ತಂಬಾಕು ಉತ್ಪನ್ನ ಮಾರಾಟಕ್ಕೆ “ಲೈಸೆನ್ಸ್ ಕಡ್ಡಾಯ’
Team Udayavani, Feb 6, 2024, 5:16 PM IST
ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲೂ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಕಡಿವಾಣ ಹಾಕಲು ದಾವಣಗೆರೆ ಮಹಾನಗರ ಪಾಲಿಕೆ ಮಾದರಿಯಲ್ಲಿ ಪರವಾನಗಿ ಕಡ್ಡಾಯ ಮಾಡಲು, ಸರ್ಕಾರಚಿಂತನೆ ನಡೆಸಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ 10 ತಿಂಗಳ ಅವಧಿಯಲ್ಲಿ 32 ಕಡೆಗಳಲ್ಲಿ ದಾಳಿ ನಡೆಸಿರುವ ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಅಧಿಕಾರಿಗಳು, 262 ಪ್ರಕರಣ ದಾಖಲಿಸಿ 52 ಸಾವಿರ ರೂ. ದಂಡ ವಸೂಲಿ ಮಾಡಿದ್ದಾರೆ. ಆದರೂ, ವಾಣಿಜ್ಯ ಮಳಿಗೆಗಳಲ್ಲಿ ಅಕ್ರಮವಾಗಿ ತಂಬಾಕು ಉತ್ಪನ್ನ ಮಾರಾಟ ಮಾಡಲಾಗುತ್ತಿದೆ. ದಾವಣಗೆರೆ ಮಾದರಿ ಕಡ್ಡಾಯ ಪರವಾನಗಿ ಮಾದರಿ ಜಾರಿ ಆದರೆ, ಮಾರಾಟಕ್ಕೆ ಮತ್ತಷ್ಟು ಕಡಿವಾಣ ಬೀಳಲಿದೆ ಎಂಬುದು ಅಧಿಕಾರಿಗಳು ಹೇಳಿಕೆಯಾಗಿದೆ.
ರಾಜ್ಯದಲ್ಲೇ ಮೊದಲ ಬಾರಿಗೆ ದಾವಣಗೆರೆ ಮಹಾನಗರ ಪಾಲಿಗೆ ವ್ಯಾಪ್ತಿಯಲ್ಲಿ ಈ ಆದೇಶ ಜಾರಿಯಾಗಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಜ್ಯದ ಎಲ್ಲ ನಗರಸಭೆ, ಪುರಸಭೆ ಹಾಗೂ ಪಪಂ ವ್ಯಾಪ್ತಿಯಲ್ಲಿ ಈ ನೀತಿ ಜಾರಿಗೊಳಿಸಲು ಸರ್ಕಾರ ಉತ್ಸುಕವಾಗಿದೆ. ಶೀಘ್ರದಲ್ಲೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಜಾರಿಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಾವಣಗೆರೆ ನಗರ ವ್ಯಾಪ್ತಿಯಲ್ಲಿ ಈ ಮೊದಲು ತಂಬಾಕು ಉತ್ಪನ್ನಗಳ ಮಾರಾಟದ ಸಾವಿರಾರು ಮಳಿಗೆಗಳಿದ್ದು, ಈ ನೀತಿ ಜಾರಿಯಾದ ಬಳಿಕ ಶೇ.80ರಲ್ಲಿ ಉತ್ಪನ್ನ ಮಾರಾಟ ಬಂದ್ ಆಗಿದೆ. ಪ್ರಸ್ತುತ 200 ಮಂದಿ ಲೈಸೆನ್ಸ್ ಪಡೆದಿದ್ದಾರೆ ಎಂದು ತಂಬಾಕು ನಿಯಂತ್ರಣ ಹೇಳುತ್ತಾರೆ.
2023 ಏಪ್ರಿಲ್‌ನಿಂದ 2024 ಜನವರಿವರೆಗೆ ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ 32 ಕಡೆಗಳಲ್ಲಿ ದಾಳಿ ನಡೆಸಲಾಗಿದೆ. ಕಾಯ್ದೆ 4ರ ಅಡಿ 239 ಪ್ರಕರಣ ಹಾಗೂ ಕಾಯ್ದೆ 6ಎ ಅಡಿ 23 ಪ್ರಕರಣ ಸೇರಿ ಒಟ್ಟು 262 ಪ್ರಕರಣ ದಾಖಲಿಸಲಾಗಿದ್ದು, 52 ಸಾವಿರ ರೂ. ದಂಡ ವಸೂಲಿ ಮಾಡಲಾಗಿದೆ.
ತಂಬಾಕು ಉತ್ಪನ್ನ ಮಾರಾಟಕ್ಕೆ ಲೈಸೆನ್ಸ್ ಪಡೆಯುವ ಸಂಬಂಧ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಯ ಕೆಲವೊಂದು ನಿಯಮಗಳನ್ನು ಪಾಲಿಸಬೇಕು. ಹಾಗೆಯೇ, ಕೇಳಿದ ಅಗತ್ಯ ದಾಖಲೆಗಳನ್ನು ವಾಣಿಜ್ಯ ಮಳಿಗೆ ಮಾಲಿಕರು ನೀಡಬೇಕು. ಅವರಿಂದ ಒಪ್ಪಿಗೆ ಪಡೆದ ಬಳಿಕ ಜಿಲ್ಲಾ ತಂಬಾಕು ನಿಯಂತ್ರಣದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಗ್ರೀನ್ ಸಿಗ್ನಲ್ ನೀಡಿದರಷ್ಟೇ ಪರವಾನಗಿ ಅಧಿಕೃತವಾಗಲಿದೆ.
ವಾಣಿಜ್ಯ ಮಳಿಗೆಗಳಲ್ಲಿ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಲೈಸೆನ್ಸ್ ಪಡೆಯಲು ಕೆಲವೊಂದು ಕಠಿಣ ನಿಯಮಗಳನ್ನು ಅಳವಡಿಸಿರುವುದರಿಂದ ಹೆಚ್ಚಿನ ಮಂದಿ ಲೈಸೆನ್ಸ್ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೆ, ದೇವಸ್ಥಾನ, ಶಾಲೆ, ಕೋರ್ಟ್ ಆವರಣ, ಸರ್ಕಾರಿ ಕಚೇರಿಗಳ ಆವರಣ ಸೇರಿ ಹಲವು ಕಡೆಗಳಲ್ಲಿ ಅಂಗಡಿಯವರು ಲೈಸೆನ್ಸ್ ಡೆಯುವುದು ಕಷ್ಟ. ಆದ್ದರಿಂದ ತಂಬಾಕು ಉತ್ಪನ್ನ ಮಾರಾಟ ತಡೆಗೆ ಈ ನೀತಿ ಸಹಕಾರಿಯಾಗಿದೆ ಎಂಬುದು ಅಧಿಕಾರಿಗಳ ಅಭಿಪ್ರಾಯವಾಗಿದೆ. ಮುಖ್ಯವಾಗಿ ಶಾಲೆಗಳ 100 ಗಜದ ಅಂತರದಲ್ಲಿನ ಯಾವುದೇ ಮಳಿಗೆಗಳಲ್ಲಿ ತಂಬಾಕು ಉತ್ಪನ್ನ ಮಾರಾಟಕ್ಕೆ ಅವಕಾಶವಿಲ್ಲದಿರುವುದು ಇಂಥವರಿಗೆ ಲೈಸೆನ್ಸ್ ಸಿಗುವುದಿಲ್ಲ.
18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ತಂಬಾಕು ಉತ್ಪನ್ನಗಳು ಸುಲಭವಾಗಿ ಸಿಗಬಾರದು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ತಂಬಾಕು ಉತ್ಪನ್ನ ಮಾರುವ ವಾಣಿಜ್ಯ ಮಳಿಗೆಗಳ ಮೇಲೆ ದಾಳಿ ನಡೆಸಿ ಕೇಸು ದಾಖಲಿಸಲಾಗುತ್ತಿದೆ. ದಾವಣಗೆರೆಯಲ್ಲಿ ಈ ನಿಯಮ ಯಶಸ್ವಿಯಾಗಿದೆ. ಅದೇ ಮಾದರಿಯಲ್ಲಿ ಜಿಲ್ಲೆಯಲ್ಲೂ ಶೀಘ್ರ ಅನುಷ್ಠಾನಗೊಳಿಸುತ್ತೇವೆ. ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಪರವಾನಗಿ ನೀಡುವುದರಿಂದ ಸ್ಥಳೀಯ ಆಡಳಿತಕ್ಕೆ ಆದಾಯ ಬರುವುದಕ್ಕೆ ಸಹಕಾರಿಯಾಗುತ್ತದೆ.-ಡಾ.ವಿದ್ಯಾರಾಣಿ, ಜಿಲ್ಲಾ ಸಲಹಗಾರ್ತಿ, ತಂಬಾಕು ನಿಯಂತ್ರಣ ಘಟಕ.
– ಎಸ್.ಮಹೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.