ನಾನು, ಸಹೋದರ ರಮೇಶ ಜಾರಕಿಹೊಳಿ ಬಿಜೆಪಿ ಬಿಡಲ್ಲ: ಊಹಾಪೋಹಗಳಿಗೆ ತೆರೆ ಎಳೆದ ಜಾರಕಿಹೊಳಿ ಸಹೋದರರು
Team Udayavani, Dec 1, 2022, 9:04 PM IST
ಮೂಡಲಗಿ: 2023ರ ಚುನಾವಣೆಯಲ್ಲಿ ನಾನು ಮತ್ತು ಸಹೋದರ ರಮೇಶ ಜಾರಕಿಹೊಳಿಯವರು ಬಿಜೆಪಿ ಅಭ್ಯರ್ಥಿಗಳಾಗಿ ಕಣಕ್ಕಿಳಿಯುತ್ತೇವೆ ಎಂದು ಹೇಳುವ ಮೂಲಕ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಇತರೆ ಪಕ್ಷಗಳ ಸೇರ್ಪಡೆ ಕುರಿತ ಊಹಾಪೋಹಗಳಿಗೆ ತೆರೆ ಎಳೆದರು.
ತಾಲೂಕಿನ ರಾಜಾಪುರ ಗ್ರಾಮದಲ್ಲಿ ಗುರುವಾರ ಅರಭಾವಿ ಮತ್ತು ಗೋಕಾಕ ಮತಕ್ಷೇತ್ರಗಳ ಹಾಲುಮತ ಕುರುಬ ಸಮಾಜ ಬಾಂಧವರು ಹಮ್ಮಿಕೊಂಡಿದ್ದ ಕನಕದಾಸರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಾನು ಮತ್ತು ಸಹೋದರ ರಮೇಶ ಜಾರಕಿಹೊಳಿ ಯಾವುದೇ ಕಾರಣಕ್ಕೂ ಬಿಜೆಪಿ ಬಿಡುವುದಿಲ್ಲ. ಬೇರೆ ಪಕ್ಷ ಸೇರುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.
ಬಿಜೆಪಿ ಬಿಡುತ್ತಾರೆಂದು ಅಲ್ಲಲ್ಲಿ ವರದಿಗಳು ಮಾಧ್ಯಮಗಳಲ್ಲಿ ಬರುತ್ತಿದೆ. ಅರಭಾವಿ ಕ್ಷೇತ್ರದಿಂದ ನಾನು ಹಾಗೂ ಗೋಕಾಕ ಕ್ಷೇತ್ರದಿಂದ ರಮೇಶ ಜಾರಕಿಹೊಳಿ ಬಿಜೆಪಿಯಿಂದಲೇ ಸ್ಪರ್ಧಿಸಿ, ಜನರ ಪ್ರೀತಿ ಮತ್ತು ಆಶೀರ್ವಾದದಿಂದ ಅತ್ಯಧಿಕ ಮತಗಳ ಅಂತರದಿಂದ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇತ್ತೀಚಿನ ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ಧಿಗಳಲ್ಲಿ ತಮ್ಮ ವಿರೋಧಿಗಳ ಪಾತ್ರ ಇದೆ. ಸುಳ್ಳು ವದಂತಿಗಳನ್ನು ಹರಡಿಸುವ ಮೂಲಕ ಜನರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಅರಭಾವಿ ಹಾಗೂ ಗೋಕಾಕ ವಿಧಾನಸಭಾ ಮತಕ್ಷೇತ್ರದ ಸರ್ವಾಂಗೀಣ ಪ್ರಗತಿಗಾಗಿ ಶ್ರಮಿಸುತ್ತಿರುವ ನಾವಿಬ್ಬರೂ ಪಕ್ಷ ಬಿಡುವುದಿಲ್ಲ. ಅಲ್ಲದೇ ಮುಂದಿನ 10 ವರ್ಷಗಳವರೆಗೆ ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿರುತ್ತದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ, ಅಮೀತ ಶಾ ಅವರ ದೂರದೃಷ್ಟಿಯ ಆಡಳಿತವೇ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.
2023 ರಲ್ಲಿ ನಡೆಯುವ ಚುನಾವಣೆಯಲ್ಲಿ ಎಲ್ಲ ಸಮಾಜ ಬಾಂಧವರು ತಮ್ಮನ್ನು ಬೆಂಬಲಿಸಿ ಆಶೀರ್ವದಿಸಲಿದ್ದಾರೆ. ಎಲ್ಲ ಸಮಾಜಗಳ ಪ್ರೀತಿ ಮತ್ತು ವಿಶ್ವಾಸವನ್ನು ನಾವು ಗಳಿಸಿಕೊಂಡಿದ್ದೇವೆ. ಯಾವ ಸಮಾಜಕ್ಕೂ ನಮ್ಮಿಂದ ಅನ್ಯಾಯವಾಗಿಲ್ಲ. ಸರ್ವ ಜನಾಂಗಗಳ ಶಾಂತಿಯ ತೋಟದಂತೆ ಜನಸೇವೆ ಮಾಡುತ್ತಿದ್ದೇವೆ. ನಾವು ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತೇನೆ ಎಂದು ಹೇಳುತ್ತಿರುವುದು ಅಹಂಕಾರದಿಂದಲ್ಲ. ಅದು ಎಲ್ಲ ಸಮುದಾಯಗಳ ಜನರ ಪ್ರೀತಿ ಮತ್ತು ವಿಶ್ವಾಸವೇ ಕಾರಣ ಎಂದು ಹೇಳಿದರು.
ಕಳೆದ 30 ವರ್ಷಗಳಿಂದ ಅರಭಾವಿ ಕ್ಷೇತ್ರದಲ್ಲಿ ಎಲ್ಲ ಸಮುದಾಯಗಳ ಆಶೀರ್ವಾದದಿಂದ ಪ್ರಭಾಶುಗರ ಕಾರ್ಖಾನೆ ಚುಕ್ಕಾಣಿ ಹಿಡಿಯುವ ಮೂಲಕ ರಾಜಕೀಯ ಆರಂಭಿಸಿರುವ ನನಗೆ ಇಂದು ಅರಭಾವಿ ಮತಕ್ಷೇತ್ರದಲ್ಲಿ 5 ಬಾರಿ ಶಾಸಕನಾಗಿ, 4 ಬಾರಿ ಸಚಿವನಾಗಿ ಮತ್ತು ಕಳೆದ 2 ವರ್ಷಗಳಿಂದ ಕೆಎಂಎಫ್ ಅಧ್ಯಕ್ಷನಾಗಿ ರೈತರ ಸೇವೆ ಮಾಡುವ ಅವಕಾಶವನ್ನು ಕ್ಷೇತ್ರದ ಸಮಸ್ತ ಜನತೆ ಒದಗಿಸಿಕೊಟ್ಟಿದ್ದಾರೆ. ಅಂತಹ ಹೃದಯವಂತ ಜನರ ಋಣ ತೀರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಎಂದು ಹೇಳಿದರು.
2004 ರ ಪೂರ್ವ ಮತ್ತು 2004 ನಂತರ ಅರಭಾವಿ ಕ್ಷೇತ್ರ ಹೇಗಿತ್ತು ಎಂಬುದನ್ನು ನೀವೇ ಅರ್ಥ ಮಾಡಿಕೊಳ್ಳಬೇಕು. ಅಭಿವೃದ್ಧಿ ಸಹಿಸದ ಕೆಲವರು ಇಲ್ಲ ಸಲ್ಲದ ಅಪಪ್ರಚಾರದಲ್ಲಿ ತೊಡಗುತ್ತಿದ್ದಾರೆ. ಜೊತೆಗೆ ನಮ್ಮನ್ನು ಟೀಕಿಸುತ್ತಿದ್ದಾರೆ. ಟೀಕಿಸುವವರು ಟೀಕಿಸಲಿ. ಅದರ ಬಗ್ಗೆ ಯಾರು ತಲೆ ಕೆಡಿಸಿಕೊಳ್ಳಬೇಡಿ. ನಾವಂತೂ ಜನರ ಋಣ ತೀರಿಸುವ ಅಭಿವೃದ್ಧಿಪರ ಕೆಲಸಗಳನ್ನು ಮಾಡುತ್ತಿದ್ದೇವೆ. ಎಲ್ಲ ಸಮುದಾಯಗಳನ್ನು ಒಗ್ಗೂಡಿಸುವ ಕೆಲಸ ನಿರಂತವಾಗಿ ನಡೆಯುತ್ತಿದೆ. ಸಮುದಾಯಗಳನ್ನು ಕೂಡಿಸುತ್ತಿದ್ದೇವೆಯೇ ಹೊರತು ಯಾವ ಸಮುದಾಯವನ್ನು ಒಡೆಯುವ ಕೆಲಸ ಮಾಡುತ್ತಿಲ್ಲ. ಯಾರು ನಮ್ಮ ಬಗ್ಗೆ ಜನರಲ್ಲಿ ತಪ್ಪು ತಿಳುವಳಿಕೆ ಮೂಡಿಸಿ ಸುಳ್ಳು ವದಂತಿ ಹಬ್ಬಿಸುತ್ತಿದ್ದಾರವೋ ಅವರನ್ನು ಕಲ್ಲೋಳಿ ಮಾರುತೇಶ್ವರ ದೇವರು ನೋಡಿಕೊಳ್ಳಲಿ ಎಂದು ವಿರೋಧಿಗಳಿಗೆ ಟಾಂಗ್ ಕೊಟ್ಟರು.
ನಮ್ಮ ತಂದೆಯವರಾಗಿದ್ದ ಲಕ್ಷ್ಮಣರಾವ್ ಜಾರಕಿಹೊಳಿ, ಗೋಕಾಕ ಮಾಜಿ ಶಾಸಕರಾಗಿದ್ದ ಶಂಕರ ಕರನಿಂಗ, ಪ್ರಭಾವಿ ಸಹಕಾರಿ ಮುಖಂಡ ವಿವೇಕರಾವ್ ಪಾಟೀಲ ಸೇರಿಕೊಂಡು ಜನರ ಆಶೀರ್ವಾದದಿಂದ ಪ್ರಭಾಶುಗರ ಕಾರ್ಖಾನೆಯನ್ನು ಅಂದಿನ ಅರಭಾವಿ ಶಾಸಕರಾಗಿದ್ದ ವ್ಹಿ.ಎಸ್. ಕೌಜಲಗಿ ಅವರ ಹಿಡಿತದಲ್ಲಿದ್ದ, ಆಡಳಿತವನ್ನು ನಾವು ಪಡೆದುಕೊಂಡೆವು. ಆಗ ಎಲ್ಲ ಸಮುದಾಯದ ಜನರು ನಮಗೆ ಆಶೀರ್ವಾದ ನೀಡಿದರು. ಅಂದಿನಿಂದ ನಮ್ಮ ಕುಟುಂಬ ಜನರ ಸೇವೆಯಲ್ಲಿ ತೊಡಗಿದೆ ಎಂದು ತಿಳಿಸಿದರು.
ಮುಂದಿನ ಜನೇವರಿ ತಿಂಗಳಲ್ಲಿ ಗೋಕಾಕದಲ್ಲಿ ಉಭಯ ಮತಕ್ಷೇತ್ರಗಳ ಕಾರ್ಯಕರ್ತರ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗುವುದು. ಇದು ನಮ್ಮ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಗಲಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.
ಇದನ್ನೂ ಓದಿ: ಕೇಂದ್ರ ಗೋಲ್ಡಿ ಬ್ರಾರ್ ತಲೆಗೆ 2 ಕೋಟಿ ರೂ. ಇನಾಮು ಘೋಷಿಸಲಿ: ಮೂಸೆವಾಲಾ ತಂದೆ
ಶಾಸಕ ರಮೇಶ ಜಾರಕಿಹೊಳಿ ಮತ್ತು ವಿಧಾನ ಪರಿಷತ್ ಮಾಜಿ ಸದಸ್ಯ ವಿವೇಕರಾವ್ ಪಾಟೀಲ ಕನಕ ಜಯಂತಿ ಕಾರ್ಯಕ್ರಮವನ್ನು ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿದರು.
ಸಾನಿಧ್ಯವನ್ನು ಕವಲಗುಡ್ಡದ ಅಮರೇಶ್ವರ ಮಹಾರಾಜರು ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ, ಯುವ ಧುರೀಣ ಸರ್ವೋತ್ತಮ ಜಾರಕಿಹೊಳಿ, ಪ್ರದೇಶ ಕುರುಬರ ಸಂಘದ ಮಾಜಿ ಅಧ್ಯಕ್ಷ ಡಾ.ರಾಜೇಂದ್ರ ಸಣ್ಣಕ್ಕಿ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಮಡ್ಡೆಪ್ಪ ತೋಳಿನವರ, ಜಿಪಂ ಮಾಜಿ ಸದಸ್ಯರಾದ ಟಿ.ಆರ್. ಕಾಗಲ್, ಭೀಮಶಿ ಮಗದುಮ್ಮ, ಗೋವಿಂದ ಕೊಪ್ಪದ, ಟಿಎಪಿಸಿಎಂಎಸ್ ಅಧ್ಯಕ್ಷ ಅಶೋಕ ನಾಯ್ಕ, ಉಪಾಧ್ಯಕ್ಷ ವಿಠ್ಠಲ ಪಾಟೀಲ, ಪಿಎಲ್‍ಡಿ ಬ್ಯಾಂಕ್ ಉಪಾಧ್ಯಕ್ಷ ರಾಜು ಬೈರುಗೋಳ, ಎಪಿಎಂಸಿ ಮಾಜಿ ಅಧ್ಯಕ್ಷ ಶ್ರೀಪತಿ ಗಣೇಶವಾಡಿ, ಅಜ್ಜಪ್ಪ ಗಿರಡ್ಡಿ, ಪ್ರಭಾಶುಗರ ಉಪಾಧ್ಯಕ್ಷ ರಾಮಣ್ಣಾ ಮಹಾರಡ್ಡಿ, ಮೂಡಲಗಿ ತಾಲೂಕಾ ಕುರುಬರ ಸಂಘದ ಅಧ್ಯಕ್ಷ ಡಾ.ಎಸ್.ಎಸ್. ಪಾಟೀಲ, ಡಿ.ಎಂ. ದಳವಾಯಿ, ಲಕ್ಷ್ಮಣ ಮಸಗುಪ್ಪಿ, ಘಯೋಮನೀಬ ಮಹಾಮಂಡಳ ನಿರ್ದೇಶಕ ಬಸವರಾಜ ಪಂಡ್ರೊಳ್ಳಿ, ಭೈರಪ್ಪ ಯಕ್ಕುಂಡಿ, ರಾಮಚಂದ್ರ ಪಾಟೀಲ, ಶಿವು ಕಮತಿ, ವಾಸಪ್ಪ ಪಂಡ್ರೊಳ್ಳಿ, ರಾಜು ಪವಾರ, ಲಕ್ಷ್ಮಣ ಗಣಪ್ಪಗೋಳ ಸೇರಿದಂತೆ ಸಮಾಜದ ಹಲವು ಪ್ರಮುಖರು ಉಪಸ್ಥಿತರಿದ್ದರು.
ಗಮನ ಸೆಳೆದ ಬೈಕ್ ರ್ಯಾಲಿ : ಕನಕ ಜಯಂತಿ ಅಂಗವಾಗಿ ರಾಜಾಪೂರ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಬಡಿಗವಾಡ, ಘಟಪ್ರಭಾ, ಅರಭಾವಿ, ಲೋಳಸೂರ, ಗೋಕಾಕ ಮೂಲಕ ಸಂಗನಕೇರಿ, ಕಲ್ಲೋಳಿ, ನಾಗನೂರ, ತುಕ್ಕಾನಟ್ಟಿ ಮಾರ್ಗವಾಗಿ ಕಾರ್ಯಕ್ರಮದ ಸ್ಥಳದವರೆಗೆ ಬೃಹತ್ ಪ್ರಮಾಣದಲ್ಲಿ ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಅವರ ನೇತೃತ್ವದಲ್ಲಿ ಬೈಕ್ ರ್ಯಾಲಿ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid: ಎನ್-95 ಮಾಸ್ಕ್ ಅವ್ಯವಹಾರ: ಆತುರದ ಕ್ರಮ ಕೈಗೊಳ್ಳದಂತೆ ಸೂಚನೆ
Belagavi: ಖಾನಾಪುರ ಪೊಲೀಸ್ ಠಾಣೆ ಸಿಪಿಐ ಅಮಾನತಿಗೆ ಸ್ಪಷ್ಟನೆ ಕೊಟ್ಟ ಸಿಎಂ
ಸಿ.ಟಿ.ರವಿ ಮನಸ್ಸಲ್ಲೇ ಕೊಳೆ ತುಂಬಿದೆ, ಫೆನಾಯಿಲ್ ಹಾಕಿ ತೊಳೆದುಕೊಳ್ಳಲಿ: ಸಚಿವೆ ಲಕ್ಷ್ಮೀ
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.