ನೆರೆ ಮಧ್ಯೆಯೂ ಬೆನಕನ ಸಂಭ್ರಮ
Team Udayavani, Sep 2, 2019, 12:12 PM IST
ಬೆಳಗಾವಿ: ಪ್ರತಿಷ್ಠಾಪನೆಗೆ ಸಿದ್ಧಗೊಂಡಿರುವ ಗಣೇಶ ಮೂರ್ತಿ.
ಬೆಳಗಾವಿ: ಅತ್ಯಂತ ವಿಜೃಂಭಣೆಯಿಂದ ಆಚರಿಸಲ್ಪಡುವ, ರಾಜ್ಯದಲ್ಲಿಯೇ ಮಾದರಿ ಎನಿಸಿಕೊಂಡ ವಿಘ್ನ ನಿವಾರಕ ಶ್ರೀ ಗಣೇಶನ ಹಬ್ಬಕ್ಕೆ ಬೆಳಗಾವಿ ಸಕಲ ರೀತಿಯಿಂದ ಸಜ್ಜಾಗಿದೆ. ಪ್ರವಾಹದ ಕಾರ್ಮೋಡದಲ್ಲಿಯೂ ಗಣಪನನ್ನು ಬರಮಾಡಿಕೊಳ್ಳಲು ಜನರು ಕಾತರರಾಗಿದ್ದಾರೆ.
ಮನೆ-ಮನಗಳಲ್ಲಿ ಗಣಪನನ್ನು ಪ್ರತಿಷ್ಠಾಪಿಸಲು ಕುಂದಾನಗರಿ ಸಜ್ಜುಗೊಂಡಿದೆ. ಮುಂಬೈ ಹಾಗೂ ಪುಣೆ ನಂತರ ಬೆಳಗಾವಿಯ ಗಣೇಶೋತ್ಸವ ಎಲ್ಲೆಡೆ ಪ್ರಖ್ಯಾತಿ ಪಡೆದುಕೊಂಡಿದೆ. ಬೇರೆ ಬೇರೆ ಜಿಲ್ಲೆ, ರಾಜ್ಯಗಳ ಜನರೂ ಗಣೇಶನ ಹಬ್ಬ ವೀಕ್ಷಿಸಲು ಬೆಳಗಾವಿಗೆ ಆಗಮಿಸುತ್ತಾರೆ. ಇಂತಹ ವಿಶೇಷ ಮೆರಗು ನೀಡುವ ಬೆನಕನ ಹಬ್ಬಕ್ಕೆ ಈ ಬಾರಿ ಪ್ರವಾಹದ ಕಾರ್ಮೋಡ ಕವಿದಿದ್ದರೂ ಸಂಪ್ರದಾಯದಲ್ಲಿ ಯಾವುದೇ ಕಡಿಮೆ ಕಂಡು ಬರುತ್ತಿಲ್ಲ.
ಗಣೇಶ ಹಬ್ಬಕ್ಕಾಗಿ ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ತಯಾರಿ ಜೋರಾಗಿ ನಡೆದಿದೆ. ಸಾರ್ವಜನಿಕ ಗಣಪತಿ ಮೂರ್ತಿಗಳ ಪ್ರತಿಷ್ಠಾಪನೆಗಾಗಿ ಮಂಟಪಗಳನ್ನು ಹಾಕಿ ವಿದ್ಯುತ್ ಅಲಂಕಾರಗಳ ತಯಾರಿ ನಡೆದಿದೆ. ನಗರದಲ್ಲಿ 380ಕ್ಕೂ ಹೆಚ್ಚು ಸೇರಿದಂತೆ ಜಿಲ್ಲೆಯಾದ್ಯಂತ ಮೂರು ಸಾವಿರಕ್ಕೂ ಹೆಚ್ಚು ಸಾರ್ವಜನಿಕ ಗಣೇಶ ಮೂರ್ತಿಗಳು ಪ್ರತಿಷ್ಠಾಪನೆ ಆಗುತ್ತವೆ. ಬಹುತೇಕ ಗಣೇಶ ಮಂಡಳಿಯವರು ಸರಳವಾಗಿ ಹಬ್ಬ ಆಚರಿಸಿ ಹೆಚ್ಚುವರಿ ಹಣವನ್ನು ನೆರೆ ಸಂತ್ರಸ್ತರಿಗೆ ನೀಡಲು ಮುಂದಾಗಿದ್ದಾರೆ.
ನಗರದ ಝಂಡಾ ಚೌಕೌದಲ್ಲಿ ಮೊದಲ ಸಾರ್ವಜನಿಕ ಗಣಪತಿಯನ್ನು ಲೋಕಮಾನ್ಯ ಬಾಲಗಂಗಾಧರ ಟಿಳಕರು ಪ್ರತಿಷ್ಠಾಪನೆ ಮಾಡಿದ್ದು, ಈಗಲೂ ಪ್ರತಿ ವರ್ಷ ಈ ಸ್ಥಳದಲ್ಲಿ ಗಣಪನನ್ನು ಪ್ರತಿಷ್ಠಾಪಿಸುವ ಸಂಪ್ರದಾಯ ಮುಂದುವರಿದುಕೊಂಡು ಬಂದಿದೆ. ಶ್ರೀಮಂತಿಕೆಯಿಂದ ಬೆಳೆದು ಬಂದಿರುವ ಹಬ್ಬ ಈಗಲೂ ತನ್ನ ಗತವೈಭವವನ್ನು ಕಡಿಮೆ ಆಗಿಲ್ಲ.
ಜಿಲ್ಲೆಯ ಬಹುತೇಕ ಹಳ್ಳಿಗಳು ಪ್ರವಾಹದಿಂದ ನಲುಗಿದ್ದು, ನೆರೆಯಲ್ಲಿ ಮುಳುಗಡೆಯಾದ ಹಳ್ಳಿಗಳಲ್ಲಿ ಕೆಲವು ಸಂಘ-ಸಂಸ್ಥೆಗಳು ಸಹಾಯ ಮಾಡಿ ಸಂತ್ರಸ್ತರೊಂದಿಗೆ ಹಬ್ಬ ಆಚರಿಸಲು ಸಿದ್ಧತೆ ಮಾಡಿಕೊಂಡಿವೆ. ಇನ್ನೂ ಕೆಲವು ಹಳ್ಳಿಗಳ ಓಣಿ ಓಣಿಗಳಲ್ಲಿ ಪ್ರತಿಷ್ಠಾಪನೆ ಆಗುವ ಗಣೇಶ ಮೂರ್ತಿ ಸಣ್ಣ ಪ್ರಮಾಣದಲ್ಲಿ ಮಾಡಲಾಗುತ್ತಿದೆ. ಮಹಾರಾಷ್ಟ್ರದಿಂದ ತರುತ್ತಿದ್ದ ಗಣಪತಿ ಮೂರ್ತಿಗಳ ಪ್ರಮಾಣದಲ್ಲಿ ಈ ಬಾರಿ ಗಣನೀಯವಾಗಿ ಇಳಿಕೆ ಕಂಡಿದೆ. ಸ್ಥಳೀಯವಾಗಿ ಮೂರ್ತಿಕಾರರಿಂದ ಗಣೇಶನನ್ನು ಖರೀದಿಸಿ ಪ್ರತಿಷ್ಠಾಪಿಸಲಾಗುತ್ತಿದೆ.
ಮಹಾರಾಷ್ಟ್ರದ ಕೊಲ್ಲಾಪುರ, ಸಾಂಗಲಿ ಹಾಗೂ ಗೋಕಾಕ ತಾಲೂಕಿನ ಕೊಣ್ಣೂರದಲ್ಲಿ ಅತಿ ಹೆಚ್ಚು ಗಣಪತಿ ಮೂರ್ತಿಗಳು ತಯಾರಾಗುತ್ತವೆ. ಈ ಭಾಗದಲ್ಲಿ ಅತಿ ಹೆಚ್ಚು ಪ್ರವಾಹ ಬಂದು ಎಷ್ಟೋ ಗಣಪತಿ ಮೂರ್ತಿಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಮೂರ್ತಿಗಳೇ ಇಲ್ಲದಂಥ ಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ ಬೇರೆ ಬೇರೆ ಪ್ರದೇಶಗಳಿಂದ ಜನರು ಮೂರ್ತಿಗಳನ್ನು ಖರೀದಿಸಿ ಪ್ರತಿಷ್ಠಾಪಿಸುತ್ತಿದ್ದಾರೆ.
ಗಣಪತಿ ಮೂರ್ತಿ ಪ್ರತಿಷ್ಠಾಪನೆಗಾಗಿ ಅಗತ್ಯ ಇರುವ ಪೂಜಾ ಸಾಮಗ್ರಿಗಳನ್ನು ಖರೀದಿಸಲು ಭಕ್ತರು ನಗರದ ಮಾರುಕಟ್ಟೆಯಲ್ಲಿ ಮುಗಿ ಬಿದ್ದಿದ್ದಾರೆ. ಹೂ-ಹಣ್ಣು, ಮಾಲೆಗಳನ್ನು ಖರೀದಿಸುತ್ತಿದ್ದಾರೆ. ಈ ಸಲ ಹೂವಿನ ದರ ಹೆಚ್ಚಾಗಿದ್ದು, ಜನರ ಜೇಬಿಗೆ ಕತ್ತರಿ ಬೀಳುತ್ತಿದೆ. ಗಣೇಶನ ಮೂರ್ತಿ ಅಲಂಕಾರಕ್ಕೆ ಚಿಕ್ಕ ಚಿಕ್ಕ ಥರ್ಮಾಕೋಲ್ ಮಂಟಪಗಳು, ವಿದ್ಯುತ್ ದೀಪಗಳು, ಅಲಂಕಾರಿಕ ವಸ್ತುಗಳನ್ನು ಜನರು ಖರೀದಿಸುತ್ತಿದ್ದಾರೆ.
ಸೆ.2ರಂದು ಪ್ರತಿಷ್ಠಾಪನೆ ಆಗುವ ಗಣಪನಿಗೆ 5,7, 9 ಹಾಗೂ 11 ದಿನಗಳವರೆಗೆ ಪೂಜಿಸಲಾಗುತ್ತದೆ. ಬಹುತೇಕ ಮನೆಯಲ್ಲಿ ಪ್ರತಿಷ್ಠಾಪನೆ ಆಗುವ ಗಣಪನ ಮೂರ್ತಿಗಳನ್ನು ಐದನೇ ದಿನಕ್ಕೆ ವಿಸರ್ಜನೆ ಮಾಡಲಾಗುತ್ತದೆ. 11ನೇ ದಿನಕ್ಕೆ ಅತಿ ಹೆಚ್ಚು ಮೂರ್ತಿಗಳ ಪ್ರತಿಷ್ಠಾಪನೆ ಆಗುತ್ತವೆ.