ಕನ್ನಡ ಹೋರಾಟಗಳಿಗೆ ಪಾಟೀಲ ಪುಟ್ಟಪ್ಪ ಸ್ಫೂರ್ತಿ
Team Udayavani, Mar 18, 2020, 6:06 PM IST
ದೊಡ್ಡಬಳ್ಳಾಪುರ : ಸೋಮವಾರ ನಿಧನರಾದ ಹಿರಿಯ ಸಾಹಿತಿ, ಪತ್ರಕರ್ತ, ಪಾಟೀಲ ಪುಟ್ಟಪ್ಪ ಅವರು ದೊಡ್ಡಬಳ್ಳಾಪುರದಲ್ಲಿನ ಕನ್ನಡಪರ ಹೋರಾಟಗಾರರಿಗೆ ಸ್ಫೂರ್ತಿಯಾಗಿ ಪ್ರೇರಣೆಯಾಗಿದ್ದರು ಎಂದು ಇಲ್ಲಿನ ಕನ್ನಡಪರ ಹೋರಾಟಗಾರರು ಸ್ಮರಿಸುತ್ತಾರೆ.
ಡಾ.ರಾಜ್ ಚಳುವಳಿಗೆ ಧುಮುಕಲು ಕಾರಣ: 1983ರಲ್ಲಿ ನಡೆದ ಗೋಕಾಕ್ ಚಳವಳಿಯ ಸಂದರ್ಭದಲ್ಲಿ ವರನಟ ಡಾ.ರಾಜ್ ಕುಮಾರ್ ಭಾಗವಹಿಸಿದ್ದ ದೊಡ್ಡಬಳ್ಳಾಪುರದಲ್ಲಿ ನಡೆದ ಬೃಹತ್ ಸಾರ್ವಜನಿಕ ಸಭೆಯಲ್ಲಿ ಪಾಟೀಲ ಪುಟ್ಟಪ್ಪ ಅವರು ಸಹ ಭಾಗವಹಿಸಿದ್ದರು. ಡಾ.ರಾಜ್‌ಕುಮಾರ್ ಅವರು ಗೋಕಾಕ್ ಚಳವಳಿಯ ಹೋರಾಟಕ್ಕೆ ಬರಲು ಪಾಟೀಲ ಪುಟ್ಟಪ್ಪ ಅವರ ಪಾತ್ರ ಮುಖ್ಯವಾಗಿದೆ ಎನ್ನುತ್ತಾರೆ ಹಿರಿಯ ಕನ್ನಡಪರ ಹೋರಾಟಗಾರ ಜಿ.ಸತ್ಯನಾರಾಯಣ.
ಗೋಕಾಕ್ ಚಳವಳಿಯ ಕುರಿತು ಸ್ಮರಿಸಿದ ಅವರು, ಗೋಕಾಕ್ ಚಳವಳಿಯ ಜಾಗೃತಿ ಸಭೆಗಳು ರಾಜ್ಯದ ಯಾವ ನಗರಗಳಲ್ಲಿ ನಡೆಯಬೇಕು ಎನ್ನುವ ಕುರಿತು ಸ್ಥಳ, ದಿನಾಂಕ ನಿಗದಿಪಡಿಸಲು ಮೈಸೂರಿನಲ್ಲಿ ನಡೆದ ಸಭೆಯಲ್ಲಿ ಡಾ.ವೆಂಕಟರೆಡ್ಡಿ, ಟಿ.ಎನ್ .ಪ್ರಭುದೇವ್ ಭಾಗವಹಿಸಿದ್ದೇವು. ನಮ್ಮೂರಿನಲ್ಲೂ ಸಭೆ ನಡೆಸಬೇಕು ಎಂದು ಕೇಳುತಿದ್ದಂತೆ, ಗಂಡುಮೆಟ್ಟಿನ ನಾಡು ಧಾರವಾಡದ ನಂತರ ಕನ್ನಡದ ಕೆಲಸಗಳಿಗೆ ದೊಡ್ಡಬಳ್ಳಾಪುರ ಹೋರಾಟಕ್ಕೆ ಹೆಸರಾದ ಎರಡನೇ ನಗರ. ಅಲ್ಲಿ ಸಭೆ ನಡೆಸದೆ ಹೋದರೆ ನೀವು ಬಿಡುತ್ತೀರಾ ಎಂದು ಪಾಟೀಲ ಪುಟ್ಟಪ್ಪ ಅವರು ಹೇಳಿದ್ದನ್ನು ನೆನಪು ಮಾಡಿಕೊಂಡರು. ನಮ್ಮೂರಿನಲ್ಲಿ ಸಾರ್ವಜನಿಕ ಸಭೆಗಳನ್ನು ನಡೆಸಿ ಶಿಕ್ಷಣದಲ್ಲಿ ಕನ್ನಡವನ್ನು ಕಡ್ಡಾಯಗೊಳಿಸುವುದರ ಪ್ರಾಮುಖ್ಯತೆ ಕುರಿತು ಹೇಳಿದ್ದ ಮಾತುಗಳೂ ಸ್ಮರಣೀಯವಾಗಿವೆ.
ಮಾರ್ಗದರ್ಶಕರು: ಗೋಕಾಕ್ ಚಳುವಳಿಯ ನಂತರವೂ ಹಲವಾರು ಕನ್ನಡಪರ ಹೋರಾಟದ ಸಂದರ್ಭಗಳಲ್ಲಿ ಅವರನ್ನು ಹತ್ತಿರದಿಂದ ಕಂಡು ಮಾತನಾಡುವ ಅವಕಾಶ ದೊರೆತಿದ್ದು ನಮ್ಮ ಭಾಗ್ಯವಾಗಿದೆ. ಡಾ.ಎಂ.ಚಿದಾನಂದಮೂರ್ತಿ, ಚಂಪಾ, ವಾಟಾಳ್ ನಾಗರಾಜ್ ಇಂತಹ ಹೋರಾಟಗಾರ ಮಾರ್ಗದರ್ಶನದ ಮಾತುಗಳೆ ನಮ್ಮೂರಿನಲ್ಲಿ ಭಾಷೆ, ಸ್ಥಳೀಯರಿಗೆ ಉದ್ಯೋಗಕ್ಕಾಗಿ ನಡೆದ ಹೋರಾಟಗಳಿಗೆ ಸ್ಫೂರ್ತಿಯಾಗಿವೆ ಎಂದರು.
ಶ್ರದ್ಧಾಂಜಲಿ: ಸೋಮವಾರ ನಿಧನರಾದ ಹಿರಿಯ ಸಾಹಿತಿ, ಪತ್ರಕರ್ತ, ಪಾಟೀಲ ಪುಟ್ಟಪ್ಪ ಅವರಿಗೆ ನಗರದ ಕನ್ನಡ ಜಾಗೃತ ಭವನದಲ್ಲಿ ಕನ್ನಡಪರ ಸಂಘಟನೆಗಳ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕನ್ನಡ ಮಾತನಾಡುವ ಎಲ್ಲರೂ ಒಂದು ಆಡಳಿತದಲ್ಲಿ ಇರಬೇಕು ಎಂದು ಸದಾ ಕನಸು ಕಾಣುತ್ತ ನನಸು ಮಾಡಿದವರು ಪಾಪು. ಸಾಹಿತಿಯಾಗಿ ಕನ್ನಡಪರ ಹೋರಾಟಗಾರರಾಗಿ, ಪತ್ರಕರ್ತರಾಗಿ ಪಾಟೀಲ ಪುಟ್ಟಪ್ಪ ವರು ಕನ್ನಡ ನಾಡಿಗೆ ನೀಡಿರುವ ಕೊಡುಗೆ ಅನನ್ಯ. ಏಕೀಕರಣ ಚಳವಳಿ, ಗೋಕಾಕ್ ಚಳವಳಿಗಳಲ್ಲಿ ಪಾಟೀಲ ಪುಟ್ಟಪ್ಪ ಅವರ ಪಾತ್ರ ಸ್ಮರಣಿಯ ಎಂದು ಸಭೆಯಲ್ಲಿ ಸ್ಮರಿಸಲಾಯಿತು.
ಶ್ರದ್ಧಾಂಜಲಿ ಸಭೆಯಲ್ಲಿ ಕನ್ನಡ ಜಾಗೃತ ಪರಿಷತ್ ಅಧ್ಯಕ್ಷ ಡಿ.ವಿ.ಅಶ್ವಥಪ್ಪ, ಕಾರ್ಯದರ್ಶಿ ಟಿ.ಎನ್.ಪ್ರಭುದೇವ್, ಕನ್ನಡ ಪಕ್ಷದ ತಾಲೂಕು ಅಧ್ಯಕ್ಷ ಸಂಜೀವ್ ನಾಯಕ್, ಪ್ರಧಾನ ಕಾರ್ಯದರ್ಶಿ ಅಂಜನೇಯ, ಪರಮೇಶ್,ಪ್ರಕಾಶ್ ರಾವ್, ವೆಂಕಟೇಶ್, ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ತಾಲೂಕು ಅಧ್ಯಕ್ಷ ಸು.ನರಸಿಂಹಮೂರ್ತಿ, ಸುರೇಶ್ ರಾವ್, ತಿಮ್ಮರಾಜ್, ಆರ್.ಕೆಂಪರಾಜ್, ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಆರ್.ಚಂದ್ರತೇಜಸ್ವಿ, ಕರವೇ ರಾಜ್ಯ ಕಾರ್ಯದರ್ಶಿ ರಾಜಘಟ್ಟರವಿ ಮತ್ತಿತರರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.