ಡಿಜೆ ಪಾರ್ಟಿ ನಡೆದಿದ್ದ ಜಾಗ ಗೋಶಾಲೆ ಆಯ್ತು!
ಪಾರ್ಟಿ ನಡೆದ ಸ್ಥಳದಲ್ಲಿ ಹುಲ್ಲಿನ ಮೆದೆ, ಹಸು, ಕರು ; ಸ್ಥಳಕ್ಕೆ ಭೇಟಿ ನೀಡಿದ್ದ ಪೊಲೀಸರಿಗೇ ಆಶ್ಚರ್ಯ
Team Udayavani, Sep 21, 2021, 2:46 PM IST
ಆನೇಕಲ್: ತಾಲೂಕಿನ ತಮ್ಮನಾಯಕನಹಳ್ಳಿಯಲ್ಲಿ ನಡೆದಿದ್ದ ಅಕ್ರಮ ಡಿಜೆ ಪಾರ್ಟಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸೋಮವಾರ ಬೆಂಗಳೂರು ಗ್ರಾಮಾಂತರ ಎಸ್ಪಿ ವಂಶಿಕೃಷ್ಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದರಿಂದ ಡಿಜೆ ಪಾರ್ಟಿ ಪ್ರಕರಣದ ತನಿಖೆಗೆ ಮತ್ತಷ್ಟು ವೇಗ ಸಿಕ್ಕಂತಾಗಿದೆ.
ಗೋಶಾಲೆ: ಶನಿವಾರ ರಾತ್ರಿ ಡಿಜೆ ಪಾರ್ಟಿ ಆಯೋಜಿಸಿದ್ದ ರೆಸಾರ್ಟ್‌ನಲ್ಲಿ ಅಂದು ಯುವಕ / ಯುವತಿಯರು ಪಾನಮತ್ತರಾಗಿ ಮೋಜು ಮಸ್ತಿ ಮಾಡಿದ್ದ ಜಾಗ ಸೋಮವಾರ ಗೋಶಾಲೆಯಾಗಿ ಪರಿವರ್ತನೆಯಾಗಿತ್ತು. ಸೋಮವಾರ ಘಟನಾ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೇಟಿ ನೀಡಿದಾಗ ಪಾರ್ಟಿ ನಡೆದ ಸ್ಥಳದಲ್ಲಿ ಹುಲ್ಲಿನ ಮೆದೆ, ಹಸು, ಕರುಗಳನ್ನು ಕಟ್ಟಿ ಹಾಕಿದ್ದನ್ನು ಕಂಡು ಪೊಲೀಸರು ಆಶ್ಚರ್ಯಪಟ್ಟರು. ಪಾರ್ಟಿ ಆಯೋಜಿ ಸಲು ಬಿದಿರು ಪೊದೆಗಳ ನಡುವೆ ಹಾಕಿದ್ದ ಟೆಂಟ್ ಹೌಸ್, ಊಟದ ಟೇಬಲ್ ಕಣ್ಮರೆಯಾಗಿದ್ದವು.
ಬಿದಿರಿನ ಒಳಭಾಗದಲ್ಲಿ ಪಾರ್ಟಿ ನಡೆದಿದ್ದ ಜಾಗ ಸಂಪೂರ್ಣ ಸ್ವತ್ಛವಾಗಿತ್ತು, ಹೀಗಾಗಿ ಪಾರ್ಟಿ ವೇಳೆ ಅಕ್ರಮ ಚಟುವಟಿಕೆ ನಡೆದಿದೆಯಾ ಎಂಬ ಅನುಮಾನ ಪೊಲೀಸರಿಗೂ ಕಾಡುತ್ತಿದೆ. ಈ ರೀತಿ ಪಾರ್ಟಿ ಜಾಗವನ್ನು ಪರಿವರ್ತನೆ ಮಾಡಿರುವುದರ ಹಿಂದೆ ಪ್ರಕರಣದ ತನಿಖೆಯನ್ನು ದಿಕ್ಕು ತಪ್ಪಿಸುವ ಉದ್ದೇಶ ಇದೆ ಎಂಬುದು ಪೊಲೀಸರಿಗೂ ಸ್ಪಷ್ಟವಾಗಿದೆ. ಇನ್ನು ಪಾರ್ಟಿ ಆಯೋಜಿಸಲು ಸಹಕರಿಸಿದ ಗ್ರೀನ್ ರೆಸಾರ್ಟ್‌ನ ಮಾಲಿಕರು, ವ್ಯವಸ್ಥಾಪಕರ ಬಂಧನಕ್ಕೆ ಬಲೆ ಬೀಸಿದ್ದಾರೆ
ಇದನ್ನೂ ಓದಿ:ಸಚಿವ ಮುರುಗೇಶ್ ನಿರಾಣಿ ಟ್ವಿಟ್ಟರ್ ಖಾತೆ ಹ್ಯಾಕ್!
ರೆಸಾರ್ಟ್ ಜಾಗದ ಮಾಲಿಕರ ವಿರುದ್ಧ ಪ್ರಕರಣ:
ಗ್ರೀನ್ ರೆಸಾರ್ಟ್ ಇರುವ ಜಾಗ ಮೂಲತಃ ಸರ್ಕಾರಿ ಗೋಮಾಳ. ದರಖಾಸ್ತು ಮೂಲಕ ಆಲವೇಲಮ್ಮ ಎಂಬವರಿಗೆ ಮಂಜೂರು ಆಗಿತ್ತು. ಸರ್ವೆ ನಂ.23 ಪಿ 101 ರಲ್ಲಿ 4 ಎಕರೆ ಭೂಮಿ ಸರ್ಕಾರದಿಂದ ಮಂಜೂ ರಾಗಿತ್ತು. ಈ ಭೂಮಿ ಹಸಿರು ಪಟ್ಟಿ ವಲಯಕ್ಕೆ ಸೇರುವುದರಿಂದ ಇದು ಕೃಷಿ ಉದ್ದೇಶಕ್ಕೆ ಬಳಸಿಕೊಳ್ಳಬೇಕಿತ್ತು. ಆದರೂ, ಅಲ್ಲಿ ತಾತ್ಕಾಲಿಕ ಶೆಡ್ ಕಟ್ಟಿ ಪಾರ್ಟಿ ನಡೆಸುತ್ತಿರುವುದರ ಬಗ್ಗೆ ಮಾಹಿತಿ ಸಿಕ್ಕಿದ್ದರಿಂದ ಭೂ ಮಾಲಿಕರ ವಿರುದ್ಧ ಪ್ರಕರಣ ದಾಖಲಿಸಲು ಪೊಲೀಸರಿಗೆ ತಹಶೀಲ್ದಾರ್ ದಿನೇಶ್ ಪತ್ರ ಬರೆದಿದ್ದಾರೆ.
ಪಾರ್ಟಿ ಕಿಂಗ್ ಪಿನ್‌ಗೆ ಡ್ರಿಲ್: ಡಿಜೆ ಪಾರ್ಟಿ ಆಯೋಜಿಸಲು ಮುಖ್ಯ ಕಿಂಗ್ ಪಿನ್‌ಗಳಾದ ಅಶಿಶ್ ಗೌಡ ಹಾಗೂ ಅಶುತೋಶ್ ಉಗ್ರ ಎಂಬವವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಮತ್ತಷ್ಟು ವಿಚಾರಣೆಗಾಗಿ ಪೊಲೀಸರು ವಶಕ್ಕೆ ಪಡೆದು ಇಬ್ಬರಿಗೂ ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳಿದ್ದಾರೆ.
ಪಾರ್ಟಿ ಆಯೋಜನೆ ಮಾಡಿದ್ದು ಹೇಗೆ?
ಯುವಕ-ಯುವತಿಯರನ್ನು ಹೇಗೆ ಸಂಪರ್ಕ ಮಾಡಿದ್ದೀರಾ? ಪಾರ್ಟಿಗೆ ಒಬ್ಬರಿಗೆ ಎಷ್ಟು ಶುಲ್ಕ ನಿಗದಿ ಮಾಡಿದ್ರಿ? ಇದೇ ಮೊದಲ ಪಾರ್ಟಿಯಾ? ಈ ಹಿಂದೆ ಬೇರೆ ಎಲ್ಲಾದರೂ ಇದೇ ರೀತಿ ಪಾರ್ಟಿ ಆಯೋಜನೆ ಮಾಡಿದ್ದೀರಾ? ಎಂಬ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದು ದಾಖಲಿಸಿಕೊಳ್ಳುತ್ತಿದ್ದಾರೆ.
ಎಸ್ಪಿ ಭೇಟಿ: ಗ್ರೀನ್ ರೆಸಾರ್ಟ್‌ನಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿದೆ ಎಂಬ ಮಾಹಿತಿ ಸಿಕ್ಕ ಹಿನ್ನಲೆ ನಮ್ಮ ಸಿಬ್ಬಂದಿ ದಾಳಿ ನಡೆಸಿದ್ದಾರೆ. ಇದೇ ವೇಳೆ ವಶಕ್ಕೆ ಪಡೆದಿರುವ 37 ಜನರನ್ನು ಮಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ್ದು ಅವರ ರಕ್ತ, ಮೂತ್ರದ ಮಾದರಿ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ಅದರ ವರದಿಗಾಗಿ ಕಾಯಲಾಗುತ್ತಿದೆ. ವರದಿ ಬಂದ ಬಳಿಕ ಪಾರ್ಟಿಯಲ್ಲಿ ಡ್ರಗ್ಸ್ ಸೇವನೆ ಆಗಿದೆಯೇ ಎಂಬುದು ತಿಳಿದು ಬರಲಿದೆ ಎಂದು ಎಸ್ಪಿ ವಂಶಿಕೃಷ್ಣ ತಿಳಿಸಿದರು.
ಪಾರ್ಟಿಗೆ ಬಂದಿದ್ದವರು ಬಳಸಿದ್ದ 14 ಬೈಕ್, 7 ಕಾರುಗಳನ್ನು ವಶಕ್ಕೆ ಪಡೆ ದ್ದೇವೆ. ಅಕ್ರಮ ಡಿಜೆ ಪಾರ್ಟಿ ಆಯೋಜನೆ ಮಾಡಿದ್ದ ಸ್ಥಳ, ಮಾಲಿಕರ ಬಗ್ಗೆ ಮಾಹಿತಿ ಗಾಗಿ ಆನೇಕಲ್ ತಹಶೀಲ್ದಾರ್‌ರಿಗೆ ಪತ್ರ ಬರೆಯಲಾಗಿದೆ. ಆ ವರದಿ ಬಂದ ಬಳಿಕ ಪಾರ್ಟಿ ಇದ್ದ ಜಾಗದ ಮಾಲಿಕರ ಮೇಲೂ ಪ್ರಕರಣ ದಾಖಲು ಮಾಡಲಾಗುವುದು.
-ವಂಶಿಕೃಷ್ಣ, ಬೆಂಗಳೂರು ಗ್ರಾಮಾಂತರ ಎಸ್ಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ
Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.