ಬಾಯಿ ಮಾತಿನಲ್ಲಷ್ಟೇ ಕೋವಿಡ್ ಸಿದ್ಧತೆ!
ಮೂರನೇ ಅಲೆ ತಡೆಗೆ ಬೇಕಿದೆ ಇನ್ನಷ್ಟು ತಯಾರಿ ಆಕ್ಸಿಜನ್-ಬೆಡ್ ಸಮಸ್ಯೆ ಆಗದಂತೆ ಎಚ್ಚರ ಅಗತ್ಯ
Team Udayavani, Aug 26, 2021, 6:31 PM IST
ಸಾಂದರ್ಭಿಕ ಚಿತ್ರ.
ಬೆಳಗಾವಿ: ಮೊದಲೆರಡು ಕೋವಿಡ್ ಅಲೆಯಿಂದ ಪಾಠ ಕಲಿತಿರುವ ಜಿಲ್ಲಾಡಳಿತ ಮೂರನೇ ಅಲೆಗೆ ಬೇಕಾಗುವ ಎಲ್ಲ ಸಿದ್ಧತೆಗಳನ್ನು
ಮಾಡಿಕೊಳ್ಳುತ್ತಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಸಿಗೆ ಮತ್ತು ಆಕ್ಸಿಜನ್ ಕೊರತೆ ಆಗದಂತೆ ತಯಾರಿಯಲ್ಲಿ ತೊಡಗಿದೆ. ಆದರೆ ತಯಾರಿ
ಕೇವಲ ಬಾಯಿ ಮಾತಿನಲ್ಲೇ ಆಗದೇ ವಾಸ್ತವವಾಗಿ ಕಾರ್ಯರೂಪಕ್ಕೆ ತರಬೇಕಾಗಿದೆ.
ಮಹಾರಾಷ್ಟ್ರದ ಗಡಿಯಲ್ಲಿರುವ ಬೆಳಗಾವಿ ಜಿಲ್ಲೆಗೆ ಕೋವಿಡ್ ಹೊಡೆತ ಎರಡು ಬಾರಿ ದೊಡ್ಡ ಪ್ರಮಾಣದಲ್ಲಿ ಬಿದ್ದಿದೆ. ಇದರಿಂದ ಎಚ್ಚೆತ್ತು ಕೊಂಡಿರುವ ಜಿಲ್ಲಾಡಳಿತ ಎಲ್ಲ ಅಸ್ಪತ್ರೆಗಳಲ್ಲಿಯೂ ಯಾವುದೇ ಸಮಸ್ಯೆ ಆಗದಂತೆ ಈಗಾಗಲೇ ಕಳೆದ ಒಂದೂವರೆ ತಿಂಗಳಿಂದ ತಯಾರಿ ನಡೆಸುತ್ತಿದೆ. ಕೋವಿಡ್ ಮೂರನೇ ಅಲೆ ಚಿಕ್ಕ ಮಕ್ಕಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಆಸ್ಪತ್ರೆಗಳಲ್ಲಿ ಎಲ್ಲವನ್ನೂ ರೆಡಿ ಮಾಡಿಡಲು ಆರೋಗ್ಯ ಇಲಾಖೆ ಪೂರ್ವಸಿದ್ಧತೆ ಮಾಡಿಕೊಳ್ಳುತ್ತಿದೆ.
ಬಿಡಿಸಿಸಿ ಬ್ಯಾಂಕ್‌ನಿಂದ
ಆಮ್ಲಜನಕ ಘಟಕ
ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ವತಿಯಿಂದ ಹತ್ತರಗಿ ಟೋಲ್ ನಾಕಾ ಸಮೀಪ ಆಮ್ಲಜನಕ ಉತ್ಪಾದನಾ ಘಟಕ ನಿರ್ಮಾಣ ಕಾರ್ಯ ಪ್ರಗತಿ ಹಂತದಲ್ಲಿದೆ. 2.06 ಕೋಟಿ ರೂ. ವೆಚ್ಚದಲ್ಲಿ ಬಿಡಿಸಿಸಿ ಬ್ಯಾಂಕ್ ಈ ಘಟಕಗಳನ್ನು ಶಾಶ್ವತವಾಗಿ ಸ್ಥಾಪಿಸುತ್ತಿದೆ. ಬಿಡಿಸಿಸಿ
ಬ್ಯಾಂಕ್ ಅಧ್ಯಕ್ಷ, ಮಾಜಿ ಸಂಸದ ರಮೇಶ ಕತ್ತಿ ತಮ್ಮ ಸ್ವಂತ ಜಾಗವನ್ನು 90 ವರ್ಷಗಳವರೆಗೆ ಗುತ್ತಿಗೆ ನೀಡಿದ್ದಾರೆ. ಒಂದೇ ಕಡೆಗೆ ಎರಡು
ಒಟ್ಟು 90 ಕ್ಯೂಬಿಕ್ ಲೀಟರ್ ಸಾಮರ್ಥ್ಯದ ಘಟಕಗಳನ್ನು ಸಿದ್ಧಪಡಿಸಲಾಗುತ್ತಿದೆ. 60 ಕ್ಯೂಬಿಕ್ ಲೀ. ಘಟಕದಲ್ಲಿ ನಿತ್ಯ 240ರಿಂದ 260
ಜಂಬೋ ಸಿಲಿಂಡರ್‌ಗಳು, 30 ಕ್ಯೂಬಿಕ್ ಲೀ. ಘಟಕದಲ್ಲಿ ಪ್ರತಿನಿತ್ಯ 160ರಿಂದ 200 ಜಂಬೋ ಸಿಲಿಂಡರ್‌ಗಳನ್ನು ಉತ್ಪಾದಿಸಬಹುದಾಗಿದೆ. ಜತೆಗೆ ಈಗಾಗಲೇ ಬಿಮ್ಸ್ ಆವರಣದಲ್ಲಿ ಶಾಸಕರಾದ ಅಭಯ ಪಾಟೀಲ ಹಾಗೂ ಅನಿಲ್ ಬೆನಕೆ ನೇತೃತ್ವದಲ್ಲಿ ಆಮ್ಲಜನಕ ತಯಾರಿಕಾ ಘಟಕ ಲೋಕಾರ್ಪಣೆಗೊಂಡಿದೆ. ಇದನ್ನು ಎಲ್ ಆ್ಯಂಡ್ ಟಿ ಕಂಪನಿ ನಿರ್ವಹಣೆ ಮಾಡುತ್ತಿದೆ
ಎರಡೂ ಅಲೆಗಳೇ ಪಾಠವಾಗಲಿ
ಜಿಲ್ಲೆಯಲ್ಲಿ ಬೆಡ್ ಹಾಗೂ ಆಕ್ಸಿಜನ್ ಕೊರತೆ ಇಲ್ಲ ಎಂದು ಜಿಲ್ಲಾಡಳಿತ ಹೇಳುತ್ತಿದೆಯಾದರೂ ಇವುಗಳನ್ನು ಇನ್ನಷ್ಟು ವ್ಯವಸ್ಥಿತವಾಗಿ ಮಾಡಬೇಕಾಗಿದೆ. ಎರಡನೇ ಅಲೆಗಿಂತ ಮುನ್ನ ಇದೇ ರೀತಿಯಾಗಿ ಆರೋಗ್ಯ ಇಲಾಖೆ ಹೇಳಿತ್ತು. ಆದರೆ ಮೇ ಮತ್ತು ಜೂನ್ ತಿಂಗಳಲ್ಲಿ ಅಪ್ಪಳಿಸಿದ ಎರಡನೇ ಅಲೆಯಲ್ಲಿ ಬಹಳಷ್ಟು ಜನರು ಆಕ್ಸಿಜನ್ ಸಿಗದೆ ಪ್ರಾಣ ಬಿಟ್ಟಿರುವ ಉದಾಹರಣೆ ನಮ್ಮ ಮುಂದಿವೆ. ಹೀಗಾಗಿ ಆಕ್ಸಿಜನ್ ಹಾಗೂ ಬೆಡ್ ಕೊರತೆ ಆಗದಂತೆ ಇಲಾಖೆ ವಾಸ್ತವವಾಗಿ ಪರಿಶೀಲನೆ ನಡೆಸಿ ವ್ಯವಸ್ಥೆ ಮಾಡಬೇಕಾದ ಅಗತ್ಯವಿದೆ.
ಇದನ್ನೂ ಓದಿ:ದೇಶದ ಮೂರು ರಾಜ್ಯಗಳಲ್ಲಿ ಮಾತ್ರ ಕಾಂಗ್ರೆಸ್ ಸಿಎಂ…ಅಲ್ಲಿಯೂ ನಾಯಕತ್ವ ಬದಲಾವಣೆಗಾಗಿ ಪಟ್ಟು!
ಕರಾಳ ದಂಧೆ ಮಟ್ಟ ಹಾಕಿ
ಕೋವಿಡ್ ಸೋಂಕಿತ ವ್ಯಕ್ತಿಗೆ ರೆಮ್‌ಡೆಸಿವಿರ್ ಚುಚ್ಚುಮದ್ದು ಎರಡನೇ ಅಲೆಯಲ್ಲಿ ಭಾರೀ ಪ್ರಮಾಣದಲ್ಲಿ ಕೊರತೆ ಆಗಿತ್ತು. ಕಾಳಸಂತೆಯಲ್ಲಿ ಈ ಚುಚ್ಚುಮದ್ದನ್ನು 25ರಿಂದ 30 ಸಾವಿರ ರೂ.ವರೆಗೂ ಮಾರಾಟ ಮಾಡಲಾಗಿದೆ. ಕೆಲವೊಂದು ಕಡೆ ಕರಾಳ ದಂಧೆಯ ಮುಖವಾಡಗಳು
ಬಯಲಿಗೆ ಬಿದ್ದಿದ್ದವು. ಈಗಲೂ ಪೊಲೀಸ್ ಇಲಾಖೆ ಈ ಕರಾಳ ದಂಧೆಯನ್ನು ಮಟ್ಟ ಹಾಕಲು ನಿಗಾ ಇಡಬೇಕಾದ ಅಗತ್ಯವಿದೆ. ಮೂರನೇ ಅಲೆ ಮಕ್ಕಳಿಗೆ ಬರುತ್ತಿದೆ ಎಂಬ ಹೇಳಿಕೆ ನೀಡಿದರೆ ಸಾಲದು. ಆರೋಗ್ಯ ಕೇಂದ್ರಗಳಲ್ಲಿ ಪ್ರತ್ಯೇಕ ಅರಿವು ಮೂಡಿಸುವ ಕೆಲಸ ಮಾಡಬೇಕು. ಮಕ್ಕಳಿಗೆ
ಸೋಂಕು ಬಂದರೆ ಏನಾಗುತ್ತದೆ ಎಂಬುದರ ಬಗ್ಗೆ ಜಾಗೃತಿ ಮೂಡಿಸಬೇಕು. ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ ಶಿಬಿರ ನಡೆಸಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ
ಚಿಕ್ಕ ಮಕ್ಕಳ ವೈದ್ಯರ ಸಂಪರ್ಕದಲ್ಲಿ ಜಿಲ್ಲಾಡಳಿತ
ಈಗಾಗಲೇ ಜಿಲ್ಲಾದ್ಯಂತ ಚಿಕ್ಕ ಮಕ್ಕಳ ತಜ್ಞ ವೈದ್ಯರೊಂದಿಗೆ ಜಿಲ್ಲಾ ಧಿಕಾರಿಗಳು ಸಭೆ ನಡೆಸಿ ತಯಾರಾಗುವಂತೆ ಸೂಚನೆ ನೀಡಿದ್ದಾರೆ. ಮೂರನೇ ಅಲೆ ಎದುರಿಸಲು ಏನೆಲ್ಲ ತಯಾರಿ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ವಾರಕ್ಕೊಮ್ಮೆ ಜಿಲ್ಲಾ ಮಟ್ಟದ ಅ ಧಿಕಾರಿಗಳ ಸಭೆ ನಡೆಸಲಾಗುತ್ತಿದೆ. ಅದಕ್ಕಾಗಿ ಜಿಲ್ಲೆಯ ಚಿಕ್ಕ ಮಕ್ಕಳ ತಜ್ಞ ವೈದ್ಯರ ಸಂಪರ್ಕದಲ್ಲಿರುವ ಜಿಲ್ಲಾಡಳಿತ ಪ್ರಾಥಮಿಕ ಆರೋಗ್ಯ ಕೇಂದ್ರ, ಸಾರ್ವಜನಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೊರತೆ ಆಗದಂತೆ ನೋಡಿಕೊಳ್ಳುತ್ತಿದೆ. ಕೋವಿಡ್ ಎರಡನೇ ಅಲೆಯಲ್ಲಿ ಜಿಲ್ಲೆಯಲ್ಲಿ ಲಭ್ಯವಿದ್ದ ಹಾಸಿಗೆಗಳಿಗಿಂತಲೂ ಈಗ ಮತ್ತಷ್ಟು ಹೆಚ್ಚಿಸಲಾಗಿದೆ. ಬಿಮ್ಸ್‌ನಲ್ಲಿ 200 ಕೋವಿಡ್ ಹಾಸಿಗೆಗಳನ್ನು ಮೀಸಲಿಡಲಾಗಿತ್ತು. ಈಗ ಚಿಕ್ಕ
ಮಕ್ಕಳಿಗಾಗಿಯೇ ಮತ್ತಷ್ಟು ಹೆಚ್ಚಿಸಲಾಗಿದೆ. ಬಿಮ್ಸ್‌ನಲ್ಲಿ 33 ಎಚ್‌ಎಸ್‌ಎನ್‌ಸಿ(ಆಕ್ಸಿಜನ್), 150 ವೆಂಟಿಲೇಟರ್‌ಗಳಿದ್ದವು. ಈಗ ಇದರ ಸಂಖ್ಯೆ ಮತ್ತೂ ಹೆಚ್ಚಾಗಿದ್ದು, ಆಕ್ಸಿಜನ್ ಕಾನ್ಸ್‌ಂಟ್ರೇಟರ್‌ಗಳನ್ನು ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹಸ್ತಾಂತರಿಸಲಾಗಿದೆ. ಸರ್ಕಾರದಿಂದ ಹಾಗೂ ದಾನಿಗಳು ಕಾನ್ಸ್‌ಂಟ್ರೇಟರ್‌ಗಳನ್ನು ವಿತರಿಸಿದ್ದಾರೆ ಎಂದು ಅ ಧಿಕಾರಿಗಳು ತಿಳಿಸಿದ್ದಾರೆ.
ಆಸ್ಪತ್ರೆಗಳಲ್ಲಿ ಬೆಡ್-ಆಕ್ಸಿಜನ್ ಹೆಚ್ಚಳ
9 ತಾಲೂಕು ಆಸ್ಪತ್ರೆಗಳಲ್ಲಿ ಹಾಸಿಗೆಗಳು ಹೆಚ್ಚಾಗಿವೆ. 16 ಸಮುದಾಯ ಆರೋಗ್ಯ ಕೇಂದ್ರಗಳಲ್ಲಿಯೂ ಬೆಡ್‌ಗಳನ್ನು ದ್ವಿಗುಣಗೊಳಿಸಲಾಗಿದೆ. ಪ್ರತಿ ಆಸ್ಪತ್ರೆಯಲ್ಲಿ 50ಕ್ಕೂ ಹೆಚ್ಚು ಬೆಡ್‌ಗಳು ಕೋವಿಡ್‌ಗಾಗಿ ಮೀಸಲಿವೆ. ಖಾಸಗಿ ಆಸ್ಪತ್ರೆಗಳಲ್ಲಿ 539 ಬೆಡ್‌ಗಳನ್ನು ಕೋವಿಡ್‌ಗಾಗಿ ಮೀಸಲಿಡಲಾಗಿದೆ. ಪ್ರತಿಯೊಂದು ಸಾರ್ವಜನಿಕ ಆಸ್ಪತ್ರೆಗಳಿಗೆ ವೆಂಟಿಲೇಟರ್‌ಗಳನ್ನು ಮತ್ತೆ ಎರಡು ಹೆಚ್ಚುವರಿಯಾಗಿ ನೀಡಲಾಗಿದೆ. ನಗರ
ಮತ್ತು ತಾಲೂಕು ಆಸ್ಪತ್ರೆಗಳು ಮೂಲ ಸೌಕರ್ಯಗಳನ್ನು ಹೆಚ್ಚಿಸಿಕೊಂಡಿವೆ ಎಂದು ಅ ಧಿಕಾರಿಗಳು ವಿವರಿಸಿದ್ದಾರೆ. ಕೋವಿಡ್ ಮೂರನೇ ಅಲೆ ತಡೆಯಲು ಈಗಾಗಲೇ ವೈದ್ಯರ ಸಭೆಗಳನ್ನು ನಡೆಸಿ ತಿಳಿವಳಿಕೆ ಮೂಡಿಸುವ ಕಾರ್ಯ ಮಾಡಲಾಗುತ್ತಿದೆ. ಮಕ್ಕಳಿಗೆ ಈ ಸೋಂಕು ಅಂಟುವ ಸಾಧ್ಯತೆ ಇರುವುದರಿಂದ ಪಾಲಕರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಆರೋಗ್ಯ ಇಲಾಖೆ ಮಾಡುತ್ತಿದೆ. ಎಲ್ಲ ಶಿಕ್ಷಕರಿಗೂ ಕಡ್ಡಾಯವಾಗಿ ಲಸಿಕೆ ನೀಡಲಾಗುತ್ತಿದ್ದು, 18 ವರ್ಷಕ್ಕಿಂತ ಮೇಲ್ಪಟ್ಟವರಿಗೂ ಆದ್ಯತೆ ನೀಡಲಾಗುತ್ತಿದೆ. ಮಕ್ಕಳಿಗೆ ಸೋಂಕು ತಗುಲದಂತೆ ಎಚ್ಚರ ವಹಿಸುವ ನಿಟ್ಟಿನಲ್ಲಿ
ಜಿಲ್ಲೆಯಾದ್ಯಂತ ಇಲಾಖೆ ತರಬೇತಿ ಶಿಬಿರಗಳನ್ನು ಹಮ್ಮಿಕೊಳ್ಳುತ್ತಿದೆ. ಕಳೆದ ಒಂದೂವರೆ ವರ್ಷದಲ್ಲಿ ಕೋವಿಡ್ ಸೋಂಕು ಹೆಚ್ಚಳವಾದ ದಿನಗಳಲ್ಲಿ ಆಕ್ಸಿಜನ್ ಕೊರತೆಯಿಂದಲೇ ಸಾಕಷ್ಟು ಜನ ಪ್ರಾಣ ಬಿಟ್ಟಿದ್ದಾರೆ. ಇದು ಪುನರಾವರ್ತನೆ ಆಗದಂತೆನೊಡಿಕೊಳ್ಳಬೇಕಾಗಿದೆ. ನಿರ್ಮಾಣ ಹಂತದಲ್ಲಿರುವ ಆಕ್ಸಿಜನ್ ತಯಾರಿಕಾ ಘಟಕಗಳಿಗೆ ಕೂಡಲೇ ಚಾಲನೆ ನೀಡಬೇಕಾಗಿದೆ. ಸದ್ಯ ಬೆಳಗಾವಿ ನಗರದಲ್ಲಿ ಮೂರು ಸರ್ಕಾರಿ ಆಕ್ಸಿಜನ್ ಘಟಕಗಳಿದ್ದು, ಮೂರು ಖಾಸಗಿ ಘಟಕಗಳಿವೆ. ನಿಪ್ಪಾಣಿಯಲ್ಲಿಯೂ ಆಕ್ಸಿಜನ್ ತಯಾರಿಕಾ ಘಟಕವಿದೆ.
ಕೋವಿಡ್ ಮೂರನೇ ಅಲೆ ತಡೆಗಾಗಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಯಾವುದೇ ಕೊರತೆ ಆಗದಂತೆ ಈಗಾಗಲೇ ಆಕ್ಸಿಜನ್ ಹಾಗೂ ಬೆಡ್‌ಗಳ ವ್ಯವಸ್ಥೆ ಜಿಲ್ಲೆಯ ಎಲ್ಲ ಆಸ್ಪತ್ರೆಗಳಲ್ಲೂ ಮಾಡಲಾಗಿದೆ. ವೈದ್ಯರು, ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಚಿಕ್ಕ ಮಕ್ಕಳ ತಜ್ಞ ವೈದ್ಯರ ಸಭೆ ನಡೆಸಲಾಗುತ್ತಿದೆ.
-ಡಾ|ಶಶಿಕಾಂತ ಮುನ್ಯಾಳ, ಜಿಲ್ಲಾ ಆರೋಗ್ಯಾಧಿಕಾರಿ
ಚಿಕ್ಕ ಮಕ್ಕಳಿಗೆ ಮೂರನೇ ಅಲೆ ಸೋಂಕು ತಗುಲುವ ಸಾಧ್ಯತೆ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಚಿಕ್ಕ ಮಕ್ಕಳ ತಜ್ಞ ವೈದ್ಯರ ವಾರಕ್ಕೊಮ್ಮೆ ಸಭೆ ನಡೆಸಲಾಗುತ್ತಿದೆ. ಅಪೌಷ್ಟಿಕತೆ ಹಾಗೂ ದೈಹಿಕ ನ್ಯೂನತೆಯಿಂದ ಬಳಲುತ್ತಿರುವ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಲಾಗುತ್ತಿದೆ. ಎಲ್ಲ ಆಸ್ಪತ್ರೆಗಳಲ್ಲಿ ಬೆಡ್ ಹಾಗೂ ಆಕ್ಸಿಜನ್ ಕೊರತೆ ಆಗದಂತೆ ಕ್ರಮ ವಹಿಸಲಾಗಿದೆ.
-ಡಾ| ತುಕ್ಕಾರ, ಜಿಲ್ಲಾ ಸರ್ವೇಕ್ಷಣಾಧಿಕಾರಿ
ಇನ್ನೂ ಎರಡನೇ ಅಲೆ ಮುಗಿದಿಲ್ಲ. ಬೆಳಗಾವಿಯಲ್ಲಿ ಮೊದಲಿದ್ದಷ್ಟೇ ಸೋಂಕಿತರು ಇದ್ದಾರೆ. ಈಗ ಕೋವಿಡ್ ತಪಾಸಣೆ ಕಡಿಮೆಗೊಳಿಸಲಾಗಿದೆ. ಕೇವಲ ಲಸಿಕೆ ರಾಜಕಾರಣ ನಡೆದಿದೆ. ಹೆಚ್ಚಿನ ತಪಾಸಣೆಗಳನ್ನು ಮಾಡಿದರೆ ಸೋಂಕು ನಿಯಂತ್ರಿಸಬಹುದಾಗಿದೆ. ಮಕ್ಕಳಿಗೆ ಸೋಂಕು ಬರುವುದಾದರೆ ಶಾಲೆ ಆರಂಭಿಸುವುದಾದರೂ ಏಕೆ?
-ಕಿರಣಕುಮಾರ ಪಾಟೀಲ, ಸಾಮಾಜಿಕ ಕಾರ್ಯಕರ್ತರು
-ಭೈರೋಬಾ ಕಾಂಬಳೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi Session: ಬರಾಕ್ ಒಬಾಮಾ ಆಹ್ವಾನಕ್ಕೆ ಸರಕಾರ ತೀರ್ಮಾನ
Belagavi: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಮುಗಿದ ಅಧ್ಯಾಯ: ಸಚಿವ ಎಚ್.ಕೆ. ಪಾಟೀಲ್
Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Bailhongal: ಯುವಕನಿಗೆ ಚಾಕು ಇರಿದು ಬರ್ಬರವಾಗಿ ಕೊ*ಲೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.