ಸರ್ಕಾರಿ ಆಂಗ್ಲ ಶಾಲೆಗೆ ಸೇರಿಸಲು ಹರಸಾಹಸ
Team Udayavani, Jun 5, 2019, 3:00 AM IST
ದೇವನಹಳ್ಳಿ: ತಾಲೂಕಿನ ವಿಶ್ವನಾಥಪುರ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಪ್ರಸ್ತುತ ವರ್ಷದಿಂದ ಎಲ್‌ಕೆಜಿ, ಯುಕೆಜಿ ಹಾಗೂ 1ನೇ ತರಗತಿಯ ಆಂಗ್ಲ ಮಾಧ್ಯಮ ದಾಖಲಾತಿಗಳು ಆಗಿದ್ದು, ಅದರಂತೆ ಪ್ರಸ್ತುತ ಎಲ್‌ಕೆಜಿ ಹಾಗೂ ಯುಕೆಜಿಗೆ ದಾಖಲಾತಿ ಪ್ರಮಾಣ 100ಕ್ಕೆ ಏರಿದೆ. ಕೆಪಿಎಸ್, ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಪ್ರಾರಂಭ ಹಿನ್ನಲೆಯಲ್ಲಿ ಪೋಷಕರು ತಮ್ಮ ಮಕ್ಕಳ ದಾಖಲಾತಿಗಾಗಿ ಹರಸಾಹಸ ಪಡುವಂತಾಗಿದೆ.
ದಾಖಲಾತಿ ಪ್ರಮಾಣ ಹೆಚ್ಚಳ: ಸರ್ಕಾರದ ಆದೇಶದಂತೆ ಪ್ರತಿ ಸರ್ಕಾರಿ ಶಾಲೆಗೆ ಎಲ್‌ಕೆಜಿ, ಯುಕೆಜಿ ಆಂಗ್ಲ ಮಾಧ್ಯಮಕ್ಕೆ 30 ವಿದ್ಯಾರ್ಥಿಗಳನ್ನು ಮಾತ್ರ ಸೀಮಿತಗೊಳಿಸಿದೆ. ಇದೀಗ ದಾಖಲಾತಿ ಪ್ರಮಾಣ ಹೆಚ್ಚಾಗಿದ್ದರಿಂದ ಶಿಕ್ಷಕರು ಎಸ್‌ಡಿಎಂಸಿ ಮೊರೆ ಹೋಗುತ್ತಿದ್ದು, ಸಮಸ್ಯೆ ಪರಿಹರಿಸಿಕೊಳ್ಳಲು ಶಾಲಾ ಆಡಳಿತ ಮಂಡಳಿ ಸಭೆಯಲ್ಲಿ ಪ್ರತಿ 30 ವಿದ್ಯಾರ್ಥಿಗಳ ಪೈಕಿ ಶಿಕ್ಷಕರನ್ನು ಹೆಚ್ಚುವರಿಯಾಗಿ ನೇಮಿಸಿಕೊಳ್ಳಲು ಚರ್ಚಿಸಲಾಗುತ್ತಿದೆ. ಈಗಾಗಲೇ ಒಂದು ಶಿಕ್ಷಕ, ಒಂದು ಆಯಾ ಹುದ್ದೆಗೆ ನೇಮಕಾತಿ ಕರೆಯಲಾಗಿದೆ.
ನಲಿಕಲಿಗೆ ಸೇರಿಸಿಕೊಳ್ಳಲು ಅವಕಾಶ: ಆಂಗ್ಲ ಮಾಧ್ಯಮಕ್ಕೆ ಹೆಚ್ಚಿನ ಬೇಡಿಕೆ ಇದ್ದು, ಪೋಷಕರು ತಮ್ಮ ಮಕ್ಕಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸುತ್ತಿರುವುದ್ದಾರೆ. ಆದರೆ, ಸರ್ಕಾರದ ಆದೇಶದಂತೆ 30 ಮಕ್ಕಳನ್ನು ಮಾತ್ರ ಅವಕಾಶ ಇದೆ. ಉಳಿದವರನ್ನು ನಲಿಕಲಿಗೆ ಸೇರಿಸಿಕೊಳ್ಳಲು ಅವಕಾಶವಿದೆ. ಆದರೆ, ಪೋಷಕರು ಇದಕ್ಕೆ ಸಮ್ಮತ ನೀಡುತ್ತಿಲ್ಲ. ಬದಲಾಗಿ ನಮ್ಮ ಮಕ್ಕಳನ್ನು ಸಹ ಎಲ್‌ಕೆಜಿ ಆಂಗ್ಲ ಮಾಧ್ಯಮದಲ್ಲಿಯೇ ದಾಖಲಾತಿ ಮಾಡಿಕೊಳ್ಳಿ ಎಂದು ಪಟ್ಟು ಹಿಡಿಯುತ್ತಿರುವುದು ಶಿಕ್ಷಕರಿಗೆ ಒಂದು ರೀತಿಯ ಸಮಸ್ಯೆ ಎದುರಿಸುವಂತೆ ಆಗಿದೆ.
ಪೋಷಕರು ಮೇಲಿಂದ ಮೇಲೆ ಸರ್ಕಾರಿ ಶಾಲೆಯಲ್ಲಿ ತಮ್ಮ ಮಕ್ಕಳ ದಾಖಲಾತಿ ಮಾಡಿಕೊಳ್ಳಲು ಹರಸಾಹಸ ಪಡುತ್ತಿರುವುದು ಒಂದು ಕಡೆಯಾದರೆ, ಶಿಕ್ಷಕರು ಆಂಗ್ಲ ಮಾಧ್ಯಮಕ್ಕೆ ಸೀಟು ಖಾಲಿ ಇಲ್ಲ. ತಮ್ಮ ಮಗುವನ್ನು ನಲಿ ಕಲಿ (ಕನ್ನಡ ಮಾಧ್ಯಮ)ಕ್ಕೆ ಸೇರಿಸಿ ಎಂದು ಹೇಳುತ್ತಿರುವುದು ಶಿಕ್ಷಕರಲ್ಲಿ ಹಾಗೂ ಪೋಷಕರಲ್ಲಿ ಮಾತಿನ ಚಕಮಕಿ ಜೋರಾಗಿಯೇ ನಡೆಯುತ್ತಿದೆ.
30 ಮಂದಿಗೆ ಸೀಮಿತ ಸಲ್ಲ: ಸರ್ಕಾರ ಪ್ರತಿ ಶಾಲೆಗೆ 30 ಸೀಟುಗಳಿಗೆ ಆಂಗ್ಲ ಮಾಧ್ಯಮ ಎಲ್‌ಕೆಜಿಯನ್ನು ಸೀಮಿತಗೊಳಿಸಿರುವುದು ಸರಿಯಲ್ಲ. ಈ ಬಗ್ಗೆ ಪೋಷಕರಿಗೆ ಮೊದಲೇ ತಿಳಿಸಬೇಕಿತ್ತು. ಆಂಗ್ಲ ಮಾಧ್ಯಮಕ್ಕೆ ಈ ಶಾಲೆಯಲ್ಲಿ ದಾಖಲಾತಿ ಪ್ರಮಾಣ ಹೆಚ್ಚಾದರೆ ಯಾರು ಹೊಣೆ, ನಮ್ಮ ಮಕ್ಕಳು ಸಹ ಆಂಗ್ಲ ಮಾಧ್ಯಮಕ್ಕೆ ಸೇರುವುದು ನಮಗೆ ಆಸೆ ಇರುತ್ತದೆ. ಈ ವಿಚಾರವಾಗಿ ಸರ್ಕಾರ ಗಂಭೀರವಾಗಿ ಯೋಚಿಸಿ, ಆದೇಶ ಹೊರಡಿಸಬೇಕಿತ್ತು. ಆಂಗ್ಲ ಮಾಧ್ಯಮದಲ್ಲಿಯೇ ದಾಖಲಾತಿ ಮಾಡಿಕೊಳ್ಳಿ ಎಂದು ಶಿಕ್ಷಕರಿಗೆ ಪೋಷಕರು ಒತ್ತಾಯಿಸಿದ್ದಾರೆ.
ಅರ್ಹತೆ ಪರೀಕ್ಷೆ ನಡೆಸಿ: ಇದೀಗ ನಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮಕ್ಕೆ ಸೇರಿಸಿಕೊಳ್ಳಲು ಎಲ್ಲಾ ರೀತಿಯಿಂದ ಸಿದ್ಧಪಡಿಸಿದ್ದೇವೆ. ಇದೀಗ ದಾಖಲಾತಿ ಇಲ್ಲ ಎಂದು ಹೇಳಿದರೆ ಸರಿಯಲ್ಲ. ಸರ್ಕಾರದ ಆದೇಶದಂತೆ 30 ವಿದ್ಯಾರ್ಥಿಗಳನ್ನು ಅರ್ಹತೆ ಪರೀಕ್ಷೆ ನಡೆಸಿ, ಲಾಟರಿ ಮೂಲಕ ಆಯ್ಕೆ ಮಾಡಬಹುದಲ್ಲವೆ. ಈ ರೀತಿ 1ನೇ ತರಗತಿಗೆ ದಾಖಲಾತಿ ಮಾಡಿಕೊಳ್ಳಲಿ ಎಂದು ವಿಶ್ವನಾಥಪುರ ಪೋಷಕಿ ದೀಪಾ ಹೇಳುತ್ತಾರೆ.
ಮಕ್ಕಳ ದಾಖಲಾತಿಗೆ ಪೋಷಕರು ಒತ್ತಾಯ: ಈಗಾಗಲೇ ಪೋಷಕರು ಮೇಲಿಂದ ಮೇಲೆ ಬಂದು ಸರ್ಕಾರಿ ಶಾಲೆಗಳಲ್ಲಿ ತಮ್ಮ ಮಕ್ಕಳನ್ನು ಸೇರಿಸುತ್ತಿದ್ದಾರೆ. ಪ್ರಸ್ತುತ ಎಲ್‌ಕೆಜಿ, ಯುಕೆಜಿಗೆ 100 ಮಕ್ಕಳನ್ನು ದಾಖಲಾತಿ ಮಾಡಿಕೊಂಡಿದ್ದೇವೆ. 1ನೇ ತರಗತಿಗೆ 40 ಮಕ್ಕಳು ದಾಖಲಾತಿಯಾಗಿದೆ. ಇನ್ನು ದಾಖಲಾತಿಗಾಗಿ ಪೋಷಕರು ಬರುತ್ತಿದ್ದಾರೆ.
ಇದೊಂದು ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. ಸರ್ಕಾರ ಕೇವಲ 30 ಸೀಟುಗಳಿಗೆ ಮಾತ್ರ ಅವಕಾಶ ನೀಡಿದೆ. ಈಗಾಗಲೇ ಹೆಚ್ಚುವರಿ ದಾಖಲಾತಿಯಾಗಿರುವುದನ್ನು ಸರಿಪಡಿಸಿಕೊಳ್ಳುವುದೇ ಆಗಿದೆ. ಇದರ ಜೊತೆಯಲ್ಲಿ ಜನಪ್ರತಿನಿಧಿಗಳ ಮೂಲಕ ಪೋಷಕರು ತಮ್ಮ ಮಕ್ಕಳ ದಾಖಲಾತಿಗಾಗಿ ಕರೆ ಮಾಡಿಸುತ್ತಿದ್ದಾರೆ ಎಂದು ಕೆಪಿಎಸ್ ಕಿರಿಯ ಮುಖ್ಯೋಪಾಧ್ಯಯ ಬಸವರಾಜ್ ಹೇಳಿದ್ದಾರೆ.
ಯುಕೆಜಿಗೆ ದಾಖಲಿಸಿಕೊಳ್ಳಲು ಸೀಟ್ ಖಾಲಿ ಇಲ್ಲ ಎಂದು ಶಿಕ್ಷಕರು ಹೇಳುತ್ತಿದ್ದಾರೆ. ಇದರಿಂದ ನಮಗೆ ಬಹಳ ತೊಂದರೆ ಅನುಭವಿಸುವಂತೆ ಆಗಿದೆ.
-ಆರತಿದೇವಿ, ಪೋಷಕಿ
* ಎಸ್.ಮಹೇಶ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.