ಟೊಮೆಟೋ ದರ ಕುಸಿತ: ರೈತರು ಕಂಗಾಲು
Team Udayavani, Mar 26, 2022, 2:54 PM IST
ದೇವನಹಳ್ಳಿ: ಟೊಮೆಟೋ ವಾಣಿಜ್ಯ ಬೆಳೆಯಾಗಿ ಬೆಳೆಯುತ್ತಿದ್ದು, ಮಾರುಕಟ್ಟೆಯಲ್ಲಿ ಬೆಲೆ ಏರಿಳಿತ ಇದೀಗ ಜಿಲ್ಲೆಯ ಟೊಮೆಟೋ ಬೆಳೆಗಾರರನ್ನು ತೀವ್ರ ಸಂಕಷ್ಟಕ್ಕೆ ಗುರಿಯಾಗುವಂತೆ ಮಾಡಿದೆ.
ಸದ್ಯ ಬೇಸಿಗೆ ಪ್ರಾರಂಭಗೊಂಡಿರುವುದರಿಂದ ಜಿಲ್ಲೆಯಲ್ಲಿ ಹುಣಸೆ ಸುಗ್ಗಿ ಪ್ರಾರಂಭಗೊಂಡ ಹಿನ್ನೆಲೆ, ಎರಡು ವಾರದಿಂದ ಟೊಮೆಟೋ ದರ ಕುಸಿಯುತ್ತಲೇ ಇದೆ. ಟೊಮೆಟೋ ಬೆಳೆಗಾರರು ಬೀದಿಗೆ ಬರುವಂತಾಗಿದೆ. ಕನಿಷ್ಠ ತೋಟದಲ್ಲಿ ಹಾಕಿದ್ದ ಬಂಡವಾಳ ಹಣ್ಣು ಕಿತ್ತು ಮಾರುಕಟ್ಟೆಗೆ ಹಾಕುವ ವೆಚ್ಚವೂ ಬರುತ್ತಿಲ್ಲ ಎಂದು ರೈತರು ತಮ್ಮ ಅಳಲನ್ನು ತೋಡಿಕೊಂಡರು.
ಯುಗಾದಿ ಹಬ್ಬಕ್ಕೆ ಕೆಲವೇ ದಿನ ಬಾಕಿಯಿದ್ದು, ಉತ್ತಮ ಬೆಲೆ ನಿರೀಕ್ಷೆಯಲ್ಲಿದ್ದ ರೈತರಿಗೆ ಟೊಮೆಟೋ ದರ ಕೈಕೊಟ್ಟಿದೆ. ತೋಟಕ್ಕೆ ಸಾಲ ಮಾಡಿ ಹಾಕಿದ ಬಂಡವಾಳ ಕೈ ಸೇರುವುದು ಅನುಮಾನವಾಗಿದೆ. ಜೊತೆಗೆ ಕಳೆದ ವರ್ಷ ಅಕ್ಟೋಬರ್, ನವೆಂಬರ್ ತಿಂಗಳಲ್ಲಿ ಬಿದ್ದಿದ್ದ ಬಾರಿ ವರ್ಷಧಾರೆ ಪರಿಣಾಮ ಬಹುತೇಕ ರೈತರ ಪಂಪ್ ಸೆಟ್ ಕಾರ್ಯನಿರ್ವಹಿಸುತ್ತಿದ್ದು, ಕೊಳವೆಬಾವಿಗಳಲ್ಲಿ ನೀರು ನಿರೀಕ್ಷೆಗೂ ಮೀರಿ ಬರುತ್ತಿರುವು ದರಿಂದ ಬೇಸಿಗೆ ಲೆಕ್ಕಿಸದೆ ರೈತರು ಟೊಮೆಟೋ ಬೆಳೆದಿದ್ದರು. ಇದೀಗ ಬೆಲೆ ಕುಸಿತದಿಂದ ರೈತರು ಕಂಗಾಲಾಗುವಂತೆ ಮಾಡಿದೆ.
ಸಸಿ ತಂದು ನಾಟಿ: ಪ್ರತಿ ಸಸಿಗೆ ಒಂದೂವರೆ ರೂ.ನಂತೆ ಸಸಿಗಳನ್ನು ತಂದು ನಾಟಿ ಮಾಡಲಾಗುತ್ತಿದೆ. ಎರಡು ತಿಂಗಳ ಹಿಂದೆ ಪ್ರತಿ ಬಾಕ್ಸ್ಗೆ 250 ರಿಂದ 350 ರೂ. ಇತ್ತು. ಅಷ್ಟು ದರ ಸಿಕ್ಕಿದ್ದರೆ ಲಕ್ಷಗಟ್ಟಲೆ ಹಣ ಕೈಸೇರುತ್ತಿತ್ತು. ನಮ್ಮ ಜಮೀನಿನಲ್ಲಿ ಹಣ್ಣಿಗೆ ಬೇರೆಯವರ ದರಕ್ಕಿಂತ 50 ರೂ. ಹೆಚ್ಚು ನೀಡುತ್ತಿದ್ದರು. ಜಮೀನಿನಲ್ಲಿ ಕೊಳೆಯುತ್ತಿರುವ ಹಣ್ಣು ನೋಡಿದರೆ ಕಣ್ಣು ತಿವಿಚುವಂತೆ ಆಗುತ್ತಿದೆ ಎಂದು ರೈತರು ನೊಂದು ಹೇಳುತ್ತಿದ್ದಾರೆ.
ಅನ್ನದಾತರಲ್ಲಿ ಆತಂಕ: ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಟೊಮೆಟೋ ದಿಢೀರನೆ ಗಗನಕ್ಕೇರಿತ್ತು. 800ರಿಂದ 1000 ರೂ. ವರೆಗೆ ಮಾರಾಟವಾಗುತ್ತಿತ್ತು. ಒಂದು ಕೆ.ಜಿ.ಗೆ 40ರಿಂದ 50ರೂ. ತನಕ ಟೊಮೆಟೋ ವ್ಯಾಪಾರ ಆಗುತ್ತಿತ್ತು. ಆಗ ಅತಿವೃಷ್ಟಿ ಮಳೆಯಿಂದ ರೈತರು ಕಂಗಾಲಾಗಿದ್ದರು. ಇದೀಗ ಟೊಮೆಟೋ ಬೆಲೆ ಕುಸಿದಿದ್ದರಿಂದ ಅನ್ನದಾತರಲ್ಲಿ ಆತಂಕ ಮನೆ ಮಾಡಿದೆ.
ನಿರೀಕ್ಷೆ ಸುಳ್ಳಾಗಿದೆ : ಪಟ್ಟಣದ ಕೋಡಿಮಂಚೇನಹಳ್ಳಿ ಶಿವಾನಂದಪ್ಪ ಒಂದೂವರೆ ಎಕರೆಯಲ್ಲಿ ಟೊಮೆಟೋ ಬೆಳೆ ಬೆಳೆಯುತ್ತಿದ್ದು, ಮೂರೂವರೆ ಲಕ್ಷ ರೂ. ಖರ್ಚು ಮಾಡಿ ಸಸಿ ನಾಟಿ ಮಾಡಿದ್ದಾರೆ. ಉತ್ತಮ ಬೆಲೆ ಬರುವ ನಿರೀಕ್ಷೆ ಹುಸಿಯಾಗಿದೆ. ಕನಿಷ್ಠ 10 ಲಕ್ಷ ರೂ.ವರೆಗೆ ಲಾಭ ಬರುತ್ತದೆ ಎಂಬ ನಿರೀಕ್ಷೆ ಸುಳ್ಳಾಗಿದೆ. ಒಂದು ಬಾಕ್ಸ್ 50 ರಿಂದ 60 ರೂ.ಗೆ ನೀಡಲಾಗುತ್ತಿದೆ. ಕೂಲಿಗಾರರಿಗೆ ಟೊಮೆಟೋ ಬಿಡಿಸಿದ ಹಣ ಕೊಡಲು ಆಗುತ್ತಿಲ್ಲ. ನಾಲ್ಕು ದಿನಕ್ಕೊಮ್ಮೆ ಎರಡು ಮೂರು ಟನ್ ಟೊಮೆಟೋ ಬಿಡಿಸಲಾಗುತ್ತಿದೆ ಎಂದು ಶಿವಾನಂದಪ್ಪ ಹೇಳುತ್ತಾರೆ.
ಅಂತರ್ಜಲ ಕುಸಿತ : ಗ್ರಾಮಾಂತರ ಜಿಲ್ಲೆ ಬೆಂಗಳೂರಿಗೆ ಸಮೀಪದಲ್ಲಿ ಇರುವುದರಿಂದ ಅಭಿವೃದ್ಧಿ ಕಾರ್ಯ ವೇಗ ಹೆಚ್ಚುತ್ತಿದೆ. ನಾಲ್ಕು ತಾಲೂಕು ಬೆಂಗಳೂರಿಗೆ ಸಮೀಪ ಇರುವುದರಿಂದ ಇರುವ ಅಲ್ಪಸ್ವಲ್ಪದ ಜಮೀನುಗಳಲ್ಲಿಯೇ ಹೂವು, ತರಕಾರಿ, ಹಣ್ಣು ಇತರೆ ಚಟುವಟಿಕೆ ಮಾಡಿ ಬೆಂಗಳೂರಿಗೆ ಪೂರೈಕೆ ಮಾಡುತ್ತಿದೆ. ಒಂದು ಕಡೆ ಶಾಶ್ವತ ನೀರಾವರಿ ಮೂಲಗಳಿಲ್ಲ. ಕೊರೆಸಿರುವ ಕೊಳವೆಬಾವಿಗಳಲ್ಲಿರುವ ನೀರಿನಲ್ಲಿಯೇ ಬೆಳೆ ಬೆಳೆಯುತ್ತಿದ್ದಾರೆ.ದಿನೇ ದಿನೆ ಅಂತರ್ಜಲ ಕುಸಿತದಿಂದ ರೈತರು ಕಂಗಾಲಾಗುವಂತೆ ಮಾಡಿದೆ.
ಟೊಮೆಟೋ ಬೆಳೆಯನ್ನು ಸಾಲ ಮಾಡಿ ಬೆಳೆದಿದ್ದೇವೆ. ಕೇವಲ ಒಂದು ಬಾಕ್ಸ್ ಟೊಮೆಟೋಗೆ 50ರಿಂದ 60 ರೂ. ಗೆ ಮಾರಾಟವಾದರೆ ಹಾಕಿದ ಬಂಡವಾಳ ಬರದೆ ಕೈಸುಟ್ಟುಕೊಂಡಿದ್ದೇವೆ. ಉತ್ತಮ ಬೆಲೆ ಸಿಗದೆ ಕಂಗಾಲಾಗಿದ್ದು, ಕೈಸಾಲ, ಬ್ಯಾಂಕ್ ಸಾಲಗಳ ಹೊರೆ ಹೆಚ್ಚಾಗುವಂತೆ ಮಾಡಿದೆ. – ನಾರಾಯಣಸ್ವಾಮಿ, ರೈತ
ಟೊಮೆಟೋ ಬೆಲೆ ಕುಸಿತ ಕಂಡಿದೆ. ರೈತರು ಉತ್ತಮ ವಾಗಿ ಟೊಮೆಟೋ ಬೆಳೆ ಬೆಳೆದಿ ದ್ದಾರೆ. ಜಿಲ್ಲೆಯಲ್ಲಿ 1,843 ಹೆಕ್ಟೇರ್ ಟೊಮೆಟೋ ಪ್ರದೇಶವಿದೆ. ರೈತರು ತೋಟಗಾರಿಕಾ ಇಲಾಖೆ ಅಧಿಕಾರಿಗಳ ಮಾಹಿತಿ ಪಡೆದು ಬೆಳೆಗಳನ್ನು ಬೆಳೆಯುತ್ತಿದ್ದಾರೆ. – ಗುಣವಂತ, ಜಿಲ್ಲಾ ತೋಟಗಾರಿಕಾ ಇಲಾಖೆ ಪ್ರಭಾರ ಉಪನಿರ್ದೇಶಕ
– ಎಸ್.ಮಹೇಶ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.