ಸಚಿವರ ಮನವಿಗೂ ಕ್ಯಾರೆ ಎನ್ನಲಿಲ್ಲ..!
Team Udayavani, Dec 1, 2021, 1:12 PM IST
ದೊಡ್ಡಬಳ್ಳಾಪುರ: ತಾಲೂಕಿನ ಚಿಗರೇನಹಳ್ಳಿಯಲ್ಲಿನ ಎಂಎಸ್ ಜಿಪಿ ಕಸ ವಿಲೇವಾರಿ ಘಟಕಕ್ಕೆ ಬಿಬಿಎಂಪಿ ವ್ಯಾಪ್ತಿಯಿಂದ ಕಸ ತಂದು ಸುರಿಯುತ್ತಿರುವುದನ್ನು ವಿರೋಧಿಸಿ ಗ್ರಾಮಸ್ಥರು ನಡೆಸುತ್ತಿರುವ ಧರಣಿ ಸ್ಥಳಕ್ಕೆ ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಟಿ.ಬಿ.ನಾಗರಾಜ್ ಭೇಟಿ ನೀಡಿ ನಡೆಸಿದ ಮಾತುಕತೆಯೂ ವಿಫಲವಾಗಿದೆ. ಇನ್ನು ಕಸ ತಂದು ರಾಶಿ ಹಾಕುತ್ತಿರುವುದನ್ನು ನಿಲ್ಲಿಸುವವರೆಗೂ ಧರಣಿ ಹಿಂದಕ್ಕೆ ಪಡೆಯುವ ಪ್ರಶ್ನೆಯೇ ಇಲ್ಲ ಎಂದು ಧರಣಿನಿರತರು ಪಟ್ಟು ಹಿಡಿದಿದ್ದಾರೆ.
ಹಿಂಪಡೆಯಿರಿ: ಕಸ ವಿಲೇವಾರಿ ಘಟಕದ ಸುತ್ತಲೂ ಉಂಟಾಗಿರುವ ಪರಿಸರ ಹಾನಿ ಕುರಿತು ವೀಕ್ಷಣೆ ಮಾಡಿದ ಜಿಲ್ಲಾ ಉಸ್ತುವಾರಿ ಹಾಗೂ ಪೌರಾಡಳಿತ ಸಚಿವ ಎಂ.ಟಿ.ಬಿ.ನಾಗರಾಜ್, ಸೂಕ್ತ ನಿರ್ವಹಣೆ ಕೊರತೆ ಹಾಗೂ ಮಳೆ ಹೆಚ್ಚಾಗಿದ್ದರಿಂದ ಸಮಸ್ಯೆ ಉಂಟಾಗಿದೆ. ಸೂಕ್ತ ನಿರ್ವಹಣೆಗೆ ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ಬಿಬಿಎಂಪಿ, ಎಂಎಸ್‌ಜಿಪಿ ಕಸ ವಿಲೇವಾರಿ ಘಟಕದವರಿಗೂ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಕಲುಷಿತ ನೀರು ಹೊರ ಹೋಗದಂತೆ ಹಾಗೂ ಕಸದಿಂದ ವಾಸನೆ ಹೊರ ಹೋಗದಂತೆ ತುರ್ತು ಕ್ರಮ ಕೈಗೊಳ್ಳಲಿದ್ದಾರೆ.
ಇದನ್ನೂ ಓದಿ;- ಆನೇಕಲ್‌ನಲ್ಲಿ ಕಾಡಾನೆ ಹಿಂಡು ದಾಳಿ: ರಾಗಿ ಬೆಳೆ ನಾಶ
ಆದರೆ ಏಕಾಏಕಿ ಕಸ ಬರುವುದನ್ನು ಸಂಪೂರ್ಣವಾಗಿ ನಿಲ್ಲಿಸುವುದು ಕಷ್ಟವಾಗಲಿದೆ. ಇಲ್ಲಿನ ಸಮಸ್ಯೆ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವ ಕುರಿತಂತೆ ಚರ್ಚಿಸಲಾಗುವುದು. ಧರಣಿ ಹಿಂದಕ್ಕೆ ಪಡೆಯಬೇಕು ಎಂದು ಮನವಿ ಮಾಡಿದರು. ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಕೇಂದ್ರ ವಲಯ ಐಜಿಪಿ ಚಂದ್ರಶೇಖರ, ಎಸ್ಪಿ ಡಾ.ಕೋನ ವಂಶಿಕೃಷ್ಣ, ತಹಶೀಲ್ದಾರ್ ಟಿ.ಎಸ್.ಶಿವರಾಜು, ಬಿಬಿಎಂಪಿ ಘನ ತ್ಯಾಜ್ಯ ನಿರ್ವಹಣೆ ವಿಶೇಷ ಆಯುಕ್ತ ಸರ್ಫರಾಜ್ ಇದ್ದರು.
ಬರಲೇ ಬೇಡಿ: ಧರಣಿ ಆರಂಭಿಸಿದಾಗಿನಿಂದಲೂ ನಮ್ಮ ಏಕೈಕ ಒತ್ತಾಯ ಕಸದ ಲಾರಿಗಳು ಇಲ್ಲಿಗೆ ಬರುವುದನ್ನು ನಿಲ್ಲಿಸಬೇಕು ಎನ್ನುವುದಾಗಿದೆ. ನಮ್ಮ ಈ ಒತ್ತಾಯಕ್ಕೆ ಒಪ್ಪುವ ಅಧಿಕಾರಿಗಳು, ಸಚಿವರು ಮಾತ್ರ ಧರಣಿ ಸ್ಥಳಕ್ಕೆ ಬಂದು ಮಾತುಕತೆ ನಡೆಸಬಹುದಾಗಿದೆಯೇ ಹೊರತು ವಿನಾಕಾರಣ ಭೇಟಿ ನೀಡಿ ಮೇಲಾಧಿಕಾರಿಗಳನ್ನು ಮೆಚ್ಚಿಸುವ ಕೆಲಸ ಮಾಡುವವರು ಸಮಯ ವ್ಯರ್ಥ ಮಾಡಲು ಇಲ್ಲಿಗೆ ಬರುವ ಅಗತ್ಯವೇ ಇಲ್ಲ ಎಂದು ಧರಣಿ ನಿರತ ಕಸ ವಿಲೇವಾರಿ ಘಟಕದ ಸುತ್ತಮುತ್ತಲಿನ ಭಕ್ತರಹಳ್ಳಿ, ಸಾಸಲು, ಆರೂಢಿ, ಸಕ್ಕರೆಗೊಲ್ಲಹಳ್ಳಿ ಗ್ರಾಪಂ ವ್ಯಾಪ್ತಿಯ ಗ್ರಾಮಸ್ಥರು ತಿಳಿಸಿದ್ದಾರೆ.
ಚುನಾವಣೆ ಬಹಿಷ್ಕಾರ?: ಇತ್ತೀಚೆಗಷ್ಟೇ ನಡೆದ ಗ್ರಾಪಂ ಚುನಾವಣೆ ವೇಳೆ ಬಿಬಿಎಂಪಿ ಕಸ ಇಲ್ಲಿಗೆ ಬರುವುದನ್ನು ನಿಲ್ಲಿಸಲು ಹೋರಾಟ ನಡೆಸಲಾಗುವುದು ಎಂದು ಮತದಾರರಿಗೆ ಭರವಸೆ ನೀಡಿದ್ದೇವೆ. ನಮ್ಮ ಬೇಡಿ ಈಡೇರದಿದ್ದರೆ ಡಿ.10 ರಂದು ನಡೆಯುವ ವಿಧಾನ ಪರಿಷತ್ ಚುನಾವಣೆ ಬಹಿಷ್ಕರಿಸುವ ಕುರಿತಂತೆ ಒಂದೆರಡು ದಿನಗಳಲ್ಲಿ ನಿರ್ಧರಿಸಲಾಗುವುದು ಎಂದು ಧರಣಿಯಲ್ಲಿ ಭಾಗವಹಿಸಿರುವ ಭಕ್ತರಹಳ್ಳಿ, ಸಕ್ಕರೆಗೊಲ್ಲಹಳ್ಳಿ ಗ್ರಾಪಂ ಸದಸ್ಯರು ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಆದೇಶದ ವಿರುದ್ಧ ಪ್ರತಿಭಟನಾಕಾರರ ಆಕ್ರೋಶ
ರಾಜ್ಯದಲ್ಲಿ ಒಮಿಕ್ರಾನ್ ನಿಯಂತ್ರಿಸುವ ಸಲುವಾಗಿ ಸರ್ಕಾರ ಹಲವಾರು ನಿಯಮ ಜಾರಿಗೆ ತರುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದೆ. ಆದರೆ, ಜಿಲ್ಲಾಧಿಕಾರಿ ಮಾತ್ರ ರಾಜ್ಯ ಸರ್ಕಾರ ನೀಡಿರುವ ಸೂಚನೆಗಳಷ್ಟೇ ಅಲ್ಲದೆ ಪ್ರತಿಭಟನೆ, ಧರಣಿ ಸೇರಿದಂತೆ ಎರಡು ಗಂಟೆಗಳಿಗೂ ಹೆಚ್ಚಿನ ಸಮಯ ಗುಂಪು ಸೇರುವುದನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.
ಬಿಬಿಎಂಪಿ ಕಸ ಕಂಟಕದ ವಿರುದ್ಧ ರೈತರು ನಡೆಸುತ್ತಿರುವ ಧರಣಿಯನ್ನು ಹತ್ತಿಕ್ಕುವ ಸಲುವಾಗಿಯೇ ಈ ಆದೇಶ ಹೊರಡಿಸಿದ್ದಾರೆ. ಆದೇಶ ಉಲ್ಲಂಘಿಸಿಯೇ ಧರಣಿ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ರಾಗಿ ಹೊಲಕ್ಕೆ ಕೊಳಚೆ ನೀರು: ಆತಂಕ
ಚಿಗರೇನಹಳ್ಳಿ ಎಂಎಸ್‌ಜಿಪಿ ಕಸ ವಿಲೇವಾರಿ ಘಟಕದಿಂದ ಹೊರ ಬಂದು ಚೆಕ್ ಡ್ಯಾಂಮ್‌ನಲ್ಲಿ ಶೇಖರಣೆಯಾಗಿದ್ದ ರಾಸಾಯನಿಕಯುಕ್ತ ಕಲುಷಿತ ಕೊಳಚೆ ನೀರಿನ ಕುರಿತಂತೆ ಸೋಮವಾರ ಸ್ಥಳಕ್ಕೆ ಭೇಟಿ ನೀಡಿದ್ದ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಎಂಎಸ್‌ಜಿಪಿ ಕಸ ವಿಲೇವಾರಿ ಘಟಕದ ಮಾಲಿಕರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು.
ಇದೇ ಚೆಕ್ ಡ್ಯಾಂನಿಂದ ಕಲುಷಿತ ನೀರಿನ ಮಾದರಿ ಸಂಗ್ರಹಿಸಿದ್ದರು. ಅಲ್ಲದೇ ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಬಿಬಿಎಂಪಿ ಹಿರಿಯ ಅಧಿಕಾರಿಗಳ ಭೇಟಿ ಹಿನ್ನೆಲೆ ಅಕ್ಕಪಕ್ಕದಲ್ಲಿನ ರೈತರ ರಾಗಿ ಹೊಲಗಳಿಗೆ ಜನರೇಟರ್ ಮೂಲಕ ಹರಿದು ಬಿಟ್ಟಿದ್ದಾರೆ.
ಇದರಿಂದ ಮುಡ್ಲುಕಾಳೇನಹಳ್ಳಿ ಗ್ರಾಮರ ರೈತ ಮಹಿಳೆ ಹನುಮಕ್ಕ ಅವರ ರಾಗಿ ಹೊಲದ ತುಂಬಾ ಕಲುಷಿತ ನೀರು ತುಂಬಿಕೊಂಡಿದೆ. ಇದರಿಂದಾಗಿ ಕೊಯ್ಲಿಗೆ ಬಂದಿದ್ದ ರಾಗಿ ಹೊಲ ಹಾಳಾಗಿರುವ ಬಗ್ಗೆ ಹನುಮಕ್ಕ ಕಂದಾಯ ಹಾಗೂ ಪೊಲೀಸರಿಗೆ ದೂರು ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ಎಸ್‌ಎಸ್‌ಎಲ್‌ಸಿ ಫೇಲ್ ಆಗಿದ್ದಕ್ಕೆ ಭುವನೇಶ್ವರಿ ವಿಗ್ರಹ ವಿರೂಪಗೊಳಿಸಿದ ಯುವಕ
Fraud: ಡ್ರಗ್ಸ್ ಕೇಸ್ ಹೆಸರಲ್ಲಿ ಟೆಕಿಗೆ ಬೆದರಿಸಿ 40 ಲಕ್ಷ ವಂಚನೆ
Bengaluru Krishi Mela: ಜಿಕೆವಿಕೆ ಕೃಷಿ ಮೇಳಕ್ಕೆ 34.13 ಲಕ್ಷ ಜನರ ಭೇಟಿ
Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ
Kyiv: ಉಕ್ರೇನ್ ವಿದ್ಯುತ್ ಸ್ಥಾವರ ಮೇಲೆ ರಷ್ಯಾ 120 ಕ್ಷಿಪಣಿ ದಾಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.