ದೈಹಿಕ ಶಿಕ್ಷಕರಿಲ್ಲದೇ ಸೊರಗಿದ ಶಾಲೆಗಳು
129 ಶಾಲೆಗಳಲ್ಲಿ ದೈಹಿಕ ಹುದ್ದೆ ಖಾಲಿಕ್ರೀಡೆಯಿಂದ ವಂಚಿತರಾದ ಸರ್ಕಾರಿ ಶಾಲೆ ವಿದ್ಯಾರ್ಥಿಗಳು
Team Udayavani, Jan 11, 2020, 12:35 PM IST
ಬಸವಕಲ್ಯಾಣ: ಮಕ್ಕಳ ಉಜ್ವಲ ಭವಿಷ್ಯಕ್ಕೆ ಪಾಠ ಎಷ್ಟು ಮುಖ್ಯವೊ, ಶಾರೀರಿಕ ಮತ್ತು ಮಾನಸಿಕ ಆರೋಗ್ಯದ ದೃಷ್ಟಿಯಿಂದ ಕ್ರೀಡೆಗಳೂ ಅಷ್ಟೇ ಮುಖ್ಯವಾಗಿವೆ. ಆದರೆ ತಾಲೂಕಿನ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ದೈಹಿಕ ಶಿಕ್ಷಕರು ಮತ್ತು ಕ್ರೀಡಾಂಗಣದ ಕೊರತೆ ವಿದ್ಯಾರ್ಥಿಗಳು ಕ್ರೀಡಾ ಪ್ರತಿಭೆಯಿಂದ ವಂಚಿತರಾಗುವಂತೆ ಮಾಡಿದೆ.
ತಾಲೂಕಿನ ನಗರ ಹಾಗೂ ಗ್ರಾಮೀಣ ಪ್ರದೇಶದ ಹಳೆಯ ಶಾಲೆಯ ಕೆಲವು ಕಡೆ ಮಾತ್ರ ಪಠ್ಯೇತರ ಚಟುವಟಿಕೆಗಳಿಗಾಗಿ ಕ್ರೀಡಾಂಗಣ ಸೌಕರ್ಯ ಕಲ್ಪಿಸಲಾಗಿತ್ತು. ಆದರೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದಂತೆ ಆವರಣದಲ್ಲಿ ಸ್ವಲ್ಪವೂ ಸ್ಥಳ ಇಲ್ಲದಂತೆ ನೂತನ ಕಟ್ಟಡಗಳು ತಲೆ ಎತ್ತ ಲಾರಂಭಿಸಿರುವುದು ವಿದ್ಯಾರ್ಥಿಗಳಲ್ಲಿ ವಿಶೇಷವಾಗಿ ಕ್ರೀಡಾಸಕ್ತಿ ಇರುವ ಮಕ್ಕಳು ಬೇಸರ ಪಡುವಂತಾಗಿದೆ.
ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳು ಸೇರಿದಂತೆ ತಾಲೂಕಿನಲ್ಲಿ ಒಟ್ಟು 268 ಶಾಲೆಗಳ ಪೈಕಿ 131 ಶಾಲೆಗಳಿಗೆ ಕ್ರೀಡಾಂಗಣ ಇಲ್ಲ ಎಂಬುದು ಸಾರ್ವಜನಿಕ ಶಿಕ್ಷಣ ಇಲಾಖೆ ನೀಡಿರುವ ಮಾಹಿತಿಯಲ್ಲಿ ತಿಳಿಸಲಾಗಿದೆ. ಒಟ್ಟು 36 ಸರ್ಕಾರಿ ಪ್ರೌಢಶಾಲೆಯ ಪೈಕಿ ಕೇವಲ 20 ಜನ ದೈಹಿಕ ಶಿಕ್ಷಕರು ಹಾಗೂ ಸರ್ಕಾರಿ ಪ್ರಾಥಮಿಕ ಮತ್ತು ಮಾದರಿ ಪ್ರಾಥಮಿಕ ಶಾಲೆ ಸೇರಿ ಒಟ್ಟು 157 ಶಾಲೆಗಳ ಪೈಕಿ ಕೇವಲ 44 ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದು, ಉಳಿದ ಶಾಲೆಗಳಲ್ಲಿ ದೈಹಿಕ ಶಿಕ್ಷಕರು ಇಲ್ಲದಿರುವುದು ಪೋಷಕರ ಮತ್ತು ವಿದ್ಯಾರ್ಥಿಗಳ ಆಕ್ರೋಷಕ್ಕೆ ಕಾರಣವಾಗಿದೆ.
ಸರ್ಕಾರ ಶಾಲೆಗಳಿಗೆ ನೀಡಿರುವ ಕ್ರೀಡಾ ಸಾಮಗ್ರಿಗಳು ಕೆಲವು ಕಡೆ ಉಪಯೋಗಕ್ಕೆ ಬಂದರೆ ಮತ್ತೆ ಕೆಲವು ಕಡೆ ಇಟ್ಟ ಸ್ಥಳದಲ್ಲಿಯೇ ಧೂಳು ತಿನ್ನುತ್ತಿವೆ. ಇದರಿಂದ ಮಕ್ಕಳು ಆಟದ ಸಮಯದಲ್ಲೂ ಆಟವಾಡದೆ ಹರಟೆ ಹೊಡೆಯುತ್ತ ದಿನ ಕಳೆಯಬೇಕಾಗಿದೆ. ಇಲ್ಲದಿದ್ದರೆ ಬೇರೆ ಕಡೆ ಹೋಗಿ ಆಟ ಆಡಬೇಕಾದ ವಾತಾವರಣ ನಿರ್ಮಾಣವಾಗಿರುವುದು ವಿದ್ಯಾರ್ಥಿಗಳಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಒಟ್ಟಾರೆ ಸರ್ಕಾರಿ ಶಾಲೆಯಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳು ಕ್ರೀಡೆಗಳಿಂದ ವಂಚಿತವಾಗಿ ಶಾರೀರಿಕ ಮತ್ತು ಮಾನಸಿಕವಾಗಿ ಕುಗ್ಗಿಸುವಂತೆ ಮಾಡಿದೆ.
ಹುದ್ದೆಗಳು ಖಾಲಿ ಖಾಲಿ
ತಾಲೂಕಿನ ಕಿರಿಯ ಪ್ರಾಥಮಿಕ ಶಾಲೆಗಳನ್ನು ಹೊರತು ಪಡಿಸಿ, ಸರ್ಕಾರಿ ಪ್ರೌಢ, ಹಿರಿಯ ಮತ್ತು ಮಾದರಿ ಪ್ರಾಥಮಿಕ ಶಾಲೆ ಸೇರಿದಂತೆ ಒಟ್ಟು 193 ಶಾಲೆಗಳ ಪೈಕಿ ಕೇವಲ 64 ಶಾಲೆಗಳಲ್ಲಿ ದೈಹಿಕ ಶಿಕ್ಷಕರಿದ್ದು, ಉಳಿದ 129 ಶಾಲೆಗಳಲ್ಲಿ ದೈಹಿಕ ಶಿಕ್ಷಕರ ಹುದ್ದೆಗಳು ಖಾಲಿ ಉಳಿದಿವೆ.
ವೀರಾರೆಡ್ಡಿ ಆರ್.ಎಸ್