ಮುಂಗಾರು ಹಂಗಾಮಿಗೆ ರೈತ ಸಜ್ಜು
ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ ಕೃಷಿ ಕ್ಷೇತ್ರ
Team Udayavani, May 22, 2022, 5:14 PM IST
ಬೆಳಗಾವಿ: ಕಳೆದ ಎರಡು ವರ್ಷ ಕೊರೊನಾ ಹೊಡೆತದಿಂದ ಸಂಪೂರ್ಣ ತತ್ತರಿಸಿದ್ದ ಕೃಷಿ ಕ್ಷೇತ್ರ ಈಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು ಮೇ ತಿಂಗಳಲ್ಲಿ ಸುರಿದ ಮಳೆಯಿಂದ ಸಂತಸಗೊಂಡಿರುವ ರೈತ ಸಮುದಾಯ ಹೊಸ ನಿರೀಕ್ಷೆ ಹಾಗೂ ಉತ್ತಮ ಫಸಲಿನ ಆಸೆಯಿಂದ ಬಿತ್ತನೆ ಕಾರ್ಯಕ್ಕೆ ಜಮೀನು ಹದಗೊಳಿಸುವ ಕಾರ್ಯಕ್ಕೆ ಮುಂದಾಗಿದೆ. ಕೃಷಿ ಇಲಾಖೆ ವಾಡಿಕೆಯಂತೆ ಮುಂಗಾರು ಬಿತ್ತನೆ ಕಾರ್ಯಕ್ಕೆ ಎಲ್ಲ ಸಿದ್ಧತೆ ಮಾಡಿಕೊಂಡಿದೆ.
ಬೀಜ ಹಾಗೂ ರಸಗೊಬ್ಬರ ಸಂಗ್ರಹಕ್ಕೆ ಎಲ್ಲ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಏಪ್ರಿಲ್ ಕೊನೆಯ ವಾರ ಹಾಗೂ ಮೇ ತಿಂಗಳ ಆರಂಭದಲ್ಲಿ ಬಿದ್ದ ಮಳೆ ಕೃಷಿ ಚಟುವಟಿಕೆಗಳಿಗೆ ಜೀವ ತುಂಬಿದೆ. ಜಿಲ್ಲೆಯ ಸವದತ್ತಿ, ರಾಮದುರ್ಗ, ಬೆಳಗಾವಿ ಬೈಲ ಹೊಂಗಲ, ಕಿತ್ತೂರು ಸೇರಿದಂತೆ ಎಲ್ಲ ತಾಲೂಕುಗಳಲ್ಲಿ ಬಿತ್ತನೆ ಕಾರ್ಯಕ್ಕೆ ಜಮೀನನ್ನು ಹದ ಮಾಡಿಕೊಳ್ಳುವ ಕಾರ್ಯ ಬಿರುಸಿನಿಂದ ನಡೆದಿದೆ.
ಕಳೆದ ವರ್ಷ ಜಿಲ್ಲೆಯಲ್ಲಿ ಬಿದ್ದ ಉತ್ತಮ ಮಳೆಯಿಂದ ಒಳ್ಳೆಯ ಬೆಳೆಯ ವಿಶ್ವಾಸದೊಂದಿಗೆ ಬಿತ್ತನೆಯ ಗುರಿಯನ್ನು 7.16 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ಹೆಚ್ಚಿಸಲಾಗಿತ್ತು. ಈ ವರ್ಷ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 7.53 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ.
ಕೆಲವು ದಿನಗಳಿಂದ ಬೀಳುತ್ತಿರುವ ಮುಂಗಾರು ಪೂರ್ವ ಮಳೆಯು ಭೂಮಿ ಹದಗೊಳಿಸುವುದಕ್ಕೆ, ಗೊಬ್ಬರ ಸೇರಿಸುವುದಕ್ಕೆ ಸಹಕಾರಿಯಾಗಿದೆ. ಹೀಗಾಗಿ ರೈತರು ಈ ಬಾರಿ ಉತ್ತಮ ಮಳೆಯ ಆಶಯದೊಂದಿಗೆ ಪೂರ್ವ ಸಿದ್ಧತೆಯಲ್ಲಿ ತೊಡಗಿದ್ದಾರೆ. ಅದಕ್ಕೆ ಪೂರಕವಾಗಿ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಮೊದಲಾದ ಪರಿಕರಗಳ ಪೂರೈಕೆಗೆ ಕೃಷಿ ಇಲಾಖೆಯೂ ಸಹ ಎಲ್ಲ ಸಿದ್ಧತೆ ಮಾಡಿಕೊಂಡಿದೆ.
ಕಳೆದ ಎರಡು ವರ್ಷಗಳಿಂದ ಮುಂಗಾರು ಪೂರ್ವದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಬಿತ್ತನೆ ಪ್ರದೇಶದ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಕಬ್ಬಿನ ಜೊತೆಗೆ ಏಕದಳ ಹಾಗೂ ದ್ವಿದಳ ಬೆಳೆಗಳ ಪ್ರದೇಶ ವಿಸ್ತಾರಗೊಳ್ಳುತ್ತಿದೆ. ಆದರೆ ನಂತರದ ದಿನಗಳಲ್ಲಿ ಮಳೆಯ ಚೆಲ್ಲಾಟದಿಂದ ನಿರೀಕ್ಷಿತ ಪ್ರಮಾಣದಲ್ಲಿ ಬೆಳೆ ಕೈಗೆ ಬರುತ್ತಿಲ್ಲ. ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಬಿತ್ತನೆ ಗುರಿಯನ್ನು ಹೆಚ್ಚಿಸಲಾಗುತ್ತಿದೆ.
ಈ ವರ್ಷ 2.80 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು, 1.20 ಲಕ್ಷ ಹೆ . ಪ್ರದೇಶದಲ್ಲಿ ಮೆಕ್ಕೆಜೋಳ, 1 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸೋಯಾಬಿನ್, 60 ಸಾವಿರ ಹೆ. ಪ್ರದೇಶದಲ್ಲಿ ಭತ್ತ, 26 ಸಾವಿರ ಹೆ. ಪ್ರದೇಶದಲ್ಲಿ ಶೇಂಗಾ, 38,900 ಹೆ ಪ್ರದೇಶದಲ್ಲಿ ಹತ್ತಿ, 39,692 ಹೆ ಪ್ರದೇಶದಲ್ಲಿ ಹೆಸರು ಬಿತ್ತನೆ ಮಾಡುವ ಗುರಿ ಹೊಂದಲಾಗಿದೆ. ಅದಕ್ಕೆ ಅನುಗುಣವಾಗಿ ಈ ಬಾರಿ 56 ಸಾವಿರ ಕ್ವಿಂಟಲ್ ಬಿತ್ತನೆ ಬೀಜಗಳು ಮತ್ತು 2.65 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಬೇಕಾಗುತ್ತದೆ ಎಂಬುದು ಕೃಷಿ ಇಲಾಖೆ ಅಧಿಕಾರಿಗಳ ಹೇಳಿಕೆ.
ಕಳೆದ ಎರಡು ವರ್ಷಗಳ ಬೆಳೆಯ ಪ್ರಮಾಣವನ್ನು ನೋಡಿದಾಗ 20 ರಿಂದ 30 ಸಾವಿರ ಹೆಕ್ಟೇರ್‌ದಷ್ಟು ಪ್ರದೇಶದಲ್ಲಿ ಏರಿಕೆಯಾಗಿದೆ. ವಾಣಿಜ್ಯ ಬೆಳೆಯಾದ ಕಬ್ಬಿನ ಬಿತ್ತನೆ ಪ್ರದೇಶದಲ್ಲಿ ಸುಮಾರು 60 ಸಾವಿರ ಹೆಕ್ಟೇರ್‌ದಷ್ಟು ಹೆಚ್ಚಳವಾಗಿದೆ. ಚಿಕ್ಕೋಡಿ, ಹುಕ್ಕೇರಿ, ಬೈಲಹೊಂಗಲ ಹಾಗೂ ಬೆಳಗಾವಿ ತಾಲೂಕುಗಳಲ್ಲಿ ಸೋಯಾಬಿನ್ ಬೀಜಕ್ಕೆ ಮೊದಲಿಂದಲೂ ಹೆಚ್ಚಿನ ಬೇಡಿಕೆ ಇದೆ.
ಸುಮಾರು 42 ಸಾವಿರ ಕ್ವಿಂಟಲ್ ಸೋಯಾಬಿನ್ ಬಿತ್ತನೆ ಬೀಜಗಳು ಬೇಕಾಗಬಹುದು ಎಂದು ಅಂದಾಜು ಮಾಡಲಾಗಿದ್ದು ಈ ಕಾರಣದಿಂದ ಈಗಾಗಲೇ ಅಧಿಕ ಪ್ರಮಾಣದಲ್ಲಿ ಸೋಯಾಬಿನ್ ಬಿತ್ತನೆ ಬೀಜವನ್ನು ಸಂಗ್ರಹ ಮಾಡಲಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಮುಂಗಾರು ಹಂಗಾಮಿನಲ್ಲಿ ಕಬ್ಬು, ಭತ್ತ, ಸೋಯಾ ಅವರೆ, ಸಜ್ಜೆ, ಶೇಂಗಾ, ಮೆಕ್ಕೆಜೋಳ, ಹೆಸರು, ಹೈಬ್ರಿಡ್ ಜೋಳ, ಸಜ್ಜೆ, ತೊಗರಿ, ಸೂರ್ಯಕಾಂತಿ ಬಿತ್ತಲಾಗುತ್ತದೆ. ಕೃಷಿ ಇಲಾಖೆಯಿಂದ ಎಲ್ಲ ವರ್ಗದ ರೈತರಿಗೆ ಗರಿಷ್ಠ 2 ಹೆಕ್ಟೇರ್ (5 ಎಕರೆ)ಪ್ರದೇಶಕ್ಕೆ ಸೀಮಿತವಾಗಿ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಿಸಲಾಗುವುದು.
ಇದಕ್ಕಾಗಿ ಜಿಲ್ಲೆಯ ಒಟ್ಟು 35 ರೈತ ಸಂಪರ್ಕ ಕೇಂದ್ರಗಳು ಮತ್ತು 95 ಪಿಕೆಪಿಎಸ್ (ಹೆಚ್ಚುವರಿ ವಿತರಣಾ ಕೇಂದ್ರ)ಗಳನ್ನು ಗುರುತಿಸಲಾಗಿದೆ. ಈ ಕೇಂದ್ರಗಳ ಮೂಲಕ ಕೃಷಿ ಇಲಾಖೆಯು ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಿಸಲಿದೆ. ಮುಂಗಾರು ಹಂಗಾಮಿಗೆ ಬೇಕಾಗಿರುವ ಎಲ್ಲ ಸಿದ್ಧತೆಗಳನ್ನು ಈಗಾಗಲೇ ಮಾಡಿಕೊಳ್ಳಲಾಗಿದೆ.
ಈ ವರ್ಷ 7.53 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಲಾಗಿದೆ. ಮುಂಗಾರು ಪೂರ್ವ ಉತ್ತಮ ಮಳೆಯಾಗಿರುವದರಿಂದ ರೈತರಲ್ಲಿ ಹೊಸ ಆಶಾಭಾವನೆ ಮೂಡಿದೆ. ಜಿಲ್ಲೆಯಲ್ಲಿ ಬೀಜ ಹಾಗೂ ರಸಗೊಬ್ಬರದ ಕೊರತೆ ಇಲ್ಲ. ಬೇಡಿಕೆಗೆ ಅನುಗುಣವಾಗಿ ಸಂಗ್ರಹ ಮಾಡಿಕೊಳ್ಳಲಾಗಿದೆ. ರೈತ ಸಂಪರ್ಕ ಕೇಂದ್ರಗಳ ಮೂಲಕ ಬೀಜ ಮತ್ತು ಗೊಬ್ಬರದ ಪೂರೈಕೆ ನಡೆಯಲಿದೆ. –ಶಿವನಗೌಡ ಪಾಟೀಲ, ಜಂಟಿ ನಿರ್ದೇಶಕರು, ಕೃಷಿ ಇಲಾಖೆ
-ಕೇಶವ ಆದಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.