ಬೇನಾಮಿ ಆಸ್ತಿ ದಾಖಲೆ ನೀಡಿದರೆ ಶಾಸಕರ ಹೆಸರಿಗೆ ದಾನ
Team Udayavani, Mar 1, 2018, 2:10 PM IST
ಆನೇಕಲ್: ನಾನು ಬೇನಾಮಿ ಆಸ್ತಿ ಮಾಡಿದ್ದೇನೆ ಎಂದು ಶಾಸಕ ಬಿ.ಶಿವಣ್ಣ ಆರೋಪ ಮಾಡಿದ್ದು, ಅದಕ್ಕೆ ಸಂಬಂಧಿಸಿದಂತೆ ಸೂಕ್ತ ದಾಖಲಾತಿ ಒದಗಿಸಿಕೊಟ್ಟರೆ ತಮ್ಮ ಆಸ್ತಿ ಅವರಿಗೆ ದಾನ ಮಾಡುವುದಾಗಿ ಮಾಜಿ ಸಚಿವ ಎ.ನಾರಾಯಣಸ್ವಾಮಿ ಲೇವಡಿ ಮಾಡಿದರು. ತಾಲೂಕಿನ ಹೆಬ್ಬಗೋಡಿ ಖಾಸಗಿ ಹೋಟಲ್ ನಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಶಿವಣ್ಣ ಅರ್ಥ ಮಾಡಿಕೊಳ್ಳಲಿ: ನಾನು ರಿಯಲ್ ಎಸ್ಟೇಟ್ ಉದ್ಯಮ ಮಾಡುತ್ತಿದ್ದು, ಹಣ ಕೂಡಿಟ್ಟು ಅದನ್ನು ಬಂಡವಾಳವಾಗಿ ಹೂಡಿ ಲಾಭ ಮಾಡಿ ಬೆಳೆದಿದ್ದೇನೆ. ಅದು ಬಿಟ್ಟು ನಾನು ಜೋಳಿಗೆ ಹಿಡಿದು ಯಾರ ಬಳಿ ಭಿಕ್ಷೆ ಬೇಡಿದವನಲ್ಲ. ಇದನ್ನು ಶಾಸಕ ಶಿವಣ್ಣ ಅರ್ಥ ಮಾಡಿಕೊಂಡು ಮಾತನಾಡಬೇಕು ಎಂದರು.
ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳ ವಿಚಾರದಲ್ಲಿ ಅನಗತ್ಯ ಮೂಗು ತೂರಿಸುವುದು ತಮ್ಮ ಜಾಯಮಾನವಲ್ಲ. ಹೆಬ್ಬಗೋಡಿಗೆ ಕಾವೇರಿ ನೀರು ಪೂರೈಕೆಯಾಗುತ್ತಿರುವುದು ಬಿಜೆಪಿ ಹೋರಾಟದ ಫಲವಾಗಿದೆ ಎಂದು ಹೇಳಿದರು.
ಯಶಸ್ಸು: ಕಾವೇರಿ ನೀರನ್ನು ಹೆಬ್ಬಗೋಡಿಗೆ ನೀಡುವ ವಿಚಾರದಲ್ಲಿ ಕಳೆದ ಹತ್ತಾರು ವರ್ಷಗಳ ಹಿಂದೆ ಬಿಜೆಪಿ ಎಲ್ಲಾ ಪಕ್ಷಗಳ ನಾಗರಿಕರ, ರೈತ ಮುಖಂಡ ಒಗ್ಗೂಡಿಸಿಕೊಂಡು ಬೃಹತ್ ಮಟ್ಟದ ಪ್ರತಿಭಟನೆಯನ್ನು ಬಯೋಕಾನ್ ವಿರುದ್ಧ ಮಾಡಿ ಯಶಸ್ಸು ಸಾಧಿಸಿದ್ದೇವೆ ಎಂದರು.
ಹೋರಾಟದ ಫಲವಾಗಿ ಬಯೋಕಾನ್ ಮತ್ತು ಹೆಬ್ಬಗೋಡಿ ಪಂಚಾಯಿತಿ ಒಡಂಬಡಿಕೆ ಮೇರೆಗೆ ಹೆಬ್ಬಗೋಡಿ ಜನತೆಗೆ ಕಾವೇರಿ ನೀರನ್ನು ಕೊಡುವುದಾಗಿ ಸಮ್ಮತಿಸಿತ್ತು. ಪಂಚಾಯ್ತಿ ಹಾಗೂ ಬಯೋಕಾನ್ ಕಂಪನಿ ಒಪ್ಪಂದ ಮಾಡಿಕೊಂಡು ಕಾವೇರಿ ನೀರು ಕೊಡುವುದಕ್ಕೆ ಎಲ್ಲಾ ರೀತಿಯ ಯೋಜನೆಗಳನ್ನು ತಯಾರಿಸಿಕೊಳ್ಳಲಾಯಿತು.
ಆದರೆ ಪ್ರಸ್ತುತ ನಗರಸಭೆ ಬಿಜೆಪಿ ಪಕ್ಷದ ಆಡಳಿತದ ಅವಧಿಯಲ್ಲಿ ಸಂಪೂರ್ಣವಾಗಿ ಹೆಬ್ಬಗೋಡಿಗೆ ಕಾವೇರಿ ನೀರನ್ನು ಕೊಡಬೇಕೆಂಬ ಉದ್ದೇಶವಾಗಿದೆ. ಆದರೆ ಇದಕ್ಕೆ ವ್ಯವಸ್ಥಿತವಾದ ಪೈಪ್‌ಲೈನ್ ವ್ಯವಸ್ಥೆ ಇನ್ನೂ ಪೂರ್ಣಗೊಂಡಿಲ್ಲ. ಹೀಗಾಗಿ ಅಧ್ಯಕ್ಷರು ಮತ್ತು ಅಧಿಕಾರಿಗಳು ಚರ್ಚೆ ಮಾಡಿ ಪೈಪ್‌ಲೈನ್ ಪೂರ್ಣಗೊಂಡ ಮೇಲೆ ನೀರು ಕೊಟ್ಟರೆ ಸೂಕ್ತ ಎಂಬ ನಿರ್ಣಯಕ್ಕೆ ಬಂದಿದ್ದಾರೆ ಎಂದು
ಹೇಳಿದರು.
ನಗರಸಭೆ ಕಾರ್ಯಚಟುವಟಿಕೆಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದ ಕಾಂಗ್ರೆಸ್ ಶಾಸಕ ಬಿ.ಶಿವಣ್ಣ ಮತ್ತು ಕಾಂಗ್ರೆಸ್ ನಗರ ಸಭೆ ಸದಸ್ಯರು ಜನರನ್ನು ದಿಕ್ಕು ತಪ್ಪಿಸಿ ಅನಗತ್ಯ ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದು ಕಿಡಿಕಾಡಿದರು.
ಸುದ್ದಿಗೋಷ್ಠಿಯಲ್ಲಿ ನಗರಸಭೆ ಅಧ್ಯಕ್ಷೆ ಗಿರಿಜಾ ಮಂಜುನಾಥ್, ಉಪಾಧ್ಯಕ್ಷ ರಾಜೇಂದ್ರಪ್ಪ, ಮಾಜಿ ಉಪಾಧ್ಯಕ್ಷ ಹೆಬ್ಬಗೋಡಿ ಶ್ರೀನಿವಾಸ್ ರೆಡ್ಡಿ, ಮುಖಂಡರಾದ ಪ್ರಭಾಕರ್ ರೆಡ್ಡಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಶ್ರೀ, ಹೆಬ್ಬಗೋಡಿ ನಗರಸಭೆ ಬಿಜೆಪಿ ಅಧ್ಯಕ್ಷ ಪಟೇಲ್ ನಾಗರಾಜ್, ನಗರಸಭೆ ಸದಸ್ಯರು, ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಮತ್ತಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.