ನೆಲಮಂಗಲ ಪುರಸಭೆ ಚುನಾವಣೆ ಮುಂದೂಡಿಕೆ
Team Udayavani, May 10, 2019, 11:54 AM IST
ನೆಲಮಂಗಲ: ತಾಲೂಕಿನಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಪಟ್ಟಣ ಪುರಸಭೆಯ ಚುನಾವಣೆಯನ್ನು ನ್ಯಾಯಾಲಯದ ಆದೇಶದ ಮೇರೆಗೆ ನಾಲ್ಕು ವಾರಗಳ ಕಾಲ ಮುಂದೂಡಲಾಗಿದ್ದು, ನ್ಯಾಯಾಲಯದ ಆದೇಶದ ಪ್ರತಿಯನ್ನು ಚುನಾವಣಾಧಿಕಾರಿಗಳು ಪುರಸಭೆ ಸೂಚನಾ ಫಲಕದಲ್ಲಿ ಅಳವಡಿಸಿದ್ದಾರೆ.
ನೆಲಮಂಗಲ ಪಟ್ಟಣ ಪುರಸಭೆ ವ್ಯಾಪ್ತಿಗೆ ಒಳ ಪಟ್ಟಿದ್ದು, ಪ್ರಸ್ತುತ ಸಮ್ಮಿಶ್ರ ಸರಕಾರದ 23ನೇ ಸಚಿವ ಸಂಪುಟದ ಸಭೆಯಲ್ಲಿ ಪುರಸಭೆಯನ್ನು ನಗರಸಭೆ ಯನ್ನಾಗಿ ಮೇಲ್ದರ್ಜೆಗೇರಿಸಿ ಅನುಮೋದನೆಯನ್ನು ನೀಡಲಾಗಿತ್ತು. ನಂತರದಲ್ಲಿ ರಾಜ್ಯಪಾಲರ ಅಂಕಿತಕ್ಕಾಗಿ ರಾಜಭವನಕ್ಕೆ ಕಡತಗಳನ್ನು ರವಾನಿಸಿದ್ದು, ಲೋಕಸಭೆ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ರಾಜ್ಯಪಾಲರ ಅಂಕಿತ ಆಗಿರಲಿಲ್ಲ ಎನ್ನಲಾಗಿದೆ.
ಮುಖಂಡರ ಆತಂಕ ದೂರ: ಈ ಮಧ್ಯೆ ರಾಜ್ಯ ಚುನಾವಣಾ ಆಯೋಗ ಮೇ 2ರಂದು ಪುರಸಭೆಗೆ ಚುನಾವಣಾ ದಿನಾಂಕವನ್ನು ನಿಗದಿಪಡಿಸಿ ಚುನಾ ವಣಾ ವೇಳಾಪಟ್ಟಿಯನ್ನು ಘೋಷಣೆ ಮಾಡಿದ್ದರಿಂದ ಶಾಸಕ ಡಾ.ಕೆ.ಶ್ರೀನಿವಾಸ್‌ಮೂರ್ತಿ, ವಿಧಾನಪರಿಷತ್ ಸದಸ್ಯ ಬಿಎಂಎಲ್ ಕಾಂತರಾಜು ಹಾಗೂ ಸ್ಥಳೀಯ ಮುಖಂಡರಲ್ಲಿ ಆತಂಕ ಮನೆ ಮಾಡಿತ್ತು. ಹಲವು ತಿಂಗಳಿಂದ ಪುರಸಭೆಯನ್ನು ನಗರಸಭೆಯನ್ನಾಗಿ ಪರಿವರ್ತಿಸಲು ಇಲಾಖೆ ಅಧಿಕಾರಿಗಳು ಮತ್ತು ಮುಖ್ಯಮಂತ್ರಿಗಳ ಕಚೇರಿಗೆ ಎಡತಾಕಿದ್ದ ಮುಖಂಡರು ಮತ್ತೆ ಪುರಸಭೆಗೆ ಚುನಾವಣೆ ನಡೆಯುವುದರಿಂದ ನಗರಸಭೆ ಕನಸು ನನಸಾಗದಿರುವುದನ್ನು ಮನಗಂಡು ಅನಿವಾರ್ಯವಾಗಿ ಚುನಾವಣೆ ಮುಂದೂಡುವಂತೆ ಶಾಸಕರು ಮತ್ತು ಎಂಎಲ್ಸಿ ಮೂಲಕ ಪತ್ರ ವ್ಯವಹಾರ ನಡೆಸಿ ಚುನಾವಣಾ ಆಯೋಗ ಮತ್ತು ಸರಕಾರದ ಮೊರೆ ಹೋಗಿದ್ದರು.
ನಾಲ್ಕು ವಾರ ಚುನಾವಣೆ ಮುಂದೂಡಿ: ಇದರ ಪರಿಣಾಮ ನಮ್ಮ ಪ್ರಯತ್ನಗಳು ಯಾವುದೇ ಫಲ ನೀಡುವುದಿಲ್ಲ ಎಂಬುದನ್ನು ಅರಿತ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎನ್.ಪಿ.ಹೇಮಂತ್‌ಕುಮಾರ್ ಹಾಗೂ ಪುರಸಭೆ ಮಾಜಿ ಅಧ್ಯಕ್ಷ ಎ.ಪಿಳ್ಳಪ್ಪ ಅವರು ಪ್ರತ್ಯೇಕವಾಗಿ ರಾಜ್ಯ ಉಚ್ಚನ್ಯಾಯಾಲಯದಲ್ಲಿ ದಾವೆ ಹೂಡಿ ಚುನಾವಣೆಯನ್ನು ಅಭಿವೃದ್ಧಿ ಹಿತದೃಷ್ಟಿ ಯಿಂದಾಗಿ ಮುಂದೂಡುವಂತೆ ವಕೀಲರ ಮೂಲಕ ಮನವಿ ಮಾಡಿದ್ದರು. ಎನ್.ಪಿ.ಹೇಮಂತ್‌ಕುಮಾರ್ ಹಾಗೂ ಎ.ಪಿಳ್ಳಪ್ಪ ಅವರ ಮನವಿಯನ್ನು ಆಲಿಸಿ ಪರಿಶೀಲಿಸಿದ ರಾಜ್ಯ ಉಚ್ಚನ್ಯಾಯಾಲಯ ನಾಲ್ಕು ವಾರಗಳ ಕಾಲ ಚುನಾವಣೆಯನ್ನು ಮುಂದೂಡು ವಂತೆ ಚುನಾವಣಾ ಆಯೋಗಕ್ಕೆ ಸೂಚನೆ ನೀಡಿದೆ.
ಅಭಿವೃದ್ಧಿಗೆ ಸಿಕ್ಕ ಜಯ: ದೂರುದಾರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎನ್.ಪಿ.ಹೇಮಂತ್‌ಕುಮಾರ್ ಮಾತನಾಡಿ, ಪುರಸಭೆಯನ್ನು ನಗರಸಭೆಯನ್ನಾಗಿಸಲು ಪುರಸಭೆ ಆಡಳಿತ ಮಂಡಳಿ ಹಲವು ವರ್ಷ ಗಳಿಂದಲೂ ಇನ್ನಿಲ್ಲದ ಪ್ರಯತ್ನವನ್ನು ಮಾಡಿದ್ದರ ಫಲವಾಗಿ ಹಾಗೂ ಮೈತ್ರಿ ಸರಕಾರದ ಅಭಿವೃದ್ಧಿ ಪರವಾದ ಚಿಂತನೆಯಿಂದಾಗಿ ನಗರಸಭೆಯನ್ನಾಗಿ ಪರಿವರ್ತಿಸಲು ಅನುಮೋದನೆ ನೀಡಲಾಗಿತ್ತು. ಮತ್ತೆ ಪುರಸಭೆಗೆ ಚುನಾವಣೆ ನಡೆಸಿದ್ದರೆ ಪುರ ಅಭಿವೃದ್ಧಿ ಸೇರಿದಂತೆ ಒಳಚರಂಡಿ, ನೀರಿನ ಸಮಸ್ಯೆಗಳು ಜೀವಂತವಾಗಿರುತ್ತಿದ್ದವು. ನ್ಯಾಯಾಲಯದ ಆದೇಶ ಸಂತಸವನ್ನುಂಟು ಮಾಡಿದ್ದರೂ, ನಾಲ್ಕು ವಾರದಲ್ಲಿ ನಗರಸಭೆ ಪ್ರಕ್ರಿಯೆ ಮುಗಿಸಬೇಕಾದ ಗುರುತರ ಜವಾಬ್ದಾರಿ ಶಾಸಕರು ಮತ್ತು ಸರಕಾರದ ಮೇಲಿದೆ. ನ್ಯಾಯಾಲಯದ ಆದೇಶ ನೆಲಮಂಗಲ ಅಭಿವೃದ್ಧಿಗೆ ಪೂರಕವಾಗಿ ಸಿಕ್ಕ ಜಯ ಎಂದು ಪ್ರತಿಕ್ರಿಯಿಸಿದರು.
ಸರ್ಕಾರ ಸೂಕ್ತ ಕ್ರಮ ವಹಿಸಲಿ: ಇಬ್ಬೊಬ್ಬ ದೂರುದಾರ ಪುರಸಭೆ ಮಾಜಿ ಅಧ್ಯಕ್ಷ ಎ.ಪಿಳ್ಳಪ್ಪ ಮಾತನಾಡಿ, ಪಟ್ಟಣ ಪುರಸಭೆ ವ್ಯಾಪ್ತಿಯನ್ನು ಮೀರಿ ಬೆಳೆದು ನಿಂತಿದ್ದು, ಆಸುಪಾಸಿನಲ್ಲಿರುವ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆಲ ಗ್ರಾಮಗಳು ಪಟ್ಟಣಕ್ಕೆ ಹೊಂದಿಕೊಂಡಂತಿವೆ. ಇದನ್ನು ಮನಗಂಡ ಸರಕಾರ ನಗರಸಭೆಯನ್ನಾಗಿಸಲು ಸಂಪುಟ ಸಭೆಯಲ್ಲಿ ಅನು ಮೋದನೆ ನೀಡಿದೆ. ತರಾತುರಿಯಲ್ಲಿ ಚುನಾವಣೆ ನಡೆದರೆ ಪಟ್ಟಣಕ್ಕೆ ಹೊಂದಿಕೊಂಡಂತಿರುವ ಗ್ರಾಮ ಗಳು ಗ್ರಾಮಗಳಾಗಿಯೇ ಉಳಿದುಕೊಳ್ಳುತ್ತವೆ. ಅಭಿವೃದ್ಧಿ ಹಿತದೃಷ್ಟಿಯಿಂದ ಚುನಾವಣಾ ಆಯೋ ಗದ ಅಧಿಸೂಚನೆಯನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿ ಲೇರಿದ್ದು, ನಮಗೆ ಜಯ ದೊರೆತಿರುವುದು ಸಂತಸ ತಂದಿದೆ. ಪುರಸಭೆಯ ಬದಲಿಗೆ ನಗರಸಭೆಗೆ ಚುನಾ ವಣೆ ನಡೆಯಬೇಕೆಂಬುದು ಪಟ್ಟಣಿಗರ ಅನಿಸಿಕೆ ಯಾಗಿದೆ. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ವಹಿಸಬೇಕಾದ ಜವಾಬ್ದಾರಿ ಸರಕಾರದ ಮೇಲಿದೆ ಎಂದರು.
ಗದ್ದಲದ ಗೊಂದಲ: ರಾಜ್ಯ ಚುನಾವಣಾ ಆಯೋಗದ ಅಧಿಸೂಚನೆಯಂತೆ ಮೇ 9ರಂದು ಜಿಲ್ಲಾಧಿಕಾರಿಗಳು ಅಧಿಸೂಚನೆ ಹೊರಡಿಸಿ ಮೇ 9 ರಿಂದಲೇ ನಾಮಪತ್ರಗಳನ್ನು ಸ್ವೀಕರಿಸಬೇಕು ಎಂದು ಪುರಸಭೆ ಮಾಜಿ ಅಧ್ಯಕ್ಷ ಆರ್.ಉಮಾಶಂಕರ್, ಬಿಜೆಪಿ ಟೌನ್ ಅಧ್ಯಕ್ಷ ಎನ್.ಗಣೇಶ್ ಮತ್ತು ಪ್ರಕಾಶ್, ನಾಗರಾಜ್ ಎಂಬುವರು ಪುರಸಭೆ ಕಚೇರಿಯಲ್ಲಿ ನಾಮಪತ್ರದ ಅರ್ಜಿಯನ್ನು ಪಡೆದುಕೊಳ್ಳಲು ಮತ್ತು ನಾಮಪತ್ರವನ್ನು ಸಲ್ಲಿಸಲು ಮುಂದಾಗಿದ್ದರಿಂದ ಪುರಸಭೆ ಅಧಿಕಾರಿಗಳು ಕೆಲಕಾಲ ಗೊಂದಲಕ್ಕೀಡಾ ಗಿದ್ದರು. ಆರ್.ಉಮಾಶಂಕರ್ ಅವರು ನಾಮಪತ್ರದ ಅರ್ಜಿ ನೀಡಿ, ನಾವು ನಾಮಪತ್ರ ಸಲ್ಲಿಸಬೇಕು. ಚುನಾವಣಾಧಿಕಾರಿಗಳು ಯಾರು ನೇಮಕವಾಗಿದ್ದಾರೆ. ಅವರ ನಾಮಫಲಕವನ್ನು ಸೂಕ್ತ ಸ್ಥಳದಲ್ಲಿ ಪ್ರಚುರ ಪಡಿಸಿಲ್ಲದ ಬಗ್ಗೆ ಅಧಿಕಾರಿಗಳ ಬಳಿ ಕೂಗಾಡಿದರು. ಈ ಹಿನ್ನೆಲೆಯಲ್ಲಿ ಪುರಸಭೆಅಧ್ಯಕ್ಷರ ಕೊಠಡಿ ಯಲ್ಲಿ ವಾರ್ಡ್ 1ರಿಂದ 10ರವರೆಗೂ ಸಿಡಿಪಿಒ ವೆಂಕಟೇಶ್‌ರೆಡ್ಡಿ ಅವರು ಚುನಾವಣಾಧಿ ಕಾರಿಗಳು ಎಂದು ನಾಮಫಲಕ ಹಾಕಲಾಯಿತು. ಈ ನಡುವೆ ಪುರಸಭೆ ಕೆಲ ಕ್ಷಣ ಗಲಾಟೆ, ಗದ್ದಲದ ನಡುವೆ ಗೊಂದಲದ ಗೂಡಾಗಿ ಕಂಡದ್ದು ಸಾರ್ವಜನಿಕ ವಲಯದಲ್ಲಿ ಪರ, ವಿರೋಧ ಚರ್ಚೆಗೆ ಗ್ರಾಸವಾಗಿತ್ತು.
ಗೊಂದಲಕ್ಕೆ ತೆರೆ: ಪುರಸಭೆ ಆವರಣದಲ್ಲಿ ನಾಮಪತ್ರ ಸಲ್ಲಿಕೆಯ ಕುರಿತು ಪರ, ವಿರೋಧ ಚರ್ಚೆಗಳು ಜೋರಾದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಪುರಸಭೆ ಮುಖ್ಯಾಧಿಕಾರಿ ಶಿವಪ್ರಸಾದ್, ಅಂತರ್ಜಾಲದ ಮೂಲಕ ತಮಗೆ ಲಭ್ಯವಾದ ನ್ಯಾಯಾಲಯದ ಆದೇಶ ಪ್ರತಿಯನ್ನು ಪುರಸಭೆ ಸೂಚನಾ ಫಲಕದಲ್ಲಿ ಪ್ರಚುರಪಡಿಸಿದರು. ನಾಮಪತ್ರ ಸಲ್ಲಿಸಲು ಬಂದಿದ್ದ ಆರ್.ಉಮಾಶಂಕರ್, ಎನ್.ಗಣೇಶ್, ಪ್ರಕಾಶ್, ನಾಗರಾಜ್ ಮತ್ತಿತರರನ್ನು ಮನವೊಲಿಸುವಲ್ಲಿ ಅಧಿಕಾರಿಗಳು ಮತ್ತು ಪುರಸಭೆ ಸದಸ್ಯರು ಸಫಲರಾದರು. ಪುರಸಭೆ ಆವರಣದಲ್ಲಿ ಎದುರಾಗಿದ್ದ ಗೊಂದಲ ಸುಖಾಂತ್ಯ ಕಂಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.