ಭೋವಿ ಸಂಘಕ್ಕೆ ಎರಡು ಎಕರೆ ನೀಡಲು ಕ್ರಮ
Team Udayavani, Jan 18, 2017, 3:03 PM IST
ದೊಡ್ಡಬಳ್ಳಾಪುರ: ತಾಲೂಕು ಭೋವಿ ಸಂಘಕ್ಕೆ ಎರಡು ಎಕರೆ ಭೂಮಿ ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸುವಲ್ಲಿ ಸಂಬಂಧಿತ ಅಧಿಕಾರಿಗಳು ಮತ್ತು ಜನಾಂಗದ ಮುಖಂಡರೊಡನೆ ಸಭೆ ನಡೆಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಶಾಸಕ ಟಿ.ವೆಂಕಟರಮಣಯ್ಯ ತಿಳಿಸಿದರು.
ತಾಲೂಕು ಭೋವಿ ಜನಾಂಗ ಸಂಘದ ವತಿಯಿಂದ ನಗರದ ಒಕ್ಕಲಿಗರ ಕಲ್ಯಾಣ ಮಂದಿರದಲ್ಲಿ ನಡೆದ ಸಿದ್ದರಾಮೇಶ್ವರರ 845ನೇ ಜನ್ಮ ದಿನಾಚರಣೆ ಮತ್ತು ಭೋವಿ ಜನಾಂಗದ ಸಮಾವೇಶ, ಡಾ.ಬಿ.ಆರ್.ಅಂಬೇಡ್ಕರ್ 125ನೇ ಜನ್ಮ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಾಲೂಕಿನ ಭೋವಿ ಜನಾಂಗದ ಯಾವುದೇ ಬಂಡೆ ಕಾರ್ಯಗಳಿಗೆ ತೊಂದರೆಯಾಗದಂತೆ ನೋಡಿಕೊಂಡಿದ್ದೇನೆ. ಶೇಕಡ 80ರಷ್ಟು ಎಸ್ಸಿ-ಎಸ್ಟಿ ಕಾಲೋನಿಗಳಿಗೆ ಸಿಮೆಂಟ್ ರಸ್ತೆ ಸೇರಿದಂತೆ ಮೂಲಭೂತ ವ್ಯವಸ್ಥೆ ಸುಸಜ್ಜಿತವಾಗಿ ತಲುಪಿವೆ. ಅಲ್ಲದೆ 16ಸಾವಿರ ಮನೆಗಳನ್ನು ವಿಶೇಷ ಎಸ್ಸಿ-ಎಸ್ಟಿ ವಿಶೇಷ ವಸತಿ ಯೋಜನೆಯಡಿ ನೀಡಿದ್ದೇನೆ. ಹೀಗಾಗಿ ನಿಮ್ಮ ಮನವಿಯಂತೆ ಸಭೆಯ ನಂತರ ಈಡೇರಿಕೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.
ರಾಷ್ಟ್ರೀಯ ಭೋವಿ ವಡ್ಡರ್ ಅಧ್ಯಕ್ಷ ಶಂಕರ್‌ಲಾಲ್ ಮಾತನಾಡಿ, ರಾಷ್ಟ್ರದಲ್ಲಿ 7ಕೋಟಿ ಭೋವಿ ಜನಸಂಖ್ಯೆ ಇದೆ. ಈ ನಿಟ್ಟಿನಲ್ಲಿ ರಾಷ್ಟ್ರ ರಾಜಕೀಯ ಅಧಿಕಾರದಲ್ಲಿ ಶೇ.30 ಕ್ಕಿಂತ ಹೆಚ್ಚು ಪಾಲು ನಮಗೆ ಸಿಗಬೇಕಿದೆ. ಈ ಹಂತದಲ್ಲಿ ಅಂಬೇಡ್ಕರ್ ಅವರ ಸಾಂವಿಧಾನಿಕ ಹಕ್ಕುಗಳನ್ನು ಪಡೆದು ಕೊಳ್ಳುವಲ್ಲಿ ಜಾತ್ಯತೀತವಾಗಿ ಸಂಘಟಿತರಾಗಿ.
ಈ ಹಂತದಲ್ಲಿ ರಾಷ್ಟ್ರದಲ್ಲಿ ನಮ್ಮ ಶಕ್ತಿ ಪ್ರತಿಪಾದನೆಗೆ ದೆಹಲಿಯ ರಾಮ್‌ಲೀಲ ಮೈದಾನದಲ್ಲಿ 5ಲಕ್ಷ ಸಮುದಾಯವನ್ನು ಸೇರಿಸಿ ಭೋವಿಓಡ್ ಬೃಹತ್ ಸಮಾವೇಶ ನಡೆಸಲಿದ್ದು, ಪ್ರಧಾನಿ ಮೋದಿಗೆ ನಮ್ಮ ಶಕ್ತಿ ತಿಳಿಸಲಿದ್ದೇವೆ ಎಂದರು. ಭೋವಿ ಗುರುಪೀಠದ ಇಮ್ಮಡಿ ಸಿದ್ದರಾ ಮೇಶ್ವರ ಸ್ವಾಮೀಜಿ ಮಾತನಾಡಿ, ಭೋವಿ ಜನಾಂಗ ಶಿಕ್ಷಣವನ್ನು ಪಡೆದುಕೊಳ್ಳುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು. ಸಂಘಟಿತರಾಗುವ ಮೂಲಕ ಸಮಾಜದ ಏಳಿಗೆಗಾಗಿ ಶ್ರಮಿಸುವಂತೆ ಕರೆ ನೀಡಿದರು.
ತಾಲೂಕು ಭೋವಿ ಜನಾಂಗ ಸಂಘದ ಅಧ್ಯಕ್ಷ ಓಬದೇನಹಳ್ಳಿ ಮುನಿಯಪ್ಪ ಮಾತನಾಡಿ, ಸುಪ್ರೀಂ ಕೋರ್ಟ್ ಆದೇಶದಂತೆ ಭೋವಿ, ವಡ್ಡ ಮೊದಲಾದ ಹೆಸರಿನ ಎಲ್ಲಾ ಹೆಸರುಗಳು ಭೋವಿ ಜನಾಂಗಕ್ಕೆ ಸಂಬಂಧಿಸಿದವಾಗಿವೆ. ಒಡ್ಡು ಕಟ್ಟಲು ಜನಾಂಗ ಹೆಚ್ಚಾಗಿ ತೊಡಗಿಕೊಳ್ಳುತ್ತಿದ್ದರಿಂದ ವಡ್ಡರು ಎನ್ನುವ ಹೆಸರು ಬಂದಿದೆ. ವಡ್ಡ ಎನ್ನುವ ಪದ ಅಳಿಸಿ ಭೋವಿ ಎನ್ನುವ ಪದ ಬಳಸಬೇಕಿದೆ. ತೀರಾ ಹಿಂದುಳಿದಿದ್ದ ಜನಾಂಗ ಇತ್ತೀಚೆಗೆ ಶಿಕ್ಷಣ ಪಡೆಯುವ ಮೂಲಕ ಮುಖ್ಯವಾಹಿನಿಗೆ ಬರುತ್ತಿರುವುದು ಸಂತಸದ ಸಂಗತಿಯಾಗಿದ್ದು, ಎಲ್ಲಾ ಕ್ಷೇತ್ರಗಳಲ್ಲಿಯೂ ಭೋವಿ ಜನಾಂಗ ಮುನ್ನಡೆಯಬೇಕು ಎಂದರು.
ಹಿರಿಯ ನಾಗರಿಕರಿಗೆ ಸನ್ಮಾನ: ಸಮಾರಂಭದಲ್ಲಿ ಹಿರಿಯ ನಾಗರಿಕರಿಗೆ ಕಂಬಳಿ ವಿತರಣೆ, ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ನಡೆಯಿತು. ಸಮಾಜದ ಹಿರಿಯ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳನ್ನು ಸನ್ಮಾನಿಸ ಲಾಯಿತು.
ಮೆರವಣಿಗೆ: ಸಮಾರಂಭಕ್ಕೂ ಮುನ್ನ ನಗರದ ಸಿದ್ದಲಿಂಗಯ್ಯ ವೃತ್ತದ ಬಳಿಯಿಂದ ವಿವಿಧ ಜಾನಪದ ಕಲಾತಂಡಗಳೊಡನೆ ಸಿದ್ದರಾಮೇಶ್ವರ ಭಾವಚಿತ್ರ ಹಾಗೂ ಸ್ವಾಮೀಜಿ ಅವರ ಮೆರವಣಿಗೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಅನಂತಕುಮಾರಿ ಚಾಲನೆ ನೀಡಿದರು.
ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ಅನಂತಕುಮಾರಿ, ಮಾಜಿ ಶಾಸಕರಾದ ಜೆ.ನರಸಿಂಹಸ್ವಾಮಿ, ಎಂ.ವೆಂಕಟ ಸ್ವಾಮಿ, ನಗರ ಭೋವಿ ಜನಾಂಗದ ಅಧ್ಯಕ್ಷ ಟಿ.ಬಸವರಾಜು, ಕಿಮ್ಸ್ ಅಧ್ಯಕ್ಷ ಬಿ.ಮುನೇಗೌಡ, ಬಿಎಸ್‌ಪಿ ರಾಜ್ಯ ಸಂಚಾಲಕ ಮಾರಸಂದ್ರ ಮುನಿಯಪ್ಪ, ಶ್ರೀನಿವಾಸಮೂರ್ತಿ, ತಾ.ಪಂ ಅಧ್ಯಕ್ಷ ಶ್ರೀವತ್ಸಾ, ನಗರಸಭೆ ಉಪಾಧ್ಯಕ್ಷೆ ಜಯಲಕ್ಷ್ಮೀ, ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲೇಶ್, ಟಿಎಪಿಎಂಸಿ ಅಧ್ಯಕ್ಷ ಗೋವಿಂದರಾಜು, ಹ,ರಾಮಕೃಷ್ಣ, ಭೋವಿ ಜನಾಂಗದ ಮುಖಂಡರಾದ ಅರುಣ್ ಸಾಗರ್, ಶಿವರುದ್ರ ಸ್ವಾಮಿ, ಸತ್ಯನಾರಾಯಣ್, ಲಾಲ್ ಚಂದ್ ಮತ್ತಿತರರು ಭಾಗವಹಿಸಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.