ಗುಡಾರ ಶಾಲೆಯಲ್ಲಿ ಮಕ್ಕಳ ಬಿಡಾರ
Team Udayavani, Dec 28, 2019, 12:33 PM IST
ಚಿಕ್ಕೋಡಿ: ಕಬ್ಬು ಕಟಾವು ಮಾಡಲು ನೆರೆಯ ಮಹಾರಾಷ್ಟ್ರ ರಾಜ್ಯದಿಂದ ವಲಸೆ ಬಂದಿರುವ ಮಕ್ಕಳಿಗೆ ಶಿಕ್ಷಣ ಸಿಗಬೇಕೆನ್ನುವ ಉದ್ದೇಶದಿಂದ ರಾಜ್ಯ ಶಿಕ್ಷಣ ಇಲಾಖೆ ಸದ್ದಿಲ್ಲದೇ ಅವರಿಗೆ ಶಿಕ್ಷಣ ನೀಡುತ್ತಿದೆ. ಪ್ರಸಕ್ತ ಹಂಗಾಮಿನಲ್ಲಿ ಕಬ್ಬು ಕಟಾವು ಮಾಡಲು ಬಂದ ವಲಸಿಗರ ಕೂಲಿಕಾರ್ಮಿಕ ಮಕ್ಕಳಿಗೆ ನಿಪ್ಪಾಣಿ ಹಾಗೂ ಚಿಕ್ಕೋಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವ್ಯಾಪ್ತಿಯಲ್ಲಿ ಟೆಂಟ್ ಶಾಲೆಗಳನ್ನು ಆರಂಭ ಮಾಡಿದೆ.
ಕಬ್ಬು ಕಟಾವು ಮಾಡಲು ವಲಸೆ ಬಂದ ಕೂಲಿಕಾರ್ಮಿಕರ ಮಕ್ಕಳನ್ನು ಗಮನದಲ್ಲಿಟ್ಟುಕೊಂಡೇ ಗುಡಾರ(ಟೆಂಟ್) ಶಾಲೆಗಳನ್ನು ಆರಂಭಿಸಿದ್ದು, ನಿಪ್ಪಾಣಿ ಮತ್ತು ಚಿಕ್ಕೋಡಿ ಕ್ಷೇತ್ರ ಶಿಕ್ಷಣಾ ಧಿಕಾರಿ ಕಚೇರಿ ವ್ಯಾಪ್ತಿಯಲ್ಲಿ ಮೂರು ಟೆಂಟ್ ಶಾಲೆಗಳನ್ನು ಪ್ರಾರಂಭಿಸಿದ್ದು, ಸುಮಾರು ನೂರಕ್ಕಿಂತ ಹೆಚ್ಚಿನ ಮಕ್ಕಳು ವಿಶೇಷ ಶಿಕ್ಷಣ ಪಡೆಯುತ್ತಿದ್ದಾರೆ. ನಿಪ್ಪಾಣಿ
ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ವ್ಯಾಪ್ತಿಯ ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಆವರಣ ಹತ್ತಿರ, ಬೇಡಕಿಹಾಳ ವೆಂಕಟೇಶ್ವರ ಸಕ್ಕರೆ ಕಾರ್ಖಾನೆ ಆವರಣ ಮತ್ತು ಚಿಕ್ಕೋಡಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ವ್ಯಾಪ್ತಿಯ ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ಹತ್ತಿರ ಈ ಶಾಲೆಗಳು ಆರಂಭವಾಗಿವೆ.
ಜೀವನೋಪಾಯಕ್ಕೆ ನೆರೆಯ ಮಹಾರಾಷ್ಟ್ರದ ರಾಜ್ಯದ ಭೀಡ್, ಉಸ್ಮಾನಾಬಾದ, ಲಾತೂರ ಮುಂತಾದ ಜಿಲ್ಲೆಗಳಿಂದ ಕಬ್ಬು ಕಟಾವು ಮಾಡಲು ಪ್ರತಿ ವರ್ಷ ಸಾವಿರಾರು ಕೂಲಿ ಕಾರ್ಮಿಕರು ರಾಜ್ಯದ ಗಡಿ ಭಾಗಕ್ಕೆ ಆಗಮಿಸುತ್ತಾರೆ. ಇದರಿಂದ ಕೂಲಿ ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ವಂಚಿತವಾಗಬಾರದು ಎಂಬ ಉದ್ದೇಶದಿಂದ ಕೂಲಿ ಕಾರ್ಮಿಕರು ಕಾರ್ಯನಿರ್ವಹಿಸುವ ಸ್ಥಳದಲ್ಲಿಯೇ ಟೆಂಟ್ ಶಾಲೆಗಳನ್ನು ತೆರೆಯಲಾಗಿದೆ. ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ವ್ಯಾಪ್ತಿಯ ಚಿಕ್ಕೋಡಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ವ್ಯಾಪ್ತಿಯಿಂದ ಚಿದಾನಂದ ಬಸವಪ್ರಭು ಸಕ್ಕರೆ ಕಾರ್ಖಾನೆ ಹತ್ತಿರ ಆರಂಭ ಮಾಡಿರುವ ಟೆಂಟ್ ಶಾಲೆಯಲ್ಲಿ ಸುಮಾರು 25ಕ್ಕಿಂತ ಹೆಚ್ಚಿನ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಶಿಕ್ಷಣ ಇಲಾಖೆ ಇಬ್ಬರು ಮರಾಠಿ ಭಾಷಿಕ ಶಿಕ್ಷಕರನ್ನು ಟೆಂಟ್ ಶಾಲೆಗೆ ನಿಯೋಜನೆ ಮಾಡಿದೆ. ಮಧ್ಯಾಹ್ನ ಬಿಸಿಯೂಟ, ಕುಡಿಯುವ ನೀರು ಮತ್ತು ಶೌಚಾಲಯ ವ್ಯವಸ್ಥೆ ಕಲ್ಪಿಸಿದೆ.
ಅದರಂತೆ ನಿಪ್ಪಾಣಿ ಭಾಗದ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಆವರಣದ ಹತ್ತಿರ ಒಂದು ಟೆಂಟ್ ಶಾಲೆ ಆರಂಭ ಮಾಡಿದ್ದು, ಅಲ್ಲಿ ಸುಮಾರು 28 ಮಕ್ಕಳು ದಾಖಲಾಗಿದ್ದಾರೆ. ಓರ್ವ ಮರಾಠಿ ಶಿಕ್ಷಕರನ್ನು ನಿಯೋಜಿಸಿದೆ. ಬೇಡಕಿಹಾಳ ವೆಂಕಟೇಶ್ವರ ಸಕ್ಕರೆ ಕಾರ್ಖಾನೆ ಆವರಣದ ಹತ್ತಿರ ಆರಂಭ ಮಾಡಿರುವ ಟೆಂಟ್ ಶಾಲೆಯಲ್ಲಿ ಸುಮಾರು 35 ಮಕ್ಕಳು ದಾಖಲಾಗಿವೆ. ಅಲ್ಲಿಯೂ ಸಹ ಓರ್ವ ಶಿಕ್ಷಕನನ್ನು ನಿಯೋಜಿಸಿದೆ. ಮತ್ತು ಕೂಲಿ ಕಾರ್ಮಿಕರು ಹೆಚ್ಚಿರುವ ಪ್ರದೇಶಗಳಲ್ಲಿ ಮಕ್ಕಳು ಶಾಲೆಗೆ ಬರಬೇಕೆಂದು ಶಿಕ್ಷಣ ಇಲಾಖೆ ಜಾಗೃತಿ ಮೂಡಿಸಿದ್ದರಿಂದ ನಿಪ್ಪಾಣಿ ತಾಲೂಕಿನ ಭೋಜ ಶಾಲೆಯಲ್ಲಿ 12 ಜನ ಕೂಲಿಕಾರ್ಮಿಕರ ಮಕ್ಕಳು ದಾಖಲಾಗಿವೆ. ಬಿಡುಗಡೆಯಾಗದ ಅನುದಾನ: ವಲಸೆ ಬಂದಿರುವ ಕೂಲಿಕಾರ್ಮಿಕರ ಮಕ್ಕಳಿಗೆ ಶಿಕ್ಷಣ ನೀಡಬೇಕೆಂದು ಸರ್ಕಾರದ ನಿಯಮ ಇದೆ. ಆದರೆ ಟೆಂಟ್ ಶಾಲೆ ಆರಂಭ ಮಾಡಿ ಮೂಲ ಸೌಲಭ್ಯ ಒದಗಿಸಲು
ಸರ್ಕಾರ ವಿಶೇಷ ಅನುದಾನ ನೀಡುತ್ತದೆ. ಆದರೆ ಪ್ರಸಕ್ತ ವರ್ಷ ಸಕ್ಕರೆ ಕಾರ್ಖಾನೆಗಳು ಆರಂಭವಾಗಿ ಒಂದೂವರೆ ತಿಂಗಳು ಕಳೆಯುತ್ತಾ ಬಂದರೂ ಟೆಂಟ್ ಶಾಲೆ ಆರಂಭ ಮಾಡಿ ಮೂಲ ಸೌಲಭ್ಯ ಒದಗಿಸಲು ಅನುದಾನ ಬಿಡುಗಡೆಯಾಗಿಲ್ಲ, ಸ್ವ-ಇಚ್ಛೆಯಿಂದ ಆಯಾ ಕ್ಷೇತ್ರ ಶಿಕ್ಷಣಾಧಿ ಕಾರಿಗಳು ಶಿಕ್ಷಕರನ್ನು ನಿಯೋಜಿಸಿ ಸ್ಥಳೀಯ ದೇಣಿಗೆದಾರರಿಂದ ಟೆಂಟ್ ಹೊಡಿಸಿ ಶಾಲೆ ಆರಂಭಿಸಿದ್ದಾರೆ.
ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ಬಳಿ ಟೆಂಟ್ ಶಾಲೆ ಆರಂಭಿಸಿ ಇಬ್ಬರು ಶಿಕ್ಷಕರನ್ನು ನಿಯೋಜಿಸಿದೆ. ಬರುವ ಎರಡು ದಿನಗಳ ಒಳಗಾಗಿ ಪುಸ್ತಕ, ಪೆನ್ನು, ಕಪ್ಪು ಹಲಗೆ ನೀಡಲಾಗುತ್ತದೆ. ಪ್ರತಿದಿನ 25 ಮಕ್ಕಳು ಶಿಕ್ಷಣ ಪಡೆಯುತ್ತಾರೆ. –ಬಿ.ಎ.ಮೇಕನಮರಡಿ ಕ್ಷೇತ್ರ ಶಿಕ್ಷಣಾಧಿಕಾರಿ ಚಿಕ್ಕೋಡಿ
-ಮಹಾದೇವ ಪೂಜೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಮರಕ್ಕೆ ಕ್ರೂಸರ್ ಢಿಕ್ಕಿ: ಸ್ಥಳದಲ್ಲೇ ಮೂವರ ಸಾವು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Belagavi: ಗೆಳೆಯರ ಜೊತೆ ಪಾರ್ಟಿಗೆಂದು ಹೋದ ವ್ಯಕ್ತಿ ಅನುಮಾನಾಸ್ಪದವಾಗಿ ಸಾ*ವು
Belagavi: ಬಾಲಕಿ ಮೇಲೆ ಅತ್ಯಾಚಾರ… ಆರೋಪಿಗೆ 20 ವರ್ಷ ಜೈಲು ಶಿಕ್ಷೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.