ನೆರೆಗೆ ನಲುಗಿದ ಸಂತ್ರಸ್ತರಿಗೆ ಲಾಕ್‌ಡೌನ್ ಬರೆ
Team Udayavani, Apr 24, 2020, 2:01 PM IST
ಬೆಳಗಾವಿ: ಎಂಟು ತಿಂಗಳ ಹಿಂದೆಯಷ್ಟೇ ಜಿಲ್ಲೆಯಲ್ಲಿ ಅಪ್ಪಳಿಸಿದ್ದ ಪ್ರವಾಹದ ಹೊಡೆತಕ್ಕೆ ನಲುಗಿದ್ದ ಬೆಳಗಾವಿ ಜಿಲ್ಲೆಯ ಬಹುತೇಕ ತಾಲೂಕಿನಲ್ಲಿ ಜನರು ಮನೆ- ಹೊಲ ಕಳೆದುಕೊಂಡು ಸಂತ್ರಸ್ತರಾಗಿ ಇನ್ನೂ ಆ ನೋವಿನಿಂದ ಹೊರ ಬಂದಿಲ್ಲ. ಅಷ್ಟರಲ್ಲಿಯೇ ಈಗ ಲಾಕ್‌ಡೌನ್‌ದಿಂದಾಗಿ ಎಲ್ಲವೂ ಸ್ಥಗಿತಗೊಂಡು ಜನರ ನೋವಿನ ಮೇಲೆ ಉಪ್ಪು ಸವರಿದಂತಾಗಿದೆ. ಜತೆಗೆ ಈಗ ಮತ್ತೆ ಬರುವ ಮಳೆಯಿಂದ ಆತಂಕವೂ ಹೆಚ್ಚಾಗುತ್ತಿದೆ.
ಜಿಲ್ಲೆಯ ನೆರೆ ಸಂತ್ರಸ್ತರ ಗೋಳು ಕೇಳಿಸಿಕೊಂಡ ಸರ್ಕಾರ ಮನೆ ಕಟ್ಟಿಕೊಡುವಷ್ಟರಲ್ಲಿಯೇ ಈಗ ಲಾಕ್ ಡೌನ್ ಸಂಕಷ್ಟ ಎದುರಾಗಿದೆ. ನೆರೆ ಮತ್ತು ಅತಿವೃಷ್ಟಿ ಕಾಮಗಾರಿಗಳು ಸರಿಯಾಗಿ ನಡೆದಿಲ್ಲ. ನೆರೆ ಸಂತ್ರಸ್ತರ ಮನೆಗಳು ಅರ್ಧಬಂರ್ಧ ನಿರ್ಮಾಣಗೊಂಡಿದ್ದು, ಲಾಕ್‌ಡೌನ್ ತೆರವು ಆಗುವಷ್ಟರಲ್ಲಿಯೇ ಮತ್ತೆ ಮಳೆ ಅಪ್ಪಳಿಸಲಿದೆ. ಈ ವರ್ಷವೂ ಸೂರು ನಿರ್ಮಾಣವಾಗುವುದು ಗ್ಯಾರಂಟಿ ಇಲ್ಲ. ಪ್ರವಾಹದಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರ ನೋವು ಒಂದೆಡೆಯಾದರೆ, ಮಳೆ ಪ್ರವಾಹದಲ್ಲಿ ಕೊಚ್ಚಿ ಹೋದ ರಸ್ತೆ, ಸೇತುವೆಗಳು, ಶಾಲಾ ಕಟ್ಟಡಗಳ ನಿರ್ಮಾಣವೂ ಯಾವಾಗ ನಡೆಯುತ್ತದೆ ಎಂಬ ಯಕ್ಷ ಪ್ರಶ್ನೆ ಇನ್ನೊಂದೆಡೆಯಾಗಿದೆ. ಮಳೆಗಾಲಕ್ಕಿಂತ ಪೂರ್ವದಲ್ಲಿಯೇ ಈ ಎಲ್ಲ ಕಾಮಗಾರಿಗಳು ಮುಗಿಯಬೇಕಾಗಿತ್ತು. ಆದರೆ ನೆರೆ ನಿಲ್ಲುವಷ್ಟರಲ್ಲಿಯೇ ಉಪ ಚುನಾವಣೆ ಬಿಸಿ ಕಾಡಿದರೆ, ಈಗ ಲಾಕ್‌ಡೌನ್ ಹೊಡೆತದಿಂದ ಜನ ನಲುಗಿದ್ದಾರೆ.
ಕೃಷ್ಣಾ ತೀರದ ಜನರ ಗೋಳು: ಕೃಷ್ಣಾ ನದಿ ದಡದ ಸಂತ್ರಸ್ತರು ಅತಿವೃಷ್ಟಿಯಿಂದಾಗಿ ಸಂಕಷ್ಟ ಪಡುತ್ತಿದ್ದಾರೆ. ಸಂತ್ರಸ್ತರ ಪುನರ್ವಸತಿ ಕಾರ್ಯ ಗಗನಕುಸುಮವಾಗಿಯೇ ಉಳಿದುಕೊಂಡಿದೆ. ಕೃಷ್ಣಾ ತೀರದ ಜನರು ನೆರೆ ಬಂದಾಗಲೊಮ್ಮೆ ಸರ್ಕಾರದ ಬಳಿ ಬೇಡಿಕೊಂಡರೂ ಸಮಸ್ಯೆಗೆ ಪರಿಹಾರ ಮಾತ್ರ ಸಿಗುತ್ತಿಲ್ಲ. ಸಂತ್ರಸ್ತರ ಪುನರ್ವಸತಿ ನಿಮಾಣ ಕಾರ್ಯ ಆಗುವುದಾದರೂ ಯಾವಾಗ? ಇನ್ನು ಒಂದೂವರೆ ತಿಂಗಳ ನಂತರ ಬರುವ ಮಳೆಗಾಲದಲ್ಲಿ ಮತ್ತೂಂದು ಯುದ್ಧ ಎದುರಿಸಲು ಸಿದ್ಧಗೊಳ್ಳುತ್ತಿದ್ದಾರೆ.
ಜಿಲ್ಲೆಯಲ್ಲಿ ಅಪಾರ ಹಾನಿ: ಜಿಲ್ಲೆಯಲ್ಲಿ ನೆರೆ ಹಾಗೂ ಜೋರಾದ ಮಳೆಯಿಂದಾಗಿ ಸುಮಾರು 11,193 ಕೋಟಿ ರೂ. ಹಾನಿಯಾಗಿದೆ ಎಂದು ಜಿಲ್ಲಾಡಳಿತ ಅಂದಾಜಿಸಿದೆ. ಬೆಳೆ ಹಾನಿ ಹಾಗೂ ಮನೆ ಹಾನಿಯಿಂದಾಗಿಯೇ ಸಾಕಷ್ಟು ಪ್ರಮಾಣದಲ್ಲಿ ಜಿಲ್ಲೆ ಹಾನಿಗೊಳಲಾಗಿದೆ. ಸರ್ಕಾರದಿಂದ ಈವರೆಗೆ ಬಂದಿರುವ ಹಣ ಮನೆ ಹಾನಿ ಪರಿಹಾರಕ್ಕಾಗಿಯೇ ಬಳಸಲಾಗಿದೆ. ಕೆಲವೊಂದಿಷ್ಟು ರಾಜ್ಯ ಸರ್ಕಾರ ಬೆಳೆ ಪರಿಹಾರ ನೀಡಿದ್ದು, ಕೇಂದ್ರದಿಂದ ಇನ್ನೂ ಬರಬೇಕಾಗಿದೆ.
ಮೊದಲ ಕಂತಿನ ಹಣ ಸಂತ್ರಸ್ತರಿಗೆ ಸಿಕ್ಕಿದ್ದು, ಎರಡನೇ ಕಂತಿನ ಹಣ ಬಿಡುಗಡೆ ಆಗುವಷ್ಟರಲ್ಲಿಯೇ ಬೇರೆ ಬೇರೆ ಸಮಸ್ಯೆಗಳು ಎದುರಾಗಿವೆ. ಕೆಲವರಿಗೆ ಎರಡನೇ ಹಂತದ ಪರಿಹಾರವೂ ಸಿಕ್ಕಿದೆ. ನೆರೆಯಿಂದಾಗಿ ಒಟ್ಟು 69,381 ಮನೆಗಳಿಗೆ ಹಾನಿಯಾಗಿದ್ದರೆ, ಈವರೆಗೆ 33 ಸಾವಿರ ಮನೆಗಳಿಗೆ ಮಾತ್ರ ಮೊದಲ ಹಂತದ ಪರಿಹಾರ ಕೊಡಲಾಗಿದೆ.
ಕಚ್ಚಾ ವಸ್ತುಗಳು ಸಿಗೋದು ಕಷ್ಟ: ಮಳೆಗಾಲದೊಳಗೆ ಸರ್ಕಾರದಿಂದ ಪರಿಹಾರ ಬರದಿದ್ದರೆ ನಾವೇ ತಾತ್ಪೂರ್ತಿಕವಾಗಿ ಮನೆ ಕಟ್ಟಿಸಿಕೊಳ್ಳೋಣ ಎಂದರೆ ಕಾರ್ಮಿಕರೂ ಇಲ್ಲ, ಕಚ್ಚಾ ವಸ್ತುಗಳು ಸಿಗುತ್ತಿಲ್ಲ. ಜತೆಗೆ ಲಾಕ್‌ಡೌನ್‌ನಲ್ಲಿ ಸ್ವಲ್ಪ ಸಡಿಲಿಕೆ ನೀಡಿರುವ ಸರ್ಕಾರ ಏ. 23ರಿಂದ ಗ್ರಾಮೀಣ ಭಾಗದಲ್ಲಿ ಕಟ್ಟಡ ಕಾಮಗಾರಿಗಳಿಗೆ ಅನುಮತಿ ನೀಡಿದೆ. ಆದರೆ ಅಗತ್ಯ ಇರುವ ಸಿಮೆಂಟ್, ಮರಳು, ಇಟ್ಟಂಗಿ, ಕಬ್ಬಿಣ ಸಿಗುವುದಾದರೂ ಎಲ್ಲಿಂದ ಎಂಬುದೇ ಜನರಲ್ಲಿ ಕಾಡುತ್ತಿದೆ.
ಜಿಲ್ಲೆಯಲ್ಲಿ ಅತಿ ಹೆಚ್ಚಿನ ಹಾನಿ ಬೆಳೆಗಳದ್ದಾಗಿದೆ. ಎಲ್ಲ 14 ತಾಲೂಕುಗಳನ್ನೂ ಪ್ರವಾಹ ಪೀಡಿತ ತಾಲೂಕುಗಳು ಎಂದು ಘೋಷಿಸಲಾಗಿದೆ. ಸಂತ್ರಸ್ತರಿಗೆ ಮನೆ ಕಟ್ಟಿಸಿಕೊಳ್ಳಲು ಸರ್ಕಾರದಿಂದ ಇನ್ನೂ ಅಗತ್ಯವಿರುವಷ್ಟು ಹಣ ಬಿಡುಗಡೆ ಆಗಿಲ್ಲ. ಹೀಗಾಗಿ ಕಾಮಗಾರಿ ವಿಳಂಬ ಆಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ.
ಬೆಳಗಾವಿ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳ 2,307 ಸರ್ಕಾರಿ ಶಾಲೆಗಳು ಹಾನಿಗೊಳಗಾಗಿವೆ. ಏಳೆಂಟು ತಿಂಗಳು ಕಳೆದರೂ ಇನ್ನೂ ಅನೇಕ ಶಾಲೆಗಳ ದುರಸ್ತಿ ಕಾರ್ಯ ನಡೆದಿಲ್ಲ. ಜತೆಗೆ ಜಿಲ್ಲೆಯಲ್ಲಿ 6,755.26 ಕಿ.ಮೀ. ರಸ್ತೆ, 939 ಸೇತುವೆಗಳು, 590 ಕೆರೆಗಳು ಹಾನಿಗೊಳಗಾಗಿವೆ. ರಸ್ತೆ, ಸೇತುವೆಗಳು ಅಪಾಯಕಾರಿ ಸ್ಥಿತಿಯಲ್ಲಿವೆ. ಅಭಿವೃದ್ಧಿ ಪಡಿಸುವ ಕಾಮಗಾರಿ ಲಾಕ್‌ಡೌನ್‌ದಿಂದಾಗಿ ಸ್ಥಗಿತಗೊಂಡಿದ್ದು, ಮಳೆಗಾಲ ಆರಂಭವಾದರೆ ಗ್ರಾಮಸ್ಥರ ಗತಿ ಏನು ಎಂಬುದೇ ಮುಂದಿನ ಪ್ರಶ್ನೆಯಾಗಿದೆ.
ಲಾಕ್‌ಡೌನ್ ಸಡಿಲಿಕೆ ಮಾಡಿದ್ದರಿಂದ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಕಟ್ಟಡ ಕಾಮಗಾರಿ ನಡೆಸಲು ಅನುಮತಿ ನೀಡಲಾಗಿದೆ. ಇನ್ನು ಮುಂದೆ ನೆರೆ ಸಂತ್ರಸ್ತರ ಮನೆಗಳ ನಿರ್ಮಾಣ ಸೇರಿದಂತೆ ಅಗತ್ಯ ಕಾಮಗಾರಿ ನಡೆಸಬಹುದು. ಹಂತ ಹಂತವಾಗಿ ಎಲ್ಲ ಕೆಲಸಗಳು ನಡೆಯಲಿವೆ. –ಡಾ| ಎಸ್.ಬಿ. ಬೊಮ್ಮನಹಳ್ಳಿ ಜಿಲ್ಲಾಧಿಕಾರಿ
ನೆರೆಯಲ್ಲಿ ಮನೆ ಕಳೆದುಕೊಂಡವರಿಗೆ ಇನ್ನೂ ಹಣ ಬಿಡುಗಡೆ ಆಗುತ್ತಿಲ್ಲ. ನೆರೆಯಿಂದ ಸಮಸ್ಯೆ ಅನುಭವಿಸಿದವರಿಗೆ ಈಗ ಲಾಕ್‌ಡೌನ್ ಸಮಸ್ಯೆಯೂ ಎದುರಾಗಿದೆ. ಇನ್ನು ಮುಂದಿನ ತಿಂಗಳಿಂದ ಅಡ್ಡ ಮಳೆ ಆರಂಭಗೊಳ್ಳುತ್ತದೆ. ಸೋಮವಾರ ಬೆಂಗಳೂರಿಗೆ ಹೋಗಿ ಸಿಎಂರನ್ನು ಭೇಟಿಯಾಗಿ ಚರ್ಚಿಸಲಾಗುವುದು. –ಉಮೇಶ ಕತ್ತಿ, ಶಾಸಕರು, ಹುಕ್ಕೇರಿ
-ಭೈರೋಬಾ ಕಾಂಬಳೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dinesh Gundu Rao; ಬಾಣಂತಿಯರ ಸಾ*ವು ಪ್ರಕರಣ ನ್ಯಾಯಾಂಗ ತನಿಖೆಗೆ
ರಾತ್ರಿಯಿಡೀ ಸಿ.ಟಿ. ರವಿಯನ್ನು ಸುತ್ತಾಡಿಸಿದ ಪೊಲೀಸರು: ಮಧ್ಯರಾತ್ರಿ ರಸ್ತೆಯಲ್ಲೇ ಪ್ರತಿಭಟನೆ
Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ
Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು
Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.