ಜಾರ್ಜ್ ರಾಜೀನಾಮೆಗೆ BJP ಪಟ್ಟು
Team Udayavani, Nov 15, 2017, 7:21 AM IST
ಸುವರ್ಣಸೌಧ: ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಿಬಿಐ ಎಫ್‌ಐಆರ್ ದಾಖಲಿಸಿರುವ ಹಿನ್ನೆಲೆಯಲ್ಲಿ ಸಚಿವ ಕೆ.ಜೆ.ಜಾರ್ಜ್ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಪ್ರತಿಪಕ್ಷ ಬಿಜೆಪಿ ಮಂಗಳವಾರ ವಿಧಾನಸಭೆಯಲ್ಲಿ ಪಟ್ಟು ಹಿಡಿದಿದ್ದ
ರಿಂದ ಗದ್ದಲ-ಕೋಲಾಹಲ ಉಂಟಾಗಿ ದಿನದ ಕಲಾಪ ಬಲಿಯಾಯಿತು. ನಿಲುವಳಿ ಸೂಚನೆ ಮಂಡಿಸಿ ಚರ್ಚೆಗೆ ಅವಕಾಶ ನೀಡುವಂತೆ ಒತ್ತಾಯಿಸಿದ ಬಿಜೆಪಿ ಸದಸ್ಯರು, ಧರಣಿ ನಡೆಸಿದ್ದರಿಂದ ಪ್ರಶ್ನೋತ್ತರ ಹೊರತುಪಡಿಸಿ ಇಡೀ ದಿನ ಬೇರೆ ಯಾವುದೇ ಕಲಾಪ ನಡೆಯಲಿಲ್ಲ.
ಸಚಿವ ಜಾರ್ಜ್ ರಾಜೀನಾಮೆ ವಿಚಾರದಲ್ಲಿ ಬಿಜೆಪಿ ಹಾಗೂ ಆಡಳಿತಾರೂಢ ಕಾಂಗ್ರೆಸ್ ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿ, ಆರೋಪ-ಪ್ರತ್ಯಾರೋಪಗಳು ನಡೆದು ಒಮ್ಮೆ ಸದನ ಮುಂದೂಡಲಾಯಿತು. ಭೋಜನ ವಿರಾಮದ ನಂತರವೂ ಬಿಜೆಪಿ ಸದಸ್ಯರ
ಧರಣಿ ಮುಂದುವರಿದಿದ್ದರಿಂದ ಸ್ಪೀಕರ್ ಕೆ.ಬಿ. ಕೋಳಿ ವಾಡ ಕಲಾಪವನ್ನು ಬುಧವಾರಕ್ಕೆ ಮುಂದೂಡಿದರು. ಜಾರ್ಜ್ ರಾಜೀನಾಮೆಗೆ ಒತ್ತಾಯಿಸಿ ಸೋಮವಾರ ವಿಧಾನಪರಿಷತ್‌ನಲ್ಲಿ ನಿಲುವಳಿ ಸೂಚನೆ ಮಂಡಿಸಲು ಪ್ರಯತ್ನಿಸಿ ಗದ್ದಲ ಎಬ್ಬಿಸಿದ್ದ ಬಿಜೆಪಿ, ಮಂಗಳವಾರ ವಿಧಾನಸಭೆಯಲ್ಲಿ ನಿಲುವಳಿ ಸೂಚನೆ ಪ್ರಸ್ತಾಪ ಮಂಡಿಸಲು ಮುಂದಾಯಿತು. ಪ್ರಾಸ್ತಾವಿಕವಾಗಿ ವಿಷಯ
ಮಂಡನೆಗೆ ಮಾತ್ರ ಅವಕಾಶ ನೀಡಿದ ಸ್ಪೀಕರ್, ನಿಲುವಳಿ ಸೂಚನೆಯಡಿ ಚರ್ಚೆಗೆ ಅವಕಾಶ ಕೊಡಲು ಬರುವುದಿಲ್ಲ ಎಂದು ರೂಲಿಂಗ್ ನೀಡಿದರು. ಇದರಿಂದ ಸಿಟ್ಟಿಗೆದ್ದ ಬಿಜೆಪಿ ಸದಸ್ಯರು ಸಭಾಧ್ಯಕ್ಷರ ಪೀಠದ ಎದುರು ಧಾವಿಸಿ ಸರ್ಕಾರದ ವಿರುದ್ಧ
ಘೋಷಣೆ ಕೂಗಿದರು. ಈ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ಪರಸ್ಪರ ಟೀಕೆ, ಆರೋಪ- ಪ್ರತ್ಯಾರೋಪಗಳಿಂದ ಗದ್ದಲ-ಕೋಲಾಹಲ ಉಂಟಾಗಿ ದ್ದರಿಂದ ಕಲಾಪ ಮುಂದೂಡಲಾಯಿತು.
ಮಂಗಳವಾರ ಕಲಾಪ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್, ಡಿವೈಎಸ್‌ಪಿ ಗಣಪತಿ ಪ್ರಕರಣದಲ್ಲಿ ಸಿಬಿಐ ಎಫ್‌ಐಆರ್ ದಾಖಲಿಸಿರುವುದರಿಂದ ಸಚಿವ ಕೆ.ಜೆ.ಜಾರ್ಜ್ ರಾಜೀನಾಮೆ ಕೊಡಬೇಕು. ಆ ಬಗ್ಗೆ ಇಲ್ಲಿ ಚರ್ಚೆಗೆ ಅವಕಾಶ ಕೊಡಬೇಕೆಂದು ನಿಲುವಳಿ ಸೂಚನೆ ಕೊಟ್ಟಿದ್ದೇವೆ ಎಂದು ಪ್ರಸ್ತಾಪಿಸಿದರು. ಇದಕ್ಕೆ ಒಪ್ಪದ ಸ್ಪೀಕರ್, ಬೆಳಗ್ಗೆ ಪ್ರಶ್ನೋತ್ತರ ವೇಳೆ ಬೇರೆ ಯಾವುದೇ ವಿಷಯಗಳಿಗೆ ಅವಕಾಶ ಕೊಡುವಂತಿಲ್ಲ ಎಂದು ನಾವೇ ನಿಯಮ ಮಾಡಿದ್ದೇವೆ. ಅದನ್ನು ಹೇಗೆ ಮುರಿಯುವುದು ಎಂದು ಪ್ರಶ್ನಿಸಿದರು. ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಲು ಶೆಟ್ಟರ್ ಒತ್ತಾಯಿಸಿದಾಗ ಸಚಿವರಾದ ರೋಷನ್ ಬೇಗ್, ಟಿ.ಬಿ.ಜಯಚಂದ್ರ ಆಕ್ಷೇಪ ವ್ಯಕ್ತಪಡಿಸಿದರು. ಹೀಗಾಗಿ ಪ್ರಶ್ನೋತ್ತರ ನಂತರ ಅವಕಾಶ ಕೊಡುವು ದಾಗಿ ಸ್ಪೀಕರ್ ಹೇಳಿದರು. ಪ್ರಶ್ನೋತ್ತರ ಕಲಾಪ ಮುಗಿಯುತ್ತಿದ್ದಂತೆ ನಿಲುವಳಿ ಸೂಚನೆ ಪ್ರಸ್ತಾಪ ಮಂಡಿಸಿದ ಶೆಟ್ಟರ್, ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೆಯೂ ಜಾರ್ಜ್ ರಾಜೀನಾಮೆಗೆ ಆಗ್ರಹಿಸಿದ್ದೆವು. ಈಗ ಸುಪ್ರಿಂಕೋರ್ಟ್ ಮತ್ತೆ ತನಿಖೆಗೆ ಆದೇಶ ನೀಡಿದೆ. ಜಾರ್ಜ್ ರಾಜೀನಾಮೆ
ನೀಡಬೇಕೆಂದು ಆಗ್ರಹಿಸಿದರು.
ನಿಲುವಳಿ ಸೂಚನೆ ಮಂಡನೆಗೆ ವಿರೋಧ ವ್ಯಕ್ತ ಪಡಿಸಿದ ಸಚಿವ ಆರ್.ವಿ.ದೇಶಪಾಂಡೆ, ಸುಪ್ರಿಂಕೋರ್ಟ್ ಆದೇಶದಲ್ಲಿ ಜಾರ್ಜ್ ಹೆಸರಿದೆಯೇ ಎಂದು ಪ್ರಶ್ನಿಸಿದರು. ಅವರಿಗೆ ಬೆಂಬಲವಾಗಿ ನಿಂತ ಸಚಿವ ಟಿ.ಬಿ.ಜಯಚಂದ್ರ, ನಿಲುವಳಿ ಸೂಚನೆ ಮಂಡನೆಯೇ ಕಾನೂನು ಬಾಹಿರವಾಗಿದೆ ಎಂದರು. ಆ ಸಂದರ್ಭದಲ್ಲಿ ಬಿಜೆಪಿ ಶಾಸಕರು ಮತ್ತು ಜಯಚಂದ್ರ ನಡುವೆ ಮಾತಿನ ಚಕಮಕಿ ನಡೆಯಿತು. ಮಾತು ಮುಂದುವರಿಸಿದ ಶೆಟ್ಟರ್, ಆತ್ಮಹತ್ಯೆಗೆ ಕಾರಣವಾದವರ ಬಗ್ಗೆ ತನಿಖೆ ನಡೆಸುವಂತೆ ಸುಪ್ರಿಂ ಕೋರ್ಟ್ ಸಿಬಿಐಗೆ ಆದೇಶ ಮಾಡಿದೆ ಎಂದು ಹೇಳಿದಾಗ ಮತ್ತೆ ಮಧ್ಯಪ್ರವೇಶಿಸಿದ ಜಯಚಂದ್ರ, ಈ ಪ್ರಕರಣವನ್ನು ಬೆಂಗಳೂರಿನಲ್ಲಿ ನಡೆದ ಅಧಿವೇಶನದಲ್ಲಿ ನಿಲುವಳಿ ಸೂಚನೆ ಮಂಡಿಸಿ ಪ್ರಸ್ತಾಪ ಮಾಡಿದ್ದರು. ಅಲ್ಲದೆ, ವಿಧಾನ ಪರಿಷತ್‌ನಲ್ಲೂ ನಿಲುವಳಿ ಸೂಚನೆ ಮಂಡನೆಯಾಗಿರುವುದರಿಂದ ಆದೇ ವಿಷಯವನ್ನು ವಿಧಾನಸಭೆಯಲ್ಲಿ ಮಂಡಿಸಲು ಅವಕಾಶವಿಲ್ಲ ಎಂದರು.
ಈ ಮಾತಿಗೆ ಬಿಜೆಪಿ ಸದಸ್ಯರು ಶೇಮ್ ಶೇಮ್ ಎಂದು ಘೋಷಣೆ ಕೂಗಿದರೆ, ತಿರುಗೇಟು ನೀಡಿದ ಶೆಟ್ಟರ್, ಕಾನೂನು ಸಚಿವರು ಸದನದ ದಾರಿ ತಪ್ಪಿಸುತ್ತಿ ದ್ದಾರೆ. ಒಂದೆ ವಿಷಯವನ್ನು ಎರಡು ಸದನದಲ್ಲಿ ಮಂಡಿಸಲು ಅವಕಾಶವಿದೆ. ಜಾರ್ಜ್ ಅವರು
ಸಚಿವರಾಗಿ ಮುಂದುವರಿದರೆ ತನಿಖೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ ಎಂದರು. ಜಗದೀಶ ಶೆಟ್ಟರ್ ಆಗ್ರಹ ತಳ್ಳಿ ಹಾಕಿದ ಸಿಎಂ ಸಿದ್ದರಾಮಯ್ಯ, ಬಿಜೆಪಿಯವರು ಮಂಡಿಸಿರುವ ನಿಲುವಳಿ ಸೂಚನೆ ಪೂರ್ವಾಗ್ರಹ ಪೀಡಿತವಾಗಿದ್ದು, ರಾಜಕೀಯ ಉದ್ದೇಶಕ್ಕೆ ಮಂಡನೆ ಮಾಡಿದ್ದಾರೆ. ಅದು ಚರ್ಚೆಗೆ ಯೋಗ್ಯವಲ್ಲ ಎಂದು ಹೇಳಿದರು.
ಸರ್ಕಾರದ ಅಭಿಪ್ರಾಯದಂತೆ ಸಭಾಧ್ಯಕ್ಷ ಕೆ.ಬಿ. ಕೋಳಿ ವಾಡ, ಪ್ರತಿಪಕ್ಷದ ನಾಯಕರು ಮಂಡಿಸಿರುವ ನಿಲುವಳಿ ಸೂಚನೆ ಪೂರ್ವಾಗ್ರಹ ಪೀಡಿತವಾಗಿದ್ದು, ಚರ್ಚೆಗೆ ಅರ್ಹವಿಲ್ಲ ಎಂದು ರೂಲಿಂಗ್ ನೀಡಿದರು. ಆದರೆ, ಚರ್ಚೆಗೆ ಪಟ್ಟುಹಿಡಿದು ಬಿಜೆಪಿ ಸದಸ್ಯರು
ಧರಣಿ ಆರಂಭಿಸಿದ್ದರಿಂದ ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಲಾಯಿತು. ಭೋಜನಾನಂತರ ಕಲಾಪ ಆರಂಭವಾದ ಕೂಡಲೇ ಬಿಜೆಪಿ ಸದಸ್ಯರು ಸಭಾಧ್ಯಕ್ಷರ ಪೀಠದ ಎದುರು ಧರಣಿ ಮುಂದುವರಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬಿಜೆಪಿ ಸದಸ್ಯರ
ಧರಣಿ ನಡುವೆಯೇ ಸರ್ಕಾರ ಬಡ್ತಿ ಮೀಸಲಾತಿ ಹಾಗೂ ಮೌಡ್ಯ ನಿಷೇಧ ಕಾಯ್ದೆ ಸೇರಿ ನಾಲ್ಕು ವಿಧೇಯಕಗಳನ್ನು ಮಂಡಿಸಲಾಯಿತು. ನಂತರ ಸ್ಪೀಕರ್ ಸದನವನ್ನು ಬುಧವಾರಕ್ಕೆ ಮುಂದೂಡಿದರು.
ಪರಿಷತ್‌ನಲ್ಲಿ ಜಾರ್ಜ್ ವಿಚಾರ ಥಂಡಾ:
ಧಾನಪರಿಷತ್‌ನಲ್ಲಿ ಸಚಿವ ಜಾರ್ಜ್ ರಾಜೀನಾಮೆಗೆ ಒತ್ತಾಯಿಸಿ ಸೋಮವಾರ ಧರಣಿ ನಡೆಸಿ ಕಲಾಪ ನಡೆಸಲು ಬಿಡದ ಬಿಜೆಪಿ ಮಂಗಳವಾರ ಸುಮ್ಮನಾಗಿತ್ತು. ಪ್ರಕರಣದ ಬಗ್ಗೆ ಅಬ್ಬರಿಸಿದ್ದ ಬಿಜೆಪಿ ಸದಸ್ಯರು ಮಂಗಳವಾರ ವಿಚಾರವನ್ನೇ ಪ್ರಸ್ತಾಪಿಸಲಿಲ್ಲ. ನಿಲುವಳಿ ಸೂಚನೆ ತಿರಸ್ಕರಿಸಿ ಸಭಾಪತಿ ರೂಲಿಂಗ್ ಕೊಟ್ಟಿದ್ದರಿಂದ ಬಿಜೆಪಿ ಸದಸ್ಯರು ಧರಣಿ ನಡೆಸಿದ್ದರು. ಗದ್ದಲ-ಕೋಲಾಹಲ ಉಂಟಾಗಿದ್ದರಿಂದ ಸದನ ಮುಂದೂಡಲಾಗಿತ್ತು. ಹೀಗಾಗಿ, ಮಂಗಳವಾರವೂ ಹೋರಾಟ ಮುಂದುವರಿಸಲಾಗುವುದು ಎಂದು ಬಿಜೆಪಿ ನಾಯಕರು ಹೇಳಿದ್ದರು. ಆದರೆ, ಆ ವಿಚಾರವೇ ಪ್ರಸ್ತಾಪ ಆಗಲಿಲ್ಲ.
ಮರ್ಡರ್ ಮಾಡಿದರೂ ಕ್ಲೀನ್‌ಚಿಟ್ ಭಾಗ್ಯ:
ಧರಣಿ ಸಂದರ್ಭದಲ್ಲಿ ಬಿಜೆಪಿ ಸದಸ್ಯರು ಸರ್ಕಾರದ ವಿರುದ್ಧ ಘೊಷಣೆಗಳನ್ನು ಕೂಗಿ ಮರ್ಡರ್ ಮಾಡಿದರೂ ಕ್ಲೀನ್‌ಚಿಟ್ ಭಾಗ್ಯ, ರೇಪ್ ಮಾಡಿದರೂ ಕ್ಲೀನ್‌ಚಿಟ್ ಭಾಗ್ಯ, ಯಾರಿಗುಂಟು ಯಾರಿಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರದ ಭಾಗ್ಯ ಯೋಜನೆಗಳ ಬಗ್ಗೆ ವ್ಯಂಗ್ಯವಾಡಿ ಘೋಷಣೆ ಕೂಗಿದ ಬಿಜೆಪಿ ಸದಸ್ಯರು, ಮರ್ಡರ್, ರೇಪ್, ಮಾಡಿದವರಿಗೆಲ್ಲ ಕ್ಲೀನ್‌ಚಿಟ್ ಭಾಗ್ಯ ಎಂದು ಲೇವಡಿ ಮಾಡಿದರು.
ಇಂದು ಕಾಂಗ್ರೆಸ್ ಶಾಸಕಾಂಗ ಸಭೆ
ಸುವರ್ಣಸೌಧ: ಅಧಿವೇಶನದಲ್ಲಿ ಪ್ರತಿಪಕ್ಷಗಳ ಟೀಕೆ, ಆರೋಪಗಳಿಗೆ ಸೂಕ್ತ ಪ್ರತಿತಂತ್ರಗಳನ್ನು ಹೆಣೆಯುವ ಬಗ್ಗೆ ಚರ್ಚಿಸಲು ಬುಧವಾರ ಸುವರ್ಣಸೌಧದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಈಗಾಗಲೇ ಸಚಿವ ಕೆ.ಜೆ.ಜಾರ್ಜ್ ರಾಜೀನಾಮೆಗೆ ಒತ್ತಾಯಿಸುತ್ತಿರುವ ಪ್ರತಿಪಕ್ಷ ಬಿಜೆಪಿ ಸದನದಲ್ಲಿ ಮೌಡ್ಯ ನಿಷೇಧ, ಬಡ್ತಿ ಮೀಸಲು ವಿಧೇಯಕಕ್ಕೆ ವಿರೋಧ ವ್ಯಕ್ತಪಡಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಪಕ್ಷದ ಎಲ್ಲಾ ಶಾಸಕರು ಕಡ್ಡಾಯವಾಗಿ ಸದನದಲ್ಲಿ ಹಾಜರಾಗಿ ಒಗ್ಗಟ್ಟು ಪ್ರದರ್ಶನ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸುವ ಸಾಧ್ಯತೆ ಇದೆ.