ಮಳೆಯಿಂದ ಟೊಮೆಟೋ ಬೆಲೆ ಹೆಚ್ಚಳ
Team Udayavani, Oct 18, 2022, 3:29 PM IST
ದೇವನಹಳ್ಳಿ: ಪ್ರತಿ ವರ್ಷದಂತೆ ಈ ಬಾರಿಯೂ ಜಿಲ್ಲೆಯಲ್ಲಿ ಟೊಮೆಟೋವನ್ನು ಸಾಕಷ್ಟು ಸಂಖ್ಯೆಯ ರೈತರು ಬೆಳೆದಿದ್ದಾರೆ. ಟೊಮೆಟೋ ಗಿಡದಲ್ಲಿ ಹೂವು ಬಿಡುವ ಸಮಯದಲ್ಲಿ ಬಾರಿ ಪ್ರಮಾಣದ ಮಳೆಯಿಂದಾಗಿ ಹೂವು, ಸಣ್ಣ ಕಾಯಿ ನೆಲಕಚ್ಚಿ, ರೈತರು ಸಂಕಷ್ಟ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಬಯಲು ಸೀಮೆಯ ಪ್ರದೇಶದ ಜಿಲ್ಲೆಯಾಗಿರುವುದರಿಂದ ಯಾವುದೇ ನದಿ ಮೂಲಗಳು, ಕಾಲುವೆ ಗಳಿಲ್ಲ. ಮಳೆಯಾಶ್ರೀತವಾಗಿಯೇ ಕೃಷಿ ಮತ್ತು ತೋಟಗಾರಿಕೆ ಬೆಳೆಗಳನ್ನು ಇರುವ ಬೋರ್‌ವೆಲ್ ನೀರಿನಲ್ಲಿಯೇಮಾಡಬೇಕಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಕೆಐಎಡಿಬಿಮತ್ತು ಇತರೆ ಉದ್ದೇಶಗಳಿಗೆ ಭೂ ಸ್ವಾಧೀನ ಪ್ರಕ್ರಿಯೆಗಳು ಆಗುತ್ತಿರುವುದರಿಂದ ಇರುವ ಅಲ್ಪಸ್ವಲ್ಪದ ಜಮೀನಿನಲ್ಲಿಯೇ ತರಕಾರಿ, ಹೂವು, ಹಣ್ಣು ಬೆಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇನ್ನಷ್ಟು ಬೆಲೆ ಏರುವ ಸಾಧ್ಯತೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕಳೆದ ತಿಂಗಳು ಸುರಿದ ಮಳೆಯ ಪರಿಣಾಮ ಟೊಮೆಟೋ ಬೆಳೆಯಲ್ಲಿ ಫಸಲು ಕುಂಠಿತವಾಗಿದ್ದು, ಭಾರೀ ಪ್ರಮಾಣದಲ್ಲಿ ಇಳುವರಿ ಕಡಿಮೆಯಾಗಿದೆ. ಮಾರುಕಟ್ಟೆಯಲ್ಲಿಟೊಮೆಟೋಗೆ ಬೇಡಿಕೆ ಹೆಚ್ಚಾಗುತ್ತಿದ್ದು, ಅದಕ್ಕೆ ತಕ್ಕಂತೆ ಪೂರೈಕೆಯಾಗದ ಕಾರಣ ಪ್ರತಿ ಕೆ.ಜಿ ಟೊಮೆಟೋಗೆ 70ರಿಂದ 80 ರೂ. ಅಸುಪಾಸು ಬೆಲೆ ನಿಗದಿಯಾಗುತ್ತಿದೆ. ಇನ್ನಷ್ಟು ಬೆಲೆ ಏರುವ ಸಾಧ್ಯತೆಯಿದೆ. ಟೊಮೆಟೋ ಬೆಳೆಯನ್ನು ಹೆಚ್ಚಾಗಿ ಬೆಳೆಯುವ ಬಯಲು ಸೀಮೆ ಪ್ರದೇಶಗಳಾದ ಕೋಲಾರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಪ್ರತಿ ವರ್ಷ ನೂರಾರು ಹೆಕ್ಟೇರ್ ಪ್ರದೇಶದಲ್ಲಿ ಟೊಮೆಟೋ ಬೆಳೆದು ದೇಶ, ವಿದೇಶಗಳಿಗೆ ರಫ್ತು ಮಾಡಲಾಗುತ್ತದೆ. ಆದರೆ, ಈ ಮೂರು ಜಿಲ್ಲೆಗಳಲ್ಲಿ ಬೇಡಿಕೆಗೆ ತಕ್ಕಂತೆ ಪೂರೈಕೆ ಇಲ್ಲದ ಕಾರಣ ಟೊಮೊಟೋ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಬೀದಿ ಪಾಲಾಗಿದ್ದ ಟೊಮೊಟೋ: ಈಗಿನ ಪರಿಸ್ಥಿತಿಗೆ ವ್ಯತಿರಿಕ್ತವಾಗಿ ಜುಲೈ, ಆಗಸ್ಟ್ ತಿಂಗಳಲ್ಲಿ ಅಧಿಕ ಇಳುವರಿಯ ಕಾರಣದಿಂದ ಮಾರುಕಟ್ಟೆಯಲ್ಲಿ ನಿರೀಕ್ಷಿತ ಬೆಲೆ ದೊರೆಯದ ಕಾರಣಕ್ಕಾಗಿ ತೋಟಗಳಲ್ಲಿನ ಟೊಮೊಟೋವನ್ನು ಕಿತ್ತು ರಸ್ತೆಗಳಲ್ಲಿ ಸುರಿಯಲಾ ಗಿತ್ತು. ಆದರೆ, ಸೆಪ್ಟೆಂಬರ್, ಅಕ್ಟೋಬರ್ ತಿಂಗಳಲ್ಲಿಉತ್ತಮ ಬೆಲೆ ಸಿಗುತ್ತಿದ್ದರೂ, ಅದಕ್ಕೆ ತಕ್ಕಂತೆ ಫಸಲು ಇಲ್ಲ. ಕೊಯ್ಲಿಗೆ ಬರುವಂತ ಬೆಳೆಯೂ ಇನ್ನೂ ತೋಟಗಳಲ್ಲಿದ್ದು, ಅಗೊಮ್ಮೆ ಹೆಚ್ಚು ಇಳುವರಿಯಾದರೇ ಪುನಃ ಬೆಲೆ ಕುಸಿತವಾಗಬಹುದು. ಇದರಿಂದಗಿಡದಲ್ಲಿ ನಿರೀಕ್ಷಿತ ಪ್ರಮಾಣದ ಟೊಮೆಟೋ ಬಾರದಕಾರಣ, ಬೆಳೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿ, ಪ್ರತಿ ಹೆಕ್ಟೇರ್‌ಗೆ ನಾಲ್ಕು ಟನ್ ಸಿಗುವ ಸ್ಥಳದಲ್ಲಿ ಕೇವಲ 1ರಿಂದ 1.5 ಟನ್‌ನಷ್ಟೇ ಬೆಳೆ ಸಿಗುತ್ತಿದೆ.
ಚಿಲ್ಲರೆ ಅಂಗಡಿಗಳಲ್ಲಿ ದುಬಾರಿ: ಪಟ್ಟಣ, ಸಂತೆಯ ಚಿಲ್ಲರೆ ಅಂಗಡಿಗಳಲ್ಲಿ ಬೆಲೆ ಹೆಚ್ಚಾಗಿದ್ದು, ಅಲ್ಪ ಪ್ರಮಾಣದ ಟೊಮೆಟೋಗೆ ಹೆಚ್ಚಿನ ಬೆಲೆ ತೆತ್ತು ಖರೀದಿ ಮಾಡುವ ಪರಿಸ್ಥಿತಿಗೆ ಗ್ರಾಹಕರು ಹೊಂದಿಕೊಳ್ಳುಬೇಕಿದೆ. ಬಿಸಾಡುವಂತಿರುವ ಟೊಮೆಟೋಗಳನ್ನು ಕ್ರೇಟ್‌ಗಳಲ್ಲಿಟ್ಟು, ಮಾರಾಟ ಮಾಡುತ್ತಿರುವ ದೃಶ್ಯಗಳು ಕಂಡು ಬರುತ್ತಿದೆ.
ನೆರೆ ರಾಜ್ಯದಿಂದ ಆಮದಾಗುತ್ತಿಲ್ಲ: ರಾಜ್ಯಕ್ಕೆ ನೆರೆಯ ಮಹಾರಾಷ್ಟ್ರದ ನಾಸಿಕ್ ಸೇರಿದಂತೆ ಇತರೇ ಭಾಗದಿಂದ ಟೊಮೆಟೋ ಪೂರೈಕೆಯಾಗುತ್ತಿತ್ತು. ಆ ಭಾಗದಲ್ಲಿ ಸಹ ಹೆಚ್ಚು ಮಳೆಯಾದ ಹಿನ್ನಲೆಯಲ್ಲಿ ರಾಜ್ಯಕ್ಕೂ ಟೊಮೆಟೋ ಪೂರೈಕೆ ಕಡಿಮೆಯಾಗಿದೆ.ಇದರಿಂದ ಜಿಲ್ಲೆಯ ಟೊಮೆಟೋ ಬೆಳೆಗಾರರ ಮೇಲೆ ವ್ಯಾಪಾರಸ್ಥರು ಕಣ್ಣಿಟ್ಟಿದ್ದಾರೆ. ಸ್ಥಳೀಯ ರೈತರು ಹತ್ತಿರ ಮಾರುಕಟ್ಟೆಯಲ್ಲಿ ಟೊಮೊಟೋ ಪೂರೈಕೆ ಮಾಡುವುದರಿಂದ ಬಂದ ವೇಗದಲ್ಲಿ ಖಾಲಿಯಾಗುತ್ತಿದೆ.
ಮಳೆ ಪರಿಣಾಮ ಇಳುವರಿ ಕಡಿಮೆಯಾಗಿದೆ. ನಿರೀಕ್ಷಿತ ಪ್ರಮಾಣದಲ್ಲಿ ಟೊಮೆಟೋ ಮಾರುಕಟ್ಟೆಯಲ್ಲಿ ಸಿಗುತ್ತಿಲ್ಲ. ಹೊಸ ಫಸಲು ಮಾರುಕಟ್ಟೆಗೆಬರುತ್ತಿದ್ದಂತೆ ಬೆಲೆ ಇಳಿಮುಖವಾಗಬಹುದು.– ಚಂದ್ರಶೇಖರ್, ರೈತ
ಮಳೆಯಿಂದ ಟೊಮೆಟೋ ಬೆಳೆ ಮೇಲೆಯಾವುದೇ ಪರಿಣಾಮ ಬೀರಿಲ್ಲ. ಬೆಲೆ ಏರಿಕೆ, ಇಳಿಕೆ ಸಹಜ ಪ್ರಕ್ರಿಯೆಯಾಗಿದೆ. ಟೊಮೆಟೋ ಬೆಳೆಯುವ ರೈತರು ಮಲ್ಚಿಂಗ್, ಡ್ರಿಪ್ ಮೂಲಕ ಬೆಳೆ ಬೆಳೆಯುತ್ತಿರುವುದರಿಂದ ಮಳೆ ಹೊಡೆತ ಟೊಮೆಟೋ ಬೆಳೆ ಮೇಲೆ ಪರಿಣಾಮ ಬೀರಿಲ್ಲ. – ಗುಣವಂತ,ಉಪನಿರ್ದೇಶಕ, ಜಿಲ್ಲಾ ತೋಟಗಾರಿಕಾ ಇಲಾಖೆ
– ಎಸ್.ಮಹೇಶ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.