ಸರ್ಕಾರಿ ವಾಹನ ಮೇಲೆ ಕಲ್ಲು ತೂರಾಟ ಎಂಬ ಕಥೆ ಕಟ್ಟಿದ್ದ ಚಾಲಕನ ಬಣ್ಣ ಬಯಲು
Team Udayavani, Dec 15, 2022, 10:57 PM IST
ಬೆಳಗಾವಿ: ಇಲ್ಲಿಯ ಸುವರ್ಣ ವಿಧಾನಸೌಧ ಎದುರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಬರುವಾಗ ಮರಾಠಿ ಭಾಷಿಕರು ಕಲ್ಲು ತುರಾಟ ನಡೆಸಿದ್ದಾರೆ ಎಂಬ ಸುಳ್ಳು ಕಥೆ ಕಟ್ಟಿದ್ದ ಸರ್ಕಾರಿ ವಾಹನ ಚಾಲಕನ ಬಣ್ಣ ಬಯಲಾಗಿದ್ದು, ಕುಡಿದ ನಶೆಯಲ್ಲಿ ವಾಹನ ಅಪಘಾತಗೊಳಪಡಿಸಿ ನೈಜ ಘಟನೆಯನ್ನು ಮುಚ್ಚಿ ಹಾಕಿ ಸುಳ್ಳು ದೂರು ದಾಖಲಾಗಿರುವುದು ಬೆಳಕಿಗೆ ಬಂದಿದೆ.
ಬೆಂಗಳೂರಿನ ರಾಜ್ಯ ಕೃಷಿ ಗ್ರಾಮೀಣ ಅಭಿವೃದ್ಧಿ ಬ್ಯಾಂಕಿಗೆ ಸಂಬಂಧಿಸಿದ ವಾಹನ ಚಳಿಗಾಲ ಅಧಿವೇಶನಕ್ಕಾಗಿ ಚೇತನ ಎನ್.ವಿ. ಎಂಬ ಚಾಲಕ ತರುತ್ತಿದ್ದನು. ನೈಜ ಘಟನೆ ಆಗಿದ್ದನ್ನು ಮರೆ ಮಾಚಿಸಿ ಸುಳ್ಳು ದೂರು ನೀಡಿದ್ದನು. ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ರವೀಂದ್ರ ಗಡಾದಿ ಅವರು ತೀವ್ರ ತನಿಖೆ ನಡೆಸಿದಾಗ ಚಾಲಕನ ಚಾಲಕಿತನ ಬಯಲಾಗಿದೆ. ಬೆಳಗಾವಿಯಲ್ಲಿ ಕನ್ನಡ-ಮರಾಠಿಗರ ಮಧ್ಯೆ ನಡೆದಿರುವ ದ್ವೇಷದ ದಳ್ಳುರಿಗೆ ಬೆಂಕಿ ಹಚ್ಚಲು ಯತ್ನಿಸಿದ್ದ ಚಾಲಕನ ನಿಜ ಬಣ್ಣವನ್ನು ಡಿಸಿಪಿ ಗಡಾದಿ ಹೊರಗೆಡವಿದ್ದಾರೆ.
ಘಟನೆ ನಡೆದಿದ್ದು ಏನು?: ಡಿ. 14ರಂದು ಬೆಳಗ್ಗೆ 7:45ರ ಸುಮಾರಿಗೆ ಬೆಂಗಳೂರಿನಿಂದ ಬೋಲೆರೋ ವಾಹನ ಚಲಾಯಿಸಿಕೊಂಡು ಚಾಲಕ ಬೆಳಗಾವಿ ಕಡೆಗೆ ಬರುತ್ತಿದ್ದನು. ಸಂಜೆ 4:30ರ ಸುಮಾರಿಗೆ ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲೂಕಿನ ತಡಸ ಗ್ರಾಮದ ರೆಸ್ಟೊರೆಂಟ್‌ನಲ್ಲಿ ಸಾರಾಯಿ ಕುಡಿದು ಬೆಳಗಾವಿಯತ್ತ ಪ್ರಯಾಣ ಬೆಳೆಸಿದ್ದಾನೆ. ಕಬ್ಬಿಣದ ಸರಳುಗಳನ್ನು ತುಂಬಿಕೊಂಡು ಬರುತ್ತಿದ್ದ ಲಾರಿಗೆ ಮುಂದಿನ ಗ್ಲಾಸ್ ಡಿಕ್ಕಿಯಾಗಿ ಒಡೆದಿದೆ. ಗ್ಲಾಸ್ ಒಡೆದಿದ್ದ ಬೋಲೆರೋ ವಾಹನ ರಾತ್ರಿ 7:28ರ ಸುಮಾರಿಗೆ ಹಿರೇಬಾಗೇವಾಡಿ ಟೋಲ್ ಗೇಟ್ ಬಳಿ ದಾಟಿದೆ.
ತನ್ನ ತಪ್ಪಿನಿಂದ ವಾಹನದ ಗ್ಲಾಸು ಒಡೆದಿದೆ ಅಂತ ಗೊತ್ತಾದರೆ ತನಗೆ ಮೇಲಧಿಕಾರಿಗಳು ಶಿಸ್ತು ಕ್ರಮ ಜರುಗಿಸಬಹುದೆಂದು ಚಾಲಕ ಚೇತನ ಈ ನೈಜ ಘಟನೆಯನ್ನು ಮುಚ್ಚಿಟ್ಟು ವಿನಾಕಾರಣ ದೂರು ನೀಡಿದ್ದನು ಎಂದು ಪೊಲೀಸರ ತನಿಖೆಯಲ್ಲಿ ಗೊತ್ತಾಗಿದೆ.
ಈ ವಾಹನವನ್ನು ರಾತ್ರಿ 10:30ರ ಸುಮಾರಿಗೆ ಸುವರ್ಣ ವಿಧಾನಸೌಧ ದಾಟಿದ ಬಳಿಕ ಹಲಗಾ-ಬಸ್ತವಾಡ ಬಳಿ ಐದಾರು ಜನ ಮರಾಠಿ ಮಾತನಾಡುವವರು ಅಡ್ಡಗಟ್ಟಿ ಕಲ್ಲು ತೂರಾಟ ನಡೆಸಿದ್ದರು. ಗಾಜು ಪುಡಿ ಪುಡಿ ಮಾಡಿದ್ದರು. ನಂತರ ನನ್ನ ಮೇಲೆ ಹಲ್ಲೆಗೆ ಯತ್ನಿಸಿದಾಗ ಅಲ್ಲಿಂದ ವಾಹನ ಚಲಾಯಿಸಿಕೊಂಡು ತಪ್ಪಿಸಿಕೊಂಡು ಬಂದಿರುವುದಾಗಿ ವಾಹನ ಚಾಲಕ ಸುಳ್ಳು ದೂರು ದಾಖಲಿಸಿದ್ದನು.
ದೂರುದಾರ ಹೇಳಿದ ಹಾಗೆ ಯಾವುದೇ ವ್ಯಕ್ತಿಗಳು ವಾಹನದ ಗ್ಲಾಸ್ ಒಡೆದಿಲ್ಲ. ಅಂತಹ ಯಾವುದೇ ಘಟನೆ ನಡೆದಿಲ್ಲ. ಚಾಲಕ ಸುಳ್ಳು ದೂರು ದಾಖಲಿಸಿ ತನ್ನ ತಪ್ಪು ಮರೆ ಮಾಚಲು ಇಂಥ ನಾಟಕವಾಡಿದ್ದಾನೆ. ತನಿಖೆ ವೇಳೆ ಎಲ್ಲವೂ ಬಯಲಾಗಿದೆ. ಈತನ ವಿರುದ್ಧ ದೂರು ದಾಖಲಿಸಿಕೊಳ್ಳಲಾಗುವುದು. ವದಂತಿಗಲಿಗೆ ಯಾರೂ ಕಿವಿಗೊಡಬಾರದು.
– ರವೀಂದ್ರ ಗಡಾದಿ, ಡಿಸಿಪಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.