ಪಕ್ಷಿಗಳ ಆಹಾರಕ್ಕೆ ಆಸರೆಯಾದ ಪ್ಲಾಸ್ಟಿಕ್ ಬಾಟಲಿ
Team Udayavani, Mar 12, 2019, 7:43 AM IST
ದೊಡ್ಡಬಳ್ಳಾಪುರ: ಉರಿ ಬೇಸಿಗೆ ಬಿಸಿ ಪಕ್ಷಿ ಪ್ರಾಣಿಗಳೆಂಬ ಭೇದವಿಲ್ಲದೇ ಎಲ್ಲರಿಗೂ ಮುಟ್ಟುತ್ತದೆ. ನೀರು, ಆಹಾರಕ್ಕಾಗಿ ಅರಸುವ ಪಕ್ಷಿಗಳಿಗೆ, ಆಹಾರವನ್ನು ನೀಡುವ ಕಾರ್ಯಕ್ಕೆ ಮುಂದಾಗಿರುವ ಯುವ ಸಂಚಲನದ ತಂಡ ಬಿಸಾಡಿರುವ ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸಿಕೊಂಡು ತಾಲೂಕಿನ ಅರಣ್ಯ ಪ್ರದೇಶದಲ್ಲಿ ಇರುವ ಪಕ್ಷಿಗಳಿಗೆ ಆಹಾರ, ಕುಡಿಯುವ ನೀರು ದೊರೆಯುವಂತೆ ಮಾಡುವಂತ ಸಾರ್ಥಕ ಕೆಲಸ ಮಾಡುತ್ತಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಅಧ್ಯಕ್ಷ ಚಿದಾನಂದ್, ನಗರದ ಹತ್ತಾರು ಹೋಟೆಲ್, ಬೇಕರಿ, ಕಲ್ಯಾಣ ಮಂಟಪಗಳಲ್ಲಿ ಬಳಸಿ ಬಿಸಾಡಿರುವ ಒಂದು ಮತ್ತು ಎರಡು ಲೀಟರ್ ನೀರಿನ ಖಾಲಿ ಬಾಟಲಿಗಳನ್ನು ಸಂಗ್ರಹಿಸಿ ಅವುಗಳಿಗೆ ನೀರು, ಕಿರು ಧಾನ್ಯಗಳನ್ನು ತುಂಬಿ ಅರಣ್ಯ ಪ್ರದೇಶದಲ್ಲಿನ ಮರಗಳಲ್ಲಿ ಕಟ್ಟಿ ನೇತಾಡುವಂತೆ ಮಾಡಿದ್ದೇವೆ ಎಂದರು.
ಪಕ್ಷಿಗಳಿಗೆ ಸಿರಿಧಾನ್ಯ: ಯುವ ಸಂಚಲನದ ಸ್ನೇಹಿತರೆಲ್ಲ ಸೇರಿ ಒಂದಿಷ್ಟು ಹಣ ಹಾಕಿ ಸಿರಿಧಾನ್ಯಗಳನ್ನು ಕೊಂಡುಕೊಂಡೆವು. ಇವುಗಳನ್ನು ಬಾಟಲಿಗೆ ತುಂಬಿ ಮುಚ್ಚಳ ಹಾಕಿದೆವು. ಬಾಟಲಿ ತಳಭಾಗದಲ್ಲಿ ಒಂದು ಪ್ಲಾಸ್ಟಿಕ್ ಚಮಚದ ಹಿಂಬದಿ ಮಾತ್ರ ಒಳಗೆ ಹೋಗುವಂತೆ ರಂಧ್ರ ಮಾಡಿ ಚಮಚವನ್ನು ಬಾಟಲಿಯ ಒಳಗೆ ಹಾಕಿದೆವು. ಪಕ್ಷಿ ಬಂದು ಚಮಚದಲ್ಲಿನ ಧಾನ್ಯವನ್ನು ತಿಂದು ಖಾಲಿ ಮಾಡುತ್ತಿದ್ದಂತೆ ಬಾಟಲಿಯಿಂದ ಧಾನ್ಯ ತಾನಾಗಿಯೇ ಮತ್ತೆ ಹೊರ ಬಂದು ಚಮಚ ತುಂಬಿಕೊಳ್ಳುತ್ತದೆ ಎಂದು ತಿಳಿಸಿದರು.
ಪಕ್ಷಿಗಳಿಗೆ ಅನುಕೂಲ: ಚಮಚದಲ್ಲಿನ ಧಾನ್ಯ ತಿನ್ನಲು ಅನುಕೂಲ ಆಗುವಂತೆ ಬಾಟಲಿಯ ತಳದಲ್ಲಿ ಅರ್ಧ ಅಡಿಗಳಷ್ಟು ಉದ್ದನೆಯ ಸಣ್ಣ ಕಡ್ಡಿ ಕಟ್ಟಲಾಗಿದೆ. ಆಹಾರ ತುಂಬಿರುವ ಬಾಟಲಿಯನ್ನು ಮರದಲ್ಲಿ ದರದಿಂದ ನೇತು ಹಾಕಿರುವ ಸಮೀಪದಲ್ಲೇ ನೀರು ತುಂಬಿರುವ ಬಾಟಲಿ ಇಡಲಾಗಿದೆ. ಪಕ್ಷಗಳಿಗೆ ನೀರು ಕುಡಿಯಲು ಅನುಕೂಲವಾಗುವಂತೆ ನೀರಿನ ಬಾಟಲಿಯ ಒಂದು ಭಾಗವನ್ನು ಕತ್ತರಿಸಿ ತೆರೆಯಲಾಗಿದೆ. ಇದರಿಂದ ಪಕ್ಷಿಗಳು ಸುಲಭವಾಗಿ ನೀರು ಕುಡಿಯಲು ಸಾಧ್ಯವಾಗಲಿದೆ ಎಂದು ವಿವರಿಸಿದರು.
ನೀರಿಗೆ ಹಾಹಾಕಾರ: ಈ ಬಾರಿಯ ಬೇಸಿಗೆ ಬಿಸಿಲಿನ ತಾಪ ಮುಗಿಲು ಮುಟ್ಟಿದೆ. ಆದರೆ ಇಡೀ ದೊಡ್ಡಬಳ್ಳಾಪುರ ತಾಲೂಕಿನ ಒಂದೆರಡು ಕೆರೆಗಳಲ್ಲಿ ಅಲ್ಪ ಸ್ಪಲ್ಪ ನೀರು ಇರುವುದನ್ನು ಬಿಟ್ಟರೆ ಎಲ್ಲೂ ಸಹ ಪಕ್ಷಗಳಿಗೆ, ಪ್ರಾಣಿಗಳಿಗೆ ಕುಡಿಯಲು ನೀರು ಇಲ್ಲದಾಗಿದೆ. ಎಲ್ಲ ಪಕ್ಷಿ, ಪ್ರಾಣಿಗಳು ಸಹ ರೈತರ ಇಲ್ಲವೇ ಗ್ರಾಮಗಳ ಸಮೀಪದಲ್ಲಿನ ಖಾಸಗಿ ನೀರು ಬಳಕೆಯ ಆಸರೆಗಳನ್ನೇ ಅವಲಂಬಿಸುವಂತಾಗಿದೆ.
ಕನಿಷ್ಠ ಪ್ರಮಾಣದಲ್ಲಾದರೂ ಪಕ್ಷಿಗಳಿಗೆ ನೀರು, ಆಹಾರ ದೊರೆಯುವಂತೆ ಮಾಡಬೇಕು ಎನ್ನುವ ಸಣ್ಣ ಪ್ರಯತ್ನ ನಮ್ಮದು. ಪಕ್ಷಿಗಳಿಗೆ ಆಹಾರ ನೀಡುವ ಕೆಲಸದಲ್ಲಿ ಯುವ ಸಂಚಲನ ತಂಡದ ಸಂಘಟನಾ ಕಾರ್ಯದರ್ಶಿ ಭರತ್, ದಿವಾಕರ್ ನಾಗ್, ರಮ್ಯ, ರಶ್ಮಿ, ಸತೀಶ್, ನಂದ, ಸುಭಾಷ್, ಸುನೀಲ, ರಮ್ಯ, ರಶ್ಮಿ, ಸತೀಶ್, ನಂದ, ಸುಭಾಷ್, ಸುನೀಲ್ ಹಾಗೂ ಅರಣ್ಯ ಅಧಿಕಾರಿಗಳು ಭಾಗಿಯಾಗಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.