ಶಿಕ್ಷಕರ ಬೇಡಿಕೆ ಈಡೇರಿಕೆಗೆ ಆಗ್ರಹ
Team Udayavani, Feb 19, 2019, 7:40 AM IST
ದೇವನಹಳ್ಳಿ: ಶಿಕ್ಷಕರ ಪ್ರಮುಖ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ವತಿಯಿಂದ ತಾಲೂಕಿನ ಚಪ್ಪರದ ಕಲ್ಲು ಸರ್ಕಲ್ ಬಳಿಯ ಜಿಲ್ಲಾ ಸಂಕೀರ್ಣದ ಮುಂಭಾಗದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲಾಯಿತು.
ನೂತನ ಪಿಂಚಣಿ ಯೋಜನೆಗೆ ಸಂಬಂಧಿಸಿದಂತೆ ಸಮಿತಿಯ ವರದಿಯನ್ನು ಪಡೆದು, ತಕ್ಷಣವೇ ನೂತನ ಪಿಂಚಣಿಯನ್ನು ರದ್ದುಪಡಿಸಿ ಹಳೇ ಪಿಂಚಣಿ ವ್ಯವಸ್ಥೆಯನ್ನೇ ಮುಂದುವರೆಸಬೇಕು. ಅಲ್ಲದೆ, ಇತರೆ ಬೇಡಿಕೆಗಳನ್ನು ಈಡೇರಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
3 ವರ್ಷದಿಂದ ವರ್ಗಾವಣೆ ನಡೆದಿಲ್ಲ: ಸಂಘದ ಜಿಲ್ಲಾಧ್ಯಕ್ಷ ಕೆ.ಕಾಂತರಾಜು ಮಾತನಾಡಿ, ಶಿಕ್ಷಕರ ಆರು ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಲಾಗಿದೆ. ಶಿಕ್ಷಕರ ವರ್ಗಾವಣೆ ಕಾಯ್ದೆ 2007ರ ಅನ್ವಯ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನು ಪ್ರತಿ ವರ್ಷ ಮಾರ್ಚ್, ಏಪ್ರಿಲ್ ತಿಂಗಳಲ್ಲೇ ಕೈಗೊಳ್ಳಬೇಕಾಗಿತ್ತು. ಆದರೆ, ಅನಿವಾರ್ಯ ಕಾರಣಗಳಿಂದ ಹಾಗೂ ಚುನಾವಣಾ ನೀತಿ ಸಂಹಿತೆಯಿಂದ ಮುಂದೂಡುತ್ತಾ ಬರಲಾಗಿದೆ. ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಕಳೆದ 3 ವರ್ಷಗಳಿಂದ ನಡೆದಿಲ್ಲ. ಇದರಿಂದ ವರ್ಗಾವಣೆ ಬಯಸುತ್ತಿರುವ ಶಿಕ್ಷಕರಿಗೆ ತೀವ್ರ ತೊಂದರೆಯಾಗಿದೆ ಎಂದರು.
ವರ್ಗಾವಣೆ ಕಾರ್ಯ ಪೂರ್ಣಗೊಳಿಸಿ: ವರ್ಗಾವಣೆ ಪ್ರಕ್ರಿಯೆ ನಡೆಸದ ಬಗ್ಗೆ ಸಂಘ ಸಾಕಷ್ಟು ಬಾರಿ ಸರಕಾರಕ್ಕೆ, ಇಲಾಖೆ ಅಧಿಕಾರಿಗಳಿಗೆ ನಿವೇದನೆ ಸಲ್ಲಿಸಿದೆ. 2018ರ ಡಿ.16ರಂದು ನಡೆದ ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮೇಳನದಲ್ಲಿ ಫೆಬ್ರವರಿಯಲ್ಲೇ ವರ್ಗಾವಣೆ ಮಾಡುವುದಾಗಿ ತಿಳಿಸಿದ್ದರು. ಆದರೆ, ಇನ್ನೂ ಯಾವುದೇ ಪ್ರಕ್ರಿಯೆಗಳಿಗೆ ಚಾಲನೆ ನೀಡದಿರುವುದು ವಿಷಾದನೀಯ. ಪ್ರಸಕ್ತ ಸಾಲಿನ ವರ್ಗಾವಣೆ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ, ಜೂನ್‌ನಲ್ಲಿ ಮತ್ತೂಮ್ಮೆ ವರ್ಗಾವಣೆ ಮಾಡಿಕೊಡಬೇಕೆಂದು ಆಗ್ರಹಿಸಿದರು.
ಕನಿಷ್ಠ ಷರತ್ತು ಬದ್ಧ ಬಡ್ತಿ ನೀಡಿ: ಸೇವಾ ನಿರತ ಪದವೀಧರ ಶಿಕ್ಷಕರಿಗೆ ಬಡ್ತಿ ನೀಡುವುದು ಅತ್ಯವಶ್ಯಕವಾಗಿದೆ. ಈಗಾಗಲೇ ಎರಡು ಬಾರಿ ನೇರ ನೇಮಕಾತಿ ಮೂಲಕ ಪದವೀಧರ ಶಿಕ್ಷಕರ ನೇಮಕಾತಿ ಪೂರ್ಣಗೊಂಡಿದ್ದು, ಈಗ ಮತ್ತೆ 1,000 ಪದವೀಧರ ಶಿಕ್ಷಕರಿಗೆ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. ಇದರಿಂದ ಸೇವಾನಿರತ ಶಿಕ್ಷಕರಿಗೆ ನಿರಂತರ ಅನ್ಯಾಯವಾಗುತ್ತಿದೆ. ಕಾರಣ ಬಡ್ತಿ ಪ್ರಕ್ರಿಯೆಗಳು ಸಂಪೂರ್ಣ ಸ್ಥಗಿತವಾಗಿದೆ. ಎಲ್ಲದಕ್ಕೂ ಪವಿತ್ರಾ ಪ್ರಕರಣದ ಕಾರಣ ನೀಡುತ್ತಿರುವುದು ತೀವ್ರ ಅಸಮಧಾನಕ್ಕೆ ಕಾರಣವಾಗಿದೆ. ಕನಿಷ್ಠ ಷರತ್ತು ಬದ್ಧ ಬಡ್ತಿ ನೀಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.
ನೂತನ ಪಿಂಚಣಿ ರದ್ದುಗೊಳಿಸಿ: ಪ್ರಧಾನ ಕಾರ್ಯದರ್ಶಿ ಜಯರಾಮಯ್ಯ ಮಾತನಾಡಿ, ನೂತನ ಪಿಂಚಣಿ ಯೋಜನೆಗೆ ಸಂಬಂಧಿಸಿದಂತೆ ಸಮಿತಿಯ ವರದಿಯನ್ನು ಪಡೆದು ತಕ್ಷಣ ನೂತನ ಪಿಂಚಣಿ ಯೋಜನೆ ರದ್ದುಗೊಳಿಸಬೇಕು. 6ನೇ ವೇತನ ಶಿಫಾರಸ್ಸಿನಂತೆ ತಕ್ಷಣ ಆದೇಶ ಹೊರಡಿಸಿ, ಬಡ್ತಿ ಹೊಂದಿದ ಮುಖ್ಯ ಶಿಕ್ಷಕರಿಗೆ 10-25 ವರ್ಷಗಳ ಆರ್ಥಿಕ ಸೌಲಭ್ಯ ನೀಡಬೇಕು. ಗ್ರಾಮೀಣ ಕೃಪಾಂಕ ಸೌಲಭ್ಯ ಸೇವೆಯಿಂದ ವಜಾ ಆಗಿರುವ ಶಿಕ್ಷಕರ ಪೂರ್ಣ ಸೇವೆ ಪರಿಗಣಿಸಿ ಎಲ್ಲಾ ಸೌಲಭ್ಯಗಳನ್ನು ನೀಡಬೇಕು.
ಶಿಕ್ಷಕರನ್ನು ಬಿಎಲ್‌ಒ ಹಾಗೂ ಇನ್ನಿತರ ಶಿಕ್ಷಣೇತರ ಕಾರ್ಯಗಳಿಂದ ಮುಕ್ತಗೊಳಿಸಬೇಕೆಂದು ಆಗ್ರಹಿಸಿದರು. ಇದೇ ಸಂದರ್ಭದಲ್ಲಿ ಒಂದು ನಿಮಿಷ ಮೌನಾಚರಣೆ ಮೂಲಕ ಹುತಾತ್ಮ ವೀರ ಯೋಧರ ಪವಿತ್ರ ಆತ್ಮಕ್ಕೆ ಶಾಂತಿ ಕೋರಿದರು. ಮನವಿ ಸ್ವೀಕರಿಸಿ ಮಾತನಾಡಿದ ಡೀಸಿ ಕಚೇರಿ ಸಹಾಯಕ ನರಸಿಂಹಮೂರ್ತಿ, ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾ ಉಪಾಧ್ಯಕ್ಷೆ ಆರ್.ವಿಜಯ್‌ಕುಮಾರಿ, ಸಂಘಟನಾ ಕಾರ್ಯದರ್ಶಿ ಕೆ.ಎನ್.ನಾಗೇಶ್, ಸಹ ಕಾರ್ಯದರ್ಶಿ ಗೀತಾ, ರಾಜ್ಯ ಉಪಾಧ್ಯಕ್ಷ ಎಸ್.ಪಿ.ವೆಂಕಟಾಚಲಯ್ಯ, ದೇವನಹಳ್ಳಿ ತಾಲೂಕು ಅಧ್ಯಕ್ಷ ನಾಗೇಶ್, ಹೊಸಕೋಟೆ ತಾಲೂಕು ಅಧ್ಯಕ್ಷ ಮುನಿಶಾಮಣ್ಣ, ದೊಡ್ಡಬಳ್ಳಾಪುರ ತಾಲೂಕು ಅಧ್ಯಕ್ಷ ಬಿ.ಎಸ್.ಸಿದ್ಧಗಂಗಯ್ಯ, ನೆಲಮಂಗಲ ತಾಲೂಕು ಅಧ್ಯಕ್ಷ ಶಿವಕುಮಾರ್, ರಾಜ್ಯ ಗ್ರೇಡ್ 2 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಕಾರ್ಯದರ್ಶಿ ಪುಟ್ಟಸ್ವಾಮಿ, ಸರ್ಕಾರಿ ನೌಕರರ ಸಂಘದ ಜಿಲ್ಲಾ ನಿರ್ದೇಶಕ ನಾರಾಯಣ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರು ಮತ್ತಿತರರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.