ಶುದ್ಧೀಕರಣ ಘಟಕದಲ್ಲಿ ರಾಜಕೀಯ ವಾಸನೆ!
Team Udayavani, Jan 18, 2019, 9:35 AM IST
ಬೆಳಗಾವಿ: ಹಲಗಾ ಗ್ರಾಮದ ಬಳಿ ನಿರ್ಮಾಣ ಆಗಬೇಕಿರುವ ಕೊಳಚೆ ನೀರು ಶುದ್ಧೀಕರಣ ಘಟಕದಲ್ಲಿ ರಾಜಕೀಯದ ವಾಸನೆ ಬರುತ್ತಿದೆ. ಈ ಘಟಕ ಸ್ಥಾಪನೆಗೆ ಕಳೆದ ಒಂದು ವರ್ಷದಿಂದ ಗಂಭೀರ ಪ್ರಯತ್ನಗಳು ಜಿಲ್ಲಾಡಳಿತದಿಂದ ನಡೆದಿದ್ದರೂ ಯೋಜನೆ ನನೆಗುದಿಗೆ ಬಿದ್ದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಕೇಂದ್ರ ಸರಕಾರದ ಅಮೃತ ಯೋಜನೆಯಡಿ ಸುಮಾರು 156 ಕೋಟಿ ರೂ. ವೆಚ್ಚದಲ್ಲಿ ಹಲಗಾ ಗ್ರಾಮದ ಬಳಿ 70 ಎಂಎಲ್‌ಡಿ ಸಾಮರ್ಥ್ಯದ ಕೊಳಚೆ ನೀರು ಶುದ್ಧೀಕರಣ ಘಟಕ ನಿರ್ಮಾಣ ಮಾಡಲು ಸರಕಾರ ಉದ್ದೇಶಿಸಿದೆ. ಇದಕ್ಕಾಗಿ ಈಗಾಗಲೇ 19 ಎಕರೆ ಜಾಗ ಸ್ವಾಧೀನಪಡಿಸಿಕೊಂಡು ಅದನ್ನು ನೋಟಿಫೈ ಸಹ ಮಾಡಲಾಗಿದೆ. ಪರಿಹಾರದ ಮೊತ್ತ ಸಹ ನಿಗದಿಯಾಗಿದೆ. ಆದರೆ ಇದಕ್ಕೆ ರೈತರು ಸುತಾರಾಂ ಒಪ್ಪದೇ ಇರುವುದರಿಂದ ವಿವಾದ ದಿನದಿಂದ ದಿನಕ್ಕೆ ಜಟಿಲವಾಗುತ್ತ ಹೋಗುತ್ತಿದೆ.
ಅಲಾರವಾಡ ಬಳಿ ಸರಕಾರದ್ದೇ 20 ಎಕರೆಗೂ ಹೆಚ್ಚು ಜಮೀನು ಇದೆ. ಈ ಹಿಂದೆಯೇ ಇದಕ್ಕಾಗಿ ಕೋಟಿಗಟ್ಟಲೇ ವೆಚ್ಚಮಾಡಿ ಪೈಪ್‌ಲೈನ್ ಸಹ ಹಾಕಲಾಗಿದೆ. ಹೀಗಾಗಿ ಅಲ್ಲೇ ಘಟಕ ನಿರ್ಮಾಣ ಮಾಡಬೇಕು ಎಂಬುದು ರೈತರ ವಾದ. ಆದರೆ ಅಲಾರವಾಡ ಗ್ರಾಮದ ಬಳಿ ಬಡಾವಣೆಗಳಿರುವುದರಿಂದ ಅಲ್ಲಿ ಘಟಕ ನಿರ್ಮಾಣ ಮಾಡಲು ಬರುವುದಿಲ್ಲ. ಹೀಗಾಗಿ ಹಲಗಾ ಬಳಿ ಇದನ್ನು ಸ್ಥಾಪಿಸುವುದೇ ಸೂಕ್ತ ಎಂಬುದು ಸರಕಾರದ ಸ್ಪಷ್ಟನೆ. ಇದೇ ಕಾರಣದಿಂದ ಸರಕಾರ ಹಾಗೂ ರೈತರ ಮಧ್ಯೆ ಜಟಾಪಟಿ ಮುಂದುವರಿದಿದೆ.
ಪ್ರಭಾವಿಗಳ ಜಮೀನು: ಸುವರ್ಣ ವಿಧಾನಸೌಧಕ್ಕೆ ಹೊಂದಿಕೊಂಡಿರುವ ಅಲಾರವಾಡ ಗ್ರಾಮದ ಬಳಿ ಅನೇಕ ಪ್ರಭಾವಿ ರಾಜಕಾರಣಿಗಳ ಜಮೀನು ಇದೆ. ಕೆಲವರು ಭೂಮಿ ಖರೀದಿ ಮಾಡಿದ್ದಾರೆ. ಅಲ್ಲಿ ಬಡಾವಣೆ, ಕಾಲೇಜು ಹಾಗೂ ರೆಸಾರ್ಟ್ ಮಾಡುವುದು ಅವರ ಉದ್ದೇಶ. ಅದರ ಬಳಿ ಕೊಳಚೆ ನೀರು ಶುದ್ಧೀಕರಣ ಘಟಕ ಬರುವುದು ಬೇಡ ಎಂಬುದು ಅವರ ಉದ್ದೇಶ. ಈ ಕಾರಣದಿಂದ ಅವರು ಸರಕಾರದ ಮೇಲೆ ಒತ್ತಡ ತಂದು ಹಲಗಾ ಗ್ರಾಮದ ರೈತರ ಜಮೀನು ಕಸಿದುಕೊಂಡು ಅಲ್ಲಿ ಘಟಕ ನಿರ್ಮಾಣ ಮಾಡುವ ಯೋಜನೆ ರೂಪಿಸಿದ್ದಾರೆ ಎಂಬುದು ಹಲಗಾ ಗ್ರಾಮದ ರೈತ ಭರತ್ ಬೆಲ್ಲದ ಆರೋಪ.
ಈಗ ಹಲಗಾ ಗ್ರಾಮದ ಬಳಿ ಘಟಕ ನಿರ್ಮಾಣ ಮಾಡಿದರೆ ಸುಮಾರು 3 ಕಿ ಲೋಮೀಟರ್‌ವರೆಗೆ ಇದರ ದುರ್ವಾಸನೆ ಬರುತ್ತದೆ. ಇದೇ ರೀತಿ ಚಿಕ್ಕೋಡಿ ತಾಲೂಕಿನಲ್ಲಿ ಮಾಡಿರುವ ಘಟಕದಿಂದ ಬಹಳ ತೊಂದರೆಯಾಗುತ್ತಿದೆ ಎಂದು ಸಂಸದ ಪ್ರಕಾಶ ಹುಕ್ಕೇರಿ ಸಭೆಯಲ್ಲೇ ಹೇಳಿದ್ದಾರೆ. ಹೀಗಿರುವಾಗ ಪ್ರತಿಯೊಬ್ಬರ ವಿರೋಧ ಇದ್ದರೂ ಹಲಗಾ ಗ್ರಾಮದ ಬಳಿ ಯಾವ ಉದ್ದೇಶದಿಂದ ಇದನ್ನು ನಿರ್ಮಾಣ ಮಾಡಲಾಗುತ್ತಿದೆ ಎಂಬುದು ರೈತರ ಪ್ರಶ್ನೆ.
ಅಲಾರವಾಡ ಬಳಿ ಇರುವ ಸರಕಾರಿ ಜಮೀನಿನ ಮೇಲೆ ರಾಜಕಾರಣಿಗಳ ಕಣ್ಣು ಬಿದ್ದಿದೆ. ಅದನ್ನು ಕಬಳಿಸಬೇಕು ಎಂಬುದು ಅವರ ಲೆಕ್ಕಾಚಾರ. ಇದೇ ಕಾರಣಕ್ಕೆ ರಾಜಕಾರಣಿಗಳು ಕೊಳಚೆ ನೀರು ಶುದ್ಧೀಕರಣ ಘಟಕವನ್ನು ಅಲಾರವಾಡ ಬಳಿ ನಿರ್ಮಾಣ ಮಾಡಲು ಅಡ್ಡಿಪಡಿಸಿದ್ದಾರೆ ಎಂಬುದು ರೈತರ ಆರೋಪ.
ಅಲಾರವಾಡ ಬೇಡ ಎಂದರೆ ಸಮೀಪದ ಮುಚ್ಚಂಡಿ ಬಳಿ 26 ಎಕರೆ ಸರಕಾರಿ ಭೂಮಿ ಇದೆ. ಈ ಎರಡೂ ಗ್ರಾಮಗಳ ಜಾಗ ಬಿಟ್ಟು ಹಲಗಾ ಬಳಿಯೇ ನಿರ್ಮಾಣ ಮಾಡಬೇಕು ಎಂಬುದು ಯಾವ ನ್ಯಾಯ. ನಾವು ಈಗಾಗಲೇ ಸುವರ್ಣ ಸೌಧಕ್ಕೆ 120 ಎಕರೆ ಜಾಗ ಕಳೆದುಕೊಂಡಿದ್ದೇವೆ. ಈಗ ಮತ್ತೆ ಕಸಿದುಕೊಂಡು ನಿರ್ಗತಿಕರನ್ನಾಗಿ ಮಾಡಬೇಡಿ ಎಂಬುದು ರೈತರ ಅಳಲು.
ಈ ಹಿಂದೆ ಸುವರ್ಣ ವಿಧಾನಸೌಧ ನಿರ್ಮಾಣಕ್ಕೆ ನಮ್ಮ ಜಮೀನು ಸ್ವಾಧೀನಪಡಿಸಿಕೊಂಡಾಗ ನಮ್ಮ ಭಾಗಕ್ಕೆ ಒಳ್ಳೆಯ ಯೋಜನೆ ಬರುತ್ತದೆ. ನಮ್ಮ ಸಮಸ್ಯೆಗಳೆಲ್ಲ ದೂರವಾಗುತ್ತವೆ ಎಂಬ ಆಸೆಯಿಂದ ಜಮೀನು ಬಿಟ್ಟುಕೊಟ್ಟೆವು. ಆದರೆ ಸೌಧ ನಿರ್ಮಾಣ ಆಯಿತು. ಅದರಿಂದ ನಮಗೆ ಏನೂ ಸಿಗಲಿಲ್ಲ. ಇವತ್ತಿಗೂ ನಾವು ಕುಡಿಯುವ ನೀರು ಹಾಗೂ ಸಮರ್ಪಕ ವಿದ್ಯುತ್‌ಗೆ ಪರಿತಪಿಸುತ್ತಲೇ ಇದ್ದೇವೆ.
ಇಂತಹ ಸ್ಥಿತಿಯಲ್ಲಿ ಈಗ ಕೊಳಚೆ ನೀರು ಶುದ್ಧೀಕರಣ ಘಟಕಕ್ಕೆ ಜಮೀನು ನೀಡಿ ನಾವೇ ಮೈಮೇಲೆ ಕೊಳಚೆ ನೀರು ಹಾಕಿಕೊಳ್ಳಬೇಕೆ ಎನ್ನುತ್ತಾರೆ ಹಲಗಾ ಗ್ರಾಮದ ರೈತ ಮುಖಂಡ ಧನ್ಯಕುಮಾರ ದೇಸಾಯಿ.
ಕೋಟಿಗಳ ವೆಚ್ಚಕ್ಕೆ ಯಾರು ಹೊಣೆ: ಕೊಳಚೆ ನೀರು ಶುದ್ಧೀಕರಣ ಘಟಕದ ನಿರ್ಮಾಣಕ್ಕೆ 1985 ರಲ್ಲಿ ಅಲಾರವಾಡದ ಬಳಿ ಸರಕಾರದ ಜಮೀನಿನಲ್ಲಿ ಕಾಮಗಾರಿ ಆರಂಭಿಸಿ ಪೈಪ್‌ಲೈನ್ ಸಹ ಹಾಕಲಾಗಿತ್ತು. ಆಗ ಸರಕಾರ ಇದಕ್ಕೆ ವೆಚ್ಚಮಾಡಿದ್ದು ಏಳು ಕೋಟಿ. ಮುಂದೆ ಈ ಕಾಮಗಾರಿ ನಡೆಯದೇ ಅರ್ಧಕ್ಕೆ ನಿಂತಿತು. ನಂತರ ಬಂದ ಸರಕಾರ, ಸಚಿವರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಇದನ್ನು ಪೂರ್ಣಗೊಳಿಸಲು ಮುಂದಾಗಲೇ ಇಲ್ಲ.
ಇದಾದ ಬಳಿಕ ಅಲಾರವಾಡಾ ಬಳಿ ಕರ್ನಾಟಕ ಗೃಹ ಮಂಡಳಿ ಬಡಾವಣೆ ನಿರ್ಮಾಣವಾಯಿತು. ಅಶ್ರಯ ಮನೆಗಳು ಬಂದವು. ಇದನ್ನೇ ನೆಪಮಾಡಿಕೊಂಡು ಅಧಿಕಾರಿಗಳು ಅಲಾರವಾಡದ ಬಳಿ ಕೊಳಚೆ ನೀರು ಶುದ್ಧೀಕರಣ ಘಟಕ ನಿರ್ಮಾಣ ಮಾಡುವುದನ್ನು ಕೈಬಿಟ್ಟರು. ಅಲ್ಲಿ ಘಟಕ ನಿರ್ಮಾಣ ಮಾಡುವ ಉದ್ದೇಶದಿಂದಲೇ ಏಳು ಕೋಟಿ ರೂ. ವೆಚ್ಚಮಾಡಿ ಪೈಪ್‌ಲೈನ್ ಅಳವಡಿಸಲಾಗಿದೆ. ಈಗ ಯಾವ ಕಾರಣಕ್ಕೆ ಇದನ್ನು ಕೈಬಿಟ್ಟರು. ಈ ಏಳು ಕೋಟಿ ರೂ. ಗಳಿಗೆ ಯಾರು ಹೊಣೆ ಎಂಬುದು ರೈತ ಮುಖಂಡ ಧನ್ಯಕುಮಾರ ದೇಸಾಯಿ ಪ್ರಶ್ನೆ.
1985 ರಲ್ಲಿ ಆಗಿನ ಇಂಜನಿಯರ್‌ಗಳು ಅಲಾರವಾಡ ಬಳಿ ಕೊಳಚೆ ನೀರು ಶುದ್ಧೀಕರಣ ಘಟಕ ನಿರ್ಮಾಣ ಮಾಡುವುದು ಸೂಕ್ತ. ಇಲ್ಲಿ ನೀರು ಸರಾಗವಾಗಿ ಹರಿಯುವುದರಿಂದ ಪೈಪ್‌ಲೈನ್ ಅಗತ್ಯವಿಲ್ಲ ಎಂದು ಸಹ ಹೇಳಿದ್ದರು. ಆದರಂತೆ ಕಾಮಗಾರಿಯೂ ನಡೆದಿತ್ತು. ಈಗ ಕೇವಲ ಅಲ್ಲಿ ಶುದ್ಧೀಕರಣ ಪ್ಲಾಂಟ್ ಅಳವಡಿಸಿದರೆ ಸಾಕು ಎಲ್ಲವೂ ಬಗೆಹರಿಯುತ್ತದೆ. ಅದನ್ನು ಬಿಟ್ಟು ಹಲಗಾ ಬಳಿ ಕೃಷಿ ಜಮೀನು ವಶಪಡಿಸಿಕೊಳ್ಳುವುದು ಸರಿಯಲ್ಲ ಎಂಬುದು ರೈತರ ವಾದ.
ಈಗಾಗಲೇ ಹಲಗಾ ಬಳಿಯ ಜಾಗವನ್ನು ನೋಟಿಫೈ ಮಾಡಲಾಗಿದೆ. ಅದನ್ನು ಮರಳಿ ರೈತರಿಗೆ ಕೊಡುವುದು ಕಷ್ಟ. ಈ ಬಗ್ಗೆ ರೈತರಿಗೆ ಸಹ ಸಹ ಮನವರಿಕೆ ಮಾಡಿಕೊಡಲಾಗಿದೆ. ಭೂ ಪರಿಹಾರ ಹೆಚ್ಚಿಸುವ ಬಗ್ಗೆ ಪರಿಶೀಲನೆ ಮಾಡಲಾಗುವದು. ಈ ಸಂಬಂಧ ಮತ್ತೂಮ್ಮೆ ರೈತರ ಸಭೆ ಕರೆದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು.
•ಸತೀಶ ಜಾರಕಿಹೊಳಿ ಅರಣ್ಯ ಸಚಿವ
ಬೆಳಗಾವಿ ನಗರದಲ್ಲಿ ಯಾವುದೇ ಯೋಜನೆ ಕೈಗೊಂಡರೂ ಅದಕ್ಕೆ ಮೊದಲು ಬಲಿಯಾಗುವುದು ಬೆಳಗಾವಿ ಗ್ರಾಮೀಣ ಭಾಗದ ರೈತರು. ವಿಮಾನ ನಿಲ್ದಾಣ, ಸುವರ್ಣ ವಿಧಾನಸೌಧ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಹೀಗೆ ಹಲವಾರು ಯೋಜನೆಗಳಿಗೆ ಗ್ರಾಮೀಣ ಕ್ಷೇತ್ರದ ರೈತರು ಸಾವಿರಾರು ಎಕರೆ ಭೂಮಿ ಕಳೆದುಕೊಂಡಿದ್ದಾರೆ. ಇದಕ್ಕೆ ಪ್ರತಿಯಾಗಿ ಅವರಿಗೆ ಸಿಕ್ಕಿದ್ದು ಕಚಡಾ ಡಿಪೋ ಹಾಗೂ ಅದರ ವಾಸನೆ. ಈಗ ಅದರ ಜೊತೆಗೆ ಕೊಳಚೆ ನೀರು ಶುದ್ಧೀಕರಣ ಘಟಕ. ಹೀಗಾದರೆ ಇಲ್ಲಿನ ರೈತರು ಒಂದಿಂಚೂ ಭೂಮಿ ಇಲ್ಲದೇ ದುಶ್ಚಟಗಳಿಗೆ ಬಲಿಯಾಗುತ್ತಾರೆ.
•ಲಕ್ಷ್ಮೀ ಹೆಬ್ಟಾಳಕರ
ಬೆಳಗಾವಿ ಗ್ರಾಮೀಣ ಶಾಸಕಿ
ಕೇಶವ ಆದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಎಸ್‌ಡಿಎ ರುದ್ರಣ್ಣ ಕೇಸ್: ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು
Belagavi: ಸಿಎಂ ಮುಟ್ಟೋಕೆ ಆಗುತ್ತಾ…: ಸಿದ್ದರಾಮಯ್ಯ ಹೇಳಿಕೆಗೆ ವ್ಯಂಗ್ಯವಾಡಿದ ಸೋಮಣ್ಣ
Assembly Election: “ಮಹಾ’ ಅಖಾಡದಲ್ಲಿ ಕರುನಾಡ ನಾಯಕರ ಹವಾ!
Belagavi: ಆಟೋ ಚಾಲಕನ ಮೇಲೆ ಅಪರಿಚಿತ ದುಷ್ಕರ್ಮಿಗಳಿಂದ ಹಲ್ಲೆ
Belagavi: ಅಕ್ರಮ ಆಸ್ತಿ ಸಂಪಾದನೆ ಆರೋಪ… ಬೆಳಗಾವಿ ಜಿಲ್ಲೆಯ ವಿವಿಧೆಡೆ ಲೋಕಾಯುಕ್ತ ದಾಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.