ದೀಪಗಳ ಬೆಳಕಿನಲ್ಲಿ ತೇಲಾಡಿದ…ಕಿತ್ತೂರು ಸಾಮ್ರಾಜ್ಯ
1991ರಿಂದ ಕಿತ್ತೂರು ಹಾಗೂ ಕಿತ್ತೂರು ಉತ್ಸವದ ಭಾಗ್ಯದ ಬಾಗಿಲು ತೆರೆಯಿತೆಂದೇ ಹೇಳಬೇಕು.
Team Udayavani, Oct 25, 2022, 5:27 PM IST
ಸರಿಯಾಗಿ 198 ವರ್ಷಗಳ ಹಿಂದಿನ ನೆನಪು. ಸಂಜೆ ಸೂರ್ಯಾಸ್ತದ ಸಮಯ. ದಿನವಿಡೀ ಬೆಳಕು ನೀಡಿದ್ದ ಸೂರ್ಯದೇವ ವಿಶ್ರಾಂತಿಗೆ ಜಾರುತ್ತಿದ್ದ. ಆದರೆ ಕಿತ್ತೂರು ಸಂಸ್ಥಾನದ ರಾಜಧಾನಿ ಕಿತ್ತೂರಿನಲ್ಲಿ ವಾತಾವರಣ ಉಳಿದೆಲ್ಲ ದಿನಕ್ಕಿಂತ ಭಿನ್ನವಾಗಿತ್ತು. ಸೂರ್ಯ ಇಳೆಗೆ ಜಾರುತ್ತಿದ್ದಂತೆ. ಕೋಟೆಯ ತುಂಬೆಲ್ಲ ದೀಪಗಳು ಬೆಳಗಿದವು. ಜನರ ಹರ್ಷೋದ್ಗಾರ ಮುಗಿಲು ಮುಟ್ಟಿತು. ಇಡೀ ಕಿತ್ತೂರು ದೀಪಾವಳಿ ಬೆಳಕಿನಲ್ಲಿ ಮುಳುಗಿತ್ತು.
ಇದಕ್ಕೆ ಕಾರಣವಾಗಿದ್ದು ವೀರರಾಣಿ ಕಿತ್ತೂರ ಚನ್ನಮ್ಮನ ಸೈನ್ಯ ಕಂಪನಿ(ಬ್ರಿಟಿಷ್)ಸರಕಾರ ವಿರುದ್ಧ ವಿರೋಚಿತ ಜಯ ಸಾಧಿಸಿದ್ದು. ಬ್ರಿಟಿಷ್ ಅಧಿಕಾರಿ ಥ್ಯಾಕರೆ ಅವರ ಕತ್ತು ನೆಲಕ್ಕುರುಳುತ್ತಿದ್ದಂತೆ ಚನ್ನಮ್ಮನ ಸೈನ್ಯ ವೀರಾವೇಶದಿಂದ ಕುಣಿದಾಡಿತು. ಬ್ರಿಟಿಷರು ಬೇರೆ ದಾರಿ ಕಾಣದೆ ಚನ್ನಮ್ಮನ ಪಡೆಗೆ ಶರಣಾದರು. ಆಗ ವಿಜಯದ ಸಂಕೇತವಾಗಿ ಕೋಟೆ ಆವರಣ ತುಂಬಾ ಹಣತೆಗಳು ಬೆಳಗಿದವು. ಅಂದು ಹಚ್ಚಿದ ಈ ಹರ್ಷೋದ್ಘಾರದ ಹಣತೆ ಇವತ್ತಿಗೂ ಕನ್ನಡ
ನಾಡಿನಲ್ಲಿ ಬೆಳಗುತ್ತಲೇ ಇದೆ.
1824 ಅಕ್ಟೋಬರ್ 23ರಂದು ವೀರರಾಣಿ ಕಿತ್ತೂರು ಚನ್ನಮ್ಮನ ಸೇನಾಪಡೆ ಬ್ರಿಟಿಷರ ವಿರುದ್ಧ ಸಾಧಿಸಿದ ವಿಜಯದ ನೆನಪಿಗಾಗಿ ಪ್ರತಿ ವರ್ಷ ವಿಜಯದ ಹಬ್ಬವನ್ನು ಆಚರಿಸುತ್ತ ಬರಲಾಯಿತು. ಈ ವೈಭವದ ಹಬ್ಬಕ್ಕೆ ಮುಂದೆ ಉತ್ಸವದ ರೂಪ ಸಿಕ್ಕಿತು. ಈಗ ಈ ಐತಿಹಾಸಿಕ ಉತ್ಸವ 25 ವರ್ಷ ದಾಟಿದೆ. ಕಿತ್ತೂರಿಗೆ ಮಾತ್ರ ಸೀಮಿತವಾಗಿದ್ದ ಉತ್ಸವಕ್ಕೆ ಈಗ ರಾಜ್ಯಮಟ್ಟದ ಉತ್ಸವದ ಸ್ಥಾನಮಾನ ಸಿಕ್ಕಿದೆ. ಕಳೆದ 25 ವರ್ಷಗಳ ಈ ಉತ್ಸವವನ್ನು ಒಮ್ಮೆ ಅವಲೋಕಿಸಿ ನೋಡಿದಾಗ ಸಾಕಷ್ಟು ಗಮನಾರ್ಹ ಬದಲಾವಣೆ ಕಂಡಿದೆ. ಕಿತ್ತೂರು ಸಂಸ್ಥಾನದ ಚಿತ್ರ ಬದಲಾಗಿದೆ.
ಉತ್ಸವದ ಸ್ವರೂಪ ಆಧುನಿಕತೆಯ ಸ್ಪರ್ಶ ಕಂಡುಕೊಂಡಿದೆ. ಸ್ಥಳೀಯ ಕಲಾವಿದರ ಜತೆಗೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕಲಾವಿದರ ಪ್ರತಿಭೆ ಪರಿಚಯವಾಗಿದೆ. ಕೋಟೆ ಆವರಣ ಸುಂದರ ಪ್ರವಾಸಿ ತಾಣವಾಗಿ ಕಂಗೊಳಿಸುತ್ತಿದೆ. ರಸ್ತೆಗಳು ವಿಶಾಲವಾಗಿವೆ. ಕುದುರೆ, ಆನೆಗಳ ಮೆರವಣಿಗೆ ಜಾಗದಲ್ಲಿ ಚಿಣ್ಣರು, ವಿವಿಧ ಜಾನಪದ ಕಲಾವಿದರು ಚನ್ನಮ್ಮನ ಬಗ್ಗೆ ತಮಗಿರುವ ಅಭಿಮಾನ, ಪ್ರೀತಿಯನ್ನು ಹೆಮ್ಮೆಯಿಂದ ತೋರಿಸುತ್ತಿದ್ದಾರೆ. ಎಲ್ಲಕ್ಕಿಂತ
ವಿಶೇಷ ಎಂದರೆ ಕಿತ್ತೂರು ಸಾಮ್ರಾಜ್ಯಕ್ಕೆ ತಾಲೂಕು ಸ್ಥಾನಮಾನ ಸಿಕ್ಕಿದೆ.
ಕಿತ್ತೂರು ಉತ್ಸವ ಬಗ್ಗೆ ಹೇಳುವುದಾದರೆ ಇದಕ್ಕೆ ನೂರಾರು ವರ್ಷಗಳ ಇತಿಹಾಸ ಇದೆ. 1824ರ ನಂತರ ನಿರಂತರವಾಗಿ ಈ ಅವಿಸ್ಮರಣೀಯ ದಿನವನ್ನು ವಿಭಿನ್ನವಾಗಿ ಆಚರಿಸುತ್ತಲೇ ಬರಲಾಗಿದೆ. ಚನ್ನಮ್ಮನ ನಂತರ ಬಂದವರು ಬ್ರಿಟಿಷರ ವಿರುದ್ಧದ ಈ ಮೊದಲ ಜಯವನ್ನು ಹಚ್ಚ ಹಸಿರಾಗಿರುವಂತೆ ಮಾಡುತ್ತಿದ್ದಾರೆ. ಉತ್ಸವದ ಕಾರಣ ಕಿತ್ತೂರು ಕೋಟೆ ಆವರಣಕ್ಕೆ ಹೊಸ ಕಳೆ ಬಂದಿದೆ.
ಚನ್ನಮ್ಮನ ಅರಮನೆ ಮೊದಲಿನ ಹಾಗೆ ಉಳಿದಿಲ್ಲವಾದರೂ ಅದರ ಅವಶೇಷಗಳು ಹಿಂದಿನ ಗತವೈಭವವನ್ನು ಕಣ್ಣಿಗೆ ಕಟ್ಟುವಂತೆ ಹೇಳುತ್ತವೆ. ಕೋಟೆ ಆವರಣದಲ್ಲಿ ಒಮ್ಮೆ ಓಡಾಡಿದಾಗ ಈಗಲೂ ಚನ್ನಮ್ಮ ಇದ್ದಾಳೆ ಎನ್ನುವಂತೆ ಭಾಸವಾಗುತ್ತದೆ. ಚನ್ನಮ್ಮನ ಸಾಹಸ ನಮ್ಮ ಕಣ್ಮುಂದೆ ಇರುವಂತೆ ಮಾಡಲು ಚನ್ನಮ್ಮನ ಅರಮನೆಯ ಪ್ರತಿರೂಪವನ್ನು ನಿರ್ಮಿಸಲು ಸರಕಾರ ಮುಂದಾಗಿದೆ. ಮಹಾರಾಣಿ ಚನ್ನಮ್ಮನ ಹೋರಾಟದ ಇತಿಹಾಸವನ್ನು ಗಟ್ಟಿಗೊಳಿಸಲು ಸಾಕಷ್ಟು ಪ್ರಯತ್ನಗಳು ಮೇಲಿಂದ ಮೇಲೆ ನಡೆದಿವೆ.
ಕಿತ್ತೂರು ನಾಡಿನ ಅಭಿಮಾನಿಗಳು 1937ರಲ್ಲಿ ಕಿತ್ತೂರಿಗೆ ಬಂದಿದ್ದ ಗರುಡ ಸದಾಶಿವರಾಯರ ನಾಟಕ ಪ್ರದರ್ಶಿಸಿ ಅದರಿಂದ ಹಣ ಸಂಗ್ರಹಿಸಿ ಒಂದು ಉತ್ಸವ ಮಾಡಲು ಪ್ರಯತ್ನ ಮಾಡಿದರು. 1957ರಲ್ಲಿ ಕರ್ನಾಟಕ ಏಕೀಕರಣ ನಂತರ ಸರಕಾರ ಕಿತ್ತೂರಿಗೆ ಚನ್ನಮ್ಮನ ಪ್ರತಿಮೆ ಒದಗಿಸಿತು. ಅದರ ಸ್ಥಾಪನೆ ಸಂದರ್ಭದಲ್ಲಿ ಶಿವರುದ್ರಪ್ಪ ಮಾರಿಹಾಳ ಅವರ ನೇತೃತ್ವದಲ್ಲಿ ಅಂದಿನ ಗ್ರಾಮ ಅಂದಿನ ಗ್ರಾಮ ಪಂಚಾಯಿತಿ ಸದಸ್ಯರು ಒಂದು ದೊಡ್ಡ ಉತ್ಸವ ಮಾಡಿ ಸಾವಿರಾರು ಜನರ ಸಮ್ಮುಖದಲ್ಲಿ ಮೆರವಣಿಗೆ ಮಾಡಿದರು. ಇದು ಮುಂದೆ ಅದ್ಧೂರಿ ಉತ್ಸವಕ್ಕೆ ನಾಂದಿ ಹಾಡಿತು.
ರಕ್ತಗತವಾಗಿ ಚನ್ನಮ್ಮನ ವಂಶಸ್ಥರಾಗಿರುವ ಮಾರಿಹಾಳ ಮನೆತನದ ಪ್ರೊ|ವಿ.ಜಿ. ಮಾರೀಹಾಳ ಅವರು ಕಿತ್ತೂರಿನ ಇತಿಹಾಸ, ಅಭಿವೃದ್ಧಿಗಾಗಿ ಹಗಲುರಾತ್ರಿ ದುಡಿದಿದ್ದಾರೆ. 1950ರಿಂದಲೇ ಚಿಕ್ಕಮಕ್ಕಳಿಂದ ದಸರಾ ಉತ್ಸವದಲ್ಲಿ ಚನ್ನಮ್ಮನ ಸ್ಮರಣೀಯ ಕಾರ್ಯಕ್ರಮ ಮಾಡಿಕೊಂಡು ಬಂದವರು. ಕರ್ನಾಟಕ ವಿಶ್ವವಿದ್ಯಾಲಯದ ಪ್ರಸಾರಾಂಗ ಮೂಲಕ ಕಿತ್ತೂರು ಕೋಟೆಯಲ್ಲಿ 150 ವರ್ಷಗಳ ಚನ್ನಮ್ಮ ಉತ್ಸವ ಮಾಡಿಸಿದ್ದು ಅವರ ಅಭಿಮಾನದ ಸಂಕೇತ.
ಪ್ರೊ|ವಿ.ಜಿ.ಮಾರಿಹಾಳ ಅವರಿಗೆ ಚನ್ನಮ್ಮ ಆರಾಧ್ಯದೈವ. ಮಾರಿಹಾಳರ ಎಲ್ಲ ಪ್ರಯತ್ನಗಳ ಹಿಂದೆ ಅವರ ಬೆನ್ನೆಲುಬಾಗಿ ಅವರೆ ಸಿದ್ಧಗೊಳಿಸಿದ ಯುವಕರ ಪಡೆಯೇ ಇತ್ತು. ಈ ಗುಂಪು ಯಾವುದೇ ಸ್ವಾರ್ಥವಿಲ್ಲದೆ ತನು-ಮನ ಧನಗಳಿಂದ ಉತ್ಸವ ನಡೆಸಿಕೊಂಡು ಬಂದಿದ್ದಾರೆ. ಇವತ್ತಿಗೂ ಕಿತ್ತೂರು ಉತ್ಸವ ಎಂದರೆ ಸಾಕು ಯುವ ಉತ್ಸಾಹಿ ಪಡೆ ಟೊಂಕ ಕಟ್ಟಿ ನಿಲ್ಲುತ್ತದೆ. ಜಿಲ್ಲಾಡಳಿತದ ಜತೆ ಕೈಜೋಡಿಸುತ್ತದೆ.
1991ರಿಂದ ಕಿತ್ತೂರು ಹಾಗೂ ಕಿತ್ತೂರು ಉತ್ಸವದ ಭಾಗ್ಯದ ಬಾಗಿಲು ತೆರೆಯಿತೆಂದೇ ಹೇಳಬೇಕು. 1991ರಲ್ಲಿ ಆಗಿನ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ರಚನೆ ಘೋಷಣೆ ಮಾಡಿ ಆಗ ಒಂದು ಕೋಟಿ ರೂ. ಮಂಜೂರು ಮಾಡಿದರು. ಇಲ್ಲಿಂದ ಕಿತ್ತೂರಿನ ಅಭಿವೃದ್ಧಿಯ ಅಧ್ಯಾಯ ಆರಂಭವಾಯಿತು. ಆಗ ಮಲ್ಹಾರಿಗೌಡ ಅವರು ಜಿಲ್ಲೆಯಿಂದ ಮಂತ್ರಿಯಾಗಿದ್ದರು. ಮುಂದೆ 1996ರಲ್ಲಿ ಕಿತ್ತೂರು ಉತ್ಸವಕ್ಕೆ ವಿಶೇಷ ಕಳೆ ಹಾಗೂ ಮಹತ್ವದ ತಿರುವು ಸಿಕ್ಕಿತು. ಆಗ ಮುಖ್ಯಮಂತ್ರಿ ಜೆ.ಎಚ್. ಪಟೇಲರ ಸರಕಾರದಲ್ಲಿ ಪ್ರಾಥಮಿಕ ಶಿಕ್ಷಣ ಸಚಿವರಾಗಿದ್ದ ಲೀಲಾವತಿ ಪ್ರಸಾದ ಅವರ ವಿಶೇಷ ಆಸಕ್ತಿ ಮೇರೆಗೆ ಜೆ.ಎಚ್.ಪಟೇಲ ಅವರು ಕಿತ್ತೂರು ಉತ್ಸವವನ್ನು ಸರಕಾರದ ಉತ್ಸವವನ್ನಾಗಿ ಆಚರಿಸುವ ಘೋಷಣೆ ಮಾಡಿದರು. ಅಲ್ಲಿಂದ ಇದುವರೆಗೆ ಕಿತ್ತೂರು ಉತ್ಸವ ಸರಕಾರದ ಉತ್ಸವವಾಗಿ ಜನಮಾನಸದಲ್ಲಿ ಉಳಿದುಕೊಂಡಿದೆ.
ಉತ್ಸವಕ್ಕೆ ಬಿಡುಗಡೆಯಾಗುವ ಹಣ, ಪ್ರಾಧಿಕಾರದ ಅನುದಾನ ಕಿತ್ತೂರು ಸಂಸ್ಥಾನದ ಚಿತ್ರಣವನ್ನೇ ಬದಲಾಯಿಸಿದೆ. ವರ್ಷದಿಂದ ವರ್ಷಕ್ಕೆ ಕಿತ್ತೂರಿನ ಜನಪ್ರಿಯತೆ ಉತ್ಸವ ಮೂಲಕ ನಾಡಿನ ಎಲ್ಲ ಕಡೆ ಹರಡುತ್ತಿದೆ. ಕಳೆದ ವರ್ಷ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು
ಕಿತ್ತೂರಿನ ಜನರಿಗೆ ಮಾತು ಕೊಟ್ಟಂತೆ ಕಿತ್ತೂರು ಉತ್ಸವಕ್ಕೆ ರಾಜ್ಯಮಟ್ಟದ ಸ್ಥಾನಮಾನ ನೀಡಿದರು. 2022ರಿಂದ ಈ ಉತ್ಸವ ರಾಜ್ಯಮಟ್ಟದ ಉತ್ಸವವಾಗಿ ಆಚರಿಸಲ್ಪಡುತ್ತಿದೆ.
*ಕೇಶವ ಆದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Mrinal Hebbalkar: ನನ್ನ ತಾಯಿಗೆ ರವಿ ಬಳಸಿದ ಪದದಿಂದ ನೋವಾಗಿದೆ: ಮೃಣಾಲ್
Belgavi: ಸಿ.ಟಿ.ರವಿ ಪ್ರಕರಣ ಮುಂದುವರಿಸುವಲ್ಲಿ ಅರ್ಥವೇ ಇಲ್ಲ: ಸಚಿವ ಸತೀಶ್ ಜಾರಕಿಹೊಳಿ
Belagavi: ನ್ಯಾಯಾಧೀಶರ ಮುಂದೆ ಪೊಲೀಸ್ ದೌರ್ಜನ್ಯ ಬಿಚ್ಚಿಟ್ಟ ಸಿ.ಟಿ. ರವಿ
Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.