ದನದ ಕೊಟ್ಟಿಗೆಯಾದ ಸರ್ಕಾರಿ ಶಾಲೆ
Team Udayavani, Dec 30, 2019, 3:18 PM IST
ದೇವನಹಳ್ಳಿ: ಕೊಯಿರಾ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಇಂದು ದನದ ಕೊಟ್ಟಿಗೆಯಾಗಿ ಮಾರ್ಪಟ್ಟಿದೆ. ಗ್ರಾಮ ಪಂಚಾಯಿತಿಯಿಂದ ಸಮೀಪದಲ್ಲಿಯೇ ಇರುವ ಶಾಲೆಯಲ್ಲಿ ಹಲವಾರು ಕೊಠಡಿಗಳು ಇವೆ. ಶಾಲಾ ಕಟ್ಟಡ ನಿರ್ಮಿಸಿ ಐದು ದಶಕ ಕಳೆದಿದೆ. ಕಟ್ಟಡ ಗುಣಮಟ್ಟದಿಂದ ಕೂಡಿದೆ.
ಆದರೂ ಗ್ರಾಮದಿಂದ ಅನತಿ ದೂರದಲ್ಲಿ ನೂತನವಾಗಿ ಸುಸ್ಸಜ್ಜಿತ ಶಾಲಾ ಕಟ್ಟಡ ನಿರ್ಮಾಣ ಮಾಡಲಾಗಿದ್ದು, ಕಳೆದ ಒಂದು ವರ್ಷದಿಂದ ಅಲ್ಲಿಯೇ ತರಗತಿ ನಡೆಸಲಾಗುತ್ತಿದೆ. ಆದರೆ ಈ ಶಾಲೆಯನ್ನು ಯಾವುದಕ್ಕೂ ಬಳಸದೇ ಹಾಗೆಯೇ ಬಿಡಲಾಗಿದೆ. ಶಿಕ್ಷಣ ಇಲಾಖೆಯ ಸ್ವತ್ತು ಆಗಿರುವ ಜಾಗ ಮತ್ತು ಕಟ್ಟಡದಲ್ಲಿ ಇಂತಹ ಅವ್ಯವಸ್ಥೆ ನಿರ್ಮಾಣವಾಗಿದೆ ಎನ್ನುತ್ತಾರೆ ಸ್ಥಳೀಯರು. ಇಲ್ಲಿನ ಶಾಲೆಯ ಬಳಿ ಬಂದರೆ ಹಸುವಿನ ಸೆಗಣಿ, ಗಂಜಲವಾಸನೆ ಮೂಗಿಗೆ ರಾಚುತ್ತದೆ. ಸರಕಾರಿ ಶಾಲೆ ಎಂಬುವ ಸೌಜನ್ಯವೂ ಇಲ್ಲದೆ ಕೆಲವರು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದ್ದಾರೆ ಸರಿಯಲ್ಲ ಎನ್ನುವ ಆರೋಪ ಗ್ರಾಮಸ್ಥರಿಂದ ವ್ಯಕ್ತವಾಗಿದೆ.
ಕೊಯಿರಾ ಗ್ರಾಮದಲ್ಲಿ ಹಲವಾರು ಕುಟುಂಬಗಳಿವೆ, ನಿವೇಶನವಿಲ್ಲ. ಒಂದೊಂದು ಇಂಚು ಜಾಗಕ್ಕೂ ತಡಕಾಡುವ ಪರಿಸ್ಥಿತಿ ಇದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾರಂಭಗೊಂಡ ಮೇಲೆ ತಾಲೂಕಿನಲ್ಲಿ ಜಾಗಗಳು ಸಿಗುತ್ತಿಲ್ಲ. ಸಿಕ್ಕಿದರೂ ಸಹ ದುಬಾರಿಯಾಗಿದೆ. ಸರ್ಕಾರಿ ಜಾಗ ದುರುಪಯೋಗವಾಗದೆ ಸಾರ್ವಜನಿಕ ಉದ್ದೇಶಕ್ಕೆ ಬಳಕೆಯಾದರೆ ಹೆಚ್ಚು ಅನುಕೂಲವಾಗುತ್ತದೆ ಎಂಬುವುದು ಗ್ರಾಮದ ಮುಖಂಡರ ಅಭಿಪ್ರಾಯವಾಗಿದೆ.
ಶಾಲಾ ಕಟ್ಟಡದಲ್ಲಿ ಜಾನುವಾರುಗಳನ್ನು ಕಟ್ಟುತ್ತಿರುವ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಬಿಆರ್‌ಸಿ ಮತ್ತು ಸಿಆರ್‌ಪಿ ನೇಮಕಕ್ಕೆ ಪರೀಕ್ಷೆ ನಡೆಯುತ್ತಿದೆ. ಆದಷ್ಟು ಬೇಗ ಸೂಕ್ತ ಕ್ರಮ ಕೈಗೊಳ್ಳಲಾಗುವುದು. –ಗಾಯಿತ್ರಿದೇವಿ, ಕ್ಷೇತ್ರ ಶಿಕ್ಷಣಾಧಿಕಾರಿ
-ಎಸ್.ಮಹೇಶ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.