ಕುಡಿವ ನೀರಿನ ಸಮಸ್ಯೆ ನೀಗಿಸದಿದ್ದರೆ ಕ್ರಮ
Team Udayavani, Feb 20, 2019, 7:30 AM IST
ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ಬರದ ನಡುವೆಯೇ ಬಿಸಿಲಿನ ತಾಪಮಾನ ಹೆಚ್ಚಾಗಿದ್ದು, ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಪರ್ಯಾಯ ಕ್ರಮಗಳಿಗೆ ಸ್ಪಂದಿಸದ ಪಿಡಿಒಗಳ ವಿರುದ್ಧ ಕಠಿಣ ಕ್ರಮ ಅನಿವಾರ್ಯ ಎಂದು ಶಾಸಕ ಟಿ.ವೆಂಕಟರಮಣಯ್ಯ ಎಚ್ಚರಿಕೆ ನೀಡಿದರು. ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಬರಆವರಿಸಿದ್ದು, ಅಧಿಕಾರಿಗಳು ಹೊಣೆಗಾರಿಕೆಯಿಂದ ಕಾರ್ಯನಿರ್ವಹಿಸಬೇಕೆಂದು ಸೂಚಿಸಿದರು.
ಕೊಳವೆಬಾವಿಯಿಂದ ನೀರು ಸಾಧ್ಯವೆ?: ಬರಪೀಡಿತ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ತಡೆಗಟ್ಟಲು ಹಾಗೂ ಪರ್ಯಾಯ ಕ್ರಮಗಳ ಬಗ್ಗೆ ಮುಂಜಾಗ್ರತೆ ವಹಿಸಲು ಜಿಲಾಡಳಿತ ಹಾಗೂ ತಾಲೂಕು ಆಡಳಿತದಳು ಸಂಪೂರ್ಣ ಸಿದ್ಧವಾಗಿವೆ. ಅನವಶ್ಯಕವಾಗಿ ಕೊಳವೆ ಬಾವಿ ಕೊರೆಸದೇ, ಸಾಧ್ಯವಾದಷ್ಟು ನೀರಿನ ಲಭ್ಯತೆ ಕಡಿಯಾಗಿರುವ ಕೊಳವೆ ಬಾವಿಗಳಿಂದಲೇ ನೀರು ಹೊರತೆಗೆಯಲು ಹೆಚ್ಚಿನ ಆದ್ಯತೆ ನೀಡಬೇಕು. ರೈತರಿಂದ ನೀರು ಪಡೆಯಲು ಸಾಧ್ಯವೇ ಎಂಬುದರ ಕುರಿತು ಪಿಡಿಒಗಳು ತ್ವರಿತವಾಗಿ ಚಿಂತನೆಗೆ ನಡೆಸಬೇಕೆಂದರು.
ಬೆಸ್ಕಾಂ ಸಿಬ್ಬಂದಿ ವಿರುದ್ಧ ಕಿಡಿ: ಇನ್ನು ಕೆಲ ಗ್ರಾಮಗಳಿಗೆ ನೀರು ಪೂರೈಸಲು ವಿದ್ಯುತ್ ಸಂಪರ್ಕ, ಟಿ.ಸಿ.ಬದಲಿಸುವುದು ಸೇರಿದಂತೆ ಅನೇಕ ಸಮಸ್ಯೆಗಳು ಬೆಸ್ಕಾಂ ಸಿಬ್ಬಂದಿಯಿಂದ ಉಂಟಾಗುತ್ತಿದೆ. ರೈತರ ಟಿ.ಸಿ.ಬದಲಿಸಲು ಟ್ರ್ಯಾಕ್ಟರ್ ತರಬೇಕೆಂಬ ಅಘೋಷಿತ ನಿಯಮ ಮಾಡಿರುವ ಬಗ್ಗೆ ದೂರುಗಳು ಹೆಚ್ಚಾಗಿವೆ. ಬೇಜವಾಬ್ದಾರಿ ತೋರುವ ಬದಲು ತಾಲೂಕಿನಿಂದ ವರ್ಗಾವಣೆ ಮಾಡಿಸಿಕೊಂಡು ಹೋಗಬಹುದು. ಇಲಾಖೆಗಳಲ್ಲಿ ಸಾರ್ವಜನಿಕರಿಗೆ ಸ್ಪಂದಿಸುವಂತಹ ಅಧಿಕಾರಿಗಳು ಬೇಕೆ ಹೊರತು, ಬೇಜವಾಬ್ದಾರಿ ಅಧಿಕಾರಿಗಳ ಅವಶ್ಯಕತೆಯಿಲ್ಲ ಎಂದು ಹರಿಹಾಯ್ದರು.
ತಾಪಂ ಅಧ್ಯಕ್ಷ ಎಚ್. ವಿ.ಶ್ರೀವತ್ಸ ಮಾತನಾಡಿ, ತಾಲೂಕಿನಲ್ಲಿ ನೀರಿನ ಸಮಸ್ಯೆಯಿದೆ. ನೀರು ಲಭ್ಯವಿರುವ ಗ್ರಾಮಗಳಲ್ಲಿ ನೀರು ಸರಬರಾಜುದಾರರು ಸಮರ್ಪಕವಾಗಿ ಕಾರ್ಯನಿರ್ವಹಿಸದ ಕಾರಣ ನೀರು ಪೋಲಾಗುತ್ತಿದೆ. ಬರದ ಭೀಕರತೆ ಹೆಚ್ಚಾಗಿದ್ದು, ನೀರಿನ ಮಹತ್ವದ ಕುರಿತು ಗ್ರಾಪಂ ಪಿಡಿಒಗಳು ನೀರು ಸರಬರಾಜುದಾರರಿಗೆ ಕಟ್ಟುನಿಟ್ಟಿನ ಆದೇಶ ನೀಡಬೇಕು.ಅಲ್ಲದೇ, ನೀರಿನ ಸಮಸ್ಯೆ ಉಂಟಾದರೆ ಕಚೇರಿಯಲ್ಲಿ ಕುಳಿತು ಆದೇಶ ನೀಡದೇ, ಸ್ಥಳಕ್ಕೆ ತೆರಳಿ ಸಾಧಕ, ಭಾದಕಗಳ ಬಗ್ಗೆ ಚರ್ಚಿಸಿ ತೀರ್ಮಾನಿಸಬೇಕೆಂದರು.
ತಾಲೂಕಿನ ಕೆಲವು ಗ್ರಾಪಂಗಳಲ್ಲಿ ನೀರಿಗಾಗಿ 1,000 ಅಡಿ ಆಳಕ್ಕೆ ಕೊಳವೆಬಾವಿ ಕೊರೆಸುವುದರ ಅವಶ್ಯಕತೆ ಏನು?, ಅದಕ್ಕೆ ಬೇಕಾದ 25 ಎಚ್‌ಪಿ ಮೋಟರ್ ಖರೀದಿಗೆ ಅನುದಾನ ಸಿಗುವುದೇ ಎಂಬ ಬಗ್ಗೆ ಚಿಂತಿಸಬೇಕಿದೆ ಎಂದು ಸಲಹೆ ನೀಡಿದರು. ಸಭೆಯಲ್ಲಿ ಕೆಆರ್‌ಡಿಎಲ್ ಇಲಾಖೆಯಿಂದ ಸ್ಥಾಪಿಸಲಾದ ಶುದ್ಧ ಕುಡಿಯುವ ನೀರಿನ ಘಟಕಗಳ ಪರಿಶೀಲನೆ, ದುಸ್ಥಿತಿಗೆ ಬಂದಿರುವ ಘಟಕಗಳ ಪಟ್ಟಿ ಸಂಗ್ರಹಿಸಿ, ದುರಸ್ತಿಗೆ ಸೂಚನೆ, ಶಾಲೆಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಲು ಒತ್ತು ನೀಡುವುದು,
ನಗರ ಹಾಗೂ ಕನಸವಾಡಿಯಲ್ಲಿ ಎಲ್‌ಕೆಜಿಯಿಂದ ಪಿಯುಸಿ ವರೆಗೆ ಆಂಗ್ಲ ಮಾಧ್ಯಮ ಶಾಲೆ ಸ್ಥಾಪನೆ, ಶಾಲಾ ಅವಧಿಯಲ್ಲಿ ನಗರದಲ್ಲಿರುವ ಶಿಕ್ಷಕರ ಕುರಿತು ನಿಗಾ ವಹಿಸುವುದು, ನಗರದಲ್ಲಿ ರಸ್ತೆ ಕಾಮಗಾರಿ ನಡೆಸಲು ಸ್ಪಂದಿಸದ ಅರಣ್ಯ ಹಾಗೂ ಬೆಸ್ಕಾಂ ಇಲಾಖೆಗೆ ಹೆಚ್ಚರಿಕೆ ನೀಡುವುದು, ಮಾದಗೊಂಡನಹಳ್ಳಿ ರಸ್ತೆ ಸರ್ವೆ ನಡೆಸಲು ಲೋಕೋಪಯೋಗಿ ಅಧಿಕಾರಿಗಳಿಗೆ ಮನವಿ ಮಾಡುವುದು, ರಸ್ತೆ ಕಾಮಗಾರಿ ವಿಳಂಬ, ಸೂಕ್ತ ಮಾಹಿತಿ ಹಾಗೂ ದಾಖಲೆಗಳಿಲ್ಲದೇ ಸಭೆಗೆ ಬರುವ ಅಧಿಕಾರಿಗಳಿಗೆ ಛೀಮಾರಿ ಹಾಕುವುದು ಸೇರಿದಂತೆ ವಿವಿಧ ವಿಚಾರಗಳ ಕುರಿತು ಸದಸ್ಯರು ಸ ಭೆಯ ಗಮನಕ್ಕೆ ತಂದರು.
20 ವಾರಗಳ ಮೇವು ಲಭ್ಯ: ಪಶುಸಂಗೋಪನೆ ಇಲಾಖೆಯ ಡಾ.ವಿಶ್ವನಾಥ್ ಮಾತನಾಡಿ, ತಾಲೂಕಿನಲ್ಲಿ ಮುಂಬರುವ 15 ರಿಂದ 20 ವಾರಗಳ ಕಾಲ ಮೇವಿನ ಲಭ್ಯತೆ ಇದೆ. ಈಗಾಗಲೇ ನೀರಾವರಿ ಹಾಗೂ ದನಕರುಗಳನ್ನು ಹೊಂದಿರುವ ರೈತರಿಗೆ 5 ಸಾವಿರ ಮೇವಿನ ಕಿಟ್‌ಗಳನ್ನು ನೀಡಲಾಗಿದೆ. ಹೋಬಳಿಗೊಂದು ಗೋಶಾಲೆ ಹಾಗೂ ಎರಡು ಮೇವಿನ ಬ್ಯಾಂಕ್ ಸ್ಥಾಪಿಸಲು ಸರಕಾರಕ್ಕೆ ವರದಿ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ತಹಶೀಲ್ದಾರ್ ಎಂ.ಕೆ.ರಮೇಶ್, ತಾಪಂ ಉಪಾಧ್ಯಕ್ಷೆ ಮೀನಾಕ್ಷಿ ಕೆಂಪಣ್ಣ, ಸ್ಥಾಯಿ ಸಮಿತಿ ಅಧ್ಯಕ್ಷ ಮೋಹನ್, ಸರ್ಕಲ್ ಇನ್ಸ್‌ಪೆಕ್ಟರ್ ಜಿ.ಸಿದ್ಧರಾಜು, ನಗರ ಠಾಣೆ ಸಬ್‌ಇನ್ಸ್‌ಪೆಕ್ಟರ್ ವೆಂಕಟೇಶ್, ಸಹಾಯಕ ಕಾರ್ಯಪಾಲಕ ಅಭಿಯಂತರ ಜಯಪಾಲ್ ಮತ್ತಿತರರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.