ಗ್ರಾಪಂಗಳಲ್ಲಿ ಕೋವಿಡ್ ಸಹಾಯವಾಣಿ ತೆರೆಯಿರಿ
Team Udayavani, Aug 2, 2020, 8:58 AM IST
ದೇವನಹಳ್ಳಿ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿ ಗ್ರಾಪಂನಲ್ಲೂ ಕೋವಿಡ್-19 ಸಹಾಯವಾಣಿ ಕೇಂದ್ರ ತೆರೆದು, ಗ್ರಾಮ ಮಟ್ಟದ ಕಾರ್ಯಪಡೆ ಚುರುಕುಗೊಳಿಸುವ ಮೂಲಕ ಕೋವಿಡ್ ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕೆಂದು ಜಿಪಂ ಸಿಇಒ ಎನ್.ಎಂ.ನಾಗರಾಜ ಸೂಚಿಸಿದರು.
ತಾಲೂಕಿನ ಜಿಲ್ಲಾಡಳಿತ ಭವನದ ಜಿಪಂ ಕಚೇರಿ ಸಭಾಂಗಣದಲ್ಲಿ ನಡೆದ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯ ಎಲ್ಲಾ ಗ್ರಾಪಂಗಳ ವಿದ್ಯುತ್ ಬಿಲ್ ಬಾಕಿ ಇದ್ದು, ತ್ವರಿತವಾಗಿ ಬೆಸ್ಕಾಂಗೆ ವಿದ್ಯುತ್ ಬಿಲ್ ಪಾವತಿಸಿ, ರಸೀದಿಯನ್ನು ಜಿಪಂಗೆ ಸಲ್ಲಿಸಲು ತಿಳಿಸಿದರಲ್ಲದೆ, ಸ್ವತ್ಛ ಭಾರತ್ ಮಿಷನ್-ಗ್ರಾಮೀಣ ಹಾಗೂ ಜಲ್ ಜೀವನ್ ಮಿಷನ್ ಯೋಜನೆಗಳಡಿ ಕೈಗೊಂಡಿರುವ ವೈಯಕ್ತಿಕ ಶೌಚಾಲಯ, ಘನ ತ್ಯಾಜ್ಯ ಸಂಗ್ರಹಣೆ ಘಟಕ, ಶುದ್ಧ ಕುಡಿಯುವ ನೀರಿನ ಘಟಕ, ಸಮುದಾಯ ಶೌಚಾಲಯ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದರು. ಜಿಪಂ ಉಪ ಕಾರ್ಯದರ್ಶಿ ಕೆ.ಕರಿಯಪ್ಪ ಮಾತನಾಡಿ, ನರೇಗಾ ಯೋಜನೆಯಡಿ, ಗೋಕಟ್ಟೆ ಕಾಮಗಾರಿ, ಬದು ನಿರ್ಮಾಣ ಕಾಮಗಾರಿ, ಕೃಷಿಹೊಂಡ ಕಾಮಗಾರಿ, ಚರಂಡಿ ಕಾಮಗಾರಿ, ಗಿಡ ನೆಡುವ ಕಾಮಗಾರಿ, ನಮ್ಮ ಹೊಲ ನಮ್ಮ ದಾರಿ, ದನಗಳ ಕುಡಿಯುವ ನೀರಿನ ತೊಟ್ಟಿ, ಕಿಚನ್ ಗಾರ್ಡನ್, ಶಾಲೆ ಕಾಂಪೌಂಡ್ ಮತ್ತು ಆಟದ ಮೈದಾನ ನಿರ್ಮಾಣ ಮುಂತಾದ ಕಾಮಗಾರಿಗಳನ್ನು ಹೆಚ್ಚು ನಿರ್ಮಿಸುವಂತೆ ತಿಳಿಸಿದರು.
ಜಿಲ್ಲೆಯ 4 ತಾಲೂಕುಗಳ ಕಾರ್ಯ ನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು, ತಾಲೂಕುಗಳ ಅಭಿಯಂತರರು ಜಿಲ್ಲಾ ಎಸ್‌ಬಿಎಂಜಿ ಸಮಾಲೋಚಕರು, ಜಿಲ್ಲೆಯ ಎಲ್ಲಾ ಗ್ರಾಪಂ ಅಧಿಕಾರಿಗಳು, ತಾಲೂಕುಗಳ ಹಿರಿಯ ಅಧಿಕಾರಿಗಳು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.