ಹಲ್ಲೆಕೋರರ ಬಂಧನಕ್ಕೆ ಆಗ್ರಹಿಸಿ ಮನವಿ
Team Udayavani, Aug 21, 2019, 12:18 PM IST
ಬೆಳಗಾವಿ: ಮಹಾನಗರಪಾಲಿಕೆ ಆವರಣದಲ್ಲಿ ವಕೀಲರ ಮೇಲೆ ಹಲ್ಲೆ ನಡೆಸಿರುವ ವ್ಯಕ್ತಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿ ಮಂಗಳವಾರ ನ್ಯಾಯವಾದಿಗಳು ಪ್ರತಿಭಟನೆ ನಡೆಸಿದರು.
ಬೆಳಗಾವಿ: ಮಹಾನಗರ ಪಾಲಿಕೆ ಆವರಣದಲ್ಲಿ ವಕೀಲರ ಮೇಲೆ ನಡೆದಿರುವ ಹಲ್ಲೆ ಖಂಡಿಸಿ ಮಂಗಳವಾರ ನಗರದ ನ್ಯಾಯವಾದಿಗಳು ಕೋರ್ಟ್ ಕಲಾಪ ಬಹಿಷ್ಕರಿಸಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಸೋಮವಾರ ಕೆಲಸದ ಹಿನ್ನಲೆಯಲ್ಲಿ ಪಾಲಿಕೆಗೆ ತೆರಳಿದ್ದ ವಕೀಲರಾದ ಜಿ.ಎನ್.ಪಾಟೀಲ, ವಿ.ಬಿ.ದೇಸಾಯಿ ಅವರ ಮೇಲೆ ಶಹನಾಜ ಹಂಚಿನಮನಿ ಮತ್ತು ಇಬ್ಬರು ವ್ಯಕ್ತಿಗಳು ಹಲ್ಲೆ ಮಾಡಿದ್ದಾರೆ. ಈ ಸಂಬಂಧ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತಕ್ಷಣವೇ ಹಲ್ಲೆಕೋರರನ್ನು ಬಂಧಿಸುವಂತೆ ನ್ಯಾಯವಾದಿಗಳು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಕೀಲರ ಸಂಘದ ಅಧ್ಯಕ್ಷ ಎ.ಜಿ. ಮುಳವಾಡಮಠ, ವಕೀಲರ ಮೇಲೆ ಈ ರೀತಿ ಹಲ್ಲೆಗಳು ನಡೆದರೆ ನಾವು ಹೇಗೆ ಕರ್ತವ್ಯ ನಿರ್ವಹಿಸಬೇಕು. ಇದರಿಂದ ಸಾರ್ವಜನಿಕರು ಹಾಗೂ ವಕೀಲ ಸಮುದಾಯದಲ್ಲಿ ಭೀತಿ ಉಂಟಾಗಿದೆ. ಕಾರಣ ಕೂಡಲೇ ಅಪರಾಧಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ವಕೀಲರ ಸಂಘದ ಉಪಾಧ್ಯಕ್ಷ ಮಜಗಿ ಸಿ.ಟಿ, ಗಜಾನನ ಪಾಟೀಲ, ಪ್ರಧಾನ ಕಾರ್ಯದರ್ಶಿ ಆರ್.ಸಿ.ಪಾಟೀಲ, ಜಂಟಿ ಕಾರ್ಯದರ್ಶಿ ಶಿವಪುತ್ರ ಪಟಕಲ್, ಸದಸ್ಯರಾದ ಕಮಲೇಶ ಮಾಯನ್ನಾಚೆ, ನಿತಿನ್ ಗಂಗಾಯಿ, ಪ್ರಭಾಕರ್ ಪವಾರ್, ರಮೇಶ ಗುಡೋದಗಿ, ನ್ಯಾಯವಾದಿ ಎಂ.ಬಿ. ಜೀರಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.