ಸರ್ಕಾರ ನೇಕಾರರ ಉತ್ಪನ್ನ ಖರೀದಿಸಲಿ
ನೇಕಾರರು ಶಾಸಕ ಟಿ.ವೆಂಕಟರಮಣಯ್ಯ ಸೇರಿದಂತೆ ರಾಜ್ಯ ಜವಳಿ ಸಚಿವರಿಗೆ ಮನವಿ
Team Udayavani, Apr 23, 2020, 1:09 PM IST
ಸಾಂದರ್ಭಿಕ ಚಿತ್ರ
ದೊಡ್ಡಬಳ್ಳಾಪುರ: ಕೋವಿಡ್ ಲಾಕ್‌ಡೌನ್ ಹಿನ್ನೆಲೆಯಲ್ಲಿ ರಾಜ್ಯದ ನೇಕಾರರು ಸಂಕಷ್ಟಕ್ಕೀಡಾಗಿದ್ದು, ಸರ್ಕಾರ ಕೂಡಲೇ ನೇಕಾರರ ಸಂಕಷ್ಟಗಳಿಗೆ ಸ್ಪಂದಿಸಬೇಕು. ನೇಕಾರರ ನೇಯ್ದ ಸೀರೆಗಳನ್ನು ಸರ್ಕಾರ ಖರೀದಿಸಬೇಕು ಎಂದು ನೇಕಾರರ ಹೋರಾಟ ಸಮಿತಿ ನೇತೃತ್ವದಲ್ಲಿ ನೇಕಾರರು ಶಾಸಕ ಟಿ.ವೆಂಕಟರಮಣಯ್ಯ ಸೇರಿದಂತೆ ರಾಜ್ಯ ಜವಳಿ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ. ನೇಕಾರರ ಹೋರಾಟ ಸಮಿತಿ ಅಧ್ಯಕ್ಷ ಬಿ. ಜಿ.ಹೇಮಂತ ರಾಜು ಮಾನತಾಡಿ, ರಾಜ್ಯದಲ್ಲಿ 1.5 ಲಕ್ಷ ಮಗ್ಗಗಳಿದ್ದು, ಸುಮಾರು 3 ಲಕ್ಷ ಕುಟುಂಬಗಳು ನೇಕಾರಿಕೆ ಅವಲಂಬಿಸಿವೆ. ನೇಕಾರರಿಗೆ ಸೂಕ್ತ ಮಾರುಕಟ್ಟೆಯಿಲ್ಲ. ಜತೆಗೆ ಕಚ್ಚಾ ಸಾಮಗ್ರಿಗಳ ಬೆಲೆ ಹೆಚ್ಚಿದ್ದು, ಆರ್ಥಿಕವಾಗಿ ದಿವಾಳಿ ಅಂಚಿನಲ್ಲಿದ್ದಾರೆ ಎಂದರು.
ಬೆಂಗಳೂರು ನಗರ, ಗ್ರಾಮಾಂತರ, ಬೆಳಗಾವಿ, ಬಾಗಲಕೋಟೆ ಮೊದಲಾದ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದ ನೇಕಾರರಿದ್ದಾರೆ. ನೇಕಾರರು ನೇಯ್ದ ಸೀರೆಗಳು ರಾಜ್ಯವಲ್ಲದೇ ನೆರೆಯ ಆಂಧ್ರ, ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ, ತೆಲಂಗಾಣ ರಾಜ್ಯಗಳಲ್ಲಿ ಹೆಚ್ಚು ಮಾರಾಟವಾಗುತ್ತಿದ್ದವು. ಆದರೆ ಮಾರಾಟಗಾರರು ಸೀರೆ ಖರೀದಿಸುತ್ತಿಲ್ಲ. ಜತೆಗೆ ಹಿಂದಿನ ಖರೀದಿಯ ಹಣ ನೀಡದೇ ಕಾರಣ ಹೇಳುತ್ತಿದ್ದಾರೆ. ಈ ನಿಟ್ಟಿನಲ್ಲಿ ನೇಕಾರರನ್ನು ಉಳಿಸಲು ನೇಕಾರರಿಂದ 50 ಲಕ್ಷ ಸೀರೆಗಳನ್ನು ಸರ್ಕಾರ ಖರೀದಿ ಮಾಡಿ, ಸರ್ಕಾರಿ ನೌಕರರು, ಪಂಚಾಯಿತಿಗಳು,
ಅಂಗನವಾಡಿ ಕಾರ್ಯಕರ್ತರು ಮೊದಲಾದ ಸರ್ಕಾರಿ ಹಾಗೂ ಅರೆ ಸರ್ಕಾರಿ ಸಿಬ್ಬಂದಿಗೆ ಮಾರಾಟ ಮಾಡುವ ಮೂಲಕ ನೆರವಾಗಬೇಕಿದೆ. ಸುಮಾರು 50 ಕೋಟಿ
ಅದಕ್ಕೆ ವೆಚ್ಚವಾಗಲಿದೆ. ಸರ್ಕಾರ ಮೊದಲು ಬಟ್ಟೆ ಖರೀದಿಗೆ ಆದ್ಯತೆ ನೀಡಬೇಕೆಂದು ಮನವಿ ಮಾಡಲಾಗಿದೆ. ನೇಕಾರರು ಸೌಲಭ್ಯಗಳಿಂದಲೂ ವಂಚಿತರಾಗಿದ್ದಾರೆ. ಈ ನಿಟ್ಟಿನಲ್ಲಿ ಅಸಂಘಟಿತ ಕಾರ್ಮಿಕರ ಪಟ್ಟಿಗೆ ನೇಯ್ಗೆ ಕಾರ್ಮಿಕರನ್ನು ಸೇರಿಸಬೇಕೆಂದು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು. ನೇಕಾರ ಹೋರಾಟ ಸಮಿತಿ ಕೆ.ಜಿ.ಗೋಪಾಲ್, ರಂಗಸ್ವಾಮಿ ಮತ್ತಿತರರು ಹಾಜರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.