ಅಧಿವೇಶನಕ್ಕೆ ತಟ್ಟಲಿದೆ ಕಬ್ಬಿನ ಬಾಕಿ ಬಿಸಿ
Team Udayavani, Oct 29, 2018, 4:41 PM IST
ಬೆಳಗಾವಿ: ರಾಜ್ಯದಲ್ಲಿ ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಮತ್ತೆ ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆಗಳ ಮಧ್ಯೆ ದರ ಸಂಘರ್ಷ ಆರಂಭವಾಗಿದೆ. ಸುವರ್ಣ ವಿಧಾನಸೌಧದಲ್ಲಿ ಡಿಸೆಂಬರ್‌ದಲ್ಲಿ ಚಳಿಗಾಲ ಅಧಿವೇಶನ ನಡೆಯಲಿರುವುದರಿಂದ ಮತ್ತೆ ಅಧಿವೇಶನಕ್ಕೆ ಕಬ್ಬಿನ ಬಾಕಿ ಬಿಸಿ ತಟ್ಟುವ ಎಲ್ಲ ಲಕ್ಷಣಗಳು ದಟ್ಟವಾಗಿವೆ.
ಕಳೆದ ಹಂಗಾಮು ಮುಗಿದ ಬೆನ್ನಲ್ಲೇ ಬಾಕಿ ಹಣ ಪಾವತಿ ಹಾಗೂ ದರ ನಿಗದಿ ಮಾಡಬೇಕೆಂದು ಒತ್ತಾಯಿಸಿ ಕಬ್ಬು ಬೆಳೆಗಾರರು ಸರ್ಕಾರ ಹಾಗೂ ಸಕ್ಕರೆ ಕಾರ್ಖಾನೆಗಳ ವಿರುದ್ಧ ಹೋರಾಟ ತೀವ್ರಗೊಳಿಸಲು ಮುಂದಾಗಿದ್ದಾರೆ. ಈ ಹಂಗಾಮಿನಲ್ಲಿ ದರ ಘೋಷಣೆ ಮಾಡಿಯೇ ಕಬ್ಬು ನುರಿಸುವ ಕಾರ್ಯ ಆರಂಭಿಸಬೇಕೆಂದು ಪಟ್ಟು ಹಿಡಿದಿದ್ದಾರೆ.
ಬೆಳಗಾವಿ ಜಿಲ್ಲೆಯ 23 ಕಾರ್ಖಾನೆಗಳು ಸೇರಿದಂತೆ ರಾಜ್ಯದ 65 ಕಾರ್ಖಾನೆಗಳು ಇದೂವರೆಗೆ ದರ ನಿಗದಿ ಮಾಡಿಲ್ಲ. ಕಬ್ಬು ನುರಿಸುವ ಕಾರ್ಯ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇದ್ದರೂ ದರ ನಿಗದಿಯ ಮಾತಿಲ್ಲ. ಇನ್ನೊಂದು ಕಡೆ ರೈತರಿಗೆ ನೂರಾರು ಕೋಟಿ ಬಾಕಿ ಹಣ ಬರಬೇಕಿದೆ. ಇದಕ್ಕೆ ಯಾವ ಕಾರ್ಖಾನೆಗಳೂ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ರೈತರು ಪ್ರತಿ ಟನ್‌ಗೆ 3000 ದರ ನೀಡಲೇಬೇಕೆಂದು ಪಟ್ಟು ಹಿಡಿದಿದ್ದು ಹಗ್ಗ-ಜಗ್ಗಾಟ ಮುಂದುವರಿದಿದೆ.
ಈ ವರ್ಷ ಕೇಂದ್ರ ಸರ್ಕಾರ ಶೇ. 10ರವರೆಗೆ 2750 ರೂ. ದರ ನಿಗದಿ ಮಾಡಿದೆ. ಇದು ರೈತರಿಗೆ ಮಾಡಿದ ಮೊದಲ ಅನ್ಯಾಯ. ಕನಿಷ್ಠ 3000 ರೂ. ದರ ನಿಗದಿ ಮಾಡಬೇಕಿತ್ತು. ರಾಜ್ಯ ಸರ್ಕಾರ ಎಸ್‌ಎಪಿ (ರಾಜ್ಯ ಸಲಹಾ ಬೆಲೆ) ನಿಗದಿ ಮಾಡಲು ಮನಸ್ಸೇ ಮಾಡುತ್ತಿಲ್ಲ. ಈ ಸಂಬಂಧ ಸಭೆಗಳೂ ನಡೆದಿಲ್ಲ. ರೈತರ ಮಾತಿಗೆ ಬೆಲೆಯೇ ಇಲ್ಲದಂತಾಗಿದೆ ಎಂಬುದು ಮುಖಂಡರ ಆರೋಪ.
ಕಾರ್ಖಾನೆಗಳಿಗೆ ಮೃದು ಧೋರಣೆ: ಸಕ್ಕರೆ ಕಾರ್ಖಾನೆಗಳು ಪ್ರತಿ ಟನ್ ಕಬ್ಬಿಗೆ ಒಂದು ರೂ.ದಂತೆ ಸಕ್ಕರೆ ಸಂಸ್ಥೆಗೆ ಪಾವತಿಸಬೇಕೆಂದು ಸರ್ಕಾರ ಕಠಿಣ ನಿಯಮ ರೂಪಿಸಿದೆ. ಈ ಹಣ ಪಾವತಿಸದಿದ್ದರೆ ಅಂತಹ ಕಾರ್ಖಾನೆಗಳ ಲೈಸನ್ಸ್ ರದ್ದುಪಡಿಸಲಾಗುವುದೆಂದು ಜಿಲ್ಲಾಧಿಕಾರಿಗಳು ಎಚ್ಚರಿಸುತ್ತಾರೆ. ಆದರೆ ಅದೇ ಸಕ್ಕರೆ ಕಾರ್ಖಾನೆಗಳು ವರ್ಷಗಟ್ಟಲೇ ರೈತರ ಕೋಟ್ಯಂತರ ಹಣ ಬಾಕಿ ಉಳಿಸಿಕೊಂಡರೂ ಕಾರ್ಖಾನೆಗಳ ಮೇಲೆ ಯಾವುದೇ ಕ್ರಮ ಇಲ್ಲ. ಈ ರೀತಿಯ ತಾರತಮ್ಯ ಧೋರಣೆ ಏಕೆಂದು ರೈತ ಮುಖಂಡ ಈರಣ್ಣ ಕಡಾಡಿ ಪ್ರಶ್ನಿಸುತ್ತಾರೆ.
ಸಕ್ಕರೆ ಕಾರ್ಖಾನೆಗಳು ರೈತರಿಗೆ ಕೊಡಬೇಕಾದ ಬಾಕಿ ಹಣದ ಬಗ್ಗೆ ಸರಿಯಾದ ಮಾಹಿತಿ ಇಟ್ಟುಕೊಂಡಿಲ್ಲ. ಒಂದು ವೇಳೆ ಇದ್ದರೂ ಅದನ್ನು ಜಿಲ್ಲಾಡಳಿತ ಮುಂದೆ ಬಹಿರಂಗಪಡಿಸುತ್ತಿಲ್ಲ. ಹೀಗಾಗಿ ಪ್ರತಿ ಸಲ ಹೋರಾಟ ಮಾಡಿಯೇ ದರ ಪಡೆಯಬೇಕಾದ ಪರಿಸ್ಥಿತಿ ರೈತರದ್ದಾಗಿದೆ. ಬಹುತೇಕ ಕಾರ್ಖಾನೆಗಳು ರಾಜಕಾರಣಿಗಳ ಹಿಡಿತದಲ್ಲಿರುವುದರಿಂದ ಇವುಗಳ ಮೇಲೆ ಸರ್ಕಾರ ನಿಯಂತ್ರಣ ಹಾಕುವುದು ಸಾಧ್ಯವಾಗುತ್ತಿಲ್ಲ. ಇದೆಲ್ಲದರ ಪರಿಣಾಮ ನಮ್ಮ ಮೇಲಾಗುತ್ತಿದೆ ಎಂಬುದು ರೈತ ಮುಖಂಡರ ಆರೋಪ. ನೆರೆಯ ಮಹಾರಾಷ್ಟ್ರಕ್ಕೆ ಹೋಲಿಸಿದರೆ ಕಬ್ಬಿನ ದರದಲ್ಲಿ 1000 ರೂ. ವ್ಯತ್ಯಾಸ ಆಗುತ್ತಿದೆ. ಯಾವುದರಲ್ಲೂ ನಮಗೆ ನ್ಯಾಯ ಸಿಗುತ್ತಿಲ್ಲ. ಮಹಾರಾಷ್ಟ್ರದಲ್ಲಿ ಪ್ರತಿ ಟನ್ ಕಬ್ಬಿಗೆ 3000 ರೂ. ದರ ಇದ್ದರೆ ನಮ್ಮಲ್ಲಿ 2000 ರೂ. ಇದೆ. ನಮ್ಮಲ್ಲಿ ಯಾವ ಕಾರ್ಖಾನೆಗಳು ದರ ಘೋಷಿಸಿಲ್ಲ. ಹೀಗಾಗಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ನವೆಂಬರ್ 5ರಂದು ಜಿಲ್ಲೆಯಲ್ಲಿ ನಡೆಯಲಿರುವ ರೈತ ಸಮಾವೇಶದಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡ ಚೂನಪ್ಪ ಪೂಜೇರಿ ಹೇಳಿದರು.
ದರ ಹೆಚ್ಚು ನೀಡಿದ ಇತಿಹಾಸ ಇಲ್ಲ: ಮಾರುಕಟ್ಟೆಯಲ್ಲಿ ಸಕ್ಕರೆ ದರ ಹೆಚ್ಚಾದ ಸಮಯದಲ್ಲಿ ಅದಕ್ಕೆ ತಕ್ಕಂತೆ ರೈತರಿಗೆ ಹೆಚ್ಚಿನ ದರ ನೀಡಿದ ಇತಿಹಾಸವೇ ಇಲ್ಲ. ಕಳೆದ ಹಂಗಾಮಿನಲ್ಲಿ ಮಾರುಕಟ್ಟೆಯಲ್ಲಿ ಸಕ್ಕರೆ ಧಾರಣೆ ಕುಸಿದಿದೆ ಎಂಬ ನೆಪ ಹೇಳಿ ರಾಜ್ಯದ ಕಾರ್ಖಾನೆಗಳು ಮಹಾರಾಷ್ಟ್ರದ ಕಾರ್ಖಾನೆಗಳಿಗಿಂತ ಪ್ರತಿ ಟನ್‌ಗೆ 800 ರೂ. ದರ ಕಡಿಮೆ ನೀಡಿದವು. ರೈತರು ಇದನ್ನು ಪ್ರಶ್ನಿಸಿದರೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂಬುದು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಹಾಗೂ ಮಾಜಿ ಶಾಸಕ ಮೋಹನ ಶಹಾ ಅಸಮಾಧಾನ.
ಸಕ್ಕರೆ ಸಂಸ್ಥೆಗೂ ಅನ್ಯಾಯ: ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ ಮಾತ್ರವಲ್ಲ ನಿಜಲಿಂಗಪ್ಪ ಸಕ್ಕರೆ ಸಂಸ್ಥೆಗೂ ಅನ್ಯಾಯವಾಗುತ್ತಿದೆ. ಈ ಸಂಸ್ಥೆಗೂ ಸಕ್ಕರೆ ಕಾರ್ಖಾನೆಗಳಿಂದ ಬರಬೇಕಾದ ಹಣ ಸಂದಾಯವಾಗುತ್ತಿಲ್ಲ. ಪ್ರತಿ ವರ್ಷ ಇದೇ ರೀತಿ ನಡೆಯುತ್ತಿದ್ದು ಇದುವರೆಗೆ ಒಂದೇ ಒಂದು ಕಾರ್ಖಾನೆ ಮೇಲೆ ಕಾನೂನು ಕ್ರಮವಾಗಿಲ್ಲ ಎನ್ನುತ್ತಾರೆ ರೈತ ಮುಖಂಡರು.
ಕೇಂದ್ರದ ಎಫ್‌ಆರ್‌ಪಿಯಂತೆ ಸಕ್ಕರೆ ಕಾರ್ಖಾನೆಗಳು ದರ ನೀಡಬೇಕು. ಮಾರುಕಟ್ಟೆಯಲ್ಲಿ ಸಕ್ಕರೆಗೆ ಹೆಚ್ಚಿನ ದರ ಬಂದರೆ ಅದಕ್ಕೆ ಪೂರಕವಾಗಿ ಹೆಚ್ಚಿನ ದರವನ್ನು ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ ನೀಡಬೇಕು. ಆದರೆ ಕಳೆದ ಹಂಗಾಮಿನಲ್ಲಿ ಎಷ್ಟೋ ಕಾರ್ಖಾನೆಗಳು ಹಣಕಾಸಿನ ತೊಂದರೆ ಕಾರಣ ಹೇಳಿ ರೈತರಿಗೆ ಸೂಕ್ತ ದರ ಕೊಡಲಿಲ್ಲ. ಇದು ಸಮಸ್ಯೆಗೆ ಕಾರಣವಾಯಿತು.
. ಡಾ| ಆರ್.ಬಿ. ಖಂಡಗಾವೆ,
ನಿಜಲಿಂಗಪ್ಪ ಸಕ್ಕರೆ ಸಂಸ್ಥೆ
ಕೇಶವ ಆದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
ಅಂತಾರಾಜ್ಯ ಮಕ್ಕಳ ಮಾರಾಟ ಜಾಲ ಪತ್ತೆ… 4.50 ಲಕ್ಷಕ್ಕೆ ಗೋವಾಕ್ಕೆ ಮಾರಿದ್ದ ಮಗುವಿನ ರಕ್ಷಣೆ
Belagavi: ತಹಶೀಲ್ದಾರ್ ಮನೆ ಮೇಲೆ ಲೋಕಾಯುಕ್ತ ದಾಳಿ
Belagavi; ಸಂಘದ ಹೆಸರಲ್ಲಿ ಮಹಿಳೆಯರಿಗೆ 19.35 ಕೋಟಿ ರೂ. ಮಹಾ ವಂಚನೆ!
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.