ಆಡಳಿತ ಸದಸ್ಯರಿಂದ ನಡಾವಳಿ ಪುಸ್ತಕ ದುರುಪಯೋಗ
Team Udayavani, Aug 12, 2017, 11:52 AM IST
ದೊಡ್ಡಬಳ್ಳಾಪುರ: ಸಭೆಗೆ ಹಾಜರಾದ ಅರ್ಧ ಗಂಟೆಯೊಳಗೆ ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಬೇಕು ಎನ್ನುವ ವಾದ ಆಡಳಿತ ಪಕ್ಷದ ಸದಸ್ಯರದ್ದು, ತಮ್ಮಹಾಜರಾತಿ ದುರುಪಯೋಗಪಡಿಸಿಕೊಂಡು ನಡಾವಳಿ ಪುಸ್ತಕದಲ್ಲಿ ಎಲ್ಲಕ್ಕೂ ಸರ್ವಾನುಮತದ ಒಪ್ಪಿಗೆ ಇದೆ ಎಂದು ಬರೆದುಕೊಳ್ಳಲಾಗುತ್ತಿದೆ ಎನ್ನುವ ಆರೋಪ ವಿರೋಧ ಪಕ್ಷದ ಸದಸ್ಯರದ್ದು. ಈ ವಾದವಿವಾದ ನಗರಸಭೆ ಅಧ್ಯಕ್ಷ ಕೆ.ಬಿ.ಮುದ್ದಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಡೆಯಿತು. ಯಾವುದೇ ಸಭೆಯಲ್ಲಿ ಸಹಿ ಹಾಕಿ ತಮ್ಮ ಹಾಜರಾತಿ ಅಧಿಕೃತವಾಗಿ ದಾಖಲಿಸದ ಸದಸ್ಯರಿಗೆ ಮಾತನಾಡಲು ಅವಕಾಶ ನೀಡಬಾರದು. ಇಷ್ಟಬಂದಾಗ ಸಹಿ ಹಾಕುವುದು ಕಾನೂನು ರೀತಿಯಲ್ಲಿ ತಪ್ಪು. ಅಲ್ಲದೆ, ಸಭೆಗೆ ಅಗೌರವ ತೋರಿದಂತೆ. ಹೀಗಾಗಿ ಸಹಿ ಹಾಕಿದ ನಂತರವೇ ಮಾತನಾಡಲು ಅವಕಾಶ ನೀಡಬೇಕು ಎಂದು ಕೆಲ ಸದಸ್ಯರು ಪಟ್ಟು ಹಿಡಿದ ಪರಿಣಾಮ, ಶುಕ್ರವಾರ ಇಲ್ಲಿ ನಡೆದ ಸರ್ವಸದಸ್ಯರ ಸಾಮಾನ್ಯ ಸಭೆಯ ಬಹುತೇಕ ಸಮಯ ವ್ಯರ್ಥವಾಯಿತು. ಕ್ಷುಲ್ಲಕ ವಿಷಯ: ನಗರದಲ್ಲಿ ಡೆಂಘಿ ಜ್ವರ ಬಂದು ಜನ ನರಳುತ್ತಿದ್ದಾರೆ. ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಾದ ಸಭೆ, ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವ ಬಗ್ಗೆ ಸಭೆಯಲ್ಲಿ ಚರ್ಚಿಸಿ ಒಪ್ಪಿಗೆ ನೀಡಬೇಕಾಗಿದ್ದ ಸಭೆ ಕ್ಷುಲ್ಲಕ ವಿಷಯದ ಬಗ್ಗೆ ಅರ್ಧ ದಿನ ಕಳೆದಿದ್ದರಬಗ್ಗೆ ಕೆಲಸದಸ್ಯರು ಬೇಸರ ವ್ಯಕ್ತಪಡಿಸಿದರು. ಆಕ್ಷೇಪ: ಹಾಜರಾತಿ ಪುಸ್ತಕದಲ್ಲಿ ಸಹಿ ಹಾಕದೇ ಸಭೆಯಲ್ಲಿ ಗುತ್ತಿಗೆ ಪೌರಕಾರ್ಮಿಕ ಬಯೋಮೆಟ್ರಿಕ್ ಹಾಜರಾತಿ ಕುರಿತು ಸದಸ್ಯ ಶಿವಕುಮಾರ್, ವಡ್ಡರಹಳ್ಳಿರವಿ, ಆರ್.ಕೆಂಪರಾಜ್ ಪ್ರಸ್ತಾಪ ಮಾಡಿದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸದಸ್ಯರಾದ ಶಿವಶಂಕರ್, ಪ್ರಕಾಶ್, ಕೆ.ಎಚ್.ವೆಂಕಟರಾಜು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ವಡ್ಡರಹಳ್ಳಿ ರವಿ, ಆರ್.ಕೆಂಪರಾಜ್ ಮಾತನಾಡಿ, ಕಳೆದ ಸರ್ವ ಸದಸ್ಯರ ಸಭೆಯಲ್ಲಿ ಹಲವಾರು ವಿಷಯಗಳು ಕಾನೂನಿಗೆ ವಿರುದ್ಧವಾಗಿ ಸಭೆಯಲ್ಲಿ ಒಪ್ಪಿಗೆಗೆ ಬಂದಿದ್ದವು. ಇದಕ್ಕೆ ತಮ್ಮ ವಿರೋಧ ವ್ಯಕ್ತಪಡಿಸಿದ್ದೆವು. ಆದರೆ, ಸಭೆಯ ನಡಾವಳಿ ಬರೆಯುವಾಗ ಸರ್ವಾನುಮತದಿಂದ ಎಲ್ಲಾ ಸದಸ್ಯರು ಒಪ್ಪಿಗೆ ನೀಡಿದ್ದಾರೆ ಎಂದು ತಪ್ಪಾಗಿ ಬರೆಯಲಾಗಿದೆ. ಹೀಗಾಗಿ ಆಡಳಿತ ಪಕ್ಷದ ಸದಸ್ಯರು ಹೇಳಿದ್ದಕ್ಕೆಲ್ಲ ತಮ್ಮ ಒಪ್ಪಿಗೆ ಇದೆ ಎನ್ನುವಂತಾಗಿದೆ. ಇಂದಿನ ಸಭೆಯ ನಡಾವಳಿಯನ್ನು ಬರೆದ ನಂತರ ತಮ್ಮ ಸಹಿ ಹಾಕಲಾಗುವುದು ಎಂದು ಪಟ್ಟುಹಿಡಿದರು. ಕೆಲಸಕ್ಕೆ ಬಾರದ ವಿಷಯ: ಸಭೆಯಲ್ಲಿ ಗದ್ದಲ ಪ್ರಾರಂಭವಾದ ನಂತರ ಮಧ್ಯೆ ಪ್ರವೇಶ ಮಾಡಿ ಮಾತನಾಡಿದ ನಾಮನಿರ್ದೇಶಕ ಸದಸ್ಯ ಎಂ.ಜಿ.ಶ್ರೀನಿವಾಸ್, ಕೆಲಸಕ್ಕೆ ಬಾರದ ವಿಷಯದ ಬಗ್ಗೆ ಇಷ್ಟೊಂದು ಚರ್ಚೆ ಮಾಡುವ ಅಗತ್ಯ ಇಲ್ಲ. ಯಾವುದೇ ಸಭೆಯಲ್ಲಿ ತಮ್ಮ ಸಹಿ ಇದ್ದರಷ್ಟೇ ತಮಗೆ ಅಸ್ಥಿತ್ವ. ಸದಸ್ಯರು ವಿರೋಧ ವ್ಯಕ್ತಪಡಿಸಿದ್ದ ವಿಷಯಗಳನ್ನು ತಿರುಚಿ ಒಪ್ಪಿಗೆ ಇದೆ ಎಂದು ನಡಾವಳಿಯಲ್ಲಿ ಬರೆಯುತ್ತಾರೆ ಎನ್ನುವ ಅನುಮಾನ ಇದ್ದರೆ ಸಭೆ ಮುಕ್ತಾಯವಾದ ನಂತರ ಯಾವ ವಿಷಯಗಳಿಗೆ ವಿರೋಧ ಇದೆ ಎನ್ನುವುದನ್ನು ಲಿಖೀತವಾಗಿ ಬರೆದುಕೊಡುವುದು ನಿಯಮ ಎಂದು ಹೇಳಿದರು.ಕಣ್ಣು, ಕಿವಿ ಇಲ್ಲವೆ: ಆಡಳಿತ ನಡೆಸುವವರಿಗೆ ಕಣ್ಣು, ಕಿವಿ ಎರಡೂ ಇರುವುದಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ, ವಿರೋಧ ಪಕ್ಷದ ಸದಸ್ಯರು ಸದಾ ಕಣ್ಣು, ಕಿವಿಯನ್ನು ಚುರುಕಾಗಿ ಇಟ್ಟುಕೊಂಡು ಆಡಳಿತ ಸರಿದಾರಿಯಲ್ಲಿ ಸಾಗುವಂತೆ ನೋಡಿಕೊಳ್ಳುವ ಗುರುತರವಾದ ಜವಾಬ್ದಾರಿಯು ಇದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಮಾತನಾಡಿದ ಸದಸ್ಯ ಟಿ.ಎನ್.ಪ್ರಭುದೇವ್, ಕಳೆದ 25 ವರ್ಷಗಳಿಂದಲೂ ನಗರಸಭೆ ಸದಸ್ಯನಾಗಿ ಕಾರ್ಯನಿರ್ವಹಿಸಿದ್ದೇನೆ. ವಿನಾಕಾರಣ ಸಮಯ ಹಾಳುವ ಮಾಡುವ ಚರ್ಚೆಗಳೇ ಇತ್ತೀಚೆಗೆ ಹೆಚ್ಚಾಗುತ್ತಿವೆ. ಇದು ಸಭೆಗೆ
ಶೋಭೆತರುವ ಸಂಗತಿಯಲ್ಲ ಎಂದರು. ಎರಡು ಗಂಟೆಗೂ ಹೆಚ್ಚು ಸಮಯ ಚರ್ಚೆ ನಡೆದ ನಂತರ ಎಲ್ಲಾ ಸದಸ್ಯರು ಹಾಜರಾತಿ ಪುಸ್ತಕದಲ್ಲಿ ಸಹಿಹಾಕಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಕೆ.ಬಿ.ಮುದ್ದಪ್ಪ ಮಾತನಾಡಿ, ನಗರದ ಅಭಿವೃದ್ಧಿಯಲ್ಲಿ ಎಲ್ಲಾ ಸದಸ್ಯರ ಸಹಕಾರ ಮುಖ್ಯ. ಪೌರಕಾರ್ಮಿಕರ ಹಾಜರಾತಿಗೆ ಸಂಬಂಧಿಸಿದಂತೆ ಮುಂದಿನ ತಿಂಗಳಿಂದ ಕಡ್ಡಾಯವಾಗಿ ಬಯೋಮೆಟ್ರಿಕ್ ಯಂತ್ರವನ್ನು ಅಳವಡಿಸಲಾಗುವುದು. ಕಳೆದ ಒಂದು ವರ್ಷದಿಂದ ನಗರಸಭೆ ವ್ಯಾಪ್ತಿಯಿಂದ ಹೊರಗಿರುವ ಪ್ರದೇಶದಲ್ಲಿ ಯಾವುದೇ ಖಾತೆ ನಡೆದಿಲ್ಲ. ನಗರಸಭೆಯ ವಿವಿಧ ನಿಧಿಗಳಲ್ಲಿ ಉಳಿದಿದ್ದ ಹಣ ಸಮಪರ್ಕವಾಗಿ ಬಳಕೆ ಮಾಡುವ ಸಲುವಾಗಿ ಹಲವು ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಈ ಬಗ್ಗೆ ಒಪ್ಪಿಗೆ ನೀಡುವಂತೆ ಜಿಲ್ಲಾಧಿಕಾರಿಗಳ ಅನುಮೋದನೆಗಾಗಿ ಸಭೆಯ ನಿರ್ಣಯವನ್ನು ಕಳುಹಿಸಲಾಗಿದೆ ಎಂದು ವಿವರಿಸಿದರು. ಮಹಿಳಾ ಸದಸ್ಯರಿಗೆ ಅವಕಾಶವೇ ಇಲ್ಲ: ಸಭೆಯಲ್ಲಿ ಮಹಿಳಾ ಸದಸ್ಯರಿಗೆ ಮಾತನಾಡಲು ಅವಕಾಶವೇ ಇಲ್ಲದಾಗಿದೆ. ಯಾವಾಗ ನೋಡಿದರೂ ಪುರುಷ ಸದಸ್ಯರದ್ದೇ ಕೂಗಾಟಗಳು ನಡೆಯುತ್ತಿವೆ. ಇತ್ತೀಚಿನ ಸಭೆಗಳು ಕಳ್ಳೆಕಾಯಿ ಪರಿಷೆಯಂತಾಗಿವೆ ಎಂದು ಸದಸ್ಯೆ ಸುಶೀಲಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷೆ ಜಯಲಕ್ಷ್ಮೀ, ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಮಲ್ಲೇಶ್, ಪೌರಾಯುಕ್ತ ಡಾ.ಪಿ.ಬಿಳಿಕೆಂಚಪ್ಪ ಉಪಸ್ಥಿತರಿದ್ದರು. “ಬೆಳ್ಳಿ ಗದೆಗಷ್ಟೇ ಒಪ್ಪಿಗೆ’
ಕಳೆದ ತಿಂಗಳು ನಗರದಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಸಮಾರಂಭಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಗರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ನಾಗರಿಕರ ಪರವಾಗಿ ಪೌರಸನ್ಮಾನ ಮಾಡಲು ಬೆಳ್ಳಿ ಗದೆಗಾಗಿ 50 ಸಾವಿರ ರೂ. ಖರ್ಚು ಮಾಡಲು ಸಭೆ ಒಪ್ಪಿಗೆ ನೀಡಿತ್ತು. ಆದರೆ, ಅಧ್ಯಕ್ಷರು, ಪೌರಾಯುಕ್ತರು ಸಭೆಯ ಒಪ್ಪಿಗೆ ಇಲ್ಲದೆಯೇ ಶಾಮಿಯಾನ ಇತ್ಯಾದಿಗೆ 97 ಸಾವಿರ ರೂ. ಹೆಚ್ಚುವರಿಯಾಗಿ ಖರ್ಚು ಮಾಡಿದ್ದಾರೆ ಎಂದು ಸದಸ್ಯರಾದ ಪಿ.ಸಿ.ಲಕ್ಷ್ಮೀನಾರಾಯಣ್, ಶಿವಕುಮಾರ್ ಆಕ್ಷೇಪ ವ್ಯಕ್ತಪಡಿಸಿದರು. ನಗರದಲ್ಲಿ ಕೋಟ್ಯಂತರ ರೂ. ಕೆಲಸಗಳು ಆಗಿರುವಾಗ, ಇನ್ನು ಆಗಬೇಕಿರುವಾದ ರಾಜ್ಯದ ಮುಖ್ಯಮಂತ್ರಿಗಳು ನಗರಕ್ಕೆ ಆಗಮಿಸಿದಾಗ ಖರ್ಚುಗಳು ಹೆಚ್ಚಾಗು ವುದು ಸಹಜ. ಇದಕ್ಕೆ ವಿರೋಧ ವ್ಯಕ್ತಪಡಿ ಸುವುದು ಸರಿಯಲ್ಲ ಎಂದು ಸದಸ್ಯರಾದ
ಪ್ರಕಾಶ್, ಶಿವಶಂಕರ್, ಕೆ.ಎಚ್. ವೆಂಕಟರಾಜ್ ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.