ಗಾಂಧೀಜಿಯವರ ಆದರ್ಶ ಪಾಲನೆಯಿಂದ ಸ್ವಸ್ಥ ಸಮಾಜ ನಿರ್ಮಾಣ
Team Udayavani, Oct 3, 2019, 3:00 AM IST
ಹೊಸಕೋಟೆ: ಗಾಂಧೀಜಿಯ ತತ್ವಾದರ್ಶ ಪಾಲನೆಯಿಂದ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ ಎಂದು ಸಂಸದ ಬಿ.ಎನ್.ಬಚ್ಚೇಗೌಡ ಹೇಳಿದರು. ನಗರದ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯುವಕರು ಇತಿಹಾಸವನ್ನು ಓದುವ ಹವ್ಯಾಸ ಬೆಳೆಸಿಕೊಳ್ಳುವುದರಿಂದ ಜ್ಞಾನಾರ್ಜನೆಯೊಂದಿಗೆ ರಾಷ್ಟ್ರಾಭಿಮಾನ ಬೆಳೆಸಿಕೊಳ್ಳಬೇಕು. ಗಾಂಧೀಜಿಯವರು ಪಾಲಿಸಿದ ಅಹಿಂಸಾ ಮಾರ್ಗ ಇಡೀ ವಿಶ್ವಕ್ಕೆ ಮಾದರಿಯಾಗಿದ್ದು, ದಕ್ಷಿಣ ಆಫ್ರಿಕಾದಂತಹ ರಾಷ್ಟ್ರ ಸ್ವಾತಂತ್ರ್ಯ ಗಳಿಸಿತು. ಯುವಕರು ಸಮಾಜ ಸೇವೆಯಲ್ಲಿ ತೊಡಗಲು ಸ್ಪೂರ್ತಿಯಾಗಿ ಸ್ವಾತಂತ್ರ್ಯಕಾಗಿ ಜೀವನವನ್ನೇ ತ್ಯಾಗ ಮಾಡಿದ ಮಹಾನ್ ವ್ಯಕ್ತಿಗೆ ಗೌರವ ಸಲ್ಲಿಸಬೇಕಾದದ್ದು, ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದರು.
ಲಾಲ್‌ಬಹದ್ದೂರ್ ಶಾಸ್ತ್ರಿಯವರ ಸರಳ ವ್ಯಕ್ತಿತ್ವ, ಆಡಳಿತಾವಧಿಯಲ್ಲಿ ಕೈಗೊಂಡ ದೃಢ ನಿರ್ಧಾರಗಳಿಂದ ರೈತರು ಅಭಿವೃದ್ಧಿ ಹೊಂದಲು ಸಾಧ್ಯವಾಗಿದೆ. ಕಾಶ್ಮೀರವನ್ನು ಭಾರತದ ಅವಿಭಾಜ್ಯ ಅಂಗವಾಗಿ ಕೇಂದ್ರ ಸರಕಾರ ಜಾರಿಗಳಿಸಿರುವ ಐತಿಹಾಸಿಕ ಮಸೂದೆಯಿಂದ 70 ವರ್ಷಗಳ ಕನಸು ನನಸಾಗಿದೆ ಎಂದರು.
ಮುಂಬರುವ ಉಪ ಚುನಾವಣೆಯಲ್ಲಿ ಶರತ್ ಬಚ್ಚೇಗೌಡ ಸ್ಪರ್ಧಿಸುವ ಬಗ್ಗೆ ಕಾರ್ಯಕರ್ತರು ಕೈಗೊಳ್ಳುವ ತೀರ್ಮಾನವೇ ಅಂತಿಮವಾದುದು. ತಾಲೂಕಿನಲ್ಲಿ ಹೊರಗಿನವರು ಸ್ಪರ್ಧಿಸಲು ಅವಕಾಶ ನೀಡಿದಲ್ಲಿ ಪಕ್ಷದ ಸಂಘಟನೆ ಧಕ್ಕೆಯಾಗುವ ಬಗ್ಗೆ ರಾಷ್ಟ್ರ, ರಾಜ್ಯ ನಾಯಕರಿಗೆ ಮನವರಿಕೆ ಮಾಡಿಕೊಟ್ಟಿದ್ದು, ಮುಂಬರುವ ಯಾವುದೇ ಚುನಾವಣೆಗಳಿಗೆ ತಾವು ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯ ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ಶರತ್ ಬಚ್ಚೇಗೌಡ ಮಾತನಾಡಿ, ಗಾಂಧೀಜಿ ಯಾವುದೇ ಜಾತಿ, ಧರ್ಮ, ರಾಜಕೀಯ ಪಕ್ಷಕ್ಕೆ ಸೀಮಿತವಾಗದೇ ರಾಷ್ಟ್ರದ ಮಹಾನ್ ನಾಯಕರಾಗಿದ್ದಾರೆ. ಸ್ವಾಭಿಮಾನ, ಲಭ್ಯವಿರುವ ಸಂಪನ್ಮೂಲಗಳ ಸದ್ಭಳಕೆಯೊಂದಿಗೆ ಸ್ವದೇಶಿ ವಸ್ತುಗಳ ತಯಾರಿಕೆಗೆ ಪ್ರೋತ್ಸಾಹಿಸುವಲ್ಲಿ ಗಾಂಧೀಜಿಯ ಕೊಡುಗೆ ಅಪಾರ ಎಂದರು.
ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಬಿ.ಎಂ.ನಾರಾಯಣಸ್ವಾಮಿ ಮಾತನಾಡಿ ಅ.6ರಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಸ್ವಾತಂತ್ರ್ಯ ಸಂಗ್ರಾಮದ ಐತಿಹಾಸಿಕ ಹಿನ್ನೆಲೆಯುಳ್ಳ ವಿದುರಾಶೃತದಲ್ಲಿ ಗಾಂಧೀಜಿಯವರ ಗೌರವಾರ್ಥ ಜಾಥಾ ಏರ್ಪಡಿಸಿದ್ದು ತಾಲೂಕಿನ ಕಾರ್ಯಕರ್ತರು ಸಹ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ತಾಲೂಕು ಬಿಜೆಪಿ ಅಧ್ಯಕ್ಷ ಸಿ.ಮಂಜುನಾಥ್ ಸಹ ಮಾತನಾಡಿದರು. ಟಿಎಪಿಸಿಎಂಎಸ್ ಅಧ್ಯಕ್ಷ ಟಿ.ಸೊಣ್ಣಪ್ಪ, ನಿರ್ದೇಶಕ ಸಿ.ಮುನಿಯಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯ ವೈ.ಎಸ್.ಮಂಜುನಾಥ್, ಕಿಸಾನ್ ಮೋರ್ಚಾ ರಾಜ್ಯ ಕಾರ್ಯದರ್ಶಿ ಮಂಜುನಾಥ ಗೌಡ, ಮುಖಂಡ ಬಿ. ತಮ್ಮೇಗೌಡ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.