್ಮ ಊರಿಗೆ ಬಂದಿದ್ದರು. ನಾವು ಗಾಂಧೀಜಿಯನ್ನು ಕಂಡಿದ್ದೇವೆ ಎನ್ನುವ ಹಿರಿಯರಿಗೆ ಏನೋ ಧನ್ಯತಾಭಾವ.
ದೊಡ್ಡಬಳ್ಳಾಪುರಕ್ಕೆ ಗಾಂಧೀಜಿ ಭೇಟಿ ನೀಡಿದ್ದ ಸಂದರ್ಭದಲ್ಲಿ ಇಲ್ಲಿನ ಜನಸಂಖ್ಯೆ ಬರೀ 25 ಸಾವಿರ. ಇಲ್ಲಿನ ಜನತೆಗೆ ದೇಶ ಪ್ರೇಮದ ಭಾಷಣ ಮಾಡಿ, ಊರಿನ ಸ್ವಾತಂತ್ರ್ಯ ಹೋರಾಟಗಾರರಾದ ಟಿ.ಸಿದ್ದಲಿಂಗಯ್ಯ, ರುಮಾಲೆ ಭದ್ರಣ್ಣ, ಮುಗುವಾಳಪ್ಪ, ನಾ.ನಂಜುಂಡಯ್ಯ ಮೊದಲಾದವ ರಿಗೆ ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿ ಉತ್ತಮ ನಾಯಕರಾಗಿ ರೂಪುಗೊಳ್ಳಲು ಗಾಂಧೀಜಿ ಪ್ರೇರಣೆಯಾದರು.
ಗಾಂಧೀಜಿ ದೊಡ್ಡಬಳ್ಳಾಪುರಕ್ಕೆ ಬಂದಾಗ ಅವರ ಜತೆ ಮೀರಾಬೆನ್, ಪಾಮಡಿ, ಸುಬ್ಬರಾಮ ಶ್ರೇಷ್ಟಿ ಹಾಗೂ ವಿ.ವೆಂಕಟಪ್ಪ ಇದ್ದರು.
ಗಾಂಧೀಜಿ ಭಾಷಣ: ಹಳೇ ಬಸ್ ನಿಲ್ದಾಣ ಸಮೀಪದ ನೆಲದಾಂಜನೇಯ ಸ್ವಾಮಿ ದೇಗುಲದ ಬಳಿ ಸಾರ್ವಜನಿಕ ಸಭೆಯಲ್ಲಿ ಗಾಂಧಿ ಚುಟುಕಾಗಿ ಇಂಗ್ಲಿಷ್‌ನಲ್ಲಿ ಭಾಷಣ ಮಾಡಿದ್ದರು. ಹರಿಜನ ಮಸ್ಯೆಗಳ ಬಗ್ಗೆ ಎಲ್ಲರೂ ಗಮನ ಹರಿಸಬೇಕು. ಶಾಲೆಗೆ ಹೋಗುವ ಹರಿಜನ ಹುಡುಗ ಹುಡುಗಿಯರ ಸಂಖ್ಯೆ ಹೆಚ್ಚಾಗಬೇಕು. ಅಸ್ಪೃಶ್ಯತೆಯನ್ನು ಮನಸ್ಸಿನಿಂದ ಕಿತ್ತು ಹಾಕಬೇಕು ಎಂದು ಹೇಳಿದ್ದರು. ಪುರಸಭೆಯವರು ಗಾಂಧೀಜಿಗೆ ಭಿನ್ನವತ್ತಳೆ ನೀಡಿ ಸನ್ಮಾನಿಸಿ, ಹರಿಜನ ನಿಧಿಗಾಗಿ ಅಂದಿನ ಕಾಲದಲ್ಲಿಯೇ 500ರೂ. ಗಳನ್ನು ಸಂಗ್ರ ಹಿಸಿ ನೀಡಿದ್ದರು. ಇದರೊಂದಿಗೆ ಊರಿನ ಸಾರ್ವಜನಿಕರಿಂದ ಮತ್ತು ತಿಮ್ಮಾರೆಡ್ಡಿ ಅವರಿಂದ ಪ್ರತ್ಯೇಕವಾಗಿ ಮೂರು ನಿಧಿಗಳನ್ನು ಗಾಂಧೀಜಿ ಅವರಿಗೆ ಅರ್ಪಿಸಲಾಗಿತ್ತು. ಅದನ್ನು ಸ್ವೀಕರಿಸಿದ ಗಾಂಧೀಜಿಯವರು ಸ್ಥಳೀಕರು ತೋರಿದ ಆದರಾಭಿಮಾನಗಳಿಗಾಗಿ ವಂದಿಸಿದ್ದರು. ಗಾಂಧೀಜಿಯವರು ಉಪನ್ಯಾಸ ನೀಡಿದ ಪ್ರದೇಶಕ್ಕೆ ಅವರ ಸ್ಮರಣಾರ್ಥವಾಗಿ ಗಾಂಧಿನಗರ ಎಂದು ನಾಮಕರಣ ಮಾಡಲಾಗಿ ಇಂದಿಗೂ ಹಳೇ ಬಸ್ ನಿಲ್ದಾಣ ಸಮೀಪದ ಪೇಟೆಗೆ ಗಾಂಧಿನಗರ ಹೆಸರಿದೆ. ಆ ವೇಳೆ ಖಾದಿ ಬಟ್ಟೆಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಅಂದು ಸಾವಿರಾರು ಗಾಂಧಿ ಟೋಪಿಗಳು ಮಾರಾಟವಾಗಿದ್ದವು.
ಗಾಂಧೀಜಿ ಭೇಟಿ : ದೊಡ್ಡಬಳ್ಳಾಪುರದ ಸ್ವಾತಂತ್ರ್ಯ ಹೋರಾಟಗಾರರಾದ ಟಿ.ಸಿದ್ದಲಿಂಗಯ್ಯ ಮತ್ತು ಒಡಿಶಾದ ಡೆಲಾಂಗಿನಲ್ಲಿ ಮಹಾತ್ಮ ಗಾಂಧೀಜಿ ಅವರನ್ನು ಭೇಟಿ ಮಾಡಿದ್ದರು. ಸಭೆಗಳನ್ನು ನಡೆಸಿದರೆ ಸಾವಿರಾರು ಜನ ಬರುತ್ತಾರೆ, ಚಳವಳಿಯನ್ನು ಯಶಸ್ವಿಯಾಗಿ ನಡೆಸಲು ನಮಗೆ ಸಾಕಷ್ಟು ಶಕ್ತಿಯಿದೆ, ಮಹಾರಾಜರನ್ನು ಇಳಿಸಲಿಕ್ಕೂ, ದಿವಾನರನ್ನು ವಜಾ ಮಾಡಲಿಕ್ಕೂ ಸಾಕಷ್ಟು ಶಕ್ತಿಯಿದೆ ಎಂದು ದೃಢವಾಗಿ ನುಡಿದಿದ್ದ ಸಿದ್ದಲಿಂಗಯ್ಯ ಅವರಿಗೆ ಗಾಂಧೀಜಿ ಅವರು ನಿಮ್ಮ ಸಹಕಾರ ಅಪರಿಹಾರ್ಯವೆಂದು ಸರ್ಕಾರಕ್ಕೆ ಮನದಟ್ಟು ಮಾಡಿಕೊಡಿ ಎಂದು ತಿಳಿಸಿದ್ದರು.
ದಿವಾನರ ಆಡಳಿತ ಹಾಗೂ ಸ್ವಾತಂತ್ರ್ಯ ಹೋರಾಟ ಸಂಘಟನೆ ಕುರಿತಾದ ಗಾಂಧೀಜಿ ಅವರೊಂದಿಗಿನ ಸಂಭಾಷಣೆಗಳನ್ನು ಭೂಪಾಳಂ ಚಂದ್ರಶೇಖರಯ್ಯ ಅವರು ಶುದ್ಧ ಹಸ್ತದ ಸಿದ್ದಲಿಂಗಯ್ಯ ಪುಸ್ತಕದಲ್ಲಿ ದಾಖಲಿಸಿದ್ದಾರೆ ಎನ್ನುತ್ತಾರೆ ಲೇಖಕ ಡಿ.ಎಂ. ಘನಶ್ಯಾಮ
ಗಾಂಧೀಜಿ ಪ್ರೇರಣೆ: 1930ರಲ್ಲಿ ಗುಜರಾತ್‌ನ ದಂಡಿಯಲ್ಲಿ ನಡೆದ ಉಪ್ಪಿನ ಸತ್ಯಾಗ್ರಹ, ಕರ ನಿರಕರಣ, ಅಸಹಕಾರ ಚಳವಳಿ ಇಡೀ ದೇಶ ವ್ಯಾಪಿಸಿದಂತೆ ದೊಡ್ಡಬಳ್ಳಾಪುರದಲ್ಲಿ ಪ್ರತಿಧ್ವನಿಸಿತ್ತು. ವಿವಿಧೆಡೆ ಈಚಲು ಮರಗಳನ್ನು ಕಡಿಯುವ, ವಿದೇಶ ವಸ್ತುಗಳನ್ನು ಸುಡುವ, ಸ್ವದೇಶಿ ವಸ್ತುಗಳನ್ನು ಮಾರುವ ದೃಢ ಸಂಕಲ್ಪ ಮಾಡಿದ್ದರು. ರುಮಾಲೆ ಚನ್ನಬಸವಯ್ಯ, ಎಚ್.ಮುಗುವಾಳಪ್ಪ ಚಳವಳಿ ಯಲ್ಲಿ ಭಾಗವಹಿಸಿದ್ದರು. ಇಲ್ಲಿಯೂ ದೇಶಿ ಉಪ್ಪನ್ನು ಮಾರಾಟ ಮಾಡಲಾಯಿತಲ್ಲದೆ, ವರ್ತಕರು ವಿದೇಶಿ ವಸ್ತುಗಳನ್ನು ಮಾರಾಟ ಮಾಡುವುದಿಲ್ಲವೆಂದು ಸಂಕಲ್ಪ ಮಾಡಿದ್ದರು. 1924ರಲ್ಲಿ ಬೆಳಗಾವಿಯಲ್ಲಿ ನಡೆದ 39ನೇ ಅಖೀಲ ಭಾರತ ಕಾಂಗ್ರೆಸ್ ಅಧಿವೇಶನಕ್ಕೆ ದೊಡ್ಡಬಳ್ಳಾಪುರ ದಿಂದ ಪ್ರತಿನಿಧಿಗಳು ಭಾಗವಹಿಸಿದ್ದರು.
ನಂದಿ ಬೆಟ್ಟಕ್ಕೆ ಗಾಂಧಿ: ಅನಾರೋಗ್ಯದಿಂದ ಬಳಲುತ್ತಿದ್ದ ಗಾಂಧೀಜಿ ತಾಲೂಕಿಗೆ ಸಮೀಪವೇ ಇರುವ ನಂದಿಬೆಟ್ಟಕ್ಕೆ 1927ರಲ್ಲಿ 45 ದಿನ ಹಾಗೂ 1936ರಲ್ಲಿ ಮೂರು ವಾರಗಳ ಕಾಲ ಗಾಂಧೀಜಿ ತಂಗಿದ್ದರು. ಗಾಂಧಿಯವರೊಂದಿಗಿದ್ದ ಸರ್ಧಾರ್ ವಲ್ಲಭಾಬಾಯಿ ಪಟೇಲ್, ಕಸ್ತೂರಿಬಾ ಅವರನ್ನು ರುಮಾಲೆ ಚನ್ನಬಸವಯ್ಯ, ಎಚ್. ಮುಗುವಾಳಪ್ಪ, ಟಿ.ಸಿದ್ದಲಿಂಗಯ್ಯ ಗಾಂಧೀಜಿ ಅವರನ್ನು ಭೇಟಿ ಮಾಡಿ, ದೊಡ್ಡಬಳ್ಳಾಪುರದ ನೈಗರ್ ಯೂಥ್‌ಲೀಗ್ ಸಮಾವೇಶಕ್ಕೆ ಆಹ್ವಾನಿಸಿದರು. ಪಟೇಲರು ಹಾಗೂ ಕಸ್ತೂರಿ ಬಾ ರುಮಾಲೆ ಛತ್ರದಲ್ಲಿ ಖಾದಿ ಭಂಡಾರವನ್ನು ಉದ್ಘಾಟಿಸಿದ್ದರು.
– ಡಿ. ಶ್ರೀ ಕಾಂತ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf ಗೆಜೆಟ್ ನೋಟಿಫಿಕೇಶನ್ ನಲ್ಲಿ ಬಿಜೆಪಿ ಪಾಲಿದೆ: ಎಚ್.ಕೆ. ಪಾಟೀಲ್ ಕಿಡಿ
Waqf ವಿಷಯ ಮುಗಿದು ಹೋಗಿದೆ.. ಬಿಜೆಪಿಯವರಿಂದ ಗೊಂದಲ: ಲಕ್ಷ್ಮಣ ಸವದಿ
Dandeli: ಅಪರಿಚಿತ ವಾಹನ ಡಿಕ್ಕಿ; ಕರು ಸಾವು
Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ
Delhi: ಕ್ಷುಲ್ಲಕ ಕಾರಣಕ್ಕೆ 19ರ ಯುವಕನ ಗುಂಡಿಕ್ಕಿ ಹ*ತ್ಯೆಗೈದ ಅಪ್ರಾಪ್ತರು!!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.