ನಿರೀಕ್ಷೆಗೆ ಬಜೆಟ್ ತಣ್ಣೀರು
Team Udayavani, Mar 6, 2020, 1:07 PM IST
ಬೆಳಗಾವಿ: ಬಹು ನಿರೀಕ್ಷಿತ ಕಳಸಾ ಬಂಡೂರಿ ಕಾಮಗಾರಿ ಆರಂಭಕ್ಕೆ 500 ಕೋಟಿ. ನಿರುದ್ಯೋಗ ನಿವಾರಣೆಗೆ ಕೈಗಾರಿಕಾ ಕೌಶಲ್ಯ ತರಬೇತಿ ಕೇಂದ್ರ. ಬೆಳಗಾವಿ-ಧಾರವಾಡ ನೂತನ ರೈಲು ಮಾರ್ಗಕ್ಕೆ ಉಚಿತ ಭೂಮಿ ನೀಡಲು ನಿರ್ಧಾರ. ಇದು ಬಿಜೆಪಿ ಸರಕಾರದ ಮೊದಲ ಬಜೆಟ್‌ನಲ್ಲಿ ಗಡಿ ಜಿಲ್ಲೆಗೆ ಸಿಕ್ಕ ಕೊಡುಗೆಗಳ ಮುಖ್ಯಾಂಶ.
ಉಪಮುಖ್ಯಮಂತ್ರಿ ಸೇರಿದಂತೆ ನಾಲ್ವರು ಸಚಿವರನ್ನು ಹೊಂದಿರುವ ಗಡಿ ಜಿಲ್ಲೆಯ ಜನರ ನಿರೀಕ್ಷೆಗೆ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರದ ಮೊದಲ ಬಜೆಟ್ ತಣ್ಣೀರು ಹಾಕಿದೆ. ಹೊಸ ಯೋಜನೆಗಳ ಘೋಷಣೆ ಇಲ್ಲ. ಜಿಲ್ಲೆಗೆ ಬೊಟ್ಟು ಮಾಡಿ ತೋರಿಸುವಂತಹ ಕೊಡುಗೆಗಳಿಲ್ಲ ಎಂಬ ಅಭಿಪ್ರಾಯ ಎಲ್ಲ ವರ್ಗದ ಜನರಿಂದ ವ್ಯಕ್ತವಾಗಿದೆ.
ಸಚಿವ ಸಂಪುಟದಲ್ಲಿ ಇಬ್ಬರು ಪ್ರಭಾವಿಗಳನ್ನು ಹೊಂದಿದ್ದರಿಂದ ಜಿಲ್ಲೆಯ ಜನರಲ್ಲಿ ಸಹಜವಾಗಿಯೇ ಬಹಳಷ್ಟು ನಿರೀಕ್ಷೆಗಳು ಗರಿ ಗೆದರಿದ್ದವು. ರಮೇಶ ಜಾರಕಿಹೊಳಿ ನೀರಾವರಿ ಸಚಿವರಾಗಿದ್ದರಿಂದ ಜಿಲ್ಲೆಯಲ್ಲಿ ನನೆಗುದಿಗೆ ಬಿದ್ದಿರುವ ಏತ ನೀರಾವರಿಗಳಿಗೆ ಯಥೇತ್ಛ ಹಣ ಬಿಡುಗಡೆಯಾಗಲಿದೆ ಎಂದೇ ಭಾವಿಸಿದ್ದರು. ಆದರೆ ಬಜೆಟ್‌ದಲ್ಲಿ ಈ ಯಾವ ಅಂಶಗಳೂ ಪ್ರಸ್ತಾಪವಾಗಿಲ್ಲ. ಏತ ನೀರಾವರಿ ಯೋಜನೆಗಳಿಗೆ ಐದು ಸಾವಿರ ಕೋಟಿ ಮೀಸಲಿಟ್ಟಿದ್ದರೂ ಅದರಲ್ಲಿ ಯಾವುದಕ್ಕೆ ಎಷ್ಟು ಎಂಬ ಸ್ಪಷ್ಟತೆ ಇಲ್ಲ. ಬಜೆಟ್‌ದಲ್ಲಿನ ಸಂಗತಿ ಗಮನಿಸಿದರೆ ಮುಖ್ಯಮಂತ್ರಿಗಳು ಉತ್ತರ ಕರ್ನಾಟಕ ಮರೆತು ಬಜೆಟ್ ಸಿದ್ಧಪಡಿಸಿದ್ದಾರೆ ಎಂಬ ಭಾವನೆ ಬರುತ್ತದೆ. ಉತ್ತರ ಕರ್ನಾಟಕದಲ್ಲಿ ತೊಗರಿಬೆಳೆ, ಕಡಲೆ ಮೊದಲಾದ ಬೆಳೆಗಳಿಗೆ ಸರಿಯಾದ ಧಾರಣೆ ಸಿಗುತ್ತಿಲ್ಲ. ಹೀಗಿರುವಾಗ ಅವರ ನೆರವಿಗೆ ಮುಖ್ಯಮಂತ್ರಿಗಳು ಬರಬೇಕಿತ್ತು. ಆದರೆ ಅದನ್ನು ಬಿಟ್ಟು ಕಾಫಿ ಮತ್ತು ಅಡಿಕೆ ಬೆಳೆಗಾರರಿಗೆ ಸಹಾಯ ನೀಡಿರುವದು ಬೇಸರ ತರುವ ಸಂಗತಿ ಎಂಬುದು ಹಿರಿಯ ರೈತ ಮುಖಂಡ ಬಾಬಾಗೌಡ ಪಾಟೀಲ ಹೇಳಿಕೆ.
ಸಂತ್ರಸ್ತರಲ್ಲಿ ದೂರವಾಗದ ಆತಂಕ: ಕಳೆದ ವರ್ಷ ಉಂಟಾದ ಭೀಕರ ಪ್ರವಾಹದಿಂದ ಸಂಪೂರ್ಣ ನಲುಗಿ ಹೋಗಿದ್ದ ನೆರೆ ಸಂತ್ರಸ್ತರಲ್ಲಿ ವಿಶ್ವಾಸ ತುಂಬುವ ಅಂಶಗಳು ಬಜೆಟ್‌ನಲ್ಲಿ ಕಾಣದೇ ಇರುವುದು ನದಿ ತೀರದ ಜನರಲ್ಲಿ ಆತಂಕ ಮುಂದುವರಿಯುವಂತೆ ಮಾಡಿದೆ. ಸಂತ್ರಸ್ತರ ಪುನರ್ವಸತಿ ಹಾಗೂ ನದಿ ತೀರದ ಗ್ರಾಮಗಳ ಸ್ಥಳಾಂತರದ ಬಗ್ಗೆ ಬಜೆಟ್‌ದಲ್ಲಿ ಯಾವುದೇ ಪ್ರಸ್ತಾಪ ಇಲ್ಲದಿರುವುದು ನಿರಾಸೆ ಮೂಡಿಸಿದೆ. ಬೆಳಗಾವಿ ಗ್ರಾಮೀಣ ಕ್ಷೇತ್ರವನ್ನು ಪ್ರವಾಹದ ನಂತರ ಪುನಃ ಕಟ್ಟುತ್ತಿದ್ದೇನೆ. ಇದಕ್ಕೆ ಬಜೆಟ್‌ನಲ್ಲಿ ಒಂದಿಷ್ಟು ನೆರವಿನ ಯೋಜನೆ ಸಿಗಬಹುದು ಎಂದುಕೊಂಡಿದ್ದೆ. ಆದರೆ ನನ್ನ ಮತ್ತು ಕ್ಷೇತ್ರದ ಜನರ ನಿರೀಕ್ಷೆ ಹುಸಿಯಾಗಿದೆ ಎಂಬುದು ಶಾಸಕಿ ಲಕ್ಷ್ಮಿ ಹೆಬ್ಟಾಳಕರ ಅವರ ಅಸಮಾಧಾನ.
ಸಮಾಧಾನಕರ ಸಂಗತಿ: ಬೆಳಗಾವಿ-ಧಾರವಾಡ ನೂತನ ರೈಲು ಮಾರ್ಗಕ್ಕೆ ಉಚಿತವಾಗಿ ಭೂಮಿ ನೀಡುವುದು ಹಾಗೂ ಒಟ್ಟು ಯೋಜನೆಯ ಕಾಮಗಾರಿಯಲ್ಲಿ ಶೇ.50 ರಷ್ಟು ಹಣ ಭರಿಸಲು ಸರಕಾರ ಒಪ್ಪಿಗೆ ಸೂಚಿಸಿದೆ ಎಂದು ಮುಖ್ಯಮಂತ್ರಿಗಳು ಘೋಷಣೆ ಮಾಡಿದ್ದು ಗಡಿ ಭಾಗದ ಜನರಲ್ಲಿ ಸ್ವಲ್ಪ ಸಮಾಧಾನ ತಂದಿದೆ. ಇದರಿಂದ ಬೆಳಗಾವಿ- ಧಾರವಾಡ ನಡುವಿನ ಪ್ರಯಾಣದ ಅವಧಿ ಕಡಿಮೆಯಾಗುವುದಲ್ಲದೇ ಕೈಗಾರಿಕೆಗಳ ಬೆಳವಣಿಗೆಗೆ ಸಹಾಯಕಾರಿಯಾಗಲಿದೆ ಎಂಬುದು ಜನರ ಆಶಯ.
ಮತ್ತೆ ನನೆಗುದಿಗೆ: ನೂತನ ಜಿಲ್ಲಾ ರಚನೆಯ ಕನಸು ಕಾಣುತ್ತಿರುವ ಚಿಕ್ಕೋಡಿ ಭಾಗದ ಜನರಿಗೆ ಮತ್ತೆ ನಿರಾಸೆ ಆವರಿಸಿದೆ. ಬಜೆಟ್‌ಗೆ ಮುನ್ನ ಮುಖ್ಯಮಂತ್ರಿಗಳು ಸೇರಿದಂತೆ ಹಲವಾರು ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದ ಹೋರಾಟಗಾರರಿಗೆ ಬಜೆಟ್‌ನಲ್ಲಿ ಮುಖ್ಯಮಂತ್ರಿಗಳಿಂದ ಸ್ಪಂದನೆ ಸಿಕ್ಕಿಲ್ಲ. ನೂತನ ಜಿಲ್ಲಾ ರಚನೆ ವಿಷಯ ಮತ್ತೆ ನನೆಗುದಿಗೆ ಬಿದ್ದಿದೆ.
ರಾಜ್ಯದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಮಕ್ಕಳ ಅಯವ್ಯಯ ಮಂಡನೆ. ರಾಜ್ಯದಲ್ಲಿರುವ 18 ವರ್ಷದ ಕೆಳಗಿರುವ ಎಲ್ಲಾ ಮಕ್ಕಳ ಅಭಿವೃದ್ಧಿಗೆ ಸಂಬಂಧಿಸಿದ ಯೊಜನೆ ಅಡಕ. 36,340 ಕೋಟಿ ರೂ.ಗಳ 279 ಕಾರ್ಯಕ್ರಮಗಳ ಪ್ರಸ್ತಾಪ ಇದು ಒಟ್ಟಾರೆ ಆಯವ್ಯಯ ಗಾತ್ರದ 15.28 ರಷ್ಟು. ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ರಾಜ್ಯದಲ್ಲಿ ಏಳು ಬಾಲ ಹೊಸ ಮಂದಿರಗಳ ಸ್ಥಾಪನೆ. 5.67 ಕೋಟಿ ರೂ ಅನುದಾನ. ಅಂಧ ತಾಯಂದಿರಿಗೆ ನೀಡುವ ಮಾಸಿಕ 2000 ರೂ .ಶಿಶುಪಾಲನಾ ಭತ್ಯೆ ಯೋಜನೆ ಗಾರ್ಮೆಂಟ್ ಉದ್ಯಮಗಳಲ್ಲಿ ಕಾರ್ಯನಿರ್ವಹಿಸುವ ಮಹಿಳಾ ಕಾರ್ಮಿಕರಿಗೆ ಉಚಿತ ಬಿಎಂಟಿಸಿ ಮಾಸಿಕ ಬಸ್ ಪಾಸ್ ವಿತರಣೆಗೆ 25 ಕೋಟಿ ರೂ.ಅನುದಾನ ಕೊಡುವ ಮೂಲಕ ಜನಪರ ಬಜೆಟ್ ಮಂಡನೆಯಾಗಿದೆ.-ಶಶಿಕಲಾ ಜೊಲ್ಲೆ, ಸಚಿವೆ
ಬಿ.ಎಸ್.ಯಡಿಯೂರಪ್ಪರವರು ಏಳನೇ ಬಾರಿಗೆ ಮಂಡಿಸಿರುವ ಮುಂಗಡ ಪತ್ರದಲ್ಲಿ ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ದೊರೆತಿದೆ. ಉತ್ತರ ಕರ್ನಾಟಕ ಭಾಗದ ರೈತರ ಹಲವು ದಶಕಗಳ ಕನಸು ಕಳಸಾ ಬಂಡೂರಿ ಮಹದಾಯಿ ಯೋಜನೆ ನಮ್ಮ ಸರ್ಕಾರ ಮೂಲಕ ನನಸಾಗುತ್ತಿದೆ. ಈ ಬಾರಿ 2.37 ಲಕ್ಷ ಕೋಟಿ ರೂ ಗಾತ್ರದ ಮುಂಗಡ ಪತ್ರ ಮಂಡಿಸಿರುವ ಮುಖ್ಯಮಂತ್ರಿ ಬಿಎಸ್‌ವೈಯವರು ಜನಪರ ಹಾಗೂ ಅಭಿವೃದ್ಧಿ ಪೂರಕವಾದ ಮುಂಗಡ ಪತ್ರವನ್ನು ಮಂಡಿಸಿ ವರ್ಗಗಳಿಗೂ ಸಾಮಾಜಿಕ ನ್ಯಾಯ ಕಲ್ಪಿಸಿಕೊಟ್ಟಿದ್ದಾರೆ.-ಅಣ್ಣಾಸಾಹೇಬ ಜೊಲ್ಲೆ, ಸಂಸದರು
ಪ್ರವಾಹ ಸಂತ್ರಸ್ತರಿಗೆ ಹುಸಿಯಾದ ಬಜೆಟ್ : ಕಳೆದ ವರ್ಷ ರಾಜ್ಯವನ್ನೇ ತತ್ತರಿಸುವಂತೆ ಮಾಡಿದ್ದ ಪ್ರವಾಹಕ್ಕೆ ಪರಿಹಾರವೂ ಇಲ್ಲ, ಮುಂದೆ ಮತ್ತೆ ಬರಬಹುದಾದ ಪ್ರಕೃತಿ ವಿಕೋಪ ತಡೆಯಲು ಯೋಜನೆಯೂ ಇಲ್ಲ. ಬಹುನಿರೀಕ್ಷಿತವಾಗಿದ್ದ ಈ ಬಜೆಟ್ ಅತ್ಯಂತ ನಿರಾಸೆ ಮೂಡಿಸಿದೆ. ರಾಜ್ಯ ಸರಕಾರದ ಈ ವರ್ಷದ ಬಜೆಟ್ ಮೇಲೆ ರಾಜ್ಯದ ಜನರು ಬಹು ನಿರೀಕ್ಷೆ ಇಟ್ಟಿದ್ದರು. ಎಂಟು ತಿಂಗಳಾದರೂ ಸಿಗದ ಪ್ರವಾಹ ಪರಿಹಾರಕ್ಕೆ ಈ ಬಜೆಟ್‌ನಲ್ಲಿ ದಾರಿ ತೋರಿಸಬಹುದು. ಸಂಕಷ್ಟದಿಂದ ಸ್ವಲ್ಪವಾದರೂ ಪಾರಾಗಲು ಅವಕಾಶ ಕೊಡಬಹುದು ಎಂದು ಜನರು ಅಂದುಕೊಂಡಿದ್ದರು. ಆದರೆ ಎಲ್ಲವೂ ಹುಸಿಯಾಗಿದೆ. -ಲಕ್ಷ್ಮೀ ಹೆಬ್ಟಾಳಕರ್, ಶಾಸಕಿ
ರೈಲು ಮಾರ್ಗಕ್ಕೆ ಉಚಿತ ಭೂಮಿ-ಶ್ಲಾಘನೆ : ಬೆಳಗಾವಿ ಜಿಲ್ಲೆಯು ಎದುರಿಸುತ್ತಿರುವ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಕೈಗಾರಿಕಾ ಕೌಶಲ್ಯ ತರಬೇತಿ ಕೇಂದ್ರ ಸ್ಥಾಪನೆಯನ್ನು ಮುಖ್ಯಮಂತ್ರಿಗಳು ಘೋಷಣೆ ಮಾಡಿರುವುದು ಸ್ವಾಗತಾರ್ಹ. ಇದಲ್ಲದೇ ಬೆಳಗಾವಿ-ಧಾರವಾಡ ನಡುವೆ ನೂತನ ರೈಲು ಮಾರ್ಗ ನಿರ್ಮಾಣಕ್ಕೆ ಉಚಿತ ಭೂಮಿ ಹಾಗೂ ಶೇ.50 ರಷ್ಟು ಹಣ ನೀಡುವುದಾಗಿ ಪ್ರಕಟಿಸಿರುವದನ್ನು ಸ್ವಾಗತಿಸುತ್ತೇನೆ. ಇದರಿಂದ ಈ ಭಾಗದಲ್ಲಿ ಹೊಸ ಅಭಿವೃದ್ಧಿ ಅಧ್ಯಾಯ ಆರಂಭವಾಗಲಿದೆ. – ರಮೇಶ ಜಾರಕಿಹೊಳಿ, ಜಲಸಂಪನ್ಮೂಲ ಸಚಿವರು.
ಮುಂಗಡ ಪತ್ರವು ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಕಲ್ಪಿಸಿದೆ. ಕೃಷಿ ಮತ್ತು ಪೂರಕ ಚಟುವಟಿಕೆಗಳ ವಲಯಕ್ಕೆ ಒಟ್ಟಾರೆ 32,259 ಕೋಟಿ ರೂ. ಅನುದಾನ ಘೋಷಿಸಿದ್ದಾರೆ. ರಾಜ್ಯದಲ್ಲಿ 5 ಸಾವಿರ ಕೋಟಿ ರೂ. ವೆಚ್ಚದಲ್ಲಿ ಹೊಸ ಏತ ನೀರಾವರಿ ಯೋಜನೆಗಳ ಅನುಷ್ಠಾನ, ಕಳಸಾ-ಬಂಡೂರಿ ನಾಲಾ ಯೋಜನೆಗೆ 500 ಕೋಟಿ ರೂ. ಅನುದಾನ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಗೆ 2600 ಕೋಟಿ ರೂ. ಮೀಸಲು, ಸಣ್ಣ ಮತ್ತು ಅತೀ ಸಣ್ಣ ಪ್ರಮಾಣದ ರೈತರಿಗೆ ಪ್ರತಿ ವರ್ಷ 10 ಸಾವಿರ ರೂ. ಸಹಾಯಧನ, ಮಣ್ಣು, ನೀರು ಪರೀಕ್ಷೆ ಮತ್ತು ರೈತರಿಗೆ ತಾಂತ್ರಿಕ ನೆರವು ನೀಡಲು ಸಂಚಾರಿ ಕೃಷಿ ಹೆಲ್ತ್ ಕ್ಲಿನಿಕ್, ಸಾವಯವ ಕೃಷಿ ಪ್ರೋತ್ಸಾಹಧನಕ್ಕೆ 200 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಜನಪರ ಹಾಗೂ ಅಭಿವೃದ್ಧಿಗೆ ಪೂರಕವಾದ ಮುಂಗಡ ಪತ್ರ ಮಂಡಿಸಿ ಎಲ್ಲ ವರ್ಗಗಳಿಗೂ ಸಾಮಾಜಿಕ ನ್ಯಾಯ ಕಲ್ಪಿಸಿಕೊಟ್ಟಿದ್ದಾರೆ –ಬಾಲಚಂದ್ರ ಜಾರಕಿಹೊಳಿ, ಶಾಸಕರು
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜನಪರ, ರೈತಪರ ಬಜೆಟ್ ಮಂಡನೆ ಮಾಡಿದ್ದಾರೆ. ಏತ ನೀರಾವರಿ ಯೋಜನೆಗಳಿಗೆ 5 ಸಾವಿರ ಕೋಟಿ ರೂ ಮೀಸಲಿಟ್ಟಿರುವುದರಿಂದ ಕರಗಾಂವ ಏತ ನೀರಾವರಿಗೆ ಅನುದಾನ ಸಿಗಲಿದೆ. ಎಸ್‌ಸಿ, ಎಸ್‌ಟಿ ಜನರಿಗೆ ಹೆಚ್ಚಿನ ಸೌಲಭ್ಯ ಘೊಷಣೆಯಾಗಿವೆ. –ದುರ್ಯೋಧನ ಐಹೊಳೆ, ಶಾಸಕರು
ಇದು ಎಲ್ಲ ವರ್ಗದ ಹಿತವನ್ನು ಗಮನದಲ್ಲಿಟ್ಟು ಕೊಂಡು ಮಂಡಿಸಿದ ಬಜೆಟ್. ಮಕ್ಕಳ ಬಗ್ಗೆ ವಿಶೇಷ ಗಮನಹರಿಸಿರುವುದು ಅಭಿನಂದನೀಯ. ಎಲ್ಲಕ್ಕಿಂತ ಮುಖ್ಯವಾಗಿ ಎಸ್‌ಸಿ ಹಾಗೂ ಎಸ್‌ಟಿ ವರ್ಗಕ್ಕೆ 26 ಸಾವಿರ ಕೋಟಿ ಮೀಸಲಿಟ್ಟಿರುವುದು ಸ್ವಾಗತಾರ್ಹ. ಇದರಿಂದ ಮುಂಬರುವ ದಿನಗಳಲ್ಲಿ ಹೆಚ್ಚಿನ ಪ್ರಗತಿ ನಿರೀಕ್ಷೆ ಮಾಡಬಹುದು. –ಅನಿಲ ಬೆನಕೆ, ಶಾಸಕರು
ಬಜೆಟ್‌ನಲ್ಲಿ ಹೊಸದೇನು ಕಾಣಲೇ ಇಲ್ಲ. ಇದು ಆಶಾದಾಯಕ ಬಜೆಟ್ ಅಲ್ಲ. ನಿರುದ್ಯೋಗ ನಿವಾರಣೆಗೆ ಯಾವುದೇ ಆದ್ಯತೆ ಕೊಟ್ಟಿಲ್ಲ. ಬಡ್ಡಿ ರಹಿತ ಸಾಲ ನೀಡುವ ಯೋಜನೆ ಮುಂದುವರಿಸುವ ಬಗ್ಗೆ ಯಾವ ಪ್ರಸ್ತಾಪವನ್ನೂ ಮಾಡಿಲ್ಲ. ರೈತರ ಉತ್ಪಾದನೆ ಹೆಚ್ಚಿಸುವ ನಿಟ್ಟಿನಲ್ಲಿ ಯಾವ ಯೋಜನೆಗಳು ಕಾಣಲಿಲ್ಲ. ಆದರೆ ಕೃಷಿ ಬೆಳೆಗಳಿಗೆ 2000 ಕೋಟಿ ಆವರ್ತ ನಿಧಿ ಘೋಷಣೆ, ಮಹದಾಯಿ ಕಾಮಗಾರಿಗೆ 500 ಕೋಟಿ ಮೀಸಲು ಸ್ವಾಗತಾರ್ಹ ನಿರ್ಧಾರ. -ಬಾಬಾಗೌಡ ಪಾಟೀಲ, ರೈತ ನಾಯಕರು
– ಕೇಶವ ಆದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mrinal Hebbalkar: ನನ್ನ ತಾಯಿಗೆ ರವಿ ಬಳಸಿದ ಪದದಿಂದ ನೋವಾಗಿದೆ: ಮೃಣಾಲ್
Belgavi: ಸಿ.ಟಿ.ರವಿ ಪ್ರಕರಣ ಮುಂದುವರಿಸುವಲ್ಲಿ ಅರ್ಥವೇ ಇಲ್ಲ: ಸಚಿವ ಸತೀಶ್ ಜಾರಕಿಹೊಳಿ
Belagavi: ನ್ಯಾಯಾಧೀಶರ ಮುಂದೆ ಪೊಲೀಸ್ ದೌರ್ಜನ್ಯ ಬಿಚ್ಚಿಟ್ಟ ಸಿ.ಟಿ. ರವಿ
Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ
Belagavi: ಸಿ.ಟಿ.ರವಿ ಬಂಧನ ಪ್ರಕರಣ ಬೆಂಗಳೂರಿಗೆ ಸ್ಥಳಾಂತರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.