ಮಾನವೀಯ ಮೌಲ್ಯದ ಸಾಕಾರಮೂರ್ತಿ ಪುನೀತ್
ನಟ ಪುನೀತ್‌ರಾಜ್‌ಕುಮಾರ್ ಕಂಚಿನ ಪುತ್ಥಳಿ ಅನಾವರಣ
Team Udayavani, Mar 18, 2022, 4:43 PM IST
ದೇವನಹಳ್ಳಿ: ಮಾನವೀಯ ನೆಲೆಗಟ್ಟಿನ ಸಾಕಾರಮೂರ್ತಿ ಪುನೀತ್ ರಾಜ್‌ಕುಮಾರ್ ತಮ್ಮ ನಟನೆ ಮೂಲಕ ಅಭಿಮಾನಿಗಳ ಮನಸ್ಸನ್ನು ಗೆದಿದ್ದರು. ಇಂದಿನ ಯುವಪೀಳಿಗೆ ಪುನೀತ್ ಅವರ ಆದರ್ಶ ಬೆಳೆಸಿಕೊಳ್ಳಬೇಕು ಎಂದು ಶಾಸಕ ಎಲ್.ಎನ್. ನಾರಾಯಣಸ್ವಾಮಿ ತಿಳಿಸಿದರು.
ಪಟ್ಟಣದ 14ನೇ ವಾರ್ಡ್‌ನ ನಗರ್ತರ ಬೀದಿಯಲ್ಲಿ ಮಯೂರ ಯುವಕ ಸಂಘ, ಜೇಸಿಐ ದೇವನಹಳ್ಳಿ, ಅಯೋಧ್ಯಾನಗರ ಶಿವಾಚಾರ್ಯ ವೈಶ್ಯ ನಗರ್ತ ಸಮಿತಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ನಟ ಪುನೀತ್‌ರಾಜ್ ಕುಮಾರ್ 47ನೇ ಜನ್ಮದಿನ ಅಂಗವಾಗಿ ನೇತ್ರದಾನ ನೋಂದಣಿ ಅಭಿಯಾನ ಚಾಲನೆ ಹಾಗೂ ನಟ ಪುನೀತ್ ಅವರ ಕಂಚಿನ ಪುತ್ಥಳಿ ಅನಾವರಣಗೊಳಿಸಿ ಅವರು ಮಾತನಾಡಿದರು.
ನೇತ್ರದಾನದಿಂದ ಕಣ್ಣಿಲ್ಲದವರಿಗೆ ಬೆಳಕು ನೀಡುವ ಪುಣ್ಯ ಕಾರ್ಯದಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳುವಂತಾಗಬೇಕು. ಪುನೀತ್ ಕನ್ನಡಿಗರ ಹೃದಯದಲ್ಲಿ ಅಜರಾಜಮರವಾಗಿದ್ದಾರೆ. ಅವರ ಅಗಲಿಕೆ ನೋವನ್ನುಂಟು ಮಾಡಿದೆ. ದುಃಖವನ್ನು ಭರಿಸಲಾಗದಷ್ಟು ಅವರ ನೆನಪು ಕಾಡುತ್ತಿದೆ. ಇಡೀ ಕನ್ನಡ ಚಲನಚಿತ್ರ ರಂಗದಲ್ಲಿ ಅವರ ಅಭೂತಪೂರ್ವ ಪ್ರತಿಭೆ. ಇಡೀ ಸಮಾಜಕ್ಕೆ ಉತ್ತಮ ಸಂದೇಶಗಳನ್ನು ನೀಡಿದೆ. ಅವರ ಸೇವಾ ಕಾರ್ಯಗಳು ಪ್ರತಿಯೊಬ್ಬರಿಗೂ ಸ್ಫೂರ್ತಿದಾಯವಾಗಿದೆ ಎಂದರು.
ಮತ್ತೆ ಹುಟ್ಟಿ ಬರಲಿ: 14ನೇ ವಾರ್ಡ್‌ನ ಸದಸ್ಯ ವೈ. ಆರ್. ರುದ್ರೇಶ್ ಮಾತನಾಡಿ, ಜನಸಾಮಾನ್ಯರಲ್ಲಿ ಒಬ್ಬರಾಗಿ ಎಲ್ಲರಿಗೂ ಅಚ್ಚುಮೆಚ್ಚು ಆಗಿದ್ದ ಅಪ್ಪು ನಮ್ಮನ್ನೆಲ್ಲ ಅಗಲಿದ್ದಾರೆ. ಆದರೆ, ಸದಾ ನಮ್ಮ ಮನಸ್ಸಿನಲ್ಲಿ ಇರುತ್ತಾರೆ. ಅವರ ಹೆಸರಿನಲ್ಲಿ ಇಂತಹ ಸೇವಾ ಕಾರ್ಯವನ್ನು ಮಾಡಲಾಗುತ್ತಿದೆ. ಪುನೀತ್ ಚಿತ್ರಗಳು ಇಂದಿಗೂ ಜನಸಾಮಾನ್ಯರ ಮನಸ್ಸಿನಲ್ಲಿ ಅಜರಾಮರವಾಗಿದೆ. ಇಂತಹ ಮೇರುನಟ ಮತ್ತೆ ಹುಟ್ಟಿ ಬರಬೇಕು. ನೇತ್ರದಾನ ಮಹಾದಾನವಾಗಿದ್ದು, ಎರಡು ಕಣ್ಣುಗಳನ್ನು ಮಣ್ಣುಪಾಲು ಮಾಡದೆ ನೇತ್ರದಾನ ಮಾಡಿದರೆ ಇಬ್ಬರು ಅಂಧರಿಗೆ ಬೆಳಕಾಗುತ್ತದೆ ಎಂದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಆರ್.ಮುನೇಗೌಡ, ಪುರಸಭಾ ಅಧ್ಯಕ್ಷೆ ಗೋಪಮ್ಮ, ಉಪಾಧ್ಯಕ್ಷೆ ಗೀತಾಶ್ರೀಧರ್ ಮೂರ್ತಿ, ಪುರಸಭಾ ಸದಸ್ಯ ಜಿ.ಎ.ರವೀಂದ್ರ, ಎಸ್.ನಾಗೇಶ್, ಬಾಲರಾಜ್, ಮುನಿಕೃಷ್ಣ, ಜೇಸಿಐ ಸಂಸ್ಥೆಯ ಅಧ್ಯಕ್ಷ ಪ್ರವೀಣ್ ಕುಮಾರ್, ಎಎಸ್‌ವಿಎನ್ ಸಂಘದ ಅಧ್ಯಕ್ಷ ಬಿ.ವಿ.ನಾಗರಾಜ್ ಟೌನ್ ಅಧ್ಯಕ್ಷ ಮುನಿನಂಜಪ್ಪ, ಮಯೂರ ಯುವಕರಸಂಘದ ಗೌರವಾಧ್ಯಕ್ಷ ರವಿಕುಮಾರ್, ನಾಮಿನಿ ಪುರಸಭಾ ಸದಸ್ಯ ಗೋಪಾಲಕೃಷ್ಣ, ಮಂಜುಳಾಗುರುಸ್ವಾಮಿ, ಪುನೀತ, ತಾಲೂಕು ಯುವಜೆಡಿಎಸ್ ಅಧ್ಯಕ್ಷ ಆರ್.ಭರತ್ ಕುಮಾರ್, ಮಾಜಿ ಪುರಸಭಾ ಸದಸ್ಯ ಎಂ. ಕುಮಾರ್, ರವಿಕುಮಾರ್, ಮಾಜಿ ಪುರಸಭಾ ಅಧ್ಯಕ್ಷ ನರಸಿಂಹಮೂರ್ತಿ, ಪಿಕಾರ್ಡ್ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಸಿ.ಬಿ.ರಾಜು, ಪುರಸಭಾ ಮುಖ್ಯಾಧಿಕಾರಿ ಎ.ಎಚ್. ನಾಗರಾಜ್, ಬಳಗದ ಪದಾಧಿಕಾರಿಗಳು ಇದ್ದರು.
ಸೇವೆ ಶ್ಲಾಘನೀಯ
ಅಪ್ಪು ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸುವುದರ ಮೂಲಕ ಮಯೂರ ಯುವಕರ ಬಳಗ ಮಾಡುತ್ತಿರುವ ಸಮಾಜಮುಖೀ ಸೇವೆ ಶ್ಲಾಘನೀಯ. ನೇತ್ರದಾನ ಸದಸ್ಯತ್ವ ನೊಂದಣಿ, ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ವಿತರಣೆ, ಹಸಿದವರಿಗೆ ಅನ್ನ ನೀಡುವ ಕಾರ್ಯ ಹೀಗೆ ಹಲವಾರು ಸಮಾಜ ಸೇವೆಯನ್ನು ಮಾಡುತ್ತಿರುವ ಯುವಕರ ಬಳಗ ಇಡೀ ರಾಜ್ಯಕ್ಕೆ ಮಾದರಿ ಎಂದು ಶಾಸಕ ಎಲ್.ಎನ್. ನಾರಾಯಣಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.