ಶ್ರೀ ಶನಿ ಮಹಾತ್ಮನ 64ನೇ ಅದ್ದೂರಿ ಬ್ರಹ್ಮರಥೋತ್ಸವ
Team Udayavani, Mar 17, 2019, 7:43 AM IST
ದೊಡ್ಡಬಳ್ಳಾಪುರ: ತಾಲೂಕಿನ ಪ್ರಸಿದ್ಧ ಕ್ಷೇತ್ರ ಮಧುರೆ ಹೋಬಳಿ ಕನಸವಾಡಿಯಲ್ಲಿ ಶ್ರೀ ಶನಿ ಮಹಾತ್ಮ ಸ್ವಾಮಿಯ 64ನೇ ವರ್ಷದ ಬ್ರಹ್ಮ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು. ದೊಡ್ಡಬಳ್ಳಾಪುರ, ಬೆಂಗಳೂರು, ನೆಲಮಂಗಲ ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಸಹಸ್ರಾರು ಭಕ್ತಾದಿಗಳು ರಥೋತ್ಸವದಲ್ಲಿ ಭಾಗವಹಿಸಿ ಹಣ್ಣು, ದವನ ಸಮರ್ಪಿಸಿ ಧನ್ಯತೆ ಮೆರೆದರು.
ಸುಂದರ ರಥ ನಿರ್ಮಾಣ: ಶ್ರೀ ಶನಿ ಮಹಾತ್ಮ ಹಾಗೂ ಜೇಷ್ಠಾದೇವಿಯ ದೇವಾಲಯಗಳಿರುವ ಕನಸವಾಡಿ ಕ್ಷೇತ್ರ ರಾಜ್ಯದಲ್ಲಿಯೇ ಹೆಸರುವಾಸಿಯಾಗಿದೆ. ಪ್ರತಿ ವರ್ಷ ರಥೋತ್ಸವ ಶನಿ ಮಹಾತ್ಮ ದೇವಾಲಯದ ಕಾರ್ಯಕಾರಿ ಸಮಿತಿ ನೇತೃತ್ವದಲ್ಲಿ ನಡೆಯುತ್ತದೆ. 2008ರಲ್ಲಿ 13 ಲಕ್ಷ ರೂ. ವೆಚ್ಚದ ವಿಶಿಷ್ಠ ಕಲಾಕೃತಿಗಳುಳ್ಳ ಸುಂದರ ರಥವನ್ನು ನಿರ್ಮಿಸಲಾಗಿದೆ.
ಸ್ವಾಮಿಗೆ ವಿಶೇಷ ಅಲಂಕಾರ: ಬ್ರಹ್ಮ ರಥೋತ್ಸವದ ಅಂಗವಾಗಿ ಶ್ರೀ ಶನಿ ಮಹಾತ್ಮಸ್ವಾಮಿಗೆ ವಿಶೇಷ ಪೂಜೆ, ಅಲಂಕಾರ ಮಾಡಲಾಗಿತ್ತು. ದೇವಾಲಯದಲ್ಲಿ ಯಾಗ, ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ರಥೋತ್ಸವದಲ್ಲಿ ಭಾಗವಹಿಸಿದ್ದ ಭಕಾದಿಗಳಿಗೆ ಕೋಡಿಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಿಂದ ದೊಡ್ಡ ಗಾತ್ರದ ತಪ್ಪಲೆಗಳಲ್ಲಿ ಪಾನಕ, ಕೋಸಂಬರಿಗಳನ್ನು ತಂದಿದ್ದ ರೈತರು, ಎತ್ತಿನ ಗಾಡಿಗಳಲ್ಲಿ ಭಕ್ತಾದಿಗಳಿಗೆ ಹಂಚಿಕೆ ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ರಥೋತ್ಸವಕ್ಕೂ ಮುನ್ನ ಶನಿ ಮಹಾತ್ಮಸ್ವಾಮಿ ಮೆರವಣಿಗೆ ನಡೆಸಿ ಪೂಜೆ ಸಲ್ಲಿಸಲಾಯಿತು.
8 ದಶಕದ ದೇಗುಲ: ಕನಸವಾಡಿ ಗ್ರಾಮದ ಕೃಷಿಕರಾಗಿದ್ದ ಗಂಗಹನುಮಯ್ಯ ಅವರಿಂದ ಸುಮಾರು 80 ವರ್ಷಗಳ ಹಿಂದೆ ಸ್ಥಾಪಿತವಾದ ಶನಿ ಮಹಾತ್ಮ ದೇವಸ್ಥಾನ ದಿನೇ ದಿನೆ ಅಭಿವೃದ್ಧಿಗೊಂಡು ಇಂದು ಸುಸಜ್ಜಿತವಾಗಿದೆ. ಸುಂದರವಾದ ರಾಜಗೋಪುರ, ಕಲ್ಲಿನ ಮಂಟಪದ ಆವರಣವಿರುವ ಈ ದೇವಾಲಯದಲ್ಲಿನ ಗರ್ಭಗುಡಿಯಲ್ಲಿ ಮೂಲ ವಿಗ್ರಹದೊಂದಿಗೆ, ಶ್ರೀ ಶನಿ ಮಹಾತ್ಮನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ.
ದೇವಾಲಯದ ಮುಂಭಾಗದ ಮಂಟಪದಲ್ಲಿನ ಉತ್ಸವ ಮೂರ್ತಿಗೆ ವಿಶೇಷ ಪೂಜೆಗಳು ಜರುಗುತ್ತವೆ. ದೇವಾಲಯದ ಆವರಣದಲ್ಲಿ ಶ್ರೀ ಗಣಪತಿ ದೇವಾಲಯವಿದೆ. ಇತ್ತೀಚಿನ ವರ್ಷಗಳಲ್ಲಿ ದೇವಾಲಯದ ಹಿಂದೆ ಶ್ರೀ ಜೇಷ್ಠಾದೇವಿಯ ದೇವಾಲಯ ನಿರ್ಮಿಸಲಾಗಿದ್ದು, ಶನಿ ಮಹಾತ್ಮ ಹಾಗೂ ಜೇಷ್ಠಾದೇವಿಯ ಎರಡೂ ದೇವಾಲಯಗಳಿರುವ ಅಪರೂಪದ ಸ್ಥಳ ಇದಾಗಿದೆ.
ಇಷ್ಟಾರ್ಥ ಸಿದ್ಧಿ: ಕನಸವಾಡಿಯ ಶ್ರೀ ಶನಿ ಮಹಾತ್ಮ ಸ್ವಾಮಿ ಇಷ್ಟಾರ್ಥ ಸಿದ್ಧಿಸಿ, ಬದುಕಿನಲ್ಲಿ ಎದುರಾಗುವ ಎಲ್ಲಾ ರೀತಿಯ ಸಂಕಷ್ಟಗಳನ್ನು ನಿವಾರಿಸುತ್ತಾನೆ. ಎಳ್ಳು ದೀಪ ಹಚ್ಚಿ ತಮ್ಮ ಇಷ್ಟಾರ್ಥಗಳನ್ನು ನಿವೇದಿಸಿಕೊಳ್ಳುವುದು ಇಲ್ಲಿನ ಪರಿಪಾಠವಾಗಿದೆ. ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಒಮ್ಮೆಯಾದರೂ ಭೇಟಿ ನೀಡುವ ಭಕ್ತಾದಿಗಳ ಸಂಖ್ಯೆ ಸಾಕಷ್ಟಿದೆ.
ಆದ್ದರಿಂದ, ಶ್ರಾವಣ ಮಾಸದ ಶನಿವಾರಗಳಂದು ಇಲ್ಲಿಗೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಹೊಸ ವಾಹನಗಳನ್ನು ಕೊಂಡಾಗಲೂ ಸ್ವಾಮಿಯ ಸನ್ನಿಧಿಯಲ್ಲಿ ಪೂಜೆ ಮಾಡಿಸುವುದು ಸಾಮಾನ್ಯವಾಗಿದೆ. ಪ್ರತಿ ವರ್ಷ ಶಿವರಾತ್ರಿ ದಶಮಿಯಲ್ಲಿ ಶ್ರೀ ಶನಿ ಮಹಾತ್ಮ ಸ್ವಾಮಿ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನಡೆಯುತ್ತದೆ.
ಬ್ರಹ್ಮ ರಥೋತ್ಸವದ ಅಂಗವಾಗಿ ಮಾರ್ಚ್ 22ರವರೆಗೆ ದೇವಾಲಯದಲ್ಲಿ ಯಾಗ, ಪೂಜಾ ಕಾರ್ಯಕ್ರಮಗಳಿರುತ್ತವೆ. ಒಂದು ವಾರ ವಿವಿಧ ಉತ್ಸವ, ಸಾಂಸ್ಕೃತಿಕ ಕಾರ್ಯಕ್ರಮಗಳು, ನಾಟಕೋತ್ಸವಗಳು ನಡೆಯಲಿವೆ. ನಾಟಕೋತ್ಸವದಲ್ಲಿ ಮಾರ್ಚ್ 17-ನ ಲ್ಲ ತಂಗಾ, ಮಾರ್ಚ್ 18-ಭ ಕ್ತ ಮ ಹಾಂದಾತ, ಮಾರ್ಚ್ 19-ಸಂಪೂರ್ಣ ರಾ ಮಾ ಯಣ, ಮಾರ್ಚ್ 20-ನ ಲ್ಲ ತಂಗಾ, ಮಾರ್ಚ್ 21-ರಾಜಾ ವಿ ಕ್ರ ಮ ನಾಟಕಗಳು ಪ್ರ ದರ್ಶಗೊಳ್ಳಲಿವೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.