ಮತದಾರರೇ ಮೊಯ್ಲಿಗೆ ಚಳ್ಳೆ ಹಣ್ಣು ತಿನ್ನಿಸಿ: ಬಚ್ಚೇಗೌಡ
Team Udayavani, Apr 2, 2019, 5:00 AM IST
ನೆಲಮಂಗಲ: ಕಳೆದ 10 ವರ್ಷಗಳಿಂದ ಚಿಕ್ಕಬಳ್ಳಾಪುರ ಕ್ಷೇತ್ರದ ಜನತೆಗೆ ಚಳ್ಳೆಹಣ್ಣು ತಿನ್ನಿಸಿಕೊಂಡು ಬರುತ್ತಿರುವ ವೀರಪ್ಪಮೊಯ್ಲಿಗೆ ಈ ಸಲ ಚಳ್ಳೆಹಣ್ಣು ತಿನ್ನಿಸಿ ಸ್ವಕ್ಷೇತ್ರ ಮಂಗಳೂರಿನ ಕಡೆಗೆ ಕಳುಹಿಸಿಕೊಡಬೇಕು ಎಂದು ಚಿಕ್ಕಬಳ್ಳಾಪುರ ಲೋಕಸಭಾಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡ ತಿಳಿಸಿದರು.
ತಾಲೂಕಿನ ತ್ಯಾಮಗೊಂಡ್ಲು ಪಟ್ಟಣದ ದೇವರಾಜ ಮೊದಲಿಯಾರ್ ವೃತ್ತದಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಚುನಾವಣೆ ವೇಳೆ ಮಾತ್ರ ಎತ್ತಿನಹೊಳೆ ಯೋಜನೆ ನೆನಪಿಸಿಕೊಂಡು ಮತದಾರರ ಮೂಗಿಗೆ ತುಪ್ಪ ಸವರಿ 10 ವರ್ಷಗಳಿಂದಲೂ ಅಧಿಕಾರ ಅನುಭವಿಸಿದ ಮೊಯ್ಲಿಗೆ ಈ ಬಾರಿ ಕ್ಷೇತ್ರ ಕಬ್ಬಿಣದ ಕಡಲೆಯಾಗಲಿದೆ.
5 ವರ್ಷಗಳಿಂದ ಕೇಂದ್ರದಲ್ಲಿ ಮೋದಿ ಸರ್ಕಾರ ಮಾಡಿರುವ ಅಭಿವೃದ್ಧಿ ಕೆಲಸ, ಶತ್ರುದೇಶಗಳ ಮೇಲಿನ ಸರ್ಜಿಕಲ್ ಸ್ಟ್ರೈಕ್‌ಗಳು ಯುವಜನತೆ ಮೆಚ್ಚುಗೆ ಗಳಿಸಿವೆ ಎಂದರು. ಬಡಜನರ ಪಾಲಿಗೆ ಜನೌಷಧಿ ಮಳಿಗೆಗಳ ಪ್ರಾರಂಭ, ಆಯುಷ್ಮಾನ್ ಭಾರತ ವೃದ್ಧಾಪ್ಯ ವೇತನ, ಕಿಸಾನ್ ಸಮ್ಮಾನ್, ಜನ್‌ಧನ್ ಯೋಜನೆಗಳು ಕೈಹಿಡಿದಿದೆ.
ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಹಳ್ಳಿಹಳ್ಳಿಗೂ ಆಸ್ಪತ್ರೆ, ಪಿಯು ಮತ್ತು ಪದವಿ ಕಾಲೇಜುಗಳನ್ನು ಪ್ರಾರಂಭಮಾಡಿ ಅನುದಾನ ಒದಗಿಸಲಾಗಿತ್ತು, ಅರ್ಹತೆ ಇದ್ದರೂ ತ್ಯಾಮಗೊಂಡ್ಲು ಗ್ರಾಪಂನ್ನು ಪಟ್ಟಣ ಪಂಚಾಯ್ತಿಗೆ ಶಿಫಾರಸ್ಸು ಮಾಡಿಲ್ಲ. ತಾನು ಚುನಾಯಿತನಾದರೆ ಮೊದಲ ಕೆಲಸವಾಗಿ ಪಪಂ ಘೋಷಣೆ ಮಾಡಿಸುತ್ತೇನೆ ಎಂದು ಆಶ್ವಾಸನೆ ನೀಡಿದರು.
ಈ ಚುನಾವಣೆ ನಮ್ಮ ಪಕ್ಷದ ಪಾಂಡವರ ಮತ್ತು ನೂರಾರು ಜನ ನಾಯಕರು ಸೇರಿ ಮಾಡಿಕೊಂಡಿರುವ ಕೌರವ ಸೇನೆಯ ಮಹಾಘಟಬಂಧನ್ ವಿರುದ್ಧ ಹೋರಾಟ. ತಾವೆಲ್ಲರೂ ಸರಿಯಾದ ಆಯ್ಕೆ ಮಾಡಿಕೊಂಡು ಬಿಜೆಪಿಗೆ ಮತನೀಡಿ ಮೋದಿ ಅವರ ಶಕ್ತಿ ಹೆಚ್ಚಿಸಬೇಕೆಂದರು.
ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯಕ್ಷ ಬಿ.ಹೊಂಬಯ್ಯ, ಕಳೆದ 2 ಚುನಾವಣೆಗಳಿಂದಲೂ ಬಚ್ಚೇಗೌಡರು ಕಡಿಮೆ ಅಂತರದಲ್ಲಿ ಸೋಲು ಅನುಭವಿಸಿದ್ದಾರೆ. ಅನುಕಂಪದ ಆಧಾರದಲ್ಲಿ ಈ ಬಾರಿ ಅವರಿಗೆ ಮತ ನೀಡಿ ಹೆಚ್ಚಿನ ಅಂತರದಲ್ಲಿ ಬಚ್ಚೇಗೌಡರನ್ನು ಗೆಲ್ಲಿಸಿದರೆ ಕೇಂದ್ರದಲ್ಲಿ ಮಂತ್ರಿಯಾಗುವ ಎಲ್ಲಾ ಅವಕಾಶಗಳಿವೆ ಎಂದು ಮನವಿ ಮಾಡಿಕೊಂಡರು.
ಪ್ರಚಾರ ಸಭೆಗೂ ಮುನ್ನ ಪಟ್ಟಣದ ಬಯಲು ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಲಾಯಿತು. ಸಂಚಾಲಕ ಸಚ್ಚಿದಾನಂದಮೂರ್ತಿ, ಮಾಜಿ ಶಾಸಕ ಎಂ.ವಿ.ನಾಗರಾಜ್, ಬಿ.ಎಂ.ನಾರಾಯಣಸ್ವಾಮಿ, ವಿಧಾನ ಪರಿಷತ್ ಸದಸ್ಯ ಅ. ದೇವೇಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣಪ್ಪ,
ಬಿಜೆಪಿ ತಾಲೂಕು ಅಧ್ಯಕ್ಷ ಲೋಕೇಶ್, ಹೋಬಳಿ ಅಧ್ಯಕ್ಷ ಪುಟ್ಟರಾಜು, ಗ್ರಾಪಂ ಸದಸ್ಯ ಸುಂದರರಾಜು, ಜಗದೀಶ್ ಪ್ರಸಾದ್, ಮಂಜುಳಾ, ರಾಜ್ಯ ಯುವ ಮೋರ್ಚಾದ ಸತೀಶ್, ಕೊಡಿಗೇಹಳ್ಳಿ ಮಂಜುನಾಥ್, ತಾಲೂಕು ಪ್ರಧಾನ ಕಾರ್ಯದರ್ಶಿ ಎಂ.ಎಂ.ಗೌಡ, ಗೊರೂರು ಶ್ರೀನಿವಾಸ್, ಆಂಜನಮೂರ್ತಿ ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.