ಮರಾಠಿಗರ ಹೆಗಲ ಮೇಲೆ ಬಂದೂಕಿಟ್ಟ ಶಿವಸೇನೆ: ಫಡ್ನವೀಸ್
Team Udayavani, Apr 16, 2021, 9:25 PM IST
ಬೆಳಗಾವಿ : ಮರಾಠಿಗರ ಹೆಗಲ ಮೇಲೆ ಬಂದೂಕು ಇಟ್ಟು ಟಿಪ್ಪು ಸುಲ್ತಾನ್ ಕೀ ಜೈ ಎನ್ನುವವರ(ಕಾಂಗ್ರೆಸ್) ಕೊರಳಿಗೆ ಹಾರ ಹಾಕಲು ಶಿವಸೇನೆ ಮುಂದಾಗಿದೆ. ಇದಕ್ಕೆ ನಮ್ಮ ಮರಾಠಿಯ ಹೆಗಲು ಯಾವಾಗಲೂ ನಿಮಗೆ ಸಾಥ್ ನೀಡುವುದಿಲ್ಲ ಎಂದು ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಎಚ್ಚರಿಕೆ ನೀಡಿದರು.
ತಾಲೂಕಿನ ಹಿಂಡಲಗಾ ಗ್ರಾಮದಲ್ಲಿ ಗುರುವಾರ ನಡೆದ ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಜತೆ ಶಿವಸೇನೆ ಮೈತ್ರಿ ಮಾಡಿಕೊಂಡಿದೆ. ಹೀಗಾಗಿ ಬೆಳಗಾವಿಯ ಮರಾಠಿಗರ ಹೆಗಲ ಮೇಲೆ ಬಂದೂಕು ಇಟ್ಟು ಬಿಜೆಪಿಗೆ ಗುಂಡು ಹಾರಿಸಿ ಕಾಂಗ್ರೆಸ್ ಬೆಂಬಲಿಸಲು ಶಿವಸೇನೆಯ ಸಂಜಯ ರಾವುತ್ ಕುತಂತ್ರ ನಡೆಸಿದ್ದಾರೆ ಎಂದು ವಾಗ್ಧಾಳಿ ನಡೆಸಿದರು.
ಕರ್ನಾಟಕದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಟಿಪ್ಪು ಜಯಂತಿ ರದ್ದುಗೊಳಿಸಿದೆ. ಆದರೆ ಟಿಪ್ಪು ಸುಲ್ತಾನ್ ಜಯಂತಿ ಆಚರಿಸುವ ಕಾಂಗ್ರೆಸ್ ಜತೆ ಮಹಾರಾಷ್ಟ್ರದಲ್ಲಿ ಶಿವಸೇನೆ ಕೈಜೋಡಿಸಿದೆ. ಸಂಜಯ ರಾವುತ್ ಮರಾಠಿ ಮನುಷ್ಯನ ಬೆನ್ನಿಗೆ ನಿಲ್ಲಲು ಬಂದಿರುವುದಾಗಿ ಹೇಳಿದ್ದರು. ಆದರೆ ಅದರ ಹಿಂದಿನ ಅಸಲಿಯತ್ತು ಬೇರೆ ಇದೆ. ಕಾಂಗ್ರೆಸ್‌ಗೆ ಲಾಭ ಮಾಡಲು ಮತ ವಿಭಜನೆಗೆಂದು ಆಗಮಿಸಿದ್ದರು. ಬಾಳಾಸಾಹೇಬ ಠಾಕ್ರೆ ಅವರ ಶಿವಸೇನೆ ಈಗ ಮಹಾರಾಷ್ಟ್ರದಲ್ಲಿ ಉಳಿದಿಲ್ಲ. ಮತ ಬ್ಯಾಂಕ್‌ಗಾಗಿ ಅಧಿ ಕಾರದ ದುರಾಸೆಗಾಗಿ ಶಿವಸೇನೆ ಏನೇನೋ ಮಾಡಲು ಹೊರಟಿದೆ. ಮಹಾರಾಷ್ಟ್ರದಲ್ಲಿ ಶಿವಸೇನೆಯು ಉರ್ದು ಭಾಷೆಯಲ್ಲಿ ಕ್ಯಾಲೆಂಡರ್ ಮುದ್ರಿಸಿದೆ. ಅದರಲ್ಲಿ ಜನಾಬ್ ಬಾಳಾಸಾಹೇಬ ಠಾಕ್ರೆ ಎಂದು ಬರೆದಿದೆ. ಜತೆಗೆ ಆಜಾನ್ ಸ್ಪರ್ಧೆ ಹಮ್ಮಿಕೊಂಡಿದೆ.
ಉದ್ಧವ ಠಾಕ್ರೆ ಸರ್ಕಾರ ಇನ್ನು ಮುಂದೆ ಟಿಪ್ಪು ಸುಲ್ತಾನ್ ಜಯಂತಿ ಆಚರಿಸಲಿದೆ ಎಂದರು. ಛತ್ರಪತಿ ಶಿವಾಜಿ ಮಹಾರಾಜರು ಹಿಂದವಿ ಸ್ವರಾಜ್ ನಿರ್ಮಾಣಕ್ಕಾಗಿ ಹೋರಾಡಿದ್ದಾರೆ. ಇಲ್ಲಿಯ ಮರಾಠಿ ಭಾಷಿಕರು ಅಪ್ಪಟ ಹಿಂದುತ್ವವಾದಿಗಳಾಗಿದ್ದಾರೆ. ಮರಾಠಿಗರು ಅಮಾಯಕರೇ ಹೊರತು ಮೂರ್ಖರಲ್ಲ. ಉಪಚುನಾವಣೆಯಲ್ಲಿ ಎಂಇಎಸ್ ಹಾಗೂ ಸಂಜಯ ರಾವುತ್‌ಗೆ ಬೆಳಗಾವಿ ಮರಾಠಿ ಭಾಷಿಕ ಮತದಾರರು ಪಾಠ ಕಲಿಸಲಿದ್ದಾರೆ. ಬೆಳಗಾವಿ ಮರಾಠಿ ಭಾಷಿಕರ ಮೇಲೆ ರಾವುತ್ ನಕಲಿ ಪ್ರೀತಿ ತೋರಿಸುತ್ತಿದ್ದಾರೆ ಎಂದರು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ಮಾತನಾಡಿದರು. ಬೆಳಗಾವಿ ಗ್ರಾಮೀಣ ಮಂಡಲ ಅಧ್ಯಕ್ಷ ಧನಂಜಯ ಜಾಧವ ಸ್ವಾಗತಿಸಿದರು. ಸಚಿವರಾದ ಜಗದೀಶ ಶೆಟ್ಟರ, ಉಮೇಶ ಕತ್ತಿ, ಮುರುಗೇಶ ನಿರಾಣಿ, ಶಾಸಕ ಅನಿಲ ಬೆನಕೆ, ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ, ಮುಖಂಡರಾದ ರಾಜೇಂದ್ರ ನೇರ್ಲಿ, ಉಜ್ವಲಾ ಬಡವನಾಚೆ, ಜಗದೀಶ ಹಿರೇಮನಿ, ಶಶಿಕಾಂತ ಪಾಟೀಲ, ಶಿವಾಜಿ ಸುಂಠಕರ, ಮನೋಹರ ಕಡೋಲ್ಕರ ಇತರರು ಇದ್ದರು.