ಭೂಮಿ ನೀಡಿದ ರೈತರಿಗೆ ಸೂಕ್ತ ಪರಿಹಾರ ನೀಡಿ
Team Udayavani, Feb 15, 2019, 7:33 AM IST
ದೇವನಹಳ್ಳಿ: ವಿಮಾನ ನಿಲ್ದಾಣಕ್ಕೆ ಭೂಮಿ ಕಳೆದುಕೊಂಡ ಎಲ್ಲಾ ಸಾಗುವಳಿದಾರರಿಗೆ ಶಿವಮೊಗ್ಗ ಮಾದರಿಯಲ್ಲಿ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿ ಜಿಲ್ಲಾ ಮತ್ತು ತಾಲೂಕು ಪ್ರಾಂತ ರೈತಸಂಘದ ಕಾರ್ಯಕರ್ತರು ತಾಲೂಕಿನ ಚಪ್ಪರದ ಕಲ್ಲು ಬಳಿಯ ಜಿಲ್ಲಾ ಸಂಕೀರ್ಣದ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಮುಖಂಡರು, ಬಗುರ್‌ಹುಕುಂ ಸಾಗುವಳಿ ಚೀಟಿ ಹಕ್ಕುಪತ್ರ, ಸಾಲ ವಿತರಣೆ ಹಾಗೂ ಬಡ ಕುಟುಂಬಗಳಿಗೆ ನಿವೇಶನ, ಸಮರ್ಪಕ ವಿದ್ಯುತ್ ಪೂರೈಕೆ, ಬರಗಾಲ ಪರಿಹಾರ, ಮೇವು ಮತ್ತು ಕುಡಿಯುವ ನೀರು ಪೂರೈಕೆ ಮಾಡಬೇಕೆಂದು ಒತ್ತಾಯಿಸಿದರು.
ಸೂಕ್ತ ಪರಿಹಾರ ನೀಡಿ: ಸರ್ಕಾರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಭೂಮಿ ವಶಪಡಿಸಿಕೊಂಡಿದ್ದು, ಇದರಲ್ಲಿ ಬಗುರ್‌ಹುಕುಂ ಸಾಗುವಳಿ ಮಾಡುತ್ತಿರುವ ಸುಮಾರು 1,600 ಬಡ ರೈತರಿದ್ದಾರೆ. ಸರ್ಕಾರ ಸಾಗುವಳಿದಾರರಿಗೆ ಯಾವುದೇ ಪರಿಹಾರ ಕೊಟ್ಟಿಲ್ಲ.
ಬದಲಿ ಜಮೀನು ಸಹ ನೀಡಿಲ್ಲ. ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣಕ್ಕೆ ಸಾಗುವಳಿದಾರರ ಜಮೀನು ವಶಪಡಿಸಿಕೊಂಡು ಪರಿಹಾರ ನೀಡಿದ್ದು, ಅದೇ ಮಾದರಿಯಲ್ಲಿ ನಮಗೂ ಪರಿಹಾರ ನೀಡಬೇಕು. ಈ ಬಗ್ಗೆ ಕರ್ನಾಟಕ ಉತ್ಛ ನ್ಯಾಯಾಲಯದಲ್ಲಿ ಆದೇಶವಾಗಿದ್ದು, ರೈತರಿಗೆ ಪರಿಹಾರ ನೀಡದೇ ಅಧಿಕಾರಿಗಳು ನಿರ್ಲಕ್ಷ ಮಾಡುತ್ತಿದ್ದಾರೆ. ಆದ್ದರಿಂದ, ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಮಾತನಾಡಿ, ರಾಜ್ಯದಲ್ಲಿ ಹಲವು ದಶಕಗಳಿಂದ ವಿವಿಧ ಗೋಮಾಳ ಹಾಗೂ ಸರ್ಕಾರಿ ಜಮೀನಿನಲ್ಲಿ ಸಾಗುವಳಿ ಮಾಡುತ್ತಿರುವ ಲಕ್ಷಾಂತರ ಬಡ ಕುಟುಂಬಗಳಿಗೆ ಇದುವರೆಗೂ ಸಾಗುವಳಿ ಚೀಟಿ ನೀಡಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಭೂಮಿ ವಿಚಾರವಾಗಿ ಹೆಚ್ಚು ತಿಳಿವಳಿಕೆ ಇಲ್ಲ. ಅಧಿಕಾರಿಗಳು ತಿಳಿಸಿಕೊಡಬೇಕು.
ಸಾಲಮನ್ನಾ ಒಂದೇ ಅವರಿಗೆ ಗೊತ್ತಿರುವುದು. ಈ ಮಧ್ಯದಲ್ಲಿ ದಲ್ಲಾಳಿಗಳು ಮತ್ತು ಭೂ ಮಾಫಿಯಾಗಳು ಅಧಿಕಾರಿಗಳಿಗೆ ಇಲ್ಲಸಲ್ಲದ್ದನ್ನು ಹೇಳಿ ಪ್ರಕರಣಗಳನ್ನು ಹಾಕಿಸಿ, ರೈತರನ್ನು ಒಕ್ಕಲೆಬ್ಬಿಸುತ್ತಿದ್ದಾರೆ. ಕೂಡಲೇ ಫಾರಂ 57 ಹಾಕಲು ಅವಕಾಶ ಮಾಡಿಕೊಟ್ಟು, ಅದನ್ನು ಮಂಜೂರು ಮಾಡಿ ಸಾಗುವಳಿ ಚೀಟಿ ನೀಡಬೇಕೆಂದು ಒತ್ತಾಯಿಸಿದರು.
ತಾಲೂಕು ಬಹುರ್‌ಹುಕುಂ ಸಾಗುವಳಿ ಹೋರಾಟಗಾರ ಧನಂಜಯ್ ಮಾತನಾಡಿ, ಸುಮಾರು 800 ಎಕರೆಯಲ್ಲಿ ವಿವಿಧ ಹಳ್ಳಿಗಳ ರೈತರು ಉಳುಮೆ ಮಾಡುತ್ತಿದ್ದಾರೆ. ಅವರ ಸಾಗುವಳಿ ಚೀಟಿಯನ್ನು ರದ್ದುಗೊಳಿಸಿದ್ದಾರೆ. ಸಾವಿರಾರು ಜನ ನಿರಾಶ್ರಿತರಿದ್ದಾರೆ.ಅವರಿಗೆ ಸರ್ಕಾರ ನಿವೇಶನ ಮಂಜೂರು ಮಾಡಬೇಕು. ತಾಲೂಕಿನ ರೈತರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅವರಿಗೆ ಸಾಗುವಳಿ ಚೀಟಿ ನೀಡಿಲ್ಲ ಎಂದರು.
ಜಿಲ್ಲಾ ಪ್ರಾಂತ ರೈತಸಂಘದ ಅಧ್ಯಕ್ಷ ಎನ್.ವೀರಣ್ಣ ಮಾತನಾಡಿ, ಸರ್ಕಾರ ಇದುವರೆಗೂ ಬಡ ಕುಟುಂಬದವರಿಗೆ ವಾಸ ಮಾಡಲು ಮನೆ ಮತ್ತು ನಿವೇಶನ ಕೊಡದೆ ವಂಚಿಸಿದೆ. ಕೇರಳ ಮಾದರಿಯಲ್ಲಿ ಹಿತ್ತಲು ಸಹಿತ ಮನೆ ನೀಡಬೇಕೆಂದು ಆಗ್ರಹಿಸಿದರು.
ನಂತರ ಜಿಲ್ಲಾಧಿಕಾರಿ ಕರೀಗೌಡರಿಗೆ ಮನವಿ ಪತ್ರ ಸಲ್ಲಿಸಿದರು. ಈ ವೇಳೆ ರಾಜ್ಯ ಉಪಾಧ್ಯಕ್ಷ ವೆಂಕಟಾಚಲಯ್ಯ, ತಾಲೂಕು ಗೌರವಾಧ್ಯಕ್ಷ ವಿ.ನಾರಾಯಣಸ್ವಾಮಿ, ತಾಲೂಕು ಅಧ್ಯಕ್ಷ ವೆಂಕಟೇಗೌಡ, ರೈತ ಮಹಿಳಾ ಹೋರಾಟ ಸಮಿತಿಯ ಸುಮಿತ್ರಮ್ಮ, ತಾಲೂಕು ಉಪಾಧ್ಯಕ್ಷ ಗೋವಿಂದಪ್ಪ, ನಾರಾಯಣಸ್ವಾಮಿ, ಪ್ರಧಾನ ಕಾರ್ಯದರ್ಶಿ ಕೆ.ಸಿ.ನಂಜೇಗೌಡ ಮತ್ತಿತರರು ಭಾಗವಹಿಸಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.