ಸಂಕಷ್ಟದಲ್ಲಿ ರೇಷ್ಮೆ ನೂಲು ತಯಾರಕರು
Team Udayavani, Apr 9, 2020, 2:22 PM IST
ಸಾಂದರ್ಭಿಕ ಚಿತ್ರ
ದೊಡ್ಡಬಳ್ಳಾಪುರ: ಕೋವಿಡ್ 19 ಸಂಕಷ್ಟದ ನಡುವೆಯೂ ಸರ್ಕಾರ ರೈತರಿಗೆ ರೇಷ್ಮೆ ಗೂಡು ಮಾರಾಟ ಮಾಡಲು ಅವಕಾಶ ಮಾಡಿಕೊಟ್ಟಿರುವುದು ನೂಲು ತಯಾರಿಕರಿಗೆ ಸಮಾಧಾನ ತಂದಿದೆ. ಆದರೆ ತಯಾರಾದ ರೇಷ್ಮೆ ನೂಲಿಗೆ ಸೂಕ್ತ ಮಾರುಕಟ್ಟೆಯಿಲ್ಲದೇ ಇರುವುದರಿಂದ ಮುಂದೇನು ಎನ್ನುವ ಚಿಂತೆ ರೇಷ್ಮೆ ನೂಲು ತಯಾರಕರನ್ನು ಕಾಡುತ್ತಿದೆ.
ರಾಜ್ಯದಲ್ಲಿ 15 ಸಾವಿರ ಮೆಟ್ರಿಕ್ ಟನ್ ರೇಷ್ಮೆ ಉತ್ಪಾದನೆಯಾಗುತ್ತಿದ್ದು, ಕೋವಿಡ್ 19 ಪರಿಣಾಮ ರೇಷ್ಮೆ ತಯಾರಿಕೆ ಕುಸಿಯುತ್ತಿದೆ. ರೇಷ್ಮೆ ಕೃಷಿ ಮುಖ್ಯವಾಗಿ ಕೋಲಾರ, ರಾಮ ನಗರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಸುತ್ತಮುತ್ತಲ ಪ್ರದೇಶ, ಮಂಡ್ಯ, ಮೈಸೂರು ಮತ್ತು ತುಮಕೂರು ಜಿಲ್ಲೆಗಳಲ್ಲಿ ಹೆಚ್ಚಾಗಿ ಮಾಡಲಾಗುತ್ತಿದೆ. ಇತ್ತೀಚೆಗಷ್ಟೇ ರಾಮನಗರ, ಚೆನ್ನಪಟ್ಟಣದಲ್ಲಿ ರೇಷ್ಮೆ ರೀಲರ್‌ಗಳು ತಮಗೆ ಮಾರುಕಟ್ಟೆ ಸಮಸ್ಯೆ ಇದ್ದು, ರೇಷ್ಮೆ ಗೂಡುಗಳನ್ನು ನಾವು ಖರೀದಿ ಮಾಡುವುದಿಲ್ಲ ಎಂದು ಮಾರುಕಟ್ಟೆಯಿಂದ ಹಿಂದೆ ಸರಿದಿದ್ದರು. ರೇಷ್ಮೆ ಗೂಡು ಖರೀದಿದಾರರೇ ಇಲ್ಲವೆಂದರೆ ಗೂಡು ಕೊಳ್ಳುವವರು ಯಾರು. ಮಾರಾಟವಾಗದ ರೇಷ್ಮೆ ಗೂಡು ಒಣಗಿಸಿಟ್ಟುಕೊಂಡರೆ ರೈತರಿಗೆ ಹೆಚ್ಚು ನಷ್ಟವಾಗಲಿದೆ. ರೇಷ್ಮೆ ಗೂಡುಗಳಿಗಾಗಿ ಹಿಪ್ಪು ನೇರಳೆ ಬೆಳೆಯುವ ರೈತರಿಗೂ ಪರಿಣಾಮ ತಟ್ಟಲಿದೆ.
ಒಂದು ಕೆಜಿ ರೇಷ್ಮೆ ನೂಲು ತಯಾರಿಕೆಗೆ 6 ರಿಂದ 7 ಕೇಜಿ ಗೂಡುಗಳ ಅಗತ್ಯವಿದೆ. ಡಿಸೆಂಬರ್‌ನಿಂದ ಫೆಬ್ರವರಿವರೆಗೂ ರೇಷ್ಮೆ ಗೂಡು ಕೇಜಿಗೆ 600 ರೂ.ಗಳಾಗಿ, ರೇಷ್ಮೆ ಬೆಲೆ 4 ಸಾವಿರದಾಟಿತ್ತು. ಆದರೆ ಈಗ ರೇಷ್ಮೆ ಗೂಡಿನ ಬೆಲೆ ಸರಾಸರಿ 300 ರೂಗಳಿಗೆ ಇಳಿದಿದೆ. ಒಂದು ದಿನ ಇದ್ದ ಬೆಲೆ ಇನ್ನೊಂದು ದಿನ ಇರಲ್ಲ. ರೇಷ್ಮೆ ಬೆಲೆ ಸಹ ಕಡಿಮೆ ಆಗಿದೆ. ಹೆಚ್ಚಿನ ಬೆಲೆಗೆ ಕೊಂಡ ಗೂಡುಗಳಿಂದ ತಯಾರಾದ ರೇಷ್ಮೆ ಹೊಸ ಬೆಲೆ ರೇಷ್ಮೆಯೊಂದಿಗೆ ಉಳಿದಿದೆ.
ಕೋವಿಡ್ 19 ಕಂಟಕ: ದೇಸಿ ರೇಷ್ಮೆ ಮುಖ್ಯವಾಗಿ ಆಂಧ್ರ, ತಮಿಳುನಾಡಿನಲ್ಲಿ ಹೆಚ್ಚು ಮಾರಾಟವಾಗುತ್ತಿತ್ತು. ಆದರೆ ಕೊರೊನಾ ಕಂಟಕದಿಂದಾಗಿ ರೇಷ್ಮೆ ಖರೀದಿ ಮಾಡುವವರೇ ಇಲ್ಲ. ಲಾಕ್‌ಡೌನ್ ಪರಿಣಾಮ ರೇಷ್ಮೆ ಮಾರಾಟದ ಅಂಗಡಿಗಳು ತೆರೆಯದೇ ಇರುವುದರಿಂದ ತಯಾರಾದ ರೇಷ್ಮೆ ಮಾರಾಟವಾಗುವುದು ಹೇಗೆ? ಎನ್ನುವ ಚಿಂತೆ ಕಾಡತೊಡಗಿದೆ. ದಿನಕ್ಕೊಂದು ಬೆಲೆಯಿಂದಾಗಿ ರೇಷ್ಮೆ ಮಾರುಕಟ್ಟೆಯಲ್ಲಿ ರೇಷ್ಮೆ ನೂಲನ್ನು ಮಾರಾಟ ಮಾಡುವುದೇ ಕಷ್ಟಕರವಾಗುತ್ತಿದೆ. ಜಾಕಿ ತಯಾರಿಕೆಗೆ ಇನ್ನು 15 ದಿನಕ್ಕಾಗುವಷ್ಟು ಮೊಟ್ಟೆಗಳಿದ್ದು, ಲಾಕ್‌ಡೌನ್ ಹೀಗೆಯೇ ಮುಂದುವರೆದರೆ, ಮುಂದೆ ಸರ್ಕಾರದಿಂದ ನೀಡಲಾಗುತ್ತಿದ್ದ ಮೊಟ್ಟೆಗಳ ಸರಬರಾಜು ಸ್ಥಗಿತಗೊಳ್ಳಲಿದೆ.
ಚೈನಾ ಆಮದು ಕಡಿಮೆಯಾಗಿ, ದೇಸಿ ರೇಷ್ಮೆಗೆ ಬೆಲೆ ಬಂದಿತ್ತು. ಈಗ ಚೈನಾದಿಂದ ರೇಷ್ಮೆ ಆಮದಾಗುವ ಸೂಚನೆ ಗಳಿದ್ದು, ದೇಸಿ ರೇಷ್ಮೆಗೆ ಹೊಡೆತ ಬೀಳಲಿದೆ. ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿದರೆ ಮಾತ್ರ ರೇಷ್ಮೆ ಉದ್ಯಮ ಉಳಿಯಲಿದೆ.– ಮೋಹನ್ ಕುಮಾರ್, ಶ್ರೀ ಸಾಯಿ ರೀಲರ್ ಮಾಲಿಕ
-ಡಿ.ಶ್ರೀಕಾಂತ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.