ಅಮರನಾಥದಲ್ಲಿ ಹವಾಮಾನ ವೈಪರೀತ್ಯಕ್ಕೆ ಹೈರಾಣಾದ ಬೆಳಗಾವಿಯ ಪ್ರವಾಸಿಗರು
Team Udayavani, Jul 11, 2022, 3:07 PM IST
ಬೆಳಗಾವಿ: ಪ್ರಸಿದ್ಧ ಯಾತ್ರಾ ಸ್ಥಳ ಅಮರನಾಥ ದರ್ಶನಕ್ಕೆ ತೆರಳಿರುವ ಬೆಳಗಾವಿಯ 32 ಜನರ ತಂಡ ಹವಾಮಾನ ವೈಪರೀತ್ಯದಿಂದಾಗಿ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಶೇಷನಾಗದಿಂದ ಮರಳಿ ಪೆಹಲಗಾಮ್ ಎಂಬ ಪ್ರದೇಶಕ್ಕೆ ವಾಪಸ್ಸಾಗಿದ್ದು, ಮೇಘ ಸ್ಪೋಟ ಆಗಿ ಗುಡ್ಡ ಕುಸಿತಗೊಂಡಿರುವ ಮಾರ್ಗ ಬಂದ್ ಮಾಡಿದ್ದರಿಂದ ದರ್ಶನಕ್ಕಾಗಿ ಇನ್ನೂ 2-3 ದಿನ ಕಾಯಬೇಕಾಗಿದೆ.
ಶೇಷನಾಗ ಸೇರಿದಂತೆ ಸುತ್ತಲಿನ ಪ್ರದೇಶದಲ್ಲಿ ಜೋರಾಗಿ ಮಳೆ ಸುರಿಯುತ್ತಿರುವುದರಿಂದ ಈ ಪ್ರದೇಶದಲ್ಲಿ ಆಮ್ಲಜನಕ ಕೊರತೆ ಉಂಟಾಗುತ್ತಿದ್ದು, ಹೀಗಾಗಿ ಆರೋಗ್ಯದಲ್ಲಿ ಏರುಪೇರು ಆಗುತ್ತಿರುವುದರಿಂದ ಬೆಳಗಾವಿಯ ಈ 32 ಪ್ರವಾಸಿಗರು ವಾಪಸ್ ಬಂದಿದ್ದು, ಈ ಬಗ್ಗೆ ರವಿವಾರ ಸಂಜೆ ಉದಯವಾಣಿಯೊಂದಿಗೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಶೇಷನಾಗ ಪ್ರದೇಶದಲ್ಲಿ ವಿಪರೀತ ಸಮಸ್ಯೆ ಆಗುತ್ತಿದೆ. ಜು. 8ರಿಂದ ಇಲ್ಲಿಯೇ ವಾಸ್ತವ್ಯ ಮಾಡಲಾಗಿತ್ತು. ನಡೆದುಕೊಂಡು ಗುಡ್ಡ ಹತ್ತುವಾಗ ಉಸಿರಾಟ ಸಮಸ್ಯೆ ಆಗುತ್ತಿದೆ. ಇನ್ನೂ ಎರಡು ದಿನಗಳ ಕಾಲ ಇಲ್ಲಿ ಉಳಿದುಕೊಂಡು ದರ್ಶನಕ್ಕಾಗಿ ಕಾಯುವುದು ಕಷ್ಟಕರವಾಗಿದೆ. ಹೀಗಾಗಿ ನಾವೆಲ್ಲರೂ ಶೇಷನಾಗದಿಂದ ಪೆಹಲಗಾಮ್‌ಕ್ಕೆ ರವಿವಾರ ಬೆಳಗ್ಗೆ 10:30ಕ್ಕೆ ಅಲ್ಲಿಂದ ಬಿಟ್ಟು ಕಾಲ್ನಡಿಗೆಯಲ್ಲಿ ಸಂಜೆ 4:30ರ ಸುಮಾರಿಗೆ ಮರಳಿದ್ದೇವೆ ಎಂದು ಬೆಳಗಾವಿ ನಗರದ ಪಾಟೀಲ ಗಲ್ಲಿಯ ಎಸ್‌ಬಿಐ ಶಾಖೆಯ ಅಧಿಕಾರಿ ಮಾರುತಿ ಬಂಬರಗೇಕರ ಉದಯವಾಣಿಗೆ ತಿಳಿಸಿದರು.
ಪೆಹಲಗಾಮ್‌ಕ್ಕೆ ಮರಳಿದ 32 ಮಂದಿ: ಈ ಪ್ರದೇಶದಲ್ಲಿ ವಿಪರೀತ ಮಳೆ ಆಗುತ್ತಿದೆ. ಶೇಷನಾಗದಲ್ಲಿ ಉಚಿತ ಊಟ, ಉಪಹಾರ ಸಿಗುತ್ತಿದೆ. ಆದರೆ ನಿನ್ನೆಯಿಂದ ಅಲ್ಲಿಯೂ ಅಸ್ತವ್ಯಸ್ಥವಾಗುತ್ತಿದೆ. ಶೇಷನಾಗದಿಂದ ಕೆಲವೇ ಅಂತರದಲ್ಲಿ ಅಮರನಾಥ ದೇವಸ್ಥಾನ ಇದೆ. ಆದರೆ ಅಲ್ಲಿಗೆ ಹೋಗಲು ಇನ್ನೂ ಮಾರ್ಗ ಆರಂಭಗೊಂಡಿಲ್ಲ. ಗುಡ್ಡ ಕುಸಿತಗೊಂಡು ದುರ್ಘಟನೆ ಸಂಭವಿಸಿದ ಸ್ಥಳದಲ್ಲಿ ಸೇತುವೆ ನಿರ್ಮಾಣ ಇನ್ನೂ ಆಗಿಲ್ಲ. ಈ ಕೆಲಸ ಮುಗಿಯಲು ಇನ್ನೂ 2-3 ದಿನ ಬೇಕಾಗುತ್ತದೆ. ಹೀಗಾಗಿ ನಾವು ಕಾಯುವುದು ಸೂಕ್ತ ಅಲ್ಲ ಎಂಬ ಕಾರಣಕ್ಕೆ ಪೆಹಲಗಾಮ್ ಎಂಬ ಪ್ರದೇಶಕ್ಕೆ ಬಂದಿದ್ದೇವೆ. ಸೋಮವಾರದಿಂದ ದರ್ಶನ ಆರಂಭಗೊಂಡರೆ ದರ್ಶನ ಪಡೆಯಲು ಮತ್ತೆ ಪಾದಯಾತ್ರೆ ನಡೆಸುವುದಾಗಿ ವಿವರಿಸಿದರು.
ಬಹುತೇಕ ಪ್ರವಾಸಿಗರು ಪೆಹಲಗಾಮ್‌ದಲ್ಲಿಯೇ ಉಳಿದುಕೊಂಡಿದ್ದಾರೆ. ದರ್ಶನಕ್ಕೆ ಅವಕಾಶ ಇಲ್ಲದ್ದಕ್ಕೆ ಶೇ. 90ರಷ್ಟು ಪ್ರವಾಸಿಗರು ಪೆಹಲಗಾಮ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಶೇಷನಾಗದಲ್ಲಿ ನಾವು 32 ಜನ ಉಳಿದುಕೊಳ್ಳಲು ಪ್ರತಿಯೊಬ್ಬರಿಗೆ ತಲಾ 500 ರೂ. ರೂಮ್ ಬಾಡಿಗೆ ಕೊಟ್ಟಿದ್ದೇವೆ. ಮರುದಿನ ಮತ್ತೆ ಉಳಿದುಕೊಳ್ಳಬೇಕಾಗಿದ್ದರಿಂದ ಬಿಎಸ್‌ಎಫ್ ಕ್ಯಾಂಪ್ ಸೈನಿಕರ ನಿರ್ದೇಶನದಂತೆ ಎರಡನೇ ದಿನದ ಬಾಡಿಗೆ ಪಡೆದುಕೊಳ್ಳಲಿಲ್ಲ ಎಂದು ಮಾರುತಿ ಬಂಬರಗೇಕರ ತಿಳಿಸಿದರು.
ವಿಪರೀತ ಮಳೆ ಆಗುತ್ತಿರುವುದರಿಂದ ಹವಾಮಾನ ವೈಪರೀತ್ಯದಿಂದಾಗಿ ಸದ್ಯ ಹೆಲಿಕಾಪ್ಟರ್ ವ್ಯವಸ್ಥೆಯೂ ಬಂದ್ ಮಾಡಲಾಗಿದೆ. ಇಂಥ ಒಂದು ಸಂದಿಗ್ಧ ಸ್ಥಿತಿಯಲ್ಲಿ ಗುಡ್ಡ ಏರಿ ನಡೆದುಕೊಂಡು ಹೋಗುವುದು ಅಸಾಧ್ಯ. ಹೀಗಾಗಿ ಸರ್ಕಾರ ಈ ಮಾರ್ಗ ಬಂದ್ ಮಾಡಿದೆ. ಸೋಮವಾರದಿಂದ ವೀರನಾಗ ಕಡೆಗೆ ತೆರಳುವ ಮಾರ್ಗದಿಂದ ದರ್ಶನ ಶುರುವಾಗುವ ಸಾಧ್ಯತೆ ಇದೆ ಎನ್ನುತ್ತಿದ್ದಾರೆ. ಸಾಧ್ಯವಾದರೆ ದರ್ಶನ ಪಡೆದುಕೊಂಡು ಬೆಳಗಾವಿಗೆ ವಾಪಸ್ ಆಗುತ್ತೇವೆ ಎನ್ನುತ್ತಾರೆ ಶಿವಾಜಿ ಮಂಡೋಳಕರ.
ನಮ್ಮ ಕಣ್ಣೆದುರು 3 ಶವ ಎತ್ತಿಕೊಂಡು ಹೋದರು ಶೇಷನಾಗ ಪ್ರದೇಶದಲ್ಲಿ ಗುಡ್ಡ ಹತ್ತುವಾಗ ಉಸಿರಾಟದ ತೊಂದರೆ ಬಹಳಷ್ಟು ಜನರಿಗೆ ಆಗಿದೆ. ಇದರ ಅನುಭವ ನಮ್ಮ ಗುಂಪಿನ ಬಹುತೇಕರಿಗೆ ಆಗಿದೆ. ಹೀಗಾಗಿ ರಿಸ್ಕ್ ತೆಗೆದುಕೊಳ್ಳುವುದು ಬೇಡ ಎಂಬ ಕಾರಣಕ್ಕೆ ವಾಪಸ್ ಪೆಹಲಗಾಮ್‌ಕ್ಕೆ ಬಂದಿದ್ದೇವೆ. ಹೃದಯಾಘಾತ ಹಾಗೂ ಉಸಿರಾಟದ ತೊಂದರೆಯಿಂದ ಮೂವರು ಮೃತಪಟ್ಟಿದ್ದಾರೆ. ಮೂವರ ಮೃತದೇಹಗಳನ್ನು ಎತ್ತಿಕೊಂಡು ತರುತ್ತಿರುವುದು ನಮ್ಮ ಕಣ್ಣೆದುರು ನೋಡಿ ಆತಂಕಗೊಂಡಿದ್ದೇವೆ ಎಂದು ಮಹಾನಗರ ಪಾಲಿಕೆ ಸದಸ್ಯ ಶಿವಾಜಿ ಮಂಡೋಳಕರ ತಿಳಿಸಿದರು. ಕುದುರೆ, ಕಾಲ್ನಡಿಗೆಯಲ್ಲಿ ವಾಪಸ್ ಶೇಷನಾಗದಿಂದ ಪೆಹಲಗಾಮ್ ದೂರ 16 ಕಿ.ಮೀ. ಕ್ರಮಿಸುವುದು ಕಷ್ಟಕರ. ನಮ್ಮ ತಂಡದಲ್ಲಿಯ ಕೆಲವರು ಕುದುರೆ ಸಹಾಯದಿಂದ ಬಂದರೆ ಇನ್ನುಳಿದವರು ಕಾಲ್ನಡಿಗೆಯಲ್ಲಿ ಬಂದಿದ್ದೇವೆ. 6 ಕಿ.ಮೀವರೆಗೆ ಪಿಶುಟಾಪ್ ಎಂಬ ಗ್ರಾಮದವರೆಗೆ ವಿಪರೀತ ಮಳೆ ಇತ್ತು. ಇಲ್ಲಿಂದ ಚಂದನವಾಡಿ 3 ಕಿ.ಮೀ. ಅಂತರವಿದೆ. ಅಲ್ಲಿಂದ ಸ್ವಲ್ಪ ಅಂತರದಲ್ಲಿ ಬಂದಾಗ ತುಸು ಮಳೆ ಕಡಿಮೆ ಇದೆ ಎಂದು ಎಸ್‌ಬಿಐ ಅಧಿಕಾರಿ ಮಾರುತಿ ಬಂಬರಗೇಕರ ತಿಳಿಸಿದರು.
ಮೊಬೈಲ್ ಸಂಪರ್ಕ ಕಡಿತ
ನಮ್ಮ ತಂಡದಲ್ಲಿಯ ಒಬ್ಬ ವ್ಯಕ್ತಿ ಕುದುರೆ ಏರಿ ಮುಂದೆ ಸಾಗಿದ್ದಾರೆ. ನಾವು ಹಿಂದಿನಿಂದ ಬರುತ್ತಿದ್ದೇವೆ ಎಂದುಕೊಂಡು ಕುದುರೆಯಲ್ಲಿ ಪಂಚಕರಣಿವರೆಗೆ ಹೋಗಿದ್ದಾರೆ. ಮೊಬೈಲ್ ಸಂಪರ್ಕ ಸಾಧ್ಯವಾಗದ್ದಕ್ಕೆ ಬಹಳ ಕಷ್ಟವಾಯಿತು. ಇಲ್ಲಿ ಪೋಸ್ಟಪೇಯ್ಡ್ ಮೊಬೈಲ್ ನೆಟ್‌ವರ್ಕ್ ಮಾತ್ರ ಲಭ್ಯ ಆಗುತ್ತಿವೆ. ಪಂಜಾಬ್‌ನ ಪ್ರವಾಸಿಗರ ಮೂಲಕ ಅವರ ಮೊಬೆ„ಲ್‌ದಿಂದ ಸಂಪರ್ಕ ಮಾಡಿ ಪಂಚಕರಣಿಯಿಂದ 7-8 ಸಾವಿರ ರೂ. ನೀಡಿ ಕುದುರೆ ಸಹಾಯದಿಂದ ಮತ್ತೆ ವಾಪಸ್ ಆಗಿದ್ದಾರೆ ಎಂದು ಮಾರುತಿ ಬಂಬರಗೇಕರ ತಿಳಿಸಿದರು.
-ಭೈರೋಬಾ ಕಾಂಬಳೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಉಡುಪಿಯಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ: ತ್ವರಿತ ಕ್ರಮಕ್ಕೆ ಸಚಿವೆ ಹೆಬ್ಬಾಳ್ಕರ್ ಸೂಚನೆ
ಮನೆ ಬೀಗ ತೆರವು ಮಾಡಿಸಿ ಮಾನವೀಯತೆ ತೋರಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್
ಮೈಕ್ರೋ ಫೈನಾನ್ಸ್ ಕಿರುಕುಳ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ: ಜಾರಕಿಹೊಳಿ
Chikodi: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ; ಅತಿಥಿ ಉಪನ್ಯಾಸಕನಿಗೆ ಥಳಿಸಿದ ಪೋಷಕರು
Belagavi: ಫೈನಾನ್ಸ್ ಸಾಲ; ಮನೆ ಜಪ್ತಿ ಮಾಡಿ ಬಾಣಂತಿ, ಹಸುಗೂಸನ್ನು ಹೊರದಬ್ಬಿದರು
MUST WATCH
ಹೊಸ ಸೇರ್ಪಡೆ
Chikkamagaluru: ಅಲ್ಯೂಮಿನಿಯಂ ಏಣಿಗೆ ವಿದ್ಯುತ್ ತಂತಿ ತಗುಲಿ ಕೃಷಿಕ ಸಾವು
Mahakumbh Mela: ಪ್ರಯಾಗ್ ರಾಜ್ ಗೆ ಭೇಟಿ ಕೊಟ್ಟರೆ “ಈ ವಸ್ತು”ಗಳನ್ನು ಮರೆಯದೇ ತನ್ನಿ…
Thirthahalli: ಕುವೆಂಪು ಆಶಯಕ್ಕೆ ಅಪಮಾನ… ಕುಪ್ಪಳಿಯಲ್ಲಿ ಅದ್ದೂರಿ ಮಂತ್ರ ಮಾಂಗಲ್ಯ
ಪ್ರಯಾಗ್ ನಲ್ಲಿ ಜ.23-27 ರವರೆಗೆ 5 ದಿನಗಳ ಕಾಲ ಶ್ರೀ ಚಕ್ರ ನವಾವರಣ ಪೂಜೆ ಸಮೇತ ವಿವಿಧ ಹೋಮ
Charmady: ನಿಯಂತ್ರಣಕ್ಕೆ ಬಂದ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯ ಬೆಂಕಿಗಾಹುತಿ…