ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ: ಡೀಸಿ ರವೀಂದ್ರ
ಸುಗಮ, ಶಾಂತಿಯುತ ಚುನಾವಣೆ ನಡೆಸುವಂತೆ ಅಧಿಕಾರಿಗಳ ಸೂಚನೆ
Team Udayavani, Oct 10, 2020, 2:05 PM IST
ದೇವನಹಳ್ಳಿ: ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆ ಘೋಷಣೆಯಾಗಿದ್ದು, ಜಿಲ್ಲೆ ವ್ಯಾಪ್ತಿಯಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಚುನಾವಣೆ ಕಾರ್ಯಕ್ಕೆ ನಿಯೋಜನೆಗೊಂಡಿರುವ ಎಲ್ಲಾ ಅಧಿಕಾರಿಗಳು ಗಂಭೀರತೆ ಅರಿತು ಕಟ್ಟೆಚ್ಚರವಹಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದರು.
ತಾಲೂಕಿನ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣಾ ಸಂಬಂಧ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಅಧಿಕಾರಿಗಳು ವಿಧಾನಪರಿಷತ್ ಚುನಾವಣೆಯನ್ನುಲಘುವಾಗಿ ಪರಿಗಣಿಸಬಾರದು. ವಿಧಾನಸಭಾ ಹಾಗೂ ಲೋಕಸಭಾ ಕ್ಷೇತ್ರಗಳಿಗೆ ನಡೆಯುವ ಚುನಾವಣೆಯಂತೆ ಈ ಚುನಾವಣೆಯನ್ನೂ ಅಷ್ಟೇ ಗಂಭೀರ ವೆಂದು ಪರಿಗಣಿಸಬೇಕು. ಸೆ. 29 ರಿಂದಲೇ ಮಾದರಿ ನೀತಿ ಸಂಹಿತೆ ಜಿಲ್ಲಾ ವ್ಯಾಪ್ತಿಯಲ್ಲಿ ಜಾರಿಯಲ್ಲಿದೆ. ಸುಗಮ ಹಾಗೂ ಶಾಂತಿಯುತ ಚುನಾವಣೆ ಮತ್ತು ಕೋವಿಡ್ ನಿಯಮಗಳ ಪಾಲನೆ ಉಲ್ಲಂಘನೆಯಾಗ ದಂತೆ ಎಚ್ಚರ ವಹಿಸಬೇಕು ಎಂದು ಹೇಳಿದರು.
ಅ.28ರಂದು ಮತದಾನ ನಡೆಯಲಿದ್ದು, ಮತ ಎಣಿಕೆ ನ.2ಕ್ಕೆ ನಡೆಯಲಿದೆ. ಜಿಲ್ಲೆಯಲ್ಲಿ ಒಟ್ಟು 17 ಮತಗಟ್ಟೆ ಸ್ಥಾಪಿಸಲಾಗಿದ್ದು, ನೆಲ ಮಂಗಲ 3, ದೊಡ್ಡಬಳ್ಳಾಪುರ 5, ಹೊಸಕೋಟೆ 5 ಹಾಗೂ ದೇವನಹಳ್ಳಿ ತಾಲೂಕಿನಲ್ಲಿ4 ಮತಗಟ್ಟೆ ಸ್ಥಾಪಿಸಲಾಗಿದೆ. ಎಲ್ಲಾ ಮತದಾನ ಕೇಂದ್ರಗಳಲ್ಲಿ ಮೂಲ ಸೌಲಭ್ಯಗಳು ಲಭ್ಯವಿರುವ ಬಗ್ಗೆ ಸಂಬಂಧಪಟ್ಟ ಎಲ್ಲಾ ತಹಶೀಲ್ದಾರ್‌ಗಳು ಭೇಟಿ ನೀಡಿ ವರದಿ ನೀಡಬೇಕು ಎಂದು ತಿಳಿಸಿದರು.
ನಿಯಮ ಪಾಲನೆಯಾಗಲಿ: ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಚುನಾವಣಾ ಸಭೆ ಮತ್ತು ಸಮಾರಂಭಗಳಿಗೆ ಅನುಮತಿ ಕೋರಿ ಅರ್ಜಿಯನ್ನು ಮುಂಚಿತವಾಗಿ ನೀಡಬೇಕು. ಚುನಾವಣಾ ಸಭೆ ಮತ್ತು ಸಮಾರಂಭಗಳಿಗೆ ಜಿಲ್ಲಾಧಿಕಾರಿಗಳುಅನುಮತಿ ನೀಡಲಿದ್ದು, ಚುನಾವಣಾ ಪ್ರಚಾರಕ್ಕೆ ಬಳಸುವ ವಾಹನಗಳಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣಾಧಿಕಾರಿಗಳು ಹಾಗೂ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರು ಅನುಮತತಿ ನೀಡಲಿದ್ದಾರೆ. ಚುನಾವಣಾ ಮಾದರಿ ನೀತಿ ಸಂಹಿತೆ, ಕೋವಿಡ್ ನಿಯಮಗಳ ಪಾಲನೆ ಹಾಗೂ ಚುನಾವಣಾ ದೂರು ಸ್ವೀಕಾರಕ್ಕೆ ಸಂಬಂಧಿಸಿದಂತೆನೋಡಲ್‌ಅಧಿಕಾರಿಗಳನ್ನು ನೇಮಿಸಲಾಗಿದ ಎಂದು ಹೇಳಿದರು.
ವಾಹನ ಬಳಸಿಕೊಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸಂಬಂಧಿಸಿದ ಮಸ್ಟರಿಂಗ್ ಹಾಗೂ ಡಿ ಮಸ್ಟರಿಂಗ್‌ಕಾರ್ಯಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆಯಲಿದ್ದು, ಮತಗಟ್ಟೆ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಮತದಾನ ಕೇಂದ್ರಗಳಿಗೆ ಕಳುಹಿಸಲು ಹಾಗೂ ಡಿ ಮಸ್ಟರಿಂಗ್‌ಕೇಂದ್ರಕ್ಕೆಕರೆತರಲು ವಾಹನಗಳ ಅವಶ್ಯಕತೆಯಿದ್ದು, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿಲಭ್ಯವಿರುವ ವಾಹನಗಳನ್ನು ಕಾರ್ಯಕ್ಕೆ ನಿಯೋಜಿಸಿಕೊಳ್ಳಬೇಕು ಎಂದು ತಿಳಿಸಿದರು.
ಮತಗಟ್ಟೆ ಕಾರ್ಯಕ್ಕೆ ನಿಯೋಜಿಸಬೇಕಾಗುವ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಅ.16, 20 ಹಾಗೂ 27ರಂದು ತರಬೇತಿ ಆಯೋಜಿಸಲಾಗಿದ್ದು, ಎಣಿಕೆ ಅಧಿಕಾರಿ ಮತ್ತು ಸಿಬ್ಬಂದಿ ನೇಮಕಾತಿ ಹಾಗೂ ತರಬೇತಿ ಬಗ್ಗೆ ಪ್ರಾದೇಶಿಕ ಆಯುಕ್ತರು ಹಾಗೂ ಚುನಾವಣಾಧಿಕಾರಿಗಳುಕ್ರಮವಹಿಸಲಿದ್ದಾರೆ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತಿ ಸಿಇಒ ಎಂ.ಎನ್.ನಾಗರಾಜ, ಅಪರ ಜಿಲ್ಲಾಧಿಕಾರಿ ಡಾ.ಜಗದೀಶ್.ಕೆ.ನಾಯಕ್, ಉಪ ವಿಭಾಗಾಧಿಕಾರಿ ಅರುಳ್ ಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.