ತರಕಾರಿ ವರ್ತಕರ ಸಭೆಯಲ್ಲಿ ಗೊಂದಲ
Team Udayavani, Dec 22, 2019, 12:02 PM IST
ಬೆಳಗಾವಿ: ಇಲ್ಲಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ಶನಿವಾರ ನಡೆದ ಸಭೆಯಲ್ಲಿ ಎಪಿಎಂಸಿ ಸಗಟು ತರಕಾರಿ ವರ್ತಕರು ಹಾಗೂ ಹಳೆಯ ಪಿ.ಬಿ. ರಸ್ತೆಯಲ್ಲಿರುವ ಕಂಟೋನ್ಮೆಂಟ್ ಪ್ರದೇಶದ ಸಗಟು ತರಕಾರಿ ವರ್ತಕರ ಮಧ್ಯೆ ಮಾತಿನ ಚಕಮಕಿ ನಡೆದು ಗದ್ದಲದ ವಾತಾವರಣ ನಿರ್ಮಾಣವಾಗಿ ಕೈ ಕೈ ಮಿಲಾಯಿಸುವ ಹಂತ ತಲುಪಿತು.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶಂಕರಗೌಡ ಪಾಟೀಲ ಎಪಿಎಂಸಿ ಪ್ರಾಂಗಣದಲ್ಲಿರುವ ಸಗಟು ತರಕಾರಿ ಮಳಿಗೆಗಳಿಗೆ ಭೇಟಿ ನೀಡಿ ಬಳಿಕ ಎರಡೂ ಮಾರುಕಟ್ಟೆಗಳ ವರ್ತಕರ ಸಭೆ ನಡೆಸಿ ಸಮಸ್ಯೆ ಆಲಿಸಿದರು. ಈ ವೇಳೆ ಎಪಿಎಂಸಿ ಪ್ರಾಂಗಣದಲ್ಲಿರುವ ಮಳಿಗೆಗಳನ್ನು ವರ್ತಕರಲ್ಲದವರಿಗೆ ಹಂಚಿಕೆ ಮಾಡಿ, ನಿಜವಾದ ವರ್ತಕರಿಗೆ ಅನ್ಯಾಯ ಮಾಡಲಾಗಿದೆ ಎನ್ನುವ ವಿಷಯ ಕುರಿತು ಎರಡೂ ಕಡೆಯ ವರ್ತಕರ ಮಧ್ಯೆ ಮಾತಿಗೆ ಮಾತು ಬೆಳೆದು ನೂಕಾಟವಾಯಿತು.
ಆಗ ಕೆಲಹೊತ್ತು ಸಭೆ ಗೊಂದಲದ ಗೂಡಾಗಿ ಪರಿಣಮಿಸಿತು. ಇದಕ್ಕೆ ಎಪಿಎಂಸಿ ತರಕಾರಿ ಮಾರುಕಟ್ಟೆಯ ಮಳಿಗೆಯಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿರುವ ದಲ್ಲಾಳಿಗಳು ವಿರೋಧ ವ್ಯಕ್ತ ಪಡಿಸಿದರು. ಇದರಿಂದ ಎರಡು ಗುಂಪುಗಳ ನಡುವೆ ಮಾತಿಗೆ ಮಾತು ಬೆಳೆದು, ಕೈಕೈ ಮಿಲಾಯಿಸುವ ಹಂತದವರೆಗೆ ಬೆಳೆಯಿತು. ಸಭೆಯಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಯಿತು. ಎರಡೂ ಕಡೆಯ ವರ್ತಕರನ್ನು ಸಮಾಧಾನ ಪಡಿಸಿದ ಶಂಕರಗೌಡ ಪಾಟೀಲ, ವರ್ತಕರ ದೂರುಗಳ ಅನ್ವಯ ಎಪಿಎಂಸಿಗೆ ಭೇಟಿ ನೀಡಿದ್ದೇನೆ. ವರ್ತಕರು ಹಾಗೂ ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ. ಯಾವ ವರ್ತಕರಿಗೆ ಏನು ಸಮಸ್ಯೆ ಇದೆ ಎಂಬುದನ್ನು ಪರಿಶೀಲಿಸಲಾಗುವುದು. ಕಾನೂನಿನ್ವಯ ಏನು ಮಾಡಲು ಸಾಧ್ಯವಿದೆ ಎಂಬುದನ್ನು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.
ಮಾರುಕಟ್ಟೆಯಲ್ಲಿ ವರ್ತಕರ ಹಾಗೂ ರೈತರ ಸಮಸ್ಯೆಗಳನ್ನು ಬಗೆ ಹರಿಸುವ ಉದ್ದೇಶದಿಂದ ಸರ್ಕಾರದ ಪ್ರತಿನಿ ಧಿಯಾಗಿ ಎಪಿಎಂಸಿ ಕಾರ್ಯದರ್ಶಿ ಡಾ| ಕೆ. ಕೋಡಿಗೌಡ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿಲ್ಲ ಎಂಬ ದೂರುಗಳಿದ್ದರೆ ಹೇಳಿ. ಇಲ್ಲಿಯ ವರ್ತಕರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುತ್ತೇನೆ. ಶೀಘ್ರ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.
ಹಳೆಯ ಮಾರುಕಟ್ಟೆಯ ವರ್ತಕ ಬಾಬುರಾವ ದೇಸಾಯಿ ಮಾತನಾಡಿ, ಎಪಿಎಂಸಿ ಪ್ರಾಂಗಣದಲ್ಲಿರುವ ಮಳಿಗೆಗಳ ಹಂಚಿಕೆ ಸರಿಯಾಗಿ ಆಗಿಲ್ಲ. ವರ್ತಕರು ಅಲ್ಲದವರಿಗೆ ಮಳಿಗೆಗಳನ್ನು ನೀಡಿ ನಿಜವಾದ ವರ್ತಕರಿಗೆ ಅನ್ಯಾಯ ಮಾಡಲಾಗಿದೆ. ಹಳೆ ತರಕಾರಿ ಮಾರುಕಟ್ಟೆಯಲ್ಲಿ ಇದ್ದ ವ್ಯಾಪಾರಸ್ಥರಿಗೆ ಮೋಸವಾಗಿದೆ. ರಾಜ್ಯದ ಅನೇಕ ಕಡೆಗಳಲ್ಲಿ ಒಂದೇ ನಗರದಲ್ಲಿ 2-3 ತರಕಾರಿ ಮಾರುಕಟ್ಟೆಗಳಿವೆ. ಆದರೆ ಇಲ್ಲಿ ಮಾತ್ರ ಕೆಲವರು ತಕರಾರು ತೆಗೆದು ಬೇರೆ ಕಡೆಗೆ ಮಾರುಕಟ್ಟೆ ನಿರ್ಮಿಸಲು ತೊಂದರೆಯನ್ನುಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕೆಲವೆಡೆಗಳಲ್ಲಿ ಒಂದೇ ನಗರದಲ್ಲಿ 2-3 ತರಕಾರಿ ಮಾರುಕಟ್ಟೆಗಳಿವೆ. ಮುಂಬೈ- ಪುಣೆ ಮಹಾನಗರಗಳಲ್ಲಿ ತಲಾ ನಾಲ್ಕು ಮಾರುಕಟ್ಟೆಗಳಿವೆ. ಬೆಳಗಾವಿ ಬೆಳೆಯುತ್ತಿರುವ ನಗರ. ಸ್ಮಾರ್ಟ್‌ಸಿಟಿ ಆಗುತ್ತಿದೆ. ಹೀಗಾಗಿ ಇಲ್ಲಿಯೂ ಎರಡು ಮಾರುಕಟ್ಟೆಗಳನ್ನು ಸ್ಥಾಪಿಸಲು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಹಳೆ ತರಕಾರಿ ಮಾರುಕಟ್ಟೆಯಲ್ಲಿ ಪರವಾನಗಿ ಹೊಂದಿರುವ 230 ಸಗಟು ವ್ಯಾಪಾರಸ್ಥರ ಪಟ್ಟಿನೀಡುವಂತೆ ಸೂಚಿಸಿದ ಶಂಕರಗೌಡ, ಈ ಬಗ್ಗೆ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಎಪಿಎಂಸಿ ಅಧ್ಯಕ್ಷ ಆನಂದ ಪಾಟೀಲ, ನಿರ್ದೇಶಕ ನಿಂಗಪ್ಪ ಜಾಧವ, ತಾನಾಜಿ ಪಾಟೀಲ, ಯುವರಾಜ ಕದಮ್, ಸದಸ್ಯರಾದ ಲಗಮನ್ನ ನಾಯಕ, ಸಂಜು ಮಾದರ, ಆರ್.ಕೆ. ಪಾಟೀಲ, ಮನೋಜ ಮತ್ತಿಕೊಪ್ಪ, ರೇಣುಕಾ ಪಾಟೀಲ ಸೇರಿದಂತೆ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.