ಮಕ್ಕಳಿಗೆ ಜಂತುಹುಳು ನಿವಾರಕ ಮಾತ್ರೆ ನೀಡಿ; ಜಿಲ್ಲಾಧಿಕಾರಿ
ಮಲವಿಸರ್ಜನೆ ಮಾಡುವಾಗ ಕರುಳಿನ ಹುಳುಗಳನ್ನು ಸಹ ಮಲದ ಮೂಲಕ ಹೊರಹಾಕುವುದು.
Team Udayavani, Aug 5, 2022, 6:04 PM IST
ದೇವನಹಳ್ಳಿ: ಜಂತು ಹುಳುಗಳ ಬಾಧೆಯಿಂದ ಮಕ್ಕಳನ್ನು ರಕ್ಷಣೆ ಮಾಡಲು ಜಂತುಹುಳು ನಿವಾರಕ ಮಾತ್ರೆ ಸಹಕಾರಿಯಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದರು.
ತಾಲೂಕಿನ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನದ ಟಾಸ್ಕ್ ಪೋರ್ಸ್ ಸಭೆಯಲ್ಲಿ ಮಾತನಾಡಿ, ಮಗುವಿನ ಭವಿಷ್ಯದ ಶೈಕ್ಷಣಿಕ ಮತ್ತು ಸರ್ವತೋಮುಖ ಅಭಿವೃದ್ಧಿಗಾಗಿ ಹಾಗೂ ಮಗುವಿನ ದೈಹಿಕ ಮತ್ತು ಮಾನಸಿಕ ಆರೋಗ್ಯ ರಕ್ಷಣೆಗೆ ಜಂತುಹುಳು ನಿವಾರಕ ಮಾತ್ರೆ ಸಹಕಾರಿಯಾಗಿದೆ ಎಂದರು.
ಆ.10ರ ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮದ ಪೂರ್ವಸಿದ್ಧತೆ ಹಿನ್ನೆಲೆ ಕೋವಿಡ್ ಸುರಕ್ಷತಾ ಮಾರ್ಗಸೂಚಿ ಗಮನದಲ್ಲಿಟ್ಟುಕೊಂಡು ಜಿಲ್ಲೆಯ ಎಲ್ಲಾ 1ರಿಂದ 19ವರ್ಷ ವಯಸ್ಸಿನ ಮಕ್ಕಳಿಗೆ ಜಂತುಹುಳು ನಿವಾರಣಾ ಮಾತ್ರೆಯನ್ನು ಅಂಗನವಾಡಿ ಕೇಂದ್ರ, ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಶಿಕ್ಷಕರು ನೀಡಬೇಕು ಎಂದರು.
ವರದಿ ನೀಡಲು ಕ್ರಮವಹಿಸಿ: ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿಗಳು ತಮ್ಮ ವ್ಯಾಪ್ತಿಯ ವಸತಿ ನಿಲಯಗಳಲ್ಲಿನ ಮಕ್ಕಳ ಸಂಖ್ಯೆಯನ್ನಾಧರಿಸಿ ತಾಲೂಕು ಆರೋಗ್ಯಾಧಿಕಾರಿಗಳಿಂದ ಮಾತ್ರೆಗಳನ್ನು ಪಡೆದು ಮಕ್ಕಳಿಗೆ ನುಂಗಿಸಿದ ನಂತರ ಸಂಪೂರ್ಣ ವರದಿ ನೀಡಲು ಕ್ರಮ ವಹಿಸಬೇಕು ಎಂದು ಸೂಚಿಸಿದರು.
ಮಗುವಿನ ಆರೋಗ್ಯಕ್ಕೆ ತೊಂದರೆ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾಆರ್ ಸಿಎಚ್‌ಒ ಡಾ. ಸೀಮಾ ಮಾತನಾಡಿ, ಮಕ್ಕಳ ಜಂತುಹುಳ ರೋಗ ಲಕ್ಷಣಗಳಾದ ಹೊಟ್ಟೆ ಹಸಿವಾಗದಿರುವುದು, ಆಯಾಸ, ಹೊಟ್ಟೆ ನೋವು, ಹೊಟ್ಟೆ ಉಬ್ಬರ, ವಾಕರಿಕೆ, ವಾಂತಿ, ದೇಹದ ತೂಕ ಕಡಿಮೆಯಾಗುವುದು, ಹೊಟ್ಟೆ ಕೆಟ್ಟು ಭೇದಿ ಆಗುವುದು.
ಕೆಲವೊಂದು ವಿಶೇಷ ಪ್ರಕರಣಗಳಲ್ಲಿ ಮಗು ಮಲವಿಸರ್ಜನೆ ಮಾಡುವಾಗ ಕರುಳಿನ ಹುಳುಗಳನ್ನು ಸಹ ಮಲದ ಮೂಲಕ ಹೊರಹಾಕುವುದು. ಕರುಳಿನ ಹುಳುಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರೆ, ಕರುಳನ್ನು ಗಟ್ಟಿಯಾಗಿಸಿ ಕರುಳಿನ ಚಲನೆಯನ್ನು ನಿಲ್ಲುವಂತೆ ಮಾಡುತ್ತವೆ. ಕರುಳಿನಲ್ಲಿ ವಾಸ ಮಾಡುವ ಹುಳುಗಳು ಮತ್ತು ಜಂತು ಹುಳುಗಳು ನಮ್ಮ ದೇಹ ಸೇರಿ ಮಗುವಿನ ಆರೋಗ್ಯಕ್ಕೆ ಮತ್ತು ಅಂಗಾಂಗಗಳ ಕಾರ್ಯಚಟುವಟಿಕೆಗೆ ತೊಂದರೆ ಉಂಟು ಮಾಡುತ್ತವೆ ಎಂದು ತಿಳಿಸಿದರು.
ಜಂತುಹುಳು ನಿವಾರಣಾ ದಿನ: ಜಂತುಹುಳು ನಿವಾರಣಾ ಕಾರ್ಯಕ್ರಮವು ಆ.10ರ ಜಂತುಹುಳು ನಿವಾರಣಾ ದಿನದಂದು ಪ್ರಾರಂಭವಾಗಿ ಆ.17ರವರೆಗೆ ಜಿಲ್ಲೆಯಲ್ಲಿ ನಡಯಲಿದೆ. ಪ್ರತಿಯೊಂದು ಮಗುವನ್ನು ಜಂತುಹುಳ ರೋಗಬಾಧೆಯಿಂದ ಮುಕ್ತಗೊಳಿಸುವುದೇ ಈ ಕಾರ್ಯಕ್ರಮದ ಮೂಲ ಉದ್ದೇಶ ವಾಗಿದೆ ಎಂದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಆರ್.ವೆಂಕಟೇಶ ರೆಡ್ಡಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ
ಶ್ರೀಕಂಠಯ್ಯ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲೂಕು ಆರೋಗ್ಯಾಧಿಕಾರಿಗಳ ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.