ಶ್ರಾವಣ ನಿಮಿತ್ತ ಭಕ್ತರಿಂದ ಶನೇಶ್ವರ ದರ್ಶನ
Team Udayavani, Aug 4, 2019, 3:00 AM IST
ದೊಡ್ಡಬಳ್ಳಾಪುರ: ತಾಲೂಕಿನ ಮಧುರೆ ಹೋಬಳಿಯಲ್ಲಿರುವ ಕನಸವಾಡಿ ಪುಣ್ಯಕ್ಷೇತ್ರದ ಶ್ರೀ ಶನಿದೇವರ ದೇವಾಲಯ ಸೇರಿದಂತೆ ವಿವಿಧ ವಿವಿಧೆಡೆಗಳಲ್ಲಿ ಶ್ರಾವಣ ಮಾಸದ ವಿಶೇಷ ಪೂಜೆಗಳು ನಡೆದವು. ಶ್ರಾವಣ ಮಾಸದ ಮೊದಲನೇ ಶನಿವಾರ ಸಾವಿರಾರು ಜನ ಭಕ್ತರು ಕ್ಷೇತ್ರಕ್ಕೆ ಆಗಮಿಸಿ ಶನಿದೇವರ ದರ್ಶನ ಪಡೆದರು.
ಮಧುರೆ ಹೋಬಳಿಯಲ್ಲಿರುವ ಕಾರಣದಿಂದಾಗಿ ಇದಕ್ಕೆ ಮಧುರೆ ದೇವಸ್ಥಾನ ಅಥವಾ ಚಿಕ್ಕಮಧುರೆ ಶ್ರೀ ಶನಿಮಹಾತ್ಮ ದೇವಸ್ಥಾನ ಎಂದೇ ಜನ ಜನಿತವಾಗಿದೆ. ಈ ಪ್ರಸಿದ್ಧ ದೇವಾಲಯವು ರಾಜ್ಯದಾದ್ಯಂತ ಭಕ್ತಾದಿಗಳನ್ನು ಸೆಳೆಯುತ್ತಿದ್ದು, ವಿಶೇಷವಾಗಿ ಶ್ರಾವಣ ಮಾಸದ ಶನಿವಾರಗಳಂದು ಇಲ್ಲಿ ಜಾತ್ರೆಯ ವಾತಾವರಣವಿರುತ್ತದೆ. ಸಹಸ್ರಾರು ಭಕ್ತಾದಿಗಳು ಶ್ರೀ ಶನಿಮಹಾತ್ಮಸ್ವಾಮಿ ಹಾಗೂ ಜೇಷ್ಠಾದೇವಿಯ ದರ್ಶನ ಪಡೆಯುತ್ತಾರೆ.
ದೇವಾಲಯದ ವೈಶಿಷ್ಟ್ಯ: ಸುಮಾರು 82 ವರ್ಷಗಳ ಹಿಂದೆ ಗ್ರಾಮದ ಕೃಷಿಕ ಗಂಗಹನುಮಯ್ಯರಿಂದ ಶನೇಶ್ವರ ದೇವಸ್ಥಾನ ನಿರ್ಮಾಣವಾಗಿದೆ ಎಂಬ ಮಾಹಿತಿಯಿದೆ. ರಾಜ ಗೋಪುರ, ಕಲ್ಲು ಮಂಟಪದ ಆವರಣ ಹಾಗೂ ದೇವಾಲಯದಲ್ಲಿನ ಗರ್ಭಗುಡಿಯಲ್ಲಿ ಶನಿದೇದವರ ಮೂಲ ವಿಗ್ರಹ ಪ್ರತಿಷ್ಠಾಪಿಸಲಾಗಿದೆ. ಮುಂಭಾಗದಲ್ಲಿ ಉತ್ಸವ ಮೂರ್ತಿಯಿದ್ದು, ಪೂಜೆ ಸಲ್ಲಿಸಲಾಗುತ್ತದೆ. ಆವರಣದಲ್ಲಿ ಗಣಪತಿ ಹಾಗೂ ಜೇಷ್ಠಾದೇವಿಯ 2 ದೇವಸ್ಥಾನಗಳಿವೆ.
ಹೇಗೆ ಹೋಗುವುದು?: ದೊಡ್ಡಬಳ್ಳಾಪುರ-ನೆಲಮಂಗಲ ರಸ್ತೆಯಲ್ಲಿನ ಕನಸವಾಡಿ ಕ್ಷೇತ್ರ ದೊಡ್ಡಬಳ್ಳಾಪುರ ತಾಲೂಕು ಕೇಂದ್ರದಿಂದ 18 ಕಿ.ಮೀ., ಬೆಂಗಳೂರಿನಿಂದ 40 ಕಿ.ಮೀ., ದೂರವಿದೆ. ನೆಲಮಂಗಲ, ದೊಡ್ಡಬಳ್ಳಾಪುರ, ಬೆಂಗಳೂರಿನಿಂದ ಕನಸವಾಡಿ ಕ್ಷೇತ್ರಕ್ಕೆ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಹಾಗೂ ಖಾಸಗಿ ಬಸ್‌ಗಳ ವ್ಯವಸ್ಥೆ ಇದೆ. ದೇವಾಲಯದ ಸಂಸ್ಥಾಪಕ ದಿ.ಗಂಗಹನುಮಯ್ಯನವರ ಸ್ಮರಣಾರ್ಥ ನಿರ್ಮಿಸಲಾಗಿರುವ ವಸತಿ ಸಮುಚ್ಚಯದಲ್ಲಿ ಭಕ್ತಾದಿಗಳಿಗೆ ಉಳಿದುಕೊಳ್ಳುವ ವ್ಯವಸ್ಥೆ ಇದೆ.
ಇಷ್ಟಾರ್ಥ ಈಡೇರಿಸುವ ದೈವ: ಕನಸವಾಡಿಯ ಶ್ರೀ ಶನೇಶ್ವರ ಸ್ವಾಮಿ ಭಕ್ತರ ಇಷ್ಟಾರ್ಥ ಸಿದ್ಧಿ ಹಾಗೂ ಬದುಕಿನಲ್ಲಿ ಎದುರಾಗುವ ಎಲ್ಲಾ ರೀತಿಯ ಸಂಕಷ್ಟಗಳನ್ನು ನಿವಾರಿಸುತ್ತಾನೆ ಎಂದು ಇಲ್ಲಿನ ಭಕ್ತರು ನಂಬುತ್ತಾರೆ. ವಿಶೇಷವಾಗಿ ಶ್ರಾವಣ ಮಾಸದಲ್ಲಿ ಶನಿದೇವರ ದರ್ಶನ ಮಾಡಿದರೆ ಕಷ್ಟ ಕಾರ್ಪಣ್ಯಗಳು ನಿವಾರಣೆಯಾಗಿ ಸಂಕಲ್ಪ ಸಿದ್ಧಿಯಾಗುತ್ತದೆ ಎಂಬುದು ಭಕ್ತರ ನಂಬಿಕೆ.
ಎಳ್ಳು ದೀಪ ಹಚ್ಚಿ ತಮ್ಮ ಇಷ್ಟಾರ್ಥಗಳನ್ನು ನಿವೇದಿಸಿಕೊಳ್ಳುತ್ತಾರೆ. ಶ್ರಾವಣ ಮಾಸದ ಶನಿವಾರಗಳಂದು ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಪ್ರತಿವರ್ಷ ಶಿವರಾತ್ರಿ ದಶಮಿಯಲ್ಲಿ ಶ್ರೀ ಶನಿದೇವರ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನಡೆಯುತ್ತದೆ. ರಥೋತ್ಸವದ ನಿಮಿತ್ತ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ದೇವರ ಉತ್ಸವಗಳು ನಡೆಯುತ್ತವೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.