ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಗುತ್ತಿಗೆ ಪದ್ಧತಿ ರದ್ದು
Team Udayavani, Sep 21, 2022, 1:29 PM IST
ದೊಡ್ಡಬಳ್ಳಾಪುರ: ರಾಜ್ಯ ಸರ್ಕಾರ ಪೂರ್ಣ ಪ್ರಮಾಣದಲ್ಲಿ ಎಲ್ಲಾ ಪೌರ ಕಾರ್ಮಿಕರನ್ನು ಕಾಯಂಗೊಳಿಸಬೇಕು. ಎಲ್ಲಾ ಕ್ಷೇತ್ರಗಳಲ್ಲಿಯೂ ಗುತ್ತಿಗೆ ಪದ್ಧತಿ ರದ್ದು ಮಾಡಿ ನೇಮಕಾತಿಗಳನ್ನು ಸರ್ಕಾರವೇ ಮಾಡಿಕೊಳ್ಳಲು ಯೋಜನೆ ರೂಪಿಸಬೇಕಿದೆ ಎಂದು ರಾಜ್ಯಸಭಾ ಸದಸ್ಯ ಡಾ. ಎಲ್. ಹನುಮಂತಯ್ಯ ಒತ್ತಾಯಿಸಿದ್ದಾರೆ.
ನಗರದ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ಪ್ರದೇಶ ಅಸಂಘಟಿತ ಕಾರ್ಮಿಕ ಕಾಂಗ್ರೆಸ್ ಜಿಲ್ಲಾ ಸಮಿತಿ ವತಿಯಿಂದ ನಡೆದ ಪದಾಧಿಕಾರಿಗಳ ನೇಮಕಾತಿ ಹಾಗೂ ಪೌರ ಕಾರ್ಮಿಕ ಮಹಿಳೆಯರಿಗೆ ಬಾಗಿನ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 27 ಸಾವಿರ ಪೌರ ಕಾರ್ಮಿಕರನ್ನು ಖಾಯಂಗೊಳಿಸಬೇಕು ಎಂದು ಹೋರಾಟ ನಡೆಸಿದ ಫಲವಾಗಿ ಇಂದು 11 ಸಾವಿರ ಪೌರ ಕಾರ್ಮಿಕರನ್ನು ಕಾಯಂಗೊಳಿಸಿ ಸರ್ಕಾರಿ ನೌಕರರೆಂದು ಪರಿಗಣಿಸಿದೆ. ಪೌರ ಕಾರ್ಮಿಕರನ್ನು ಕಾಯಂಗೊಳಿಸಿರುವುದು ಚುನಾವಣಾ ಉದ್ದೇಶವಿರಬಹುದು. ಹಿಂದೆ ಸಿದ್ದರಾಮಯ್ಯ ಸರ್ಕಾರವಿದ್ದಾಗ ಪೌರ ಕಾರ್ಮಿಕರ ಖಾತೆಗೆ ವೇತನ ನೇರವಾಗಿ ಜಮಾ ಮಾಡುವ ವ್ಯವಸ್ಥೆ ಜಾರಿಯಾಯಿತು ಎಂದರು.
ಗುತ್ತಿಗೆ ಪದ್ಧತಿ ರದ್ದು: ಕಾರ್ಮಿಕರಿಗೆ ಕಡಿಮೆ ಸಂಬಳ ನೀಡಿ ಹೆಚ್ಚು ದುಡಿಸಿಕೊಂಡು ಶೋಷಣೆ ಮಾಡುವ ಗುತ್ತಿಗೆ ಪದ್ಧತಿ ರದ್ದಾಗಬೇಕು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗುತ್ತಿಗೆ ಪದ್ಧತಿ ರದ್ದು ಮಾಡುವುದರೊಂದಿಗೆ ಎಲ್ಲಾ ಪೌರಕಾರ್ಮಿಕರನ್ನು ಕಾಯಂ ಗೊಳಿಸಲಾಗುವುದು ಎಂದರು.
ಕಾರ್ಮಿಕ ವಿರೋಧಿ ಕಾನೂನು: ಕೇಂದ್ರ ಸರ್ಕಾರವು ಕಾರ್ಮಿಕರಿಗೆ ದಿನಕ್ಕೆ 8 ಗಂಟೆ ಕೆಲಸ ಮಾಡುವ ನಿಯಮ ಸೇರಿದಂತೆ ವಿವಿಧ ಕಾನೂನುಗಳನ್ನು ತಿದ್ದುಪಡಿ ಮಾಡಿ, ಕಾರ್ಮಿಕ ವಿರೋಧಿ ಕಾನೂನು ಜಾರಿ ಮಾಡುತ್ತಿದೆ. ಹೊಸ ಕಾನೂನುಗಳು ಕಾರ್ಮಿಕರ ಹಿತಕ್ಕೆ ವಿರುದ್ಧವಾಗಿವೆ. ಆದರೆ, ದುರಂತ ಎಂದರೆ ಉದ್ಯೋಗ ನೀಡುತ್ತೇವೆ ಎನ್ನುವ ನಮ್ಮ ಪಕ್ಷಕ್ಕೆ ಮತ ನೀಡದೆ, ರಾಮ ಮಂದಿರ ಕಟ್ಟುತ್ತೇವೆ ಎನ್ನವವರಿಗೆ ಮತ ಹಾಕುತ್ತಿದ್ದಾರೆ ಎಂದರು.
ಬೆಲೆ ಏರಿಕೆಯಿಂದ ಕಾರ್ಮಿಕರ ಬದುಕು ದುಸ್ತರ: ಶಾಸಕ ಟಿ. ವೆಂಕಟರಮಣಯ್ಯ ಮಾತನಾಡಿ, ಸರ್ಕಾರಿ ಕಚೇರಿಗಳಲ್ಲಿ ಸರಿಯಾದ ಸಿಬ್ಬಂದಿ ಇಲ್ಲದೇ ಕೆಲಸಗಳು ಸರಿಯಾಗಿ ಆಗುತ್ತಿಲ್ಲ. ಈಗಿನ ಬಿಜೆಪಿ ಸರ್ಕಾರ 2 ಕೋಟಿ ಉದ್ಯೋಗ ನೀಡುತ್ತೇವೆ. ಜನರ ಖಾತೆಗೆ 15 ಲಕ್ಷ ರೂ. ಹಾಕುತ್ತೇವೆ ಎನ್ನುವ ಪೊಳ್ಳು ಭರವಸೆ ನೀಡಿ ಈಡೇರಿಸಿಲ್ಲ. ಚುನಾವಣಾ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆ ಈಡೇರಿಸಿರುವುದು ಕಾಂಗ್ರೆಸ್ ಪಕ್ಷ ಮಾತ್ರ. ಕಾರ್ಮಿಕರು, ಮಧ್ಯಮ ವರ್ಗದವರು ಬೆಲೆ ಏರಿಕೆಗಳ ನಡುವೆ ಬದುಕುವುದೇ ದುಸ್ತರವಾಗಿದೆ. ಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯ ಸರ್ಕಾರದಿಂದ ಸಿಗುವಂತಾಗಬೇಕು ಎಂದರು.
ಸಮಿತಿಗೆ ಪದಾಧಿಕಾರಿಗಳ ನೇಮಕ: ಕರ್ನಾಟಕ ಪ್ರದೇಶ ಅಸಂಘಟಿತ ಕಾರ್ಮಿಕರ ಕಾಂಗ್ರೆಸ್ ಜಿಲ್ಲಾ ಸಮಿತಿಗೆ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಅಸಂಘಟಿತ ಕಾರ್ಮಿಕರ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಡಿ.ಸಿ. ಸಂತೋಷ ಕುಮಾರ್, ಉಪಾಧ್ಯಕ್ಷ ಗುರುದತ್, ಜಿಲ್ಲಾ ಉಪಾಧ್ಯಕ್ಷೆ ನಾಗಲಕ್ಷ್ಮೀ, ಕಾಂಗ್ರೆಸ್ ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ಬೈರೇಗೌಡ, ನಗರ ಘಟಕದ ಅಧ್ಯಕ್ಷ ಕೆ.ಪಿ. ಜಗನ್ನಾಥ್, ಕೆಪಿಸಿಸಿ ಸದಸ್ಯ ಜಿ.ಲಕ್ಷ್ಮೀಪತಿ, ನಗರಸಭಾ ಸದಸ್ಯ ನಾಗರಾಜ್, ಆನಂದ್, ಚಂದ್ರಮೋಹನ್, ಮಂಜುಳಾ, ರೂಪಿಣಿ, ಮುಖಂಡ ಬಿ.ಜಿ. ಹೇಮಂತರಾಜು, ಆದಿತ್ಯ ನಾಗೇಶ್, ಅಪ್ಪಿ ವೆಂಕಟೇಶ್, ಆಂಜನಮೂರ್ತಿ, ಜವಾಜಿ ಸೀತಾರಾಂ, ದ್ರುವಕುಮಾರ್ ಹಾಗೂ ಮತ್ತಿತರರು ಇದ್ದರು.
ಪೌರ ಕಾರ್ಮಿಕರ ಆರೋಗ್ಯಕ್ಕೆ ಆದ್ಯತೆ ನೀಡಿ : ಪೌರ ಕಾರ್ಮಿಕರಿಗೆ ವೇತನವಷ್ಟೇ ಅಲ್ಲದೇ ಮುಖ್ಯವಾಗಿ ಆರೋಗ್ಯ ಭದ್ರತೆ ಇರಬೇಕು. ಇತರೆ ವಲಯಗಳಿಗಿಂತ ಮೊದಲು ಅನಾರೋಗ್ಯಕ್ಕೆ ತುತ್ತಾಗುವ ಪೌರಕಾರ್ಮಿಕರಿಗೆ ಆರೋಗ್ಯ ವಿಮೆ ಸೇರಿದಂತೆ ಆರೋಗ್ಯ ಸೌಲಭ್ಯಗಳಲ್ಲಿ ಮೊದಲ ಆದ್ಯತೆ ನೀಡಬೇಕು. ಸ್ಥಳೀಯ ಸಂಸ್ಥೆಗಳು ಈ ಬಗ್ಗೆ ಹೆಚ್ಚಿನ ಆದ್ಯತೆ ನೀಡಬೇಕು. ಪೌರಕಾರ್ಮಿಕರಿಗೆ ಸೌಲಭ್ಯಗಳನ್ನು ನೀಡುವಲ್ಲಿ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದ್ದು, ಪೌರಕಾರ್ಮಿಕರು ತಮ್ಮ ಹಕ್ಕುಗಳನ್ನು ಪಡೆಯಲು ಹೋರಾಟ ಮಾಡಬೇಕಿದ್ದು, ಪೌರಕಾರ್ಮಿಕರಿಗೆ ತಮ್ಮ ಬೆಂಬಲವಿದೆ ಎಂದು ರಾಜ್ಯಸಭಾ ಸದಸ್ಯ ಡಾ. ಎಲ್. ಹನುಮಂತಯ್ಯ ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.