ಸಂಚಾರ ನಿಯಮ ಪಾಲಿಸದಿದ್ದರೆ ಕಠಿಣ ಕ್ರಮ
Team Udayavani, Jul 10, 2019, 3:00 AM IST
ದೊಡ್ಡಬಳ್ಳಾಪುರ: ನಗರದ ಸಂಚಾರ ಅವ್ಯವಸ್ಥೆ ಸರಿಪಡಿಸಲು ಮುಂದಾಗಿರುವ ನಗರ ಠಾಣೆ ಎಸ್‌ಐ ಕೆ.ವೆಂಕಟೇಶ್, ನೋ ಪಾರ್ಕಿಂಗ್, ಬಸ್ ನಿಲ್ದಾಣದ ರಸ್ತೆ ಬದಿಗಳಲ್ಲಿ ಅಡ್ಡಾದಿಡ್ಡಿಯಾಗಿ ನಿಲ್ಲಿಸಲಾಗಿದ್ದ ಹಣ್ಣಿನ ಗಾಡಿ, ಆಟೋ, ಸುಮಾರು 25ಕ್ಕೂ ಹೆಚ್ಚಿನ ಬೈಕ್ ಗಳನ್ನು ವಶಕ್ಕೆ ಪಡೆದು ಪ್ರತಿ ಬೈಕ್ ಸವಾರರಿಂದ ಸಾವಿರ ರೂಪಾಯಿಗಳವರೆಗೆ ದಂಡ ವಸೂಲಿ ಮಾಡಿದ್ದಾರೆ.
ನಗರದ ಕೊಂಗಾಡಿಯಪ್ಪ ಬಸ್ ನಿಲ್ದಾಣದಲ್ಲಿ ವಾಹನಗಳು ನಿಲ್ಲಲು ಇರುವುದೇ ಅತ್ಯಂತ ಕಡಿಮೆ ಸ್ಥಳಾವಕಾಶ. ಇಂತಹದರಲ್ಲಿ ಬೈಕ್, ಆಟೋ, ಹಣ್ಣಿನ ಗಾಡಿಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಿಕೊಂಡರೆ ಜನರು ನಡೆದಾಡುವುದಾದರು ಹೇಗೆ?, ಕನಿಷ್ಠ ನಾಗರಿಕ ಪ್ರಜ್ಞೆ ಇಲ್ಲದೆ ಇದ್ದರೆ ಪೊಲೀಸರು ಕ್ರಮ ಕೈಗೊಂಡು ದಂಡ ವಿಧಿಸದೇ ಬೇರೆ ದಾರಿಯೇ ಇಲ್ಲ ಎಂದು ಎಸ್‌ಐ ಕೆ.ವೆಂಕಟೇಶ್ ಹೇಳಿದ್ದಾರೆ.
ಆಟೋ ಚಾಲಕರು ಕಡ್ಡಾಯ ಸಮವಸ್ತ್ರ ಧರಿಸಬೇಕು ಎಂದು ಹಲವಾರು ಬಾರಿ ಸಭೆ ನಡೆಸಿ ತಿಳಿಸುತ್ತಲೇ ಇದ್ದೇವೆ. ಆದರೂ ಆಟೋ ಚಾಲಕರು ತಮಗಿಷ್ಟ ಬಂದ ರೀತಿಯಲ್ಲಿ ಆಟೋಗಳನ್ನು ಎಲ್ಲೆಂದರಲ್ಲಿ ನಿಲ್ಲಿಸುವುದು. ಸೂಕ್ತ ದಾಖಲೆ, ಸಮವಸ್ತ್ರಗಳೇ ಇಲ್ಲದೆ ಆಟೋಗಳನ್ನು ರಸ್ತೆ ಗಿಳಿಸುತ್ತಿದ್ದಾರೆ. ಬಿಎಂಟಿಸಿ,
ಸಾರಿಗೆ ಸಂಸ್ಥೆ ಬಸ್ ಚಾಲಕರು ಸಹ ನಿಲ್ದಾಣದಲ್ಲಿ ನಿಗದಿತ ಸ್ಥಳದಲ್ಲಿ ಬಸ್‌ಗಳನ್ನು ನಿಲ್ಲಿಸುತ್ತಿಲ್ಲ. ಈ ಬಗ್ಗೆಯು ಚಾಲಕರಿಗೆ ಸೂಚನೆ ನೀಡಲಾಗಿದೆ. ನಮ್ಮ ಸೂಚನೆಗಳನ್ನು ಪಾಲಿಸದಿದ್ದರೆ, ಅವರಿಂದಲೂ ದಂಡ ವಸೂಲಿ ಮಾಡಲಿದ್ದೇವೆ. ಒಂದೇ ದಿನದಲ್ಲಿ 60 ಪ್ರಕರಣಗಳನ್ನು ದಾಖಲಿಸಿಕೊಂಡು 22,000 ರೂಪಾಯಿ ದಂಡ ವಸೂಲಿ ಮಾಡಲಾಗಿದೆ ಎಂದರು.
ನಗರದಲ್ಲಿ ಅಪರಾಧ ಪ್ರಕರಣಗಳನ್ನು ತಡೆಯುವ ಸಲುವಾಗಿ ಈ ಹಿಂದೆ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದವರನ್ನು ಠಾಣೆಗೆ ಕರೆಸಿ ಎಚ್ಚರಿಕೆ ನೀಡಲಾಗಿದೆ. ನಗರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಿಸುವ ಪ್ರಕರಣದಲ್ಲಿ ಭಾಗಿಯಾಗಿರುವುದು ಕಂಡು ಬಂದರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ ಎಂದರು.