ಪ್ರಾಚೀನ ಕಾಲದ ಶಾಸನ ಪತ್ತೆ
Team Udayavani, Nov 14, 2021, 11:45 AM IST
ದೇವನಹಳ್ಳಿ: ತಾಲೂಕಿನಲ್ಲಿ ದೊರೆತಿರುವ ಅಪ್ರಕಟಿತ ಶಾಸನಗಳು ವೀರಗಲ್ಲುಗಳು, ಶಿಲಾ ಶಾಸನಗಳು ಪತ್ತೆಯಾಗುತ್ತಿದ್ದು, ಪುರತತ್ವ ಇಲಾಖೆ ಇವುಗಳ ಸಂರಕ್ಷಣೆ ಮಾಡಿ ಮುಂದಿನ ಪೀಳಿಗೆಗೆ ಇತಿಹಾಸ ಉಳಿಯುಂತೆ ಆಗಬೇಕು ಎಂದು ಇತಿಹಾಸ ಸಂಶೋಧಕ ಬಿಟ್ಟಸಂದ್ರ ಗುರುಸಿದ್ದಯ್ಯ ತಿಳಿಸಿದರು.
ತಾಲೂಕಿನ ಕಸಬಾ ಹೋಬಳಿಯ ಸಾದ ಹಳ್ಳಿ ಗ್ರಾಮದ ಎಸ್.ಮಂಗಳಾ ಕೋಂ ಲೇಟ್ ಎಸ್.ಡಿ. ನಾಗರಾಜ್ ಮನೆಯ ಹಿಂಭಾಗ ಸರ್ವೆ ನಂ.2 ಜಮೀನಿನಲ್ಲಿ ದೊರೆತಿರುವ ಪ್ರಾಚೀನ ಕಾಲದ ಶಿಲಾ ಶಾಸನವನ್ನು ಪರಿಶೀಲಿಸಿ ಮಾತನಾಡಿದ ಅವರು, ಶಿಲಾ ಶಾಸನವನ್ನು ಪತ್ತೆ ಹಚ್ಚಿದ್ದು, ಮಾಹಿತಿಯನ್ನು ಕಲೆ ಹಾಕಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಮೈಸೂರಿನ ಶಾಸನ ತಜ್ಞ ಡಾ.ಎಸ್. ನಾಗರಾಜಪ್ಪ ಅವರಿಗೆ ಶಾಸ ನದ ಪೋಟೋ ಕಳುಹಿಸಿದ್ದರು ಎಂದರು.
ಇದನ್ನೂ ಓದಿ:- ದತ್ತಮಾಲಾಧಾರಿಗಳ ಮೇಲೆ ಕಲ್ಲು ತೂರಾಟ: ಮುತಾಲಿಕ್ ಕಿಡಿ
ಶಾಸನದ ವಿವರಣೆ: ಎಲಿತೊರೆಯ ಮಹಾಜನರ ಆಳು ಪಿಟ್ಟಕಮ್ಮರನು ತುರುಗೊಳನ್ನು ನಡೆಸಿ, ಎದುರು ಬಂದ ಹಲವರನ್ನುಕೊಂದು, ತಾನೂ ಸಹ ಬಿದ್ದು ಸರ್ಗಕ್ಕೆ ಸೇರಿದ ವಿಷಯವನ್ನು ಶಾಸನವು ತಿಳಿಸುತ್ತದೆ. ಕಾಲದ ಉಲ್ಲೇಖವಿಲ್ಲ. ಲಿಪಿಯ ಲಕ್ಷಣಗಳ ಆಧಾರದ ಮೇಲೆ ಕ್ರಿ. ಶ. 8 ನೇ ಶತಮಾನದ ಶಾಸನ ಎನ್ನಬಹುದು ಎಂದು ಶಾಸನ ತಜ್ಞ ಡಾ. ಎಸ್. ನಾಗರಾಜಪ್ಪ ಓದಿ ಅಧ್ಯಯನ ಮಾಡಿ ವಿವರಣೆಯನ್ನು ತಿಳಿಸಿದ್ದಾರೆ ಎಂದರು.
ಸಮಗ್ರ ಅಧ್ಯಯನ ಮಾಡಿ: ದೇವನಹಳ್ಳಿ ತಾಲೂಕಾದ್ಯಂತ 4 ವರ್ಷಗಳಿಂದ 50 ಹೆಚ್ಚು ಕನ್ನಡ, ತಮಿಳು ಗ್ರಂಥ ಲಿಪಿ, ಸಂಸ್ಕೃತ ಭಾಷೆಗಳ ಅಪ್ರಕಟಿತ ಶಾಸನಗಳು ಹಾಗೂ 100 ಹೆಚ್ಚು ಮಾಸ್ತಿಗಲ್ಲು, ವೀರಗಲ್ಲುಗಳನ್ನು ಪತ್ತೆ ಹಚ್ಚಲಾಗಿದೆ. ಈಗಾಗಲೇ ಹಲವು ಶಾಸನಗಳನ್ನು ಶಾಸನ ತಜ್ಞರು ಹಾಗೂ ಇತಿಹಾಸ ಸಂಶೋಧಕರನ್ನು ಸ್ಥಳಕ್ಕೆ ಕರೆಸಿ ಅಧ್ಯಯನ ಮಾಡಿ ಓದಿಸಲಾಗಿದೆ. ಈ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆಯವರು ತಾಲೂಕಿನಲ್ಲಿ ದೊರೆತಿರುವ ಎಲ್ಲ ಅಪ್ರಕಟಿತ ಶಾಸನಗಳನ್ನು ಸಮಗ್ರ ಅಧ್ಯಯನ ಮಾಡಿ ಇವುಗಳ ಸಂರಕ್ಷಣೆಯನ್ನು ಮಾಡಬೇಕು ಎಂದು ಮನವಿ ಮಾಡಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.