ಕಸದ ರಾಶಿ ವಿಲೇವಾರಿಯೇ ಸವಾಲು; ನಿಯಮ ಉಲ್ಲಂಘಿಸುವವರ ಮೇಲೆ ಕಠಿಣ ಕ್ರಮ ಅಗತ್ಯ
ಪ್ಲಾಸ್ಟಿಕ್ ಬಳಕೆ ಹಾಗೂ ಮಾರಾಟವನ್ನು ಜು.1ರಿಂದ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
Team Udayavani, Jul 11, 2022, 5:35 PM IST
ದೊಡ್ಡಬಳ್ಳಾಪುರ: ಮೂಲದಲ್ಲಿಯೇ ಕಸ ವಿಂಗಡಿಸಿ, ಕಸ ಸಂಗ್ರಹಣೆಯ ವಾಹನಗಳಿಗೆ ನೀಡಬೇಕೆಂಬ ನಿಯಮ ಜಾರಿಯಾಗಿ ದಶಕ ಕಳೆದರೂ, ಇನ್ನು ಸಹ ನಗರಸಭೆ ವ್ಯಾಪ್ತಿಯಲ್ಲಿ ಬೀದಿ ಬದಿ ಹಾಗೂ ಖಾಲಿ ನಿವೇಶನಗಳ ಬಳಿ ಕಸದ ರಾಶಿ ಕಂಡು ಬರುತ್ತಿರುವುದು ಸಾಮಾನ್ಯವಾಗಿದೆ. ಈ ದಿಸೆಯಲ್ಲಿ ನಿಯಮ ಉಲ್ಲಂಘಿಸುವವರ ಮೇಲೆ ನಗರಸಭೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ.
ವೈಜ್ಞಾನಿಕ ಘನ ತ್ಯಾಜ್ಯ ವಿಂಗಡನೆ: ಸುಪ್ರೀಂ ಕೋರ್ಟ್ ಆದೇಶದಂತೆ ಘನತ್ಯಾಜ್ಯ ವಸ್ತುಗಳ ನಿಯಮ 2000ದನ್ವಯ ಪುರಸಭೆ, ನಗರಸಭೆಗಳು ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡಬೇಕು. ಸಂಗ್ರಹಣಾ ಸೌಲಭ್ಯಗಳನ್ನು ಸ್ಥಾಪಿಸಬೇಕು. ಸಂಸ್ಕರಣೆ, ಪುನರ್ ಬಳಕೆಗೆ ಆದ್ಯತೆ ನೀಡಬೇಕು ಎನ್ನುವ ನಿಯಮವಿದೆ. ಆರಂಭದಲ್ಲಿ ಈ ಹೊಣೆಯನ್ನು ಸ್ತ್ರೀಶಕ್ತಿ ಸಂಘಗಳಿಗೆ ವಹಿಸಲಾಗಿತ್ತು.
ಕ್ರಮೇಣ ನಗರಸಭೆಯ ಟಿಪ್ಪರ್ ವಾಹನಗಳ ಮೂಲಕವೇ ನಗರಸಭೆ ಸಿಬ್ಬಂದಿ ಕಸ ಸಂಗ್ರಹಣೆ ಮಾಡುತ್ತಿದ್ದಾರೆ. ಹಸಿ ಹಾಗೂ ಒಣ ತ್ಯಾಜ್ಯವನ್ನು ಕಡ್ಡಾಯವಾಗಿ ನಾಗರಿಕರೇ ವಿಂಗಡಿಸಿ ನೀಡಬೇಕಿದೆ.
ನಗರಸಭೆ ಘನ ತ್ಯಾಜ್ಯ ವಿಲೇವಾರಿ: ನಗರದಲ್ಲಿ ಒಂದು ದಿನಕ್ಕೆ ಉತ್ಪತ್ತಿಯಾಗುವ ಕಸದ ಪ್ರಮಾಣ 35 ಟನ್. ಇದನ್ನು ನಗರದ ಹೊರವಲಯದಲ್ಲಿರುವ ವಡ್ಡರಪಾಳ್ಯದ ಸಮೀಪದ ನಗರಸಭೆ ತ್ಯಾಜ್ಯ ವಿಲೇವಾರಿ ಹಾಗೂ ಸಂಗ್ರಹಣಾ ಪ್ರದೇಶಕ್ಕೆ ವಿಲೇವಾರಿ ಮಾಡಲಾಗುತ್ತಿದೆ. ಮನೆಗಳಿಂದ ಉತ್ಪತ್ತಿಯಾಗುವ ಕಸದ ಪ್ರಮಾಣ ದಿನಕ್ಕೆ 20 ಟನ್. ಪ್ರತಿ ಮನೆಯಿಂದ ದಿನಕ್ಕೆ ಸರಾಸರಿ ಒಂದು ಕೆ.ಜಿ. ಕಸ ಉತ್ಪತ್ತಿಯಾಗುತ್ತದೆ.
ದೊಡ್ಡಬಳ್ಳಾಪುರ ನಗರಸಭೆಯಲ್ಲಿ ಎಲ್ಲ 31 ವಾರ್ಡ್ ಗಳಲ್ಲಿ ಘನ ತ್ಯಾಜ್ಯ ವಸ್ತುಗಳನ್ನು ನಿರ್ವಹಣೆ ಮಾಡಲು 25 ಆಟೋ ಟಿಪ್ಪರ್ ವಾಹನ ಬಳಸಲಾಗುತ್ತಿದೆ. ಪ್ರತಿದಿನ ಮನೆ ಮನೆಗಳಿಂದ ಹಸಿ ಮತ್ತು ಒಣ ಕಸವನ್ನಾಗಿ ಬೇರ್ಪಡಿಸಿ ಪಡೆಯಲಾಗುತ್ತಿದೆ. ಹರಾಜು ಮೂಲಕ ವಿಲೇವಾರಿ: ಹಸಿ ಕಸವನ್ನು ಸಂಗ್ರಹಿಸಿ ಘನ ತ್ಯಾಜ್ಯ ವಸ್ತುಗಳ ಸಂಸ್ಕರಣ ಘಟಕದಲ್ಲಿ ವಿಂಡ್ರೋಪ್ಲಾಟ್ ಫಾರಂ ಮೂಲಕ ಸಾವಯವ ಗೊಬ್ಬರವನ್ನು ಮತ್ತು ಮನೆಗಳಿಂದ ಬರುವ ಒಣ ಕಸವನ್ನು ಒಣಕಸ ಸಂಗ್ರಹಣಾ ಕೇಂದ್ರಲ್ಲಿ ಮರು ಬೇರ್ಪಡಿಸಿ ಹರಾಜು ಮೂಲಕ ವಿಲೇವಾರಿ ಮಾಡಲಾಗುತ್ತಿದೆ.
ಘನತ್ಯಾಜ್ಯ ವಸ್ತುಗಳ ಸಂಸ್ಕರಣ ಘಟಕವು ವಡ್ಡರ ಪಾಳ್ಯದ ಹತ್ತಿರ 15.31 ಎಕರೆ ವಿಸ್ತೀರ್ಣದ ಜಮೀನನ್ನು ಹೊಂದಿದ್ದು, ಇದರಲ್ಲಿ ಕಾಂಪೌಂಡ್ ವ್ಯವಸ್ಥೆ, ವೇಬ್ರಿಡ್ಜ್ ವ್ಯವಸ್ಥೆ , ಭದ್ರತಾ ಸಿಬ್ಬಂದಿ ಕೊಠಡಿ, ಎರಹುಳು ಘಟಕ, ವಿಂಡ್ರೋಪ್ಲಾಟ್ ಫಾರಂ, ಕಾಂಪೋಸ್ಟ್ ಸ್ಕ್ರೀನಿಂಗ್ ಯಂತ್ರ, ಸ್ಯಾನಿಟರಿ ಲ್ಯಾಂಡ್ ಫಿಲ್ ವಿತ್ ಎಚ್‌ಡಿಪಿಇ ಲೈನರ್, ಲೀಚೇಡ್ ಸಂಗ್ರಹಣೆಯ ಫಿಟ್ ವ್ಯವಸ್ಥೆಗಳಿದ್ದು, ಸುತ್ತಲೂ ಮರಗಿಡ ಬೆಳೆಸಲಾಗಿದೆ.
ಸಾವಯವ ಗೊಬ್ಬರ ತಯಾರಿಕೆ: ನಗರಸಭೆಯಿಂದ ಪ್ರತಿದಿನ ಬರುವ 35 ಟನ್ ತ್ಯಾಜ್ಯವನ್ನು ಪರಿಸರ ಪೂರಕ ವಾಗುವಂತೆ ವೈಜ್ಞಾನಿಕವಾಗಿ ಸಂಸ್ಕರಣೆ ಮಾಡಲಾಗುತ್ತಿದ್ದು, ಸಾವಯವ ಗೊಬ್ಬರವನ್ನು ತಯಾರಿಸಿ ಇದೂ ವರೆಗೂ 1800 ಟನ್ ಗೊಬ್ಬರವನ್ನು ಪ್ರತಿ ಟನ್‌ಗೆ 1 ಸಾವಿರ ರೂ.ಗಳಂತೆ ಮಾರಾಟ ಮಾಡಲಾಗುತ್ತಿದೆ ಎನ್ನುತ್ತಾರೆ ಪರಿಸರ ವಿಭಾಗದ ಸಹಾಯಕ ಅಭಿಯಂತರ ಈರಣ್ಣ.
ಬೀದಿ ಬದಿಯಲ್ಲಿ ಕಸ: ಕಸ ವಿಲೇವಾರಿಗಾಗಿ ಮನೆಗಳಿಗೆ ಬಕೆಟ್ ನೀಡಿ, ಹಸಿ ಹಾಗೂ ಒಣ ತ್ಯಾಜ್ಯ ವಿಂಗಡಿಸಿ ನೀಡಬೇಕೆಂದು ನಗರಸಭೆ ಸೂಚನೆ ನೀಡಿದ್ದು, ಇದೇ ಪ್ರಕಾರ ಕಸ ಸಂಗ್ರಹ ಮಾಡಲಾಗುತ್ತಿದೆ. ಹೀಗಾಗಿ, ನಗರದಲ್ಲಿ ಇದ್ದ ಕಸದ ತೊಟ್ಟಿಗಳನ್ನು ತೆರವು ಮಾಡಲಾಗಿದ್ದು, ಬೀದಿಯ ಕಸವನ್ನು ತಕ್ಷಣವೇ ವಿಲೇವಾರಿ ಮಾಡಲಾಗುತ್ತಿದೆ. ಆದರೆ, ಮನೆಗಳಲ್ಲಿ ಹಾಗೂ ಕೆಲವು ವಾಣಿಜ್ಯ ಕಟ್ಟಡಗಳ ಕಸವನ್ನು ಕಸ ಸಂಗ್ರಹಣೆ ವಾಹನಕ್ಕೆ ನೀಡದೇ, ಬೀದಿ ಬದಿ ಅಥವಾ ಖಾಲಿ ನಿವೇಶನದಲ್ಲಿ ಸುರಿಯಲಾಗುತ್ತಿದೆ. ಇಲ್ಲಿ ಕಸ ಹಾಕಬಾರದು ಎಂದು ನಗರಸಭೆ ಎಷ್ಟೇ ಎಚ್ಚರಿಕೆ ನೀಡಿದರೂ, ನಾಗರಿಕರು ಕಸ ಸುರಿಯುತ್ತಿರುವುದು ಮಾತ್ರ ತಪ್ಪಿಲ್ಲ. ಸಮೀಪದ ಮನೆಗಳಲ್ಲಿನ ನಾಗರಿಕರಿಗೆ ತೊಂದರೆಯಾಗುತ್ತಿದೆ. ಜೊತೆಗೆ ಇಲ್ಲಿನ ಕಸ ರಸ್ತೆಗೆ ಹರಡಿ ಜಾನುವಾರು ಸಹ ಕಸ ತಿನ್ನುತ್ತಿರುತ್ತವೆ ಎನ್ನುವುದು ಸ್ಥಳೀಯ ನಾಗರಿಕರ ದೂರು.
ನಗರಸಭೆಯಲ್ಲಿ ಪ್ಲಾಸ್ಟಿಕ್ ಬಳಕೆ ಕಡಿಮೆ ಆಗಿಲ್ಲ
ಪರಿಸರಕ್ಕೆ ಮಾರಕವಾಗಿರುವ ಏಕ ಬಳಕೆಯ ಪ್ಲಾಸ್ಟಿಕ್ ಬಳಕೆ ಹಾಗೂ ಮಾರಾಟವನ್ನು ಜು.1ರಿಂದ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ನಿಷೇಧಿತ ಪ್ಲಾಸ್ಟಿಕ್ ಸಾಮಗ್ರಿ ಬಳಸದಂತೆ ಅಥವಾ ಉಪಯೋಗಿಸದಂತೆ ನಿಯಮವಿದೆ. ಆದರೂ, ಪ್ಲಾಸ್ಟಿಕ್ ಬಳಕೆ ಮಾಡುವುದು ಕಂಡುಬಂದಲ್ಲಿ ಕರ್ನಾಟಕ ಸರ್ಕಾರದ ನಿರ್ದೇಶನದಂತೆ ಅಪರಾಧದ ಸ್ವರೂಪಕ್ಕೆ ಅನುಗುಣವಾಗಿ ಪರಿಸರ (ಸಂರಕ್ಷಣೆ)ಕಾಯ್ದೆ 1986 ಸೆಕ್ಷನ್ 19ರ ಅನ್ವಯ ಪ್ರದತ್ತವಾಗಿರುವ ಅಧಿಕಾರದಂತೆ ಆಯಾ ವ್ಯಾಪ್ತಿಯಲ್ಲಿ ಬರುವ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿ, ಸೆರೆಮನೆ ವಾಸ ಹಾಗೂ ದಂಡವನ್ನು ವಿಧಿಸಬಹುದಾಗಿದೆ. ಆದರೆ, ನಗರಸಭೆಯಲ್ಲಿ ಪ್ಲಾಸ್ಟಿಕ್ ಬಳಕೆ ಕಡಿಮೆಯಾಗಿಲ್ಲ. ನಗರಸಭೆಯಿಂದ ಅಂಗಡಿಗಳ ಮೇಲೆ ದಾಳಿ ನಡೆಸಿ, ನಿಷೇಧಿತ ಪ್ಲಾಸ್ಟಿಕ್ ವಶಪಡಿಸಿಕೊಂಡು, ದಂಡ ವಿಧಿಸಲಾಗುತ್ತಿದೆ. ಆದರೆ, ಈಗ ಸರ್ಕಾರದ ಕಟ್ಟುನಿಟ್ಟಿನ ನಿಷೇಧವಿರುವುದರಿಂದ ನಗರಸಭೆ ಹೆಚ್ಚಿನ ಗಮನ ಹರಿಸಬೇಕಿದೆ.
ನಾಗರಿಕರು ಪ್ರತಿದಿನ ಬೀದಿ ಬದಿಯಲ್ಲಿ ಕಸ ಸುರಿಯದೇ ಟಿಪ್ಪರ್ ವಾಹನಗಳಲ್ಲಿ ಕಸ ಸಂಗ್ರಹಣೆ ಮಾಡುವವರಿಗೆ ಕಸದ ಬಕೆಟ್ ನೀಡಬೇಕೆಂದು ಸೂಚಿಸಲಾಗಿದೆ. ಆದರೂ, ಬೀದಿ ಬದಿಗಳಲ್ಲಿ ಕಸ ಸುರಿಯುತ್ತಿರುವ ಬಗ್ಗೆ ದೂರುಗಳು ಬರುತ್ತಿದ್ದು, ಈ ಬಗ್ಗೆ ನಗರಸಭೆಯಿಂದ ಕ್ರಮ ವಹಿಸಲಾಗುವುದು. ಬೆಂಗಳೂರಿನಲ್ಲಿ ಮಾರ್ಷಲ್‌ಗಳ ಕಾರ್ಯಾಚರಣೆಯಂತೆ ದಂಡ ವಿಧಿಸಲು ಸಿಬ್ಬಂದಿ ನೇಮಕ ಹಾಗೂ ದಂಡದ ರಸೀದಿ ನೀಡಲು ಬಿಲ್ಲಿಂಗ್ ಯಂತ್ರ ಖರೀದಿಸಲಾಗುತ್ತಿದ್ದು, ಕಸ ಹಾಕುವವರಿಗೆ ಸ್ಥಳದಲ್ಲೇ ದಂಡ ವಿಧಿಸಲಾಗುವುದು.
● ಕೆ.ಜಿ. ಶಿವಶಂಕರ್, ನಗರಸಭೆ ಪೌರಾಯುಕ್ತ
● ಡಿ.ಶ್ರೀಕಾಂತ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.