ಜಿಲ್ಲೆ ವಿಭಜನೆ ಹೋರಾಟಕ್ಕೆ 30 ವರ್ಷ
ಮೂರು ದಶಕಗಳ ಅವಧಿಯಲ್ಲಿ ಸಾಕಷ್ಟು ಬೆಳವಣಿಗೆ; ಜೆ.ಎಚ್. ಪಟೇಲ ಆದೇಶಕ್ಕೆ ಕನ್ನಡ ಹೋರಾಟಗಾರರ ಆಕ್ರೋಶ
Team Udayavani, Aug 23, 2022, 4:31 PM IST
ಬೆಳಗಾವಿ: ಜಿಲ್ಲಾ ವಿಭಜನೆಗೆ ಒತ್ತಾಯಿಸಿ ನಡೆಯುತ್ತಿರುವ ಹೋರಾಟಕ್ಕೆ ಸರಿಸುಮಾರು 30 ವರ್ಷ. ಇನ್ನೊಂದೆಡೆ ಈ ವಿಭಜನೆ ವಿರೋಧಿಸಿ ನಡೆದ ಪ್ರತಿಭಟನೆಗೆ ಆ.22ಕ್ಕೆ ಬರೋಬ್ಬರಿ 25 ವರ್ಷ.
ಇದು ಗಡಿ ಜಿಲ್ಲೆ ಬೆಳಗಾವಿ ವಿಭಜನೆ ಹಾಗೂ ಅದಕ್ಕಾಗಿ ನಡೆದಿರುವ ಪರ ಮತ್ತು ವಿರೋಧದ ಹೋರಾಟಗಳ ಕಥೆ. ಎರಡೂವರೆ ದಶಕಗಳ ಈ ಅವಧಿಯಲ್ಲಿ ಸಾಕಷ್ಟು ಬೆಳವಣಿಗೆಗಳಾಗಿವೆ. ಸರ್ಕಾರಗಳು ಬದಲಾಗಿವೆ. ಹೋರಾಟಗಾರರು ಬದಲಾಗಿದ್ದಾರೆ. ಇದಕ್ಕಾಗಿ ಹತ್ತಾರು ಸಂಘಟನೆಗಳು ಹುಟ್ಟಿಕೊಂಡಿವೆ. ಹಲವಾರು ಸಚಿವರು ಮತ್ತು ಶಾಸಕರು ಬಂದು ಹೋಗಿದ್ದಾರೆ. ಭರವಸೆಗಳ ಮೇಲೆ ಭರವಸೆಗಳು ಹರಿದು ಬಂದಿವೆ. ಆದರೆ ಬೇಡಿಕೆ ಮಾತ್ರ ಯಾವುದೇ ಬದಲಾವಣೆ ಕಾಣದೆ ಹಾಗೆಯೇ ಮುಂದುವರಿದಿದೆ. ವಿಭಜನೆಯ ವಿಷಯ ರಾಜಕೀಯ ಪಕ್ಷಗಳ ದಾಳವಾಗಿದೆ.
25 ವರ್ಷಗಳ ಈ ಸುದೀರ್ಘ ಅವಧಿಯಲ್ಲಿ ಅನೇಕ ಹೊಸ ಜಿಲ್ಲೆಗಳ ಉದಯವಾಗಿವೆ. ಈ ಜಿಲ್ಲೆಗಳು ತನ್ಮದೇ ಆದ ಅಭಿವೃದ್ಧಿಗೆ ವಿಭಿನ್ನವಾಗಿ ತೆರೆದುಕೊಂಡಿವೆ. ಕೆಲ ಜಿಲ್ಲೆಗಳಂತೂ ಬೇರೆಯವರಿಗೆ ಮಾದರಿಯಾಗುವಂತೆ ಬದಲಾಗಿವೆ. ಆದರೆ ಹೊಸ ಜಿಲ್ಲೆಗಳ ಕನಸು ಕಾಣುತ್ತಿದ್ದ ಗಡಿ ಭಾಗದ ಜನರು ಇನ್ನೂ ನಿರೀಕ್ಷೆಯಲ್ಲಿಯೇ ದಿನ ಕಳೆಯುತ್ತಿದ್ದಾರೆ.
ಗಡಿ ಜಿಲ್ಲೆ ಬೆಳಗಾವಿ ಮೊದಲಿನ ಹಾಗೆ ಉಳಿದಿಲ್ಲ. ಸ್ಥಳೀಯ ಸಂಸ್ಥೆಗಳ ಸಂಖ್ಯೆ ಏರಿಕೆಯಾಗಿದೆ. ರಾಜ್ಯದಲ್ಲೇ ಅತೀ ಹೆಚ್ಚು ಅಂದರೆ 15 ತಾಲೂಕು ಹೊಂದಿದ ಜಿಲ್ಲೆಯಾಗಿದೆ. ಅಥಣಿಯಿಂದ ಜಿಲ್ಲಾಕೇಂದ್ರಕ್ಕೆ ಬರಬೇಕಾದರೆ 150 ಕಿಮೀ ದೂರ ಬರಬೇಕಿದೆ. ಇದು ಸಾಲದು ಎನ್ನುವಂತೆ ಪ್ರತಿ ವರ್ಷ ನದಿಗಳ ಪ್ರವಾಹ. ಇದನ್ನೆಲ್ಲ ನಿಭಾಯಿಸುವುದು ಜಿಲ್ಲಾಧಿಕಾರಿಗೆ ಸುಲಭದ ಮಾತಲ್ಲ. ಹಾಗೆಂದು ಇದು ಸರ್ಕಾರಕ್ಕೆ ಗೊತ್ತಿರದ ಸಂಗತಿ ಏನಲ್ಲ. ಇಚ್ಛಾಶಕ್ತಿ ಕಾಣಿಸುತ್ತಿಲ್ಲ ಅಷ್ಟೆ.
25 ವರ್ಷಗಳ ಹಿಂದೆ ಮುಖ್ಯಮಂತ್ರಿಯಾದ್ದ ಜೆ.ಎಚ್.ಪಟೇಲ್ ಆಗ ಜಿಲ್ಲೆಯ ಶಾಸಕರ ಒತ್ತಡಕ್ಕೆ ಮಣಿದು ಬೆಳಗಾವಿ ಜಿಲ್ಲೆಯ ವಿಭಜನೆಗೆ ಗಟ್ಟಿಯಾದ ನಿರ್ಧಾರ ಮಾಡಿ ಆದೇಶ ಹೊರಡಿಸಲು ಮುಂದಾಗಿದ್ದರು. ಜಿಲ್ಲೆಯಲ್ಲಿ ಆಗ ಜನತಾ ಪರಿವಾರದ ಶಾಸಕರ ಮತ್ತು ನಾಯಕರ ದರ್ಬಾರ್ ಜೋರಾಗಿತ್ತು. ಆದರೆ ಕನ್ನಡ ಹೋರಾಟಗಾರರು ಈ ಆದೇಶದ ವಿರುದ್ಧ ಸಿಡಿದು ನಿಂತಿದ್ದರು. ಇಲ್ಲಿಯ ಕನ್ನಡ ಹೋರಾಟಗಾರಿಗೆ ರಾಜ್ಯದ ಸಂಘಟನೆಗಳು, ಸಾಹಿತಿಗಳು, ಕನ್ನಡ ಹೋರಾಟಗಾರರು ಬೆಂಬಲವಾಗಿ ನಿಂತಾಗ ಮುಖ್ಯಮಂತ್ರಿಗಳು ವಿಧಿಯಿಲ್ಲದೇ ತಮ್ಮ ನಿರ್ಧಾರ ಹಿಂಪಡೆದರು. ಆದರೆ ಆಗ ಜೆ.ಎಚ್. ಪಟೇಲರು ಜಿಲ್ಲಾ ವಿಭಜನೆ ಆದೇಶ ಹಿಂಪಡೆದಿದ್ದರ ಬಗ್ಗೆ ಈಗಲೂ ವಿಭಿನ್ನ ಚರ್ಚೆಗಳು ಆಗುತ್ತಿವೆ.
ಜಿಲ್ಲಾ ವಿಭಜನೆ ನಿರ್ಧಾರ ಕೈಬಿಟ್ಟ ಆಗಿನ ಮುಖ್ಯಮಂತ್ರಿ ಪಟೇಲರ ಕ್ರಮ ಸರಿಯೋ ಅಥವಾ ತಪ್ಪೋ ಎಂಬುದು ನಂತರದ ವಿಚಾರ. ಆದರ ಬಗ್ಗೆ ಈಗಲೂ ವಿಶ್ಲೇಷಣೆಗಳು ನಡೆಯುತ್ತಿವೆ. ಆದರೆ ಆಗ ಸರ್ಕಾರದ ಬದಲಾದ ನಿರ್ಧಾರ ಇವತ್ತಿಗೂ ಗಡಿ ಭಾಗದ ಆಥಣಿ, ಕಾಗವಾಡ, ರಾಯಬಾಗ ತಾಲೂಕಿನ ಜನರಲ್ಲಿ ಅಸಮಾಧಾನ ಜೀವಂತವಾಗಿರುವಂತೆ ಮಾಡಿದೆ. ಇಲ್ಲಿ ಆಡಳಿತಾತ್ಮಕ ಅನುಕೂಲ ಹಾಗೂ ಜನರಿಗೆ ಅನುಕೂಲ ಮಾಡಿಕೊಡುವ ಕಾರ್ಯಕ್ಕೆ ಸರ್ಕಾರ ಸ್ಪಂದಿಸಿಲ್ಲ ಎಂಬ ನೋವು ಜನರಲ್ಲಿದೆ.
ಗಡಿ ಭಾಗದಲ್ಲಿರುವ ಬೆಳಗಾವಿ ವಿಭಜನೆ ಬಹಳ ಸೂಕ್ಷ್ಮವಾದ ವಿಚಾರ. ಇದನ್ನು ವಿಭಜಿಸಿದರೆ ಮಹಾರಾಷ್ಟ್ರ ಏಕೀಕರಣ ಸಮಿತಿಯವರಿಗೆ ಅನುಕೂಲವಾಗುತ್ತದೆ. ಬೆಳಗಾವಿ ನಮ್ಮದು ಎಂಬ ಅವರ ಹೋರಾಟಕ್ಕೆ ಬಲ ಬರುತ್ತದೆ. ಸ್ಥಳೀಯ ಸಂಸ್ಥೆಗಳಲ್ಲಿ ಕನ್ನಡಿಗರ ಸಂಖ್ಯೆ ಕಡಿಮೆಯಾಗಿ ನಮಗೆ ಹಿನ್ನಡೆಯಾಗಲಿದೆ ಎಂಬುದು ಕನ್ನಡ ಹೋರಾಟಗಾರರ ಆತಂಕ.
ಜಿಲ್ಲಾ ವಿಭಜನೆ ಮಾಡಿದರೆ ಎಂಇಎಸ್‌ಗೆ ಅನುಕೂಲವಾಗುತ್ತದೆ ಎಂಬ ವಾದ ಎಷ್ಟು ಸರಿ ಎಂಬುದು ಬೇರೆ ಮಾತು. 25 ವರ್ಷಗಳ ಹಿಂದೆ ಅಂತಹ ಸ್ಥಿತಿ ಇತ್ತು. ಈಗ ಸಾಕಷ್ಟು ಬದಲಾಗಿದೆ. ಎಂಇಎಸ್ ಶಕ್ತಿ ಸಹ ಸಂಪೂರ್ಣ ಕ್ಷೀಣಿಸಿದೆ. ಅವರೂ ರಾಷ್ಟ್ರೀಯ ಪಕ್ಷಗಳೊಂದಿಗೆ ಗುರುತಿಸಿಕೊಳ್ಳುತ್ತಿದ್ದಾರೆ. ಹೀಗಿರುವಾಗ ಎಂಇಎಸ್ ಮತ್ತು ಗಡಿ ವಿವಾದ ನೆಪದಿಂದ ಜಿಲ್ಲಾ ವಿಭಜನೆ ಮಾಡದಿರುವುದು ಯಾವ ನ್ಯಾಯ ಎಂಬುದು ಚಿಕ್ಕೋಡಿ ಭಾಗದ ಹೋರಾಟಗಾರರ ಅಭಿಪ್ರಾಯ.
25 ವರ್ಷ ಪೂರ್ಣ: ಬೆಳಗಾವಿ ಜಿಲ್ಲೆಯ ವಿಭಜನೆ ವಿರುದ್ಧ ಒಂದು ತಿಂಗಳು ಕಾಲ ನಡೆದ ಹೋರಾಟಕ್ಕೆ ಈಗ 25 ವರ್ಷ ತುಂಬಿದೆ. 1997ರ ಆ.22ರಂದು ಬೆಳಗಾವಿ ಜಿಲ್ಲೆ ಮೂರು ಜಿಲ್ಲೆಗಳಲ್ಲಿ ವಿಂಗಡಣೆ. ಬೆಳಗಾವಿ, ಚಿಕ್ಕೋಡಿ ಮತ್ತು ಗೋಕಾಕ ಹೊಸ ಜಿಲ್ಲೆಗಳು ಎಂಬ ಸುದ್ದಿ ಗಡಿ ಭಾಗದ ಬೆಳಗಾವಿಯಲ್ಲಿ ಆಲ್ಲೋಲ-ಕಲ್ಲೋಲ ಉಂಟುಮಾಡಿತ್ತು.
ಆಗಿನ ಸಿಎಂ ಜೆ.ಎಚ್. ಪಟೇಲ್ ನೇತೃತ್ವದ ಸರ್ಕಾರ ಬೆಳಗಾವಿ ಜೊತೆಗೆ ಧಾರವಾಡ, ರಾಯಚೂರು, ವಿಜಯಪುರ ಜಿಲ್ಲೆಗಳನ್ನೂ ವಿಭಜನೆ ಮಾಡುವ ನಿರ್ಧಾರ ಮಾಡಿತ್ತು. ಉಳಿದ ಎಲ್ಲ ಜಿಲ್ಲೆಗಳಲ್ಲಿ ಇದಕ್ಕೆ ವ್ಯಾಪಕ ಸ್ವಾಗತ ಹಾಗೂ ಅಭಿನಂದನೆ ವ್ಯಕ್ತವಾದರೆ ಅದೇ ಗಡಿ ಜಿಲ್ಲೆಯಲ್ಲಿ ಸರ್ಕಾರದ ನಿರ್ಧಾರಕ್ಕೆ ತೀವ್ರ ಖಂಡನೆ ವ್ಯಕ್ತವಾಗಿತ್ತು. ಜಿಲ್ಲೆಯ ವಿಭಜನೆಯ ವಿಷಯದಲ್ಲಿ ಆಗಿನ ಶಾಸಕರ ನಡೆ ತೀವ್ರ ಟೀಕೆಗೆ ಗುರಿಯಾಗಿತ್ತು.
ಸರ್ಕಾರದ ನಿರ್ಧಾರ ಖಂಡಿಸಿದ ಕನ್ನಡ ಸಂಘಟನೆಗಳ ಮುಖಂಡರು ಬೆಳಗಾವಿ, ಹುಕ್ಕೇರಿ, ಖಾನಾಪುರದ ಸೇರಿಸಿ ಸಣ್ಣ ಜಿಲ್ಲೆ ಮಾಡಿದರೆ ಎಂಇಎಸ್‌ಗೆ ಅನುಕೂಲವಾಗುತ್ತದೆ . ಹೀಗಾಗಿ ಅಖಂಡ ಬೆಳಗಾವಿ ಜಿಲ್ಲೆಯೇ ಉಳಿಯಬೇಕು. ಇದನ್ನು ಒಪ್ಪದಿದ್ದರೆ ಹೋರಾಟ ಆರಂಭಿಸುವ ಎಚ್ಚರಿಕೆ ನೀಡಿದರು. ಆಗ ಆರಂಭವಾದ ಚಳವಳಿ ಎಲ್ಲೆಡೆ ಹಬ್ಬಿತ್ತು. ಸವದತ್ತಿ, ಬೈಲಹೊಂಗಲ, ರಾಮದುರ್ಗ, ಹುಕ್ಕೇರಿ, ಬೆಳಗಾವಿ, ಖಾನಾಪುರ ತಾಲೂಕುಗಳು ಒಂದಾಗಿ ಹೋರಾಟ ನಡೆಸಿದವು. ಕನ್ನಡ ಹೋರಾಟಗಾರ ಪಾಟೀಲ ಪುಟ್ಟಪ್ಪ ಇದಕ್ಕೆ ಕೈಜೋಡಿಸಿ ಮುಖ್ಯಮಂತ್ರಿ ಪಟೇಲರನ್ನು ತರಾಟೆಗೆ ತೆಗೆದುಕೊಂಡರು.
ಹೋರಾಟ ತೀವ್ರವಾದಾಗ ಮುಖ್ಯಮಂತ್ರಿ ಜೆ.ಎಚ್. ಪಟೇಲರು ಇದಕ್ಕೆ ಮಣಿದು ಕೊನೆಗೆ ವಿಧಾನಸಭೆಯಲ್ಲಿಯೇ ಬೆಳಗಾವಿ ಜಿಲ್ಲೆಯ ವಿಭಜನೆ ಕೈಬಿಟ್ಟಿರುವುದಾಗಿ ಘೋಷಿಸಿದರು. ಇದು ಬೆಳಗಾವಿ ಜಿಲ್ಲೆಯ ಹಿತದೃಷ್ಟಿಯಿಂದ ನಮ್ಮ ಹೋರಾಟಕ್ಕೆ ಸಿಕ್ಕ ಜಯ ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಸ್ಮರಿಸಿಕೊಳ್ಳುತ್ತಾರೆ.
-ಕೇಶವ ಆದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್
ಮಹಾರಾಷ್ಟ್ರ ಸೋಲಿನ ಬೆನ್ನಲ್ಲೇ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸತೀಶ್ ಜಾರಕಿಹೊಳಿ
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Belagavi: ಗ್ಯಾರಂಟಿ ವಿರೋಧಿಸಿದ ವಿಪಕ್ಷಗಳಿಗೆ ಸ್ಪಷ್ಟ ಉತ್ತರ ನೀಡಿದ ಮತದಾರ: ಹೆಬ್ಬಾಳ್ಕರ್
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
IPL Mega Auction: ಸ್ಪಿನ್ನರ್ ಚಾಹಲ್ ಗೆ ಭಾರೀ ಬೇಡಿಕೆ; ಮಿಲ್ಲರ್ ಲಕ್ನೋಗೆ
Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್
IPL Mega Auction: ಭರ್ಜರಿ ಬಿಡ್ ಗಳಿಸಿ ಅಯ್ಯರ್ ದಾಖಲೆ ಮುರಿದ ರಿಷಭ್ ಪಂತ್
IPL Mega Auction: ಬಟ್ಲರ್‌ಗೆ ಬಲೆ ಬೀಸಿದ ಗುಜರಾತ್; ಸಿಕ್ಕ ಬೆಲೆ ಎಷ್ಟು?
IPL Mega Auction: ದಾಖಲೆ ಬೆಲೆ ಪಡೆದ ಶ್ರೇಯಸ್ ಅಯ್ಯರ್ ಪಂಜಾಬ್ ಪಾಲಿಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.